ಕೆಲವೇ ದಿನಗಳಲ್ಲಿ ವಾಟ್ಸ್‌ಆಪ್‌ನಲ್ಲೂ ಹಣ ಟ್ರಾನ್ಸ್‌ಫರ್‌ ಮಾಡಬಹುದು. ಆದರೆ…

ಫೇಸ್‌ಬುಕ್‌ ಸಂಸ್ಥೆ ಖರೀದಿಸಿದ ವಾಟ್ಸ್‌ಆಪ್‌ ಈಗ ಕೇವಲ ಮೆಸೇಂಜರ್‌ ಆಗಿ ಉಳಿದಿಲ್ಲ. ಅದರ ಮೂಲಕ ಈಗ ಹಣವನ್ನು ಟ್ರಾನ್ಸ್‌ಫರ್‌ ಮಾಡುವ ಸೇವೆಯೂ ಲಭ್ಯವಾಗಲಿದೆ. ಈಗಾಗಲೇ ಪ್ರಯೋಗಾರ್ಥ ಆಯ್ದ ಬಳಕೆದಾರರಿಗೆ ಈ ಸೇವೆಯನ್ನು ನೀಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆದರೆ ಈ ಸೇವೆ ನಿಜಕ್ಕೂ ಸುರಕ್ಷಿತವೆ?

ಡಿಜಿಟಲ್‌ ಎಕಾನಮಿಯ ಚರ್ಚೆ ಆರಂಭವಾದಾಗಿನಿಂದ ಭಾರತದಲ್ಲಿ ಹಲವು ಆಪ್‌ಗಳು ಬ್ಯಾಂಕಿಂಗ್‌ ಸೇವೆಯನ್ನು ಕೊಡಲಾರಂಭಿಸಿದವು. ಪೇಟಿಎಂ, ಈ ವ್ಯಾಲೆಟ್‌, ಫೋನ್‌ಪೆ, ಗೂಗಲ್‌ ತೇಜ್‌ ಹೀಗೆ ಆಪ್‌ಗಳು ಹಣವನ್ನು ಡಿಜಿಟಲ್‌ ರೂಪದಲ್ಲಿ ಬಳಸುವುದಕ್ಕೆ ವಿವಿಧ ರೀತಿಯ ಕೊಡುಗೆಗಳ ಆಕರ್ಷಣೆ ನೀಡಿ ಬಳಕೆದಾರರನ್ನು ಸೆಳೆಯಲಾರಂಭಿಸಿದವು. ಡಿಸೆಂಬರ್‌ ೨೦೧೬ರಲ್ಲಿ ಕೇವಲ ೨೦ ಲಕ್ಷ ರೂ.ಗಳಷ್ಟಿದ್ದ ವಹಿವಾಟು ಒಂದೇ ವರ್ಷದಲ್ಲಿ ೧೫ ಕೋಟಿಗೂ ಹೆಚ್ಚಾಗಿದೆ. ಬೆಳೆಯುತ್ತಿರುವ ಈ ಹೊಸ ಮಾರುಕಟ್ಟೆಯನ್ನು ಅನೇಕರು ತೋಳೇರಿಸಿ ಮಾರುಕಟ್ಟೆಗೆ ಇಳಿದರು.
ಇವರೆಲ್ಲರೂ ಹೊಸದಾಗಿ ತಮ್ಮದೇ ಆದ ಗ್ರಾಹಕರನ್ನು ಸೃಷ್ಟಿಸಿಕೊಳ್ಳುವುದಕ್ಕೆ ಕೆಲ ಕಾಲ ಕಷ್ಟಪಡಬೇಕಾಯಿತು. ಆದರೆ ತನ್ನದೇ ಆದ ದೊಡ್ಡ ಬಳಕೆದಾರರನ್ನು ಹೊಂದಿರುವ ತಾನೂ ಏಕೆ ಪೇಮೆಂಟ್‌ ಮಾರುಕಟ್ಟೆಗೆ ಕಾಲಿಡಬಾರದು ಎಂದು ಯೋಚಿಸಿದ್ದೇ ತಡ ಮೆಸೇಂಜರ್‌ ಮೂಲಕವೇ ಹಣ ವರ್ಗಾಯಿಸುವ ವಿಧಾನವನ್ನು ಪ್ರಯೋಗಿಸಿತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಈಗ ಅದನ್ನು ಭಾರತೀಯ ಬಳಕೆದಾರರಿಗೆ ನೀಡಲು ಸಿದ್ಧವಾಗುತ್ತಿದೆ.
ಪ್ರಸ್ತುತ ಭಾರತದಲ್ಲಿ ೨೫ ಕೋಟಿ ಮಂದಿ ವಾಟ್ಸ್‌ಆಪ್‌ ಬಳಸುತ್ತಿದ್ದಾರೆ. ಪೇಟಿಎಂ ಹೊರತುಪಡಿಸಿದರೆ ಅತಿ ಹೆಚ್ಚು ಬಳಕೆದಾರರನ್ನು ಈಗಾಗಲೇ ಹೊಂದಿರುವ ಇನ್ನೊಂದು ಆಪ್‌ ಇಲ್ಲ. ಹಾಗಾಗಿ ಇವರಿಗೆ ಪೇಮೆಂಟ್‌ ಸೇವೆ ಒದಗಿಸಿದರೆ ದೊಡ್ಡ ವಹಿವಾಟನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಬಹುದು ಎಂಬ ಉದ್ದೇಶ ವಾಟ್ಸ್‌ಆಪ್‌ನದ್ದು.
ಕಳೆದ ವರ್ಷ ಇದೇ ಉದ್ದೇಶದೊಂದಿಗೆ ಖಾಸಗಿ ಬ್ಯಾಂಕ್‌ಜೊತೆ ಕೈಜೋಡಿಸಲು ಯೋಜನೆ ಮಾಡಿತ್ತು. ಆದರೆ ರಿಸರ್ವಬ್ಯಾಂಕ್‌ನ ನಿಯಮಗಳು, ವಿದೇಶಿ ಆಪ್‌ವೊಂದು ಡಿಜಿಟಲ್‌ ಪೇಮೆಂಟ್‌ ಸೇವೆ ನೀಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆರ್‌ಬಿಐ ಮಾರ್ಗಸೂಚಿ ಹೇಳುವಂತೆ, ” ಬ್ಯಾಂಕ್‌ ಅಲ್ಲದ ಸಂಸ್ಥೆಗಳು ಅಧಿಕೃತ ಎಂದು ಪ್ರಮಾಣೀಕರಿಸಲು ಅರ್ಜಿಸಲ್ಲಿಸುವವರು ಭಾರತೀಯ ಕಂಪನಿಯಾಗಿರಬೇಕು ಮತ್ತು ಕಂಪನಿ ಆಕ್ಟ್‌ ೧೯೫೬/ಕಂಪನಿ ಆಕ್ಟ್‌ ೨೦೧೩ರ ಪ್ರಕಾರ ನೊಂದಾಯಿಸಿಕೊಂಡಿರಬೇಕು” ಎನ್ನುತ್ತದೆ. ಇದರನ್ವಯ ಆರ್‌ಬಿಐ ನಿರಾಕರಿಸುತ್ತು ಎನ್ನಲಾಗಿತ್ತು.
ವಾಟ್ಸ್‌ಆಪ್‌, ಅಮೆರಿಕದ ಫೇಸ್‌ಬುಕ್‌ ಸಂಸ್ಥೆಯ ಭಾಗವಾಗಿದ್ದರಿಂದ ಈ ತೊಡಕು ಎದುರಾಯಿತು. ಆದರೆ ೨೦೧೭ರಲ್ಲಿ ಕೇಂದ್ರ ಸರ್ಕಾರ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ಗೆ ಹೆಚ್ಚು ಒತ್ತು ನೀಡಲಾರಂಭಿಸುತ್ತಿದ್ದಂತೆ ಗೂಗಲ್‌ ತೇಜ್‌ ಎಂಬ ಅಪ್‌ ಅಸ್ತಿತ್ವಕ್ಕೆ ಬಂತು. ಅವಕಾಶಕ್ಕಾಗಿ ಕಾದಿದ್ದ ವಾಟ್ಸ್‌ಆಪ್‌ ಕೂಡ ಮತ್ತೆ ತಮ್ಮ ಯೋಜನೆ ಜಾರಿಗೆ ತರಲು ಸಕ್ರಿಯವಾಯಿತು.

ಪ್ರಯೋಗ ನಡೆಯಿತು

ಆಯ್ದ ಕೆಲವು ಬಳಕೆದಾರರಿಗೆ ವಾಟ್ಸ್‌ ಆಪ್‌ ಮೂಲಕ ಹಣವನ್ನು ವರ್ಗಾಯಿಸುವ ಪ್ರಯೋಗವನ್ನು ವಾಟ್ಸ್‌ ಆಪ್‌ ನಡೆಸಿತು. ಅದಕ್ಕಾಗಿ ವಾಟ್ಸ್‌ ಆಪ್‌ನ ಸೆಟ್ಟಿಂಗ್‌ನಲ್ಲಿ ಬ್ಯಾಂಕ್‌ ಖಾತೆಯನ್ನು ಜೋಡಿಸಬೇಕು. ನಿಯಮಗಳನನ್ನು ಓದಿ ಹೊಸ ಖಾತೆಯನ್ನು ಸೇರಿಸಬೇಕು. ಫೋನ್‌ ನಂಬರ್‌ ವೆರಿಫಿಕೇಷನ್‌ ಬಳಿಕ ಯುಪಿಎ ಸೇವೆ ನೀಡುತ್ತಿರುವ ಬ್ಯಾಂಕ್‌ಗಳ ಪಟ್ಟಿ ತೆರೆದುಕೊಳ್ಳುವುದು. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಜೋಡಣೆಯಾಗಿ ವಿವರಗಳು ಲಭ್ಯವಾಗುವುವು. ಬ್ಯಾಂಕ್‌ ಹೆಸರು, ಖಾತೆಯ ಕಡೆಯ ನಾಲ್ಕು ಅಂಕಿಗಳು ಮಾತ್ರ ಡಿಸ್‌ಪ್ಲೇ ಆಗುವುದು. ಅದೇ ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳಿದ್ದರೆ, ಅಷ್ಟೂ ಖಾತೆಗಳೂ ಅಲ್ಲಿ ಕಾಣಿಸಿಕೊಳ್ಳುವುವು. ಅದರಲ್ಲಿ ಯಾವುದನ್ನು ನೀವು ಬಯಸುತ್ತಿರೋ ಅದನ್ನು ಆಪ್‌ನೊಂದಿಗೆ ಜೋಡಿಸಬೇಕು. ಬಳಿಕ ಡೆಬಿಟ್‌ ಕಾರ್ಡ್‌ನ ವೆರಿಫಿಕೇಷನ್‌ ಆಗುವುದು. ಕಡೆಯ ಹಂತವಾಗಿ ಯುಪಿಎಗೆ ನಿಮ್ಮದೇ ಪಿನ್‌ ಹೊಂದಲು ಸೂಚಿಸುವುದು. ಒಟಿಪಿ ಮೂಲಕ ವೆರಿಫಿಕೇಷನ್‌ ನಡೆದು ನಾಲ್ಕು ಅಂಕಿಗಳ ಪಿನ್‌ ಸಿದ್ಧವಾಗುವುದು. ಇಷ್ಟಾದ ಬಳಿಕ ನಿಮ್ಮ ಸ್ನೇಹಿತರಿಗೆ ಹಣವನ್ನು ಸುಲಭವಾಗಿ ವರ್ಗಾಯಿಸಬಹುದು.
ಸುರಕ್ಷತೆಯ ಪ್ರಶ್ನೆ?
ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣ ಬಯಲಿಗೆ ಬರುವವರೆಗೂ ಈ ಪ್ರಯೋಗದ ಬಗ್ಗೆ ಯಾರಿಗೂ ಆತಂಕವಿರಲಿಲ್ಲ. ಹಣಕಾಸು ವಹಿವಾಟು ಅತ್ಯಂತ ಸುಲಭ ಮಾರ್ಗಗಳಲ್ಲಿ ಲಭ್ಯವಾಗುತ್ತಿರುವ ಬಗ್ಗೆ ಬಳಕೆದಾರರು ಉತ್ಸಾಹದಲ್ಲಿದ್ದರು. ಎರಡು ತಿಂಗಳಲ್ಲಿ ಕೇಂಬ್ರಿಡ್ಜ್‌ ಅನಾಲಿಟಿಕಾ, ಫೇಸ್‌ಬುಕ್‌ನಿಂದ ಕೋಟ್ಯಂತರ ಬಳಕೆದಾರರ ಮಾಹಿತಿಯನ್ನು ಕದ್ದ ರೀತಿ, ಜಗತ್ತನ್ನೇ ಅಲ್ಲಾಡಿಸಿದೆ. ಖಾಸಗಿತನ, ಮಾಹಿತಿಯ ಸುರಕ್ಷತೆಯ ಬಗ್ಗೆ ಆತಂಕಗಳನ್ನು ಹುಟ್ಟುಹಾಕಿದೆ.
ವಾಟ್ಸ್‌ ಆಪ್‌ನ ಖಾಸಗಿ ನೀತಿಯೇ ಸ್ಪಷ್ಟವಾಗಿ ಹೇಳುತ್ತಿರುವ ಸಾಲುಗಳನ್ನು ಓದಿದ ಮೇಲೆ ನಮ್ಮ ಆತಂಕ ಹೆಚ್ಚಾಗದಿರದು: “ನಮ್ಮ ಪೇಮೆಂಟ್‌ ಸೇವೆ, ಕಾರ್ಯಾಚರಣೆಗೆ ನೆರವು ಪಡೆಯಲು ಬಳಕೆದಾರರ ಮಾಹಿತಿಯನ್ನು ಸೇವೆ ಪೂರೈಸುವ ಮೂರನೆಯ ಭಾಗಿದಾರರೊಂದಿಗೆ ಹಂಚಿಕೊಳ್ಳಲಾಗುವುದು. ಪೇಮೆಂಟ್‌ ಸರ್ವಿಸ್‌ ಪ್ರೊವೈಡರ್ಸ್‌ (ಪಿಎಸ್‌ಪಿ)ಗಳಿಗೆ ಹಣಕಾಸು ವಹಿವಾಟಿನ ಸೂಚನೆಗಳನ್ನು ನೀಡಲು, ವಹಿವಾಟಿನ ಇತಿಹಾಸವನ್ನು ನಿರ್ವಹಿಸಲು, ಗ್ರಾಹಕರಿಗೆ ನೆರವು ಒದಗಿಸಲು, ನಮ್ಮ ಸೇವೆಯ ಸುರಕ್ಷಿತತೆ ಮತ್ತು ಭದ್ರತೆಯನ್ನು ಕಾಪಾಡಲು, ವಿಳಾಸದ ವಂಚನೆ ತಪ್ಪಿಸಲು, ಈ ಎಲ್ಲಾ ಮಾಹಿತಿಗಳನ್ನು ಪೇಮೆಂಟ್ಸ್‌ ಪ್ರೈವೇಸಿ ಪಾಲಿಸಿ ಅಡಿಯಲ್ಲಿ ಫೇಸ್‌ಬುಕ್‌ ಸೇರಿದಂತೆ ಸೇವೆ ಪೂರೈಸುವ ಮೂರನೆಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲಾಗುವುದು”
ಯಾವ ಮಾಹಿತಿ ಹಂಚಿಕೆಯಾಗುತ್ತದೆ? ಪಿಎಸ್‌ಪಿ, ಬಳಕೆದಾರರ ಮೊಬೈಲ್‌ ಸಂಖ್ಯೆ, ನೊಂದಾವಣೆ ಮಾಹಿತಿ, ಮೊಬೈಲ್‌ ಮಾಹಿತಿ, ವರ್ಚ್ಯುವಲ್‌ ಪೇಮೆಂಟ್‌ ವಿಳಾಸಗಳು, ಬಳಕೆದಾರರ ಯುಪಿಐ ಪಿನ್‌ ನಂಬರ್‌, ವಹಿವಾಟಿನ ಮೊತ್ತ ಮುಂತಾದ ಮಾಹಿತಿಗಳನ್ನು ವಾಟ್ಸ್‌ಆಪ್‌ ಇತರೆ ಸೇವೆ ಪೂರೈಕೆ ಮಾಡುವ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತದೆ!
ವಾಟ್ಸ್‌ ಆಪ್‌ ೨೦೧೪ರಲ್ಲಿ ಫೇಸ್‌ಬುಕ್‌ನ ತೆಕ್ಕೆಗೆ ಹೋದ ಕಂಪನಿ. ಫೇಸ್‌ಬುಕ್‌, ಬಳಕೆದಾರರ ಮಾಹಿತಿಯನ್ನು ರಕ್ಷಿಸಿಕೊಳ್ಳಲಾಗದೆ ತನ್ನ ಮಾರುಕಟ್ಟೆ ಮೌಲ್ಯವನ್ನು ಹಾಗೂ ಸಾಮಾಜಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಮಾಹಿತಿಯೇ ಸುರಕ್ಷಿತವಾಗಿಲ್ಲ ಎಂಬ ಭೀತಿ, ಆತಂಕಗಳನ್ನು ಬಳಕೆದಾರರಲ್ಲಿ ಸೃಷ್ಟಿಸಿದೆ. ಇಂಥ ಹೊತ್ತಲ್ಲಿ ಅದೇ ಸಂಸ್ಥೆಗೆ ಸೇರಿದ ವಾಟ್ಸ್‌ ಆಪ್‌ ಹಣಕಾಸು ವಹಿವಾಟಿ ಸೇವೆ ಪರಿಚಯಿಸುತ್ತಿರುವುದು, ಆ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಹೇಳುತ್ತಿರುವುದನ್ನು ನೋಡಿದರೆ, ಬಳಸಬೇಕೆ ಎಂಬ ಪ್ರಶ್ನೆ ಕಾಡದೇ ಇರುವುದೆ?!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.