ಅಮೆರಿಕ, ಚೀನಾ ಎಂಬ ಡಿಜಿಟಲ್ ಜಗತ್ತಿನ ಮುಂದೆ ಭಾರತ ಒಂದು ಸಣ್ಣ ಕಾಲೋನಿ

ಭಾರತದಲ್ಲಿ ಈ ಕಾಮರ್ಸ್ ವೇಗವಾಗಿ ಬೆಳೆಯುತ್ತಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಬಾಗಿಲು ತೆರೆದು ಸ್ವಾಗತಿಸುತ್ತಿದೆ. ಈ ಹೊತ್ತಿನಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಆಗಲೇ ಬೇಕಾದ ಮಹತ್ವದ ಪ್ರಾಥಮಿಕ ಕೆಲಸಗಳತ್ತ ಕೇಂದ್ರ ಸರ್ಕಾರ ಗಮನಹರಿಸದೇ ಹೋದರೆ ಡಿಜಿಟಲ್ ಕ್ರಾಂತಿ ಬಿಸಿಲುಗುದರೆಯಾಗಿಬಿಡುತ್ತದೆ

ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಡಿಜಿಟಲ್ ಇಂಡಿಯಾ ಮಾತು ಪದೆಪದೇ ಕೇಳಿ ಬರುತ್ತಲೇ ಇದೆ. ಸ್ವತಃ ಟೆಕ್ ಸ್ಯಾವಿ ಆಗಿರುವ ಪ್ರಧಾನಿಗಳು ಈ ಯೋಜನೆಯನ್ನು ನಿಜಕ್ಕೂ ಅಕ್ಷರಶಃ  ಜಾರಿಗೆ ತಂದು ಭಾರತವನ್ನು ಜಗತ್ತಿನ ಟೆಕ್‌ಕ್ರಾಂತಿಯ ಕೇಂದ್ರವನ್ನಾಗಿ ಮಾಡಿಬಿಡುತ್ತಾರೆ. ಜಾಗತಿಕ ಇಂಟರ್ನೆಟ್ ಕ್ರಾಂತಿಗೆ ಮುನ್ನುಡಿ ಬರೆದು ಬಿಡುತ್ತಾರೆ ಎಂಬ ಆಶೆ ಹುಟ್ಟಿಸಿದ್ದಂತು ನಿಜ. ಹಳ್ಳಿ ಹಳ್ಳಿಯನ್ನೂ ತಂತ್ರಜ್ಞಾನದ ಮೂಲಕ ಬೆಸೆದು ಭ್ರಷ್ಟಚಾರ ನಿವಾರಿಸಿ, ಆಡಳಿತದಲ್ಲಿ ಪಾರದರ್ಶಕತೆ ತಂದು, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಘೋಷವನ್ನು ಸಾಧ್ಯವಾಗಿಸುತ್ತಾರೆ ಎಂಬ ಆಕಾಂಕ್ಷೆಗೂ ಕಾರಣವಾಗಿತ್ತು.

ಕಳೆದ ಎರಡು ವರ್ಷದಲ್ಲಿ ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳಾಗಿವೆ. ಇತ್ತೀಚೆಗೆ ಸರ್ಕಾರ 1800 ಕೋಟಿ ರೂ.ಗಳನ್ನು ನ್ಯಾಷನಲ್ ಡಿಜಿಟಲ್ ಲಿಟ್ರಸಿ ಮಿಷನ್‌ಗಾಗಿ ಘೋಷಣೆ ಮಾಡಿದೆ. ಈ ಯೋಜನೆಯಡಿ ಭಾರತದ ಗ್ರಾಮೀಣ ಭಾಗದಲ್ಲಿರುವ 6 ಕೋಟಿ ಜನರಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿದೆ.

ಇಷ್ಟೇ ಅಲ್ಲ ಭಾರತ್ ನೆಟ್ ಯೋಜನೆಯಡಿ ಗ್ರಾಮ ಪಂಚಾಯಿತಿಗಳನ್ನು ಬೆಸೆಯುವುದಕ್ಕಾಗಿ 1.23 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕಲ್ ಫೈಬರ್ ಚಾನೆಲ್ ಕೂಡ ಹಾಕಲಾಗಿದೆ. ಜೊತೆಗೇ 80 ಸಾವಿರದಿಂದ 2 ಲಕ್ಷ ಕಾಮನ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಈ ಸಂಖ್ಯೆ 2.5 ಲಕ್ಷ ಮುಟ್ಟುವ ನಿರೀಕ್ಷೆಯೂ ಇದೆ. ಪೋಸ್ಟ್ ಆಫೀಸ್‌ಗಳು, ಬ್ಯಾಂಕ್‌ಗಳೂ ಹೊಸ ಸಂಪರ್ಕ ಕ್ರಾಂತಿಯಿಂದಾಗಿ ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಲು ಸಿದ್ಧವಾಗಿವೆ.

ವಿಪರ್ಯಾಸವೆಂದರೆ ಇಷ್ಟೆಲ್ಲಾ ಆಗುತ್ತಿದ್ದರೂ ಅವಮಾನಕ್ಕೀಡಾಗುವಂತೆ ವರ್ಲ್ಡ್ ಎಕನಾಮಿಕ್ ಫೋರಮ್‌ನ ಜಾಗತಿಕ ರ್ಯಾಂಕಿಂಗ್’ನಲ್ಲಿ ಕುಸಿತ ಕಂಡಿದ್ದು. ಇತ್ತೀಚೆಗೆ ಬಿಡುಗಡೆ ಮಾಡಿದ ರ್ಯಾಂಕಿಂಗ್’ನಲ್ಲಿ  ಭಾರತ 91ನೇ ಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಪಟ್ಟಿಯಲ್ಲಿ 89ನೇ ರ್ಯಾಂಕಿಂಗ್’ನಲ್ಲಿತ್ತು. ಹಿಂದಿನ ಸರ್ಕಾರದಲ್ಲಿ ಈ ರ್ಯಾಂಕಿಂಗ್’  64, 65ರಲ್ಲಿತ್ತು. ಮೋದಿ ಅವರು ಮಹಾತ್ವಾಕಾಂಕ್ಷೆಯಿಂದ ಸುಮಾರು 1.5 ಟ್ರಿಲಿಯನ್ ಕೋಟಿಗಳನ್ನು ಹೂಡಿ ಜಾರಿ ಮಾಡಿದ ಕಾರ್ಯಕ್ರಮ ಇಂಥ ಹಿನ್ನಡೆ ಕಾಣುತ್ತಿರುವುದೇಕೆ? ಆಶ್ಚರ್ಯವಾಗುತ್ತಿದೆ. ಎರಡು ವರ್ಷಗಳಲ್ಲಿ ಏನು ಆಗುವುದಿಲ್ಲ, ಕಾಯಬೇಕೆನ್ನುವುದು ಸರಳವಾದ ತೀರ್ಪು. ಆದರೆ ಇಡೀ ದೇಶವನ್ನು ರೂಪಾಂತರಿಸಿ ಬಿಡುವ ಯೋಜನೆ ಎಂಬ ಪ್ರಚಾರದೊಂದಿಗೆ ಕಾರ್ಯರೂಪಕ್ಕೆ ಬಂದ ಈ ಕಾರ್ಯ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಜಾರಿಯಾಗಿತ್ತೆ ಎಂಬುದು ಅನುಮಾನ.

ಜಾಗತಿಕ ಮಟ್ಟದಲ್ಲಿ ರ್ಯಾಂಕಿಂಗ್’ ಕುಸಿದಿರುವುದಕ್ಕೆ ಕಾರಣಗಳನ್ನು ನೋಡೋಣ. ಜಗತ್ತಿನ ಸಣ್ಣ ಸಣ್ಣ ದೇಶಗಳು ವೇಗದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ವೇಗವಾಗಿ ಸಾಗುತ್ತಿರುವಾಗ ಭಾರತ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಸೋತಿರುವುದು ಹಿನ್ನೆಡೆ ಬಹುಮುಖ್ಯ ತೊಡಕು. ಭಾರತೀಯರಲ್ಲಿರುವ ಕಡಿಮೆ ದರ್ಜೆಯ ಕೌಶಲ್ಯಗಳು ಇನ್ನೊಂದು ಸಮಸ್ಯೆ. ಮಾಹಿತಿ ಮತ್ತು ತಂತ್ರಜ್ಞಾನ ವಿಷಯದಲ್ಲಿರುವ ಕಂದಕ ಕೂಡ ಭಾರತದ ಡಿಜಿಟಲ್ ಸಾಧನೆಯನ್ನು ಮರೀಚಿಕೆಗೊಳಿಸುವಷ್ಟರ ಮಟ್ಟಿಗೆ ನಿರಾಶಾದಾಯಕವಾಗಿದೆ.

ಮೂಲಸೌಕರ್ಯಗಳ ವಿಷಯವನ್ನೇ ಸ್ವಲ್ಪ ವಿಷದವಾಗಿ ನೋಡುವುದಾದರೆ ಜಗತ್ತು 5ಜಿ ವೇಗದ ಇಂಟರ್ನೆಟ್ ಬಳಸುವತ್ತ ಸಾಗುತ್ತಿದೆ. ಆದರೆ ಭಾರತದಲ್ಲಿನ್ನೂ 3ಜಿ ಸೇವೆಯೇ ಸಮಪರ್ಕವಾಗಿಲ್ಲ. ದೇಶದಲ್ಲಿ 90 ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. ಇವರೆಲ್ಲರನ್ನೂ ಡಿಜಿಟಲ್ ಭಾರತದ ಭಾಗವಾಗುವಂತೆ ಮಾಡುವುದಕ್ಕೆ ಪೂರಕವಾದ ತಂತ್ರಜ್ಞಾನ ಸೌಕರ್ಯಗಳಿರಬೇಕು. ಕಾಲ್‌ಡ್ರಾಪ್ ಪ್ರಮಾಣವೇ ಹೆಚ್ಚಿರುವಾಗ, ಉತ್ತಮ ವೇಗದ ಇಂಟರ್ನೆಟ್ ನೀಡುವುದು ಅಸಾಧ್ಯವೆನಿಸಿಬಿಟ್ಟಿದೆ. ಇಂಥ ಸನ್ನಿವೇಶದಲ್ಲಿ ಡಿಜಿಟಲ್ ಸೇವೆಯ ಸಾಮರ್ಥ್ಯ ಹೆಚ್ಚಾಗುವ ಭರವಸೆಯಾದರೂ ಎಲ್ಲಿಂದ ಬರುತ್ತದೆ ?

ಡಿಜಿಟಲ್ ಕ್ಷೇತ್ರದಲ್ಲಿ ಸದ್ಯ ಅಮೆರಿಕ ಮತ್ತು ಚೀನಾ ದೇಶಗಳನ್ನು ಸರಿಗಟ್ಟುವವರಿಲ್ಲ. ಅದಕ್ಕೆ ಮುಖ್ಯ ಕಾರಣ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೌಶಲ್ಯ. ಚೀನಾದ ಡಿಜಿಟಲ್ ಆರ್ಥಿಕತೆ ಶೇ. 21ರಷ್ಟು ಪ್ರಮಾಣದ ಗಳಿಕೆಯನ್ನು ಜಿಡಿಪಿಗೆ ನೀಡುತ್ತಿದೆ. ಇದು ಸಾಧ್ಯವಾಗುತ್ತಿರುವುದು ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕೌಶಲ್ಯ ಹೊಂದಿದ ಪ್ರತಿಭೆಗಳನ್ನು ಬೆಳೆಸುತ್ತಿರುವುದು. ಈ ಪ್ರತಿಭೆಗಳು ಚೀನಾದ ಗ್ರಾಮೀಣ ಭಾಗದಿಂದ ಬಂದವರೇ ಆಗಿರುವುದು. ಚೀನಾದ ಕಂಪನಿಗಳಾದ ಬೈದು ಮತ್ತು ಟೆನ್‌ಸೆಂಟ್ 75000 ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗ ನೀಡಿರುವುದೇ ಇತ್ತೀಚಿನ ಉದಾಹರಣೆ.

ಭಾರತದ ಮಟ್ಟಿಗೆ ಚಿತ್ರಣ ಬೇರೆ. ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆನಿಂತಿರುವ ಗೂಗಲ್, ಫೇಸ್‌ಬುಕ್‌ನಂಥ ಕಂಪನಿಗಳಿಗೆ ಕ್ಯಾಲಿಫೋರ್ನಿಯಾದಲ್ಲೇ ಸಾವಿರಾರು ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ಅವರು ಮಾಡಿದ್ದನ್ನು ಪ್ರಚಾರ ಮಾಡುವುದಕ್ಕೆ ಕೆಲವೇ ನೂರರ ಸಂಖ್ಯೆಯ ಸಿಬ್ಬಂದಿ ಭಾರತದಲ್ಲಿ ನೇಮಿಸಲಾಗುತ್ತದೆ. ಸ್ಥಳೀಯವಾಗಿ ತನ್ನದೇ ಆದ ಡಿಜಿಟಲ್ ಕೌಶಲ್ಯ ಹೊಂದಲು ಸಾಧ್ಯವಾಗುವುದಾದರೆ ಭಾರತದ ಡಿಜಿಟಲ್ ಆರ್ಥಿಕತೆಗೆ ಹೊಸ ಆಯಾಮ ದೊರೆಯುತ್ತದೆ. ಆದರೆ ಜಾಗತಿಕ ಮಟ್ಟದ ಕಂಪನಿಗಳು ಅವರ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಅವಕಾಶ ಕೊಟ್ಟಿರುವ ಭಾರತ ಅದರಿಂದ ಭಾರತದ ಡಿಜಿಟಲ್ ಆರ್ಥಿಕತೆಗೆ ಎಷ್ಟು ಲಾಭವಾಗುತ್ತದೆ ಎಂಬುದನ್ನು ಆದ್ಯತೆ ಮೇರೆಗೆ ಪರಿಶೀಲಿಸಬೇಕು. ಸ್ಥಳೀಯ ಆರ್ಥಿಕತೆ ಹೆಚ್ಚಬೇಕು. ಮೋದಿ ಅವರು ಸಿಲಿಕಾನ್ ವ್ಯಾಲಿಗೆ ಭೇಟಿ ಕೊಟ್ಟು, ಮಾರ್ಕ್ ಝುಕರ್‌ಬರ್ಗ್, ಸತ್ಯ ನಡೆಲ್ಲಾ, ಸುಂದರ್ ಪಿಚ್ಚೈ ಅವರೆಲ್ಲರೂ ಭಾರತಕ್ಕೆ ಭೇಟಿ ಕೊಟ್ಟಾಗ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುವುದಕ್ಕೇ ಈ ಬೆಳವಣಿಗೆಗಳಾಗುತ್ತಿವೆ ಎಂಬ ಭ್ರಮೆಯನ್ನು ಹುಟ್ಟುಹಾಕಿತ್ತು. ಆದರೆ ಕಳೆದವಾರದ ವಿಶ್ವ ಆರ್ಥಿಕ ವೇದಿಕೆಯ ಬಿಚ್ಚಿಟ್ಟ ಸತ್ಯ ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗುವಂಥದ್ದು.

ಭಾರತದಲ್ಲಿ ಈ ಕಾಮರ್ಸ್ ವೇಗವಾಗಿ ಬೆಳೆಯುತ್ತಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಬಾಗಿಲು ತೆರೆದು ಸ್ವಾಗತಿಸುತ್ತಿದೆ. ಈ ಹೊತ್ತಿನಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಆಗಲೇ ಬೇಕಾದ ಮಹತ್ವದ ಪ್ರಾಥಮಿಕ ಕೆಲಸಗಳತ್ತ ಕೇಂದ್ರ ಸರ್ಕಾರ ಗಮನಹರಿಸದೇ ಹೋದರೆ ಡಿಜಿಟಲ್ ಕ್ರಾಂತಿ ಎಂಬುದು ಬಿಸಿಲುಗುದರೆಯಾಗಿಬಿಡುತ್ತದೆ. ನೀತಿ ಆಯೋಗ ಈಗ ಮೂರು ತಂತ್ರಜ್ಞಾನಗಳತ್ತ ಬೆರಳು ಮಾಡಿ ತೋರಿಸಿದೆ. ಈ ಮೂರು ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾದರೆ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತವನ್ನು ಮೀರಿಸುವ ಇನ್ನೊಂದು ದೇಶವಿರುವುದಿಲ್ಲ.

ಮೊದಲನೆಯದಾಗಿ ವೈಟ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುವುದು. ಇದು ಟಿವಿ ವಾಹಿನಿಗಳಿಗೆ ವೈರ್‌ಲೆಸ್ ಸಂವಹನ ಸೇವೆ ನೀಡುವ ತಂತ್ರಜ್ಞಾನ. ಈ ಸೇವೆಗೆ ನೀಡಲಾಗುವ ಬ್ಯಾಂಡ್‌ವಿಡ್ತ್  ಸಂಪೂರ್ಣವಾಗಿ ಬಳಕೆಯಾಗುವುದಿಲ್ಲ. ಉಳಿದ ಅವಕಾಶವನ್ನು ಸಂಪರ್ಕ ಕಲ್ಪಿಸುವುದಕ್ಕೆ ಬಳಸುವುದರಿಂದ ದೇಶದ ಮನೆಮನೆಯನ್ನೂ ತಲುಪಲು ಸಾಧ್ಯವಾಗುತ್ತದೆ. ಈಗಾಗಲೇ ಈ ಪ್ರಯೋಗ ಕೀನ್ಯಾ, ತಾಂಜೇನಿಯಾ, ಫಿಲಿಪೈನ್ಸ್, ಸಿಂಗಾಪುರ್‌ಗಳಲ್ಲಿ ಯಶ ಕಂಡಿದೆ. ಈಗ ಭಾರತದಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಪ್ರಯೋಗ ನಡೆದಿದೆ.

ಇದನ್ನೂ ಓದಿ | ಗೂಗಲ್‌ಗೆ 20| ದೈತ್ಯವಾಗಿ ಬೆಳೆದಿರುವ ಟೆಕ್‌ ಸಂಸ್ಥೆ ರಕ್ಕಸನಾಗದಿದ್ದರೆ ಸಾಕು

ಎರಡನೆಯದು ವಿಸ್ಯಾಟ್. ಸ್ಯಾಟ್‌ಲೈಟ್ ಮೂಲಕ ಇಂಟರ್ನೆಟ್ ನೀಡುವ ತಂತ್ರಜ್ಞಾನ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಇಂಟರ್ನೆಟ್ ಪೂರೈಸುತ್ತದೆ. ಈ ಸೇವೆಯ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವ್ಯಾಪ್ತಿಗೆ ಇಂಟರ್ನೆಟ್ ಪೂರೈಸಲು ಸಾಧ್ಯವಾಗುತ್ತದೆ. ಮೂರನೆಯದಾಗಿ ವೈಫೈ ಸೇವೆ. ಆಯ್ದ ರೈಲ್ವೆ ಸ್ಟೇಷನ್‌ಗಳಲ್ಲಿ ಗೂಗಲ್ ವೈಫೈ ಇಂಟರ್ನೆಟ್ ಸೇವೆ ನೀಡುತ್ತದೆ. ಈ ಸೇವೆ ಶಾಲೆ, ಆಸ್ಪತ್ರೆ, ಮುಂತಾದ ಸಾರ್ವಜನಿಕ ಸ್ಥಳಗಳಲ್ಲೂ ಲಭ್ಯವಾಗುವಂತೆ ಮಾಡಬೇಕು.

ಇದಲ್ಲದೇ, ಗೂಗಲ್ ಲೂನ್ ಪ್ರಾಜೆಕ್ಟ್ ಇಂಟರ್ನೆಟ್ ಕ್ರಾಂತಿಗೆ ಕಾರಣವಾಗುವಂತಹ ಒಂದು ಪ್ರಯತ್ನವನ್ನು ಮಾಡುತ್ತಿದೆ. ಸೌರಶಕ್ತಿಯಿಂದ ಚಲಿಸುವ ಬಲೂನ್‌ಗಳ ಮೂಲಕ ಇಂಟರ್ನೆಟ್ ಸೇವೆ ಒದಗಿಸಲು ಮುಂದಾಗಿದೆ. ಇಂಟರ್ನೆಟ್ ಇಲ್ಲದೇ ಡಿಜಿಟಲ್ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಯಾಗಲು ಸಾಧ್ಯವಿಲ್ಲ. ಭಾರತದಲ್ಲಿ ಇಂಟರ್ನೆಟ್ ಸೇವೆ ಸಮರ್ಥವಾಗಿ ವಿಕಾಸಗೊಳ್ಳದೇ, ತಲುಪಲಾಗದವರನ್ನೂ ತಲುಪದೇ ಹೋದರೆ, ಡಿಜಿಟಲ್ ಕ್ಷೇತ್ರದ ಹಲವು ಸಾಧ್ಯತೆಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಹಿಂದೆ ಬೀಳುವುದರಲ್ಲಿ ಅನುಮಾನವಿಲ್ಲ.