ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಆಂಟಿಬಯೋಟಿಕ್‌ ಸಿದ್ಧಪಡಿಸಿದ ವಿಜ್ಞಾನಿಗಳು!

ಆಂಟಿಬಯೊಟಿಕ್‌ಗಳನ್ನೂ ಅರಗಿಸಿಕೊಂಡು ಬದುಕುವ ಬ್ಯಾಕ್ಟಿರೀಯಾಗಳಿಗೆ ಕೊನೆ ಮೊಳೆ ಹೊಡೆಯಬಹುದು ಎಂದು ವಿಜ್ಞಾನಿಗಳು ಸಂಭ್ರಮಿಸಿದ್ದಾರೆ. ಅಮೆರಿಕ ಪ್ರತಿಷ್ಠಿತ ಎಂಐಟಿಯ ಸಂಶೋಧಕರು ಅತ್ಯಂತ ಶಕ್ತಿಶಾಲಿ ರೋಗನಿರೋಧಕ ಔಷಧವನ್ನು ರೂಪಿಸಿದ್ದು, ಇದಕ್ಕೆ ಅವರಿಗೆ ನೆರವಾಗಿದ್ದು ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌

ಇಂದು ವೈದ್ಯವಿಜ್ಞಾನದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಕೆ ಹೆಚ್ಚುತ್ತಿದೆ. ಕಾಯಿಲೆಗಳನ್ನು ಮುಂಗಾಣುವ, ದೇಹವನ್ನು ವಿಶ್ಲೇಷಿಸುವ ಮುಂತಾದ ಸಂಕೀರ್ಣ ಕೆಲಸಗಳಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಔಷಧಿಯನ್ನು ಸಿದ್ಧಪಡಿಸಲಾಗಿದೆ. ಇದು ರೋಗ ನಿರೋಧಕಗಳ ವಿಭಾಗದಲ್ಲಿ ಮಹತ್ವದ ಹೆಜ್ಜೆ ಎಂದು ವಿಜ್ಞಾನಿಗಳು ಸಂಭ್ರಮಸುತ್ತಿದ್ದಾರೆ.

ಆಂಟಿಬಯೋಟಿಕ್‌ ಅಥವಾ ರೋಗ ನಿರೋಧಕ ಮಾತ್ರೆಗಳನ್ನು ನಾವು ಸೇವಿಸುತ್ತೇವೆ. ದೇಹದಲ್ಲಿರುವ ಕೆಲವು ಅಪಾಯಕಾರಿ ಬ್ಯಾಕ್ಟಿರೀಯಾಗಳನ್ನು ಕೊಂದು ದೇಹದ ಆರೋಗ್ಯ ಕಾಪಾಡುವುದು ಇವುಗಳ ಕೆಲಸ. ಆದರೆ ಕೆಲವು ಬ್ಯಾಕ್ಟೀರಿಯಾಗಳು ಎಷ್ಟು ಸಮರ್ಥವಾಗಿರುತ್ತವೆ ಎಂದರೆ, ನಿಧಾನವಾಗಿ ರೋಗ ನಿರೋಧಕ ಔಷಧಿಗಳ ವಿರುದ್ಧವೇ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಇಂಥ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಹೇಗೆ?

ಅಮೆರಿಕದ ಮಸ್ಸಾಚುಸೆಟ್ಸ್‌ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರು ಮನುಷ್ಯನಿಗೆ ಅಪಾಯ ತಂದೊಡ್ಡಬಹುದಾದ 35 ರೀತಿಯ ಬ್ಯಾಕ್ಟಿರೀಯಾಗಳನ್ನು ಕೊಲ್ಲಬಹುದಾದ ಔಷಧ ಸಂಯುಕ್ತ ಪದಾರ್ಥವನ್ನು ಕಂಡುಕೊಂಡಿದ್ದಾರೆ. ಇದರ ಹೆಸರು ಹೆಲಿಸಿನ್‌.

ಜೈವಿಕವಾದ ಪ್ರಕ್ರಿಯೆಯೊಂದಕ್ಕೆ ಯಂತ್ರ ಆಧರಿತವಾದ ಈ ರೀತಿಯ ಸಂಶೋಧನೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದ್ದರೂ, ಮೆಚ್ಚುಗೆಯೂ ಕೇಳಿಬರುತ್ತಿದೆ.

ಒಂದು ವರದಿಯ ಪ್ರಕಾರ ಇಂಗ್ಲೆಂಡ್‌ನಂತಹ ದೇಶವೊಂದರಲ್ಲೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬ್ಯಾಕ್ಟಿರೀಯಾಗಳಿಂದ ಶೇಕಡ ಹತ್ತರಷ್ಟು ಸೋಂಕು ಹರಡುತ್ತಿದೆ. ಸೂಕ್ತ ರೀತಿಯಲ್ಲಿ- ಅಂದರೆ ಸಮಯ, ಪ್ರಮಾಣ- ಔಷಧಿ ತೆಗೆದುಕೊಳ್ಳದೇ ಹೋಗುವುದರಿಂದ ಅದು ಮಾಡಬೇಕಾದ ಕೆಲಸವನ್ನು ಸಮಪರ್ಕವಾಗಿ ಮಾಡದೆ, ಬ್ಯಾಕ್ಟಿರೀಯಾಗಳನ್ನು ಕೊಲ್ಲದೆ, ಅವುಗಳ ಬಲ ಹೆಚ್ಚಿಸುತ್ತದೆ ಎಂದು ಸಂಶೋಧಕರು ವಿಶ್ಲೇಷಿಸುತ್ತಾರೆ.

ಕಳೆದೊಂದು ದಶಕದಿಂದ ಜಾಗತಿಕವಾಗಿ ಬಳಕೆಯಾಗುತ್ತಿರುವ ರೋಗ ನಿರೋಧಕ ಔಷಧಿಗಳಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ. ಹೊಸದಾಗಿ ಪರಿಚಯಿಸಲಾಗಿರುವ ಔ‍ಷಧಗಳು ಹಿಂದಿನ ಔಷಧಗಳ ಸುಧಾರಿತ ಮಾದರಿಗಳೇ. ಜೊತೆಗೆ ಹೊಸ ರೋಗ ನಿರೋಧಕಗಳನ್ನು ಕಂಡುಕೊಳ್ಳಲು ಇರುವ ವ್ಯವಸ್ಥೆ ದುಬಾರಿಯೂ, ಹೆಚ್ಚಿನ ಸಮಯವನ್ನು ಬೇಡುವ ಹಾಗೂ ರಾಸಾಯನಿಕಗಳ ದೃಷ್ಟಿಯಿಂದ ಸೀಮಿತವಾದ ಸಾಧ್ಯತೆಯನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಹೊಸ ಸಾಧ್ಯತೆಗಳ ಬಾಗಿಲು ತೆರೆಯಬಹುದು ಎಂದು ಎಂಐಟಿ ವಿಜ್ಞಾನಿಗಳ ತಂಡ ಯೋಚಿಸಿತು.

ಎಂಐಟಿಯ ಜೇಮ್ಸ್‌ ಕಾಲಿನ್ಸ್‌, ರೆಜಿನಾ ಬಾರ್ಜಿಲೇ ಅವರ ನೇತೃತ್ವದ ತಂಡ ಮನುಷ್ಯನ ಮಿದುಳಿನ ರಚನೆಯನ್ನು ಆಧರಿಸಿದ ಆಲ್ಗರಿದಮ್‌ ಆಧರಿಸಿ ಸಂಶೋಧನೆ ನಡೆಸಿತು.

ಮೊದಲು ತಂಡದ ವಿಜ್ಞಾನಿಗಳಿಗೆ 2,500 ಔಷಧಿಗಳ ರಚನೆಯನ್ನು ವಿಶ್ಲೇಷಿಸುವ ತರಬೇತಿ ನೀಡಲಾಯಿತು. ಇದರ ಜೊತೆಗೆ ಅವುಗಳಲ್ಲಿರುವ ಇ.ಕೋಲಿಯಂತಹ ಬ್ಯಾಕ್ಟಿರೀಯಾ ವಿರುದ್ಧ ಸಮರ್ಥವಾಗಿ ಕೆಲಸ ಮಾಡುವ ಸಂಯುಕ್ತ ಪದಾರ್ಥಗಳನ್ನು ಗುರುತಿಸಲು ಸೂಚಿಸಲಾಯಿತು.

ನಂತರ ಹೆಲಿಸಿನ್‌ ಅನ್ನು ಬಾಮನ್ನಿ ಬ್ಯಾಕ್ಟಿರಿಯಾ ಸೋಂಕಿಗೆ ಗುರಿಯಾದ ಇಲಿಯ ಮೇಲೆ ಪ್ರಯೋಗಿಸಲಾಯಿತು. ಇರಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿದ್ದ ಅಮೆರಿಕದ ಸೈನಿಕರಿಗೆ ಈ ಬ್ಯಾಕ್ಟಿರೀಯಾ ಹರಡಿತ್ತು. ಇದೂ ಎಲ್ಲ ರೀತಿಯ ರೋಗ ನಿರೋಧಕ ಔಷಧಿಗಳನ್ನು ಅರಗಿಸಿಕೊಳ್ಳುವಷ್ಟು ಶಕ್ತಿಶಾಲಿಯಾಗಿತ್ತು. ಇಂಥ ಬ್ಯಾಕ್ಟಿರೀಯಾ ಸೋಂಕಿದ್ದ ಇಲಿಗೆ ಹೆಲಿಸಿನ್‌ ಔಷಧ ಪ್ರಯೋಗ ಮಾಡಿದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಬ್ಯಾಕ್ಟಿರಿಯಾ ನಾಶವಾಯಿತು.

ಮುಂದೆ ಇದನ್ನು ಮಾನವ ಬಳಕೆಗೆ ಯೋಗ್ಯವಾಗಿ ಅಭಿವೃದ್ಧಿಪಡಿಸಿ, ಸಾರ್ವಜನಿಕ ಲಭ್ಯತೆಗೆ ಅಗತ್ಯವಾಗುವ ಉತ್ಪಾದನೆಗೆ ಆಸಕ್ತಿ ತೋರುವ ಔಷಧ ಸಂಸ್ಥೆ, ಸಂಘಟನೆಗಳು ಮುಂದೆ ಬರಬಹುದು ಎಂಬ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.