ಗೂಗಲ್‌ನಿಂದ ಮತ್ತೊಂದು ಸೋಷಿಯಲ್‌ ಮೀಡಿಯಾ ಆ್ಯಪ್‌!

ಆರ್ಕುಟ್‌, ಗೂಗಲ್‌ ಪ್ಲಸ್‌ ಸೋಷಿಯಲ್‌ ಮೀಡಿಯಾ ಜಾಲಗಳಲ್ಲಿ ಯಶ ಕಾಣದ ಗೂಗಲ್‌ ಪಟ್ಟು ಬಿಡದೆ ಇನ್ನೊಂದು ಆ್ಯಪ್‌ನೊಂದಿಗೆ ಜನರನ್ನು ತಲುಪುವ ಪ್ರಯತ್ನಕ್ಕೆ ಮುಂದಾಗಿದೆ, ಈ ಆ್ಯಪ್‌ ಹೆಸರು ಶೂಲೇಸ್‌

ಸಾಮಾಜಿಕ ಜಾಲತಾಣಗಳ ಶಕ್ತಿಯನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಫೇಸ್‌ಬುಕ್‌ ಇಂದು ಅತ್ಯಂತ ಶಕ್ತಿಶಾಲಿಯಾಗಿ ಬೆಳೆದಿರುವ ಬಗೆ, ಅನೇಕರು ಅಚ್ಚರಿ, ಪ್ರತಿಸ್ಪರ್ಧಿಗಳಿಗೆ ಅಸೂಯೆ ಮೂಡಿಸದೇ ಇರದು. ಕೋಟ್ಯಂತರ ಜನರನ್ನು ತನ್ನ ಜಾಲದಲ್ಲಿರಿಸಿಕೊಂಡಿರುವ ಫೇಸ್‌ಬುಕ್‌, ಅತಿ ದೊಡ್ಡ ಮಾರುಕಟ್ಟೆಯನ್ನು ನಿಯಂತ್ರಿಸುವ, ಜನಾಭಿಪ್ರಾಯ ರೂಪಿಸುವ ಸಾಧನವಾಗಿ ಬೆಳೆದು ನಿಂತಿದೆ. ಜಗತ್ತಿನ ಇನ್ನೊಂದು ದೈತ್ಯ ಟೆಕ್‌ ಸಂಸ್ಥೆಯಾಗಿರುವ ಗೂಗಲ್‌ ಈ ವಿಷಯದಲ್ಲಿ ಹಿಂದೆ ಉಳಿದಿರುವ ಬಗ್ಗೆ ಬೇಸರವಿದೆ.

ಫೇಸ್‌ಬುಕ್‌ಗೆ ಪ್ರತಿ ಸ್ಪರ್ಧಿಯಾಗಿ ಗೂಗಲ್‌ ಪ್ಲಸ್‌ ಹೆಸರಿನ ಜಾಲವನ್ನು ಪರಿಚಯಿಸಿದರೂ, ಅದು ಜನರನ್ನು ಸೆಳೆಯುವಲ್ಲಿ ಸೋತಿತು. ಕಳೆದ ಏಪ್ರಿಲ್‌ನಿಂದ ಗೂಗಲ್‌+ ಖಾತೆಗಳನ್ನು ಡಿಲೀಟ್‌ ಮಾಡಲಾರಂಭಿಸಿತ್ತು. ಆದರೆ ಸೋಲಲು ಇಚ್ಛಿಸದ ಗೂಗಲ್‌ ಈಗ ಹೊಸದೊಂದು ಪರಿಕಲ್ಪನೆಯ ಸೋಷಿಯಲ್‌ ಮೀಡಿಯಾವನ್ನು ಪರಿಚಯಿಸಲು ಸಿದ್ಧವಾಗಿದೆ. ಅದರ ಹೆಸರು ಶೂ ಲೇಸ್‌. ಇದು ಫೇಸ್‌ಬುಕ್‌ ಮಾದರಿ ದಿನನಿತ್ಯದ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವುದಕ್ಕಿಂತ ಮುಖ್ಯವಾಗಿ ಸ್ಥಳೀಯ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿದೆ ಎಂದು ‘ದಿ ವರ್ಜ್‌’ ಪತ್ರಿಕೆ ಹೇಳುತ್ತದೆ.

ನಿಮ್ಮ ಆಸಕ್ತಿಯನ್ನು ಆಯ್ಕೆ ಮಾಡಿಕೊಂಡರೆ, ಆ್ಯಪ್‌ ಸಮಾನ ಆಸಕ್ತಿಯ ಚಟುವಟಿಕೆಗಳನ್ನು ಶಿಫಾರಸ್ಸು ಮಾಡುತ್ತದೆ. ಇದನ್ನು ಲೂಪ್‌ ಎಂದು ಕರೆದಿದೆ. ಹೊಸದಾಗಿ ನಗರಗಳಿಗೆ ಸ್ಥಳಾಂತರವಾದವರು, ಸ್ನೇಹಿತರನ್ನು ಹೊಂದಿರದವರು, ಕೂಡಲೇ ತಮ್ಮ ಇಷ್ಟದ, ಆಸಕ್ತಿ ವಲಯಗಳನ್ನು ತಲುಪುವುದಕ್ಕೆ ಈ ಆ್ಯಪ್‌ ನೆರವಾಗುತ್ತದೆ.

ಎಂಟು ವರ್ಷಗಳ ಹಿಂದೆ ಗೂಗಲ್‌ ಕಾರ್ಯಕ್ರಮಗಳ ಸಂಘಟನೆಗೆ ಸಂಬಂಧಿಸಿದ ಸ್ಕೀಮರ್‌ ಹೆಸರಿನ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಿತ್ತು. ಮೂರು ವರ್ಷಗಳ ಬಳಿಕ ಅದನ್ನು ಸ್ಥಗಿತಗೊಳಿಸಲಾಗಿತ್ತು.
ಶೂಲೇಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಫೋನ್‌ಗಳಿಗೆ ಲಭ್ಯವಾಗಲಿದ್ದು, ಪ್ರಸ್ತುತ ನ್ಯೂಯಾರ್ಕ್‌ ನಗರದಲ್ಲಿ ಪ್ರಯೋಗಿಸಲಾಗುತ್ತಿದ್ದು, ಶೀಘ್ರದಲ್ಲೇ ಅಮೆರಿಕದ ಇತರೆ ನಗರಗಳಿಗೆ ವಿಸ್ತರಿಸುವ ಯೋಚನೆ ಇದೆ.