ಗೂಗಲ್ ನಿಮ್ಮ ವಾಯ್ಸ್ ಸರ್ಚ್‌ಗಳನ್ನು ಕಲೆಹಾಕುವುದೇಕೆ?

ಗೂಗಲ್ ನಮ್ಮ ಬದುಕಿನ ಭಾಗವೇ ಆಗಿದೆ. ಶೇ. 82ರಷ್ಟು ಮಂದಿ ಬಳಸುವುದು ಆಂಡ್ರಾಯ್ಡ್ ನ್. ಇನ್ನು ನಾವು ಬಳಸುವ ಜೀಮೇಲ್, ಪ್ಲೇಸ್ಟೋರ್, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಎಲ್ಲವೂ ಗೂಗಲ್‌ನದ್ದೇ. ಇಂಟರ್ನೆಟ್ ಬಳಸುವ ಜಗತ್ತಿನ ಶೇ. 80ಕ್ಕೂ ಹೆಚ್ಚು ಜನ ಆಂಡ್ರಾಯ್ಡ್ ಮೂಲಕ ಸಂಪರ್ಕವನ್ನು ಹೊಂದಿದ್ದಾರೆ. ಅದರಲ್ಲೂ ಗೂಗಲ್ ಸರ್ಚ್ ಎಂಜಿನ್ ಒಂದು ರೀತಿಯಲ್ಲಿ ಮಾಂತ್ರಿಕ ಅಕ್ಷಯ ಪಾತ್ರೆ.

ಕುಮಾರ್ ಎಸ್
Man Using Internet Voice Search Technology On Mobile Phone

ಕೆಲವು ತಿಂಗಳುಗಳ ಹಿಂದೆ “ಎಕ್ಸ್ ಮಷಿನಾ” ಎಂಬ ಚಿತ್ರ ಬಿಡುಗಡೆಯಾಯಿತು. ಬ್ಲೂಬುಕ್ ಎಂಬ ಕಂಪನಿಯ ಮಾಲೀಕ ರಹಸ್ಯ ತಾಣವೊಂದರಲ್ಲಿ ಕಟ್ಟಿಕೊಂಡ ಭಾರೀ ಭದ್ರತೆಯ ಮನೆಯೊಂದರಲ್ಲಿ ತನ್ನದೇ ಕಂಪನಿಯ ಉದ್ಯೋಗಿಯೊಬ್ಬನಿಗೆ ಒಂದು ವಾರ ಕಳೆಯುವ ಅವಕಾಶವನ್ನು ಕಲ್ಪಿಸಿಕೊಡುತ್ತಾನೆ. ಅಲ್ಲಿಗೆ ಕಾಲಿಟ್ಟ ಮೇಲೆ ಆತನಿಗೆ, ತಾನು ಬಂದಿರುವುದು ವಿರಾಮವಾಗಿ ಕಾಲ ಕಳೆಯುವುದಕ್ಕಲ್ಲ. ಕಂಪನಿ ಮಾಲೀಕ ಸಿದ್ಧಪಡಿಸಿರುವ ಮನುಷ್ಯ ರೂಪದ ರೋಬೊಟ್ (ಹ್ಯೂಮಾನಾಯ್ಡ್)ನನ್ನು ಪರೀಕ್ಷಿಸಿ ಫಲಿತಾಂಶವನ್ನು ನೀಡುವುದಕ್ಕೆ ಎಂಬ ಸಂಗತಿ ತಿಳಿಯುತ್ತದೆ. ಆವಾ ಹೆಸರಿನ ಹ್ಯೂಮಾನಾಯ್ಡ್ ಹೆಣ್ಣು ರೋಬೊಟ್. ಆಕೆ ಮನುಷ್ಯರಂತೆಯೇ ಸ್ಪಷ್ಟವಾಗಿ ಮಾತನಾಡಬಲ್ಲವಳು. ಪ್ರಶ್ನೆಗೆ ಉತ್ತರ ಕೊಡಬಲ್ಲಳು. ಭಾವಗಳಿಗೆ ಸ್ಪಂದಿಸುವಷ್ಟು; ಮನುಷ್ಯನೇ ಎನಿಸುವಷ್ಟು ಸಹಜವಾಗಿರುತ್ತಾಳೆ. ಆಕೆ ಬಂದ ಅತಿಥಿಯನ್ನು ತನ್ನ ಪ್ರೀತಿಯ ಸೆಳೆತಕ್ಕೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ತನ್ನನ್ನು ಸೃಷ್ಟಿಸಿದವನನ್ನು ಕೊಂದು, ಮನುಷ್ಯ ಸಮಾಜಕ್ಕೆ ಪ್ರವೇಶಿಸುತ್ತಾಳೆ.

ಅಲೆಕ್ಸ್ ಗಾರ್ಡ್‌ಲ್ಯಾಂಡ್ ಬರೆದ ಕಾದಂಬರಿ ಆಧರಿಸಿ ನಿರ್ಮಿಸಿದ ಚಿತ್ರವಿದು. ಚಿತ್ರದಲ್ಲಿ ಬರುವ ಬ್ಲೂಬುಕ್ ಎಂಬ ಕಂಪನಿ, ಒಂದು ಜಗತ್ಪ್ರಸಿದ್ಧಿ ಪಡೆದ ಸರ್ಚ್ ಎಂಜಿನ್ ಕಂಪನಿ. ಈ ವೆಬ್‌ಸೈಟ್ ಮೂಲಕ, ಬಳಕೆದಾರರು ಹುಡುಕಿದ ಪದಗಳು, ವಾಯ್ಸ್ ಸರ್ಚ್ ಬಳಕೆ ಎಲ್ಲದರಿಂದ ಸಂಗ್ರಹಿಸಿದ ಮಾಹಿತಿಯನ್ನು ಬಳಸಿ, ಅದರ ಮಾಲೀಕ ಅವಾ ಎಂಬ ಹ್ಯೂಮನಾಯ್ಡ್ ಅನ್ನು ರೂಪಿಸಿರುತ್ತಾನೆ. ಮಾತು, ಉಚ್ಚಾರಣೆ, ಭಾವನೆ ಎಲ್ಲಕ್ಕೂ ಮೂಲ ಸಾಮಗ್ರಿ ಸರ್ಚ್ ಎಂಜಿನ್‌ನಿಂದ ಕಲೆಹಾಕಿದ ಆಡಿಯೋ ಫೈಲ್‌ಗಳೇ ಆಗಿರುತ್ತವೆ. ಇದೆಲ್ಲಾ ನೆನಪಾಗುವುದಕ್ಕೆ ಕಾರಣ ಇತ್ತೀಚೆಗೆ ಗೂಗಲ್ ತನ್ನ ವಾಯ್ಸ್ ಸರ್ಚ್‌ಗಳನ್ನು ರೆಕಾರ್ಡ್ ಮಾಡಿಡುತ್ತದೆ ಎಂಬ ಸುದ್ದಿ ಹೊರಬಿದ್ದಾಗ. ತಕ್ಷಣಕ್ಕೆ ನನಗೆ ಬ್ಲೂಬುಕ್ ಜಾಗದಲ್ಲಿ ಗೂಗಲ್ ಇರುವಂತೆ ಅನ್ನಿಸಿತು.

ಗೂಗಲ್ ನಮ್ಮ ಬದುಕಿನ ಭಾಗವೇ ಆಗಿದೆ. ಶೇ. 82ರಷ್ಟು ಮಂದಿ ಬಳಸುವುದು ಆಂಡ್ರಾಯ್ಡ್ ನ್. ಇನ್ನು ನಾವು ಬಳಸುವ ಜೀಮೇಲ್, ಪ್ಲೇಸ್ಟೋರ್, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಎಲ್ಲವೂ ಗೂಗಲ್‌ನದ್ದೇ. ಇಂಟರ್ನೆಟ್ ಬಳಸುವ ಜಗತ್ತಿನ ಶೇ. 80ಕ್ಕೂ ಹೆಚ್ಚು ಜನ ಆಂಡ್ರಾಯ್ಡ್ ಮೂಲಕ ಸಂಪರ್ಕವನ್ನು ಹೊಂದಿದ್ದಾರೆ. ಅದರಲ್ಲೂ ಗೂಗಲ್ ಸರ್ಚ್ ಎಂಜಿನ್ ಒಂದು ರೀತಿಯಲ್ಲಿ ಮಾಂತ್ರಿಕ ಅಕ್ಷಯ ಪಾತ್ರೆ. ಅದರಿಂದ ಏನನ್ನೂ ಬೇಕಾದರೂ ಕೇಳಿ ಪಡೆಯಬಹುದು. ನನಗೆ ಹತ್ತಿರವಾದ ಯಾವ ಅಂಗಡಿಯಲ್ಲಿ ಜೆಕೆ ಬಾಂಡ್ ಪೇಪರ್ ಸಿಗುತ್ತದೆ ಎಂಬ ಪ್ರಶ್ನೆಗೂ ಅದರ ಬಳಿ ಉತ್ತರವಿದೆ. ಹೊಸ ಮೊಬೈಲ್ ಬಾಕ್ಸ್ ಓಪನ್ ಮಾಡುವುದು ಹೇಗೆ ಎಂದು ಕೇಳಿದರೆ ಸರಳ ಸೂತ್ರವನ್ನು ತಿಳಿಸುವ ವಿಡಿಯೋ ತೆರೆದುಕೊಳ್ಳುತ್ತದೆ. ಗೂಗಲ್ ವಾಯ್ಸ್ ಬಂದ ಮೇಲೆ ಟೈಪಿಸುವ ಅಗತ್ಯವೂ ಇಲ್ಲವಾಗಿದೆ. ಧ್ವನಿಯ ಮೂಲಕ ಬೇಕಾದ್ದನ್ನು ಹುಡುಕುವಂತೆ ಆದೇಶಿಸಿದರೆ ಸಾಕು. ಬೇಕಾದ, ಬೇಕಾಗಬಹುದಾದ ಮಾಹಿತಿಯನ್ನು ಹುಡುಕಿ ನಮ್ಮ ಮುಂದೆ ಹರುವುತ್ತದೆ.

ಹೀಗೆ ವಾಯ್ಸ್(ಧ್ವನಿ) ಮೂಲಕ ಮಾಹಿತಿ ಹುಡುಕುವುದು ಸುಲಭದಲ್ಲಿ ಆಗುವ ಕೆಲಸ. ಬಳಕೆಗೆ ಅನುಕೂಲಕರ ಈ ಅವಕಾಶವನ್ನು ಎಲ್ಲ ಆಂಡ್ರಾಯ್ಡ್ ಬಳಕೆದಾರರು ಆರಾಮಾಗಿ ಬಳಸುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ ಸಂಗತಿಯೊಂದಿದೆ. ಗೂಗಲ್ ಸಾಮಾನ್ಯವಾಗಿ ನಾವು ಟೈಪ್ ಮಾಡುವ ಪದಗಳ ಇಂಡೆಕ್ಸ್ ಸಿದ್ಧ ಮಾಡಿ, ಅದರ ಆಧಾರದ ಮೇಲೆ ನಮಗೆ ಮಾಹಿತಿ, ನಮ್ಮ ಆಸಕ್ತಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ತಾನಾಗಿಯೇ ಪೂರೈಸುತ್ತದೆ. ಅದೇ ರೀತಿಯಲ್ಲಿ ಗೂಗಲ್ ವಾಯ್ಸ್ ಮೂಲಕ ನಾವು ಹುಡುಕಾಟ ನಡೆಸುವಾಗ, ರೆಕಾರ್ಡ್ ಆಗುವ ಆಡಿಯೋ ಗೂಗಲ್‌ನಲ್ಲಿ ದಾಖಲಾಗುತ್ತದೆ (ಆಸಕ್ತರು ಹಿಸ್ಟರಿ.ಗೂಗಲ್.ಕಾಂನಲ್ಲಿ ವಾಯ್ಸ್ ಅಂಡ್ ಆಡಿಯೋ ಆಕ್ಟಿವಿಟಿ ಪರಿಶೀಲಿಸಿ. ಅಲ್ಲಿ ನೀವು ಮಾಡಿದ ವಾಯ್ಸ್ ಸರ್ಚ್ ಪಟ್ಟಿಯೇ ಇರುತ್ತದೆ). ಕೆಟ್ಟ ದನಿಯಲ್ಲಿ, ಕೆಟ್ಟ ರೀತಿಯಲ್ಲಿ ಗೂಗಲ್‌ಗೆ ಕೇಳಿದ ಈ ಪ್ರಶ್ನೆಗಳು ಎಲ್ಲೋ ಸರ್ವರ್‌ಗಳೆಂಬ ಮಹಾ ಸಾಗರದಲ್ಲಿ ಕಳೆದು ಹೋಗುತ್ತವೆ ಎಂದು ಕೊಂಡಿರುತ್ತೇವೆ. ಆದರೆ ಪ್ರತಿಯೊಂದು ವಾಯ್ಸ್ ಸರ್ಚ್ ಗೂಗಲ್‌ನಲ್ಲಿ ದಾಖಲಾಗುತ್ತದೆ. ಯಾತಕ್ಕಾಗಿ ಸಂಗ್ರಹಿಸುತ್ತಿದೆ ಎಂಬುದೇ ಪ್ರಶ್ನೆ. ಮುಕ್ತವಾಗಿ ಚರ್ಚಿಸಲಾಗುತ್ತಿರುವ ವಿಚಾರಗಳ ಬಗ್ಗೆ ಕುತೂಹಲವಿರುವುದಿಲ್ಲ. ಆತಂಕವೂ ಇರುವುದಿಲ್ಲ. ಆದರೆ ಹೆಚ್ಚು ಬಹಿರಂಗಗೊಳ್ಳದ ರೋಬೊಟ್‌ಗಳ ಅಭಿವೃದ್ಧಿ ಗುಟ್ಟಾಗಿ ಮಾಹಿತಿಯನ್ನು ಸಂಗ್ರಹಿಸುತ್ತಿರುವ ರೀತಿಯೇ ಕುತೂಹಲಕ್ಕೆ ಕಾರಣವಾಗಿದೆ.

ಗೂಗಲ್ ಸಂಸ್ಥೆ ರೋಬೊಟ್‌ಗಳ ನಿರ್ಮಾಣದಲ್ಲಿ ಸಕ್ರಿಯವಾಗಿದೆ ಎಂಬ ಸಂಗತಿ ಬಯಲಾಗಿದೆ. ಯಾವ ಉದ್ದೇಶಕ್ಕೆ, ಯಾವ ರೀತಿಯ ರೋಬೊಟ್‌ಗಳ ನಿರ್ಮಾಣಕ್ಕೆ ಮುಂದಾಗಿದೆ ಎಂಬ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ರೋಬೊಟ್ ನಿರ್ಮಿಸುವ ತಂಡಕ್ಕೆ ಸಿಇಒ ನೇಮಕಗೊಂಡಿದ್ದಾರೆ. ದೊಡ್ಡ ನಾಯಿಯ ಮಾದರಿಯ ರೋಬೊಟ್ ಒಂದರ ಪ್ರಾಯೋಗಿಕ ಪರೀಕ್ಷೆಯ ವಿಡಿಯೋ ಯೂಟ್ಯೂಬ್‌ಗಳಲ್ಲಿ ಗಮನ ಸೆಳೆದಿದ್ದನ್ನು ನೋಡಿದ್ದೇವೆ. ಆರು ಅಡಿ ಎತ್ತರದ ಇನ್ನೊಂದು ಎರಡು ಕಾಲಿನ ಅಟ್ಲಾಸ್ ಹೆಸರಿನ ರೋಬೊಟ್ ಕೂಡ ಸುದ್ದಿ ಮಾಡಿತ್ತು. ಗೂಗಲ್ ಸಂಸ್ಥೆಗೆ ಸೇರಿದ ಬೋಸ್ಟನ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದ ಈ ರೋಬೊಟ್ ಬಹಳಷ್ಟು ಚರ್ಚೆಗೂ ಕಾರಣವಾಗಿತ್ತು.

ಈ ಸುದ್ದಿಗಳನ್ನು ಗಮನಿಸುತ್ತಲೇ ಇರುವ ತಂತ್ರಜ್ಞಾನ ಲೋಕದ ಪರಿಣಿತರು, ಗೂಗಲ್ ಹ್ಯೂಮನಾಯ್ಡ್ ರೋಬೊಟ್ ನಿರ್ಮಾಣದಲ್ಲಿ ತೊಡಗಿದೆ ಎಂಬ ಮಾತನ್ನು ಆಗಾಗ ಎಚ್ಚರಿಸುವ ರೀತಿಯಲ್ಲಿ ಆಡುತ್ತಲೇ ಬಂದಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ, ಮನೆಯ ಕೆಲಸ, ಕಚೇರಿಯ ಸಹಾಯಕನ ಜವಾಬ್ದಾರಿ ಗಳು, ಹೀಗೆ ಹಲವೆಡೆಗಳಲ್ಲಿ ಮನುಷ್ಯನ ಸ್ಥಳವನ್ನು ಈ ಯಂತ್ರಗಳು ಆಕ್ರಮಿಸಿಕೊಳ್ಳಬಲ್ಲವು. ಆದರೆ ಆದೇಶಕ್ಕಷ್ಟೆ ಪ್ರತಿಕ್ರಿಯಿಸುವ ಯಂತ್ರಗಳಾಗದೆ, ಮನುಷ್ಯನ ಸಂವೇದನೆಗಳಿಗೆ ಸ್ಪಂದಿಸುವ ಸುಧಾರಿತ ಯಂತ್ರಗಳನ್ನು ಸಿದ್ಧಮಾಡುವುದು ಗೂಗಲ್ ಗುರಿ.

ಇದನ್ನೂ ಓದಿ| ಅಮೆರಿಕ, ಚೀನಾ ಎಂಬ ಡಿಜಿಟಲ್ ಜಗತ್ತಿನ ಮುಂದೆ ಭಾರತ ಒಂದು ಸಣ್ಣ ಕಾಲೋನಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪದಗಳನ್ನು ಕೇಳಿರಬಹುದು. ಅದನ್ನೇ ಅಭಿವೃದ್ಧಿಪಡಿಸಲು ಗೂಗಲ್ ಶ್ರಮಿಸುತ್ತಿದೆ. ಈ ಹ್ಯೂಮನಾಯ್ಡ್‌ಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಮೂರ್ತ ರೂಪಗಳು. ಮನುಷ್ಯನ ರೀತಿ ಮಾತನಾಡಲು, ಅರ್ಥ ಮಾಡಿಕೊಳ್ಳಲು, ಮಾತು, ಅಭಿವ್ಯಕ್ತಿ, ಭಾವನೆಗಳ ಏರಿಳಿತಗಳನ್ನು ಅರ್ಥಮಾಡಿಕೊಳ್ಳಲು ಮನುಷ್ಯನ ಮಾತುಗಳನ್ನು ಅದಕ್ಕೆ ತಿಳಿಸಬೇಕಾಗುತ್ತದೆ. ಗೂಗಲ್ ಹ್ಯೂಮನಾಯ್ಡ್ ಅಭಿವೃದ್ಧಿಯಲ್ಲಿ ಬಳಸುವುದಕ್ಕೆ ಆರಿಸಿಕೊಂಡ ಮಾರ್ಗ ಗೂಗಲ್ ಬಳಕೆದಾರರ ವಾಯ್ಸ್ ಸರ್ಚ್‌ನ ಆಡಿಯೋ. ಭೌಗೋಳಿಕವಾಗಿ ಆಯಾ ನೆಲಕ್ಕೆ ಹೊಂದುವ ಮಾತುಗಳ ಮೂಲಕ ಹ್ಯೂಮನಾಯ್ಡ್ ರೂಪಿಸುವುದಕ್ಕೆ ಪ್ರಯತ್ನಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ವಿವಿಧ ರೂಪಗಳನ್ನು ಈಗಾಗಲೇ ಬಳಸುತ್ತಿದ್ದೇವೆ. ಅದಕ್ಕೆ ಮೂರ್ತ ರೂಪವಿಲ್ಲ. ಮನುಷ್ಯನನ್ನೇ ಹೋಲುವ ಹ್ಯೂಮಾನಾಯ್ಡ್‌ಗಳು ಕೃತಕವಾದ, ಮನುಷ್ಯನಂತೆ ಕಾರ್ಯನಿರ್ವಹಿಸುವ ಬೌದ್ಧಿಕ ಸಾಮರ್ಥ್ಯ ಪಡೆದುಕೊಳ್ಳುವುದು ನಿಜಕ್ಕೂ ದೊಡ್ಡ ಸೃಷ್ಟಿಯೇ. ಮನುಷ್ಯನ ಸೃಷ್ಟಿ ಸಾಧ್ಯತೆಗೆ ಇದು ಉದಾಹರಣೆಯಾಗಬಹುದು. ಆದರೆ ಗೂಗಲ್ ಸದ್ದೇ ಇಲ್ಲದೇ ರೂಪಿಸಲೆತ್ನಿಸುತ್ತಿರುವುದೇನು ಎಂಬುದು ಆತಂಕ ಮಿಶ್ರಿತ ಕುತೂಹಲಕ್ಕೆ ಕಾರಣವಾಗಿರುವುದಂತೂ ನಿಜ. ವ್ಯಕ್ತಿ, ಸಂಸ್ಥೆ ಮತ್ತು ವ್ಯವಸ್ಥೆ ಬಲಿಷ್ಠವಾದಷ್ಟೂ ಅಪಾಯಕಾರಿ.