ಆಧಾರ್ ಮಾಹಿತಿ ಸೋರಿಕೆ, ಫೇಸ್‌ಬುಕ್‌ನಿಂದಾದ ಮಾಹಿತಿ ಸೋರಿಕೆಗಳ ಹಿನ್ನೆಲೆಯಲ್ಲಿ ಭಾರತದ ಮಾಹಿತಿ ಸಂರಕ್ಷಣಾ ಮಸೂದೆ ಮಹತ್ವ ಪಡೆದುಕೊಂಡಿದೆ. ಶುಕ್ರವಾರ (ಜು.೨೭) ಬಿ ಎನ್ ಶ್ರೀ ಕೃಷ್ಣ ಸಮಿತಿ ಕರಡು ಸಲ್ಲಿಸಿದೆ. ಆದರೆ ನಿಜಕ್ಕೂ ಸಮಸ್ಯೆ ಬಗೆಹರಿಯಲಿದೆಯೇ?

ಕಳೆದೆರಡು ವರ್ಷಗಳಲ್ಲಿ ಆನ್‌ಲೈನ್ ಮೂಲಕ ಮಾಹಿತಿ ಸೋರಿಕೆಯಾಗುತ್ತಿರುವುದು, ಬ್ಯಾಂಕ್ ವಂಚನೆಗಳು ಹೆಚ್ಚುತ್ತಿರುವುದು, ಆಧಾರ್ ಮಾಹಿತಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ಮಾಹಿತಿ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಖಾಸಗಿ ಮಾಹಿತಿ ಸಂರಕ್ಷಣಾ ಮಸೂದೆಯ ಕರಡು ರಚನೆಗೆ ಬಿ ಎನ್ ಶ್ರೀಕೃಷ್ಣ ನೇತೃತ್ವದ ಸಮಿತಿಯೊಂದನ್ನು ನೇಮಕ ಮಾಡಿದೆ.
ಈ ಸಮಿತಿ ಅರವತ್ತೇಳು ಪುಟಗಳ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಭಾರತದ ಮೊತ್ತದ ಮೊದಲ ಮಾಹಿತಿ ಸಂರಕ್ಷಣಾ ಮಸೂದೆ ಇದಾಗಿದ್ದು, ಕರಡನ್ನು ಆಧರಿಸಿ ಮಾಹಿತಿ ಸಂರಕ್ಷಣೆಯ ಕಾನೂನು, ಖಾಸಗಿ ಸಂಸ್ಥೆಗಳು ಸಾರ್ವಜನಿಕರ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು, ಹೇಗೆ ಕ್ರೋಢೀಕರಿಸಬೇಕು ಮತ್ತು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಿದೆ.
ಸಂಸತ್ತಿನಲ್ಲಿ ಚರ್ಚೆಯ ಬಳಿಕ ಬದಲಾವಣೆಗಳೊಂದಿಗೆ ಅಥವಾ ಯಾವುದೇ ಬದಲಾವಣೆಯೂ ಇಲ್ಲದೆ ಕಾನೂನಾಗಿ ಜಾರಿಗಗೆ ಬರಬಹುದು. ಆದರೆ ನಿಜಕ್ಕೂ ಈ ಕರಡು ಖಾಸಗಿ ಮಾಹಿತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮರ್ಥವಾಗಿದೆಯೇ? ಕರಡು ಪ್ರತಿಯನ್ನು ಗಮನಿಸಿರುವ ತಜ್ಞರು ಈ ಕುರಿತು ತಕರಾರುಗಳನ್ನು, ಟೀಕೆಗಳನ್ನು ಹೊರಹಾಕಿದ್ದಾರೆ.
ಬಹಳ ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ, ಕೆಲವು ಅಂಶಗಳಲ್ಲಿ ಅತಿಯಾದ ಮೃದುಧೋರಣೆ ಅನುಸರಿಸುವುದು ಕಂಡುಬರುತ್ತದೆ ಎಂದು ಮಾಹಿತಿ ಸಂರಕ್ಷಣೆ ವಿಷಯದಲ್ಲಿ ಸಕ್ರಿಯವಾಗಿ ಹೋರಾಡುತ್ತಿರುವ ಸಂಘಟನೆಗಳು ಟೀಕಿಸಿವೆ.
ಭಾರತದ ವ್ಯಾಪ್ತಿಯೊಳಗೆ ಎಲ್ಲ ರೀತಿಯ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸಂಪೂರ್ಣ ಅವಕಾಶವನ್ನು ಸರ್ಕಾರಕ್ಕೆ ಒದಗಿಸುತ್ತಿದೆ. ಕರಡಿನ ಪ್ರಕಾರ ಯಾವುವು ಖಾಸಗಿ ಮಾಹಿತಿಯ ವ್ಯಾಪ್ತಿಗೆ ಬರುತ್ತವೆಂದರೆ : ಪಾಸ್‌ವರ್ಡ್‌ಗಳು, ಹಣಕಾಸು ಮಾಹಿತಿ, ಆರೋಗ್ಯದ ಮಾಹಿತಿ, ಲೈಂಗಿಕ ಜೀವನ, ಲೈಂಗಿಕತೆ, ಅಧಿಕೃತ ಗುರುತಿನ ದಾಖಲೆ, ಬಯೋಮೆಟ್ರಿಕ್ ಮಾಹಿತಿ, ವಂಶವಾಹಿ ಮಾಹಿತಿ, ಜಾತಿ ಅಥವಾ ಬುಡಕಟ್ಟು, ಧರ್ಮ, ರಾಜಕೀಯ ನಿಲುವು.
ಇಷ್ಟೆಲ್ಲಾ ನಾಗರಿಕನಾದವು ಯಾವೆಲ್ಲ ಮಾಹಿತಿಯನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾನೆ ಎಂಬುದನ್ನು ಈ ಕರಡು ವಿವರಿಸಿದೆ. ಇದರಂತೆ, ನಾಲ್ಕು ಹಕ್ಕುಗಳನ್ನು ಪ್ರಸ್ತಾಪಿಸಿದೆ.
೧. ಖಚಿತ ಪಡಿಸುವ ಮತ್ತು ಮಾಹಿತಿ ಹೊಂದುವುದು: ಅಂದರೆ ಯಾವುದೇ ಕಂಪನಿ, ತನಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದಾದರೂ ಉದ್ದೇಶಕ್ಕೆ ಬಳಸಿಕೊಂಡಿದೆಯೇ ಎಂದು ಯಾವುದೇ ಕಂಪನಿಯನ್ನು ಕೇಳುವ ಹಕ್ಕು. ಒಂದು ವೇಳೆ ಬಳಸಿದ್ದರೆ, ಯಾಕೆ ಮತ್ತು ಯಾವ ಮಾಹಿತಿಯನ್ನು ಬಳಸಲಾಗಿದೆ ಎಂಬ ವಿವರಗಳನ್ನು ಪಡೆದುಕೊಳ್ಳಬಹುದು.
೨. ತಿದ್ದುವ ಹಕ್ಕು: ತಪ್ಪಾದ, ಅಪೂರ್ಣವಾಗಿರುವ ಅಥವಾ ದಾರಿ ತಪ್ಪಿಸುವಂತಿರುವ ಮಾಹಿತಿಯನ್ನು ತಿದ್ದುವ ಅವಕಾಶವಿರುತ್ತದೆ.
೩.ಮಾಹಿತಿ ವರ್ಗಾವಣೆ : ಯಾವುದಾದರೂ ಸೇವೆ ಅಥವಾ ವಸ್ತುವನ್ನು ಖರೀದಿಸುವಾಗ ಪಡೆದ ಮಾಹಿತಿಯನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾಯಿಸುವ ಅವಕಾಶವನ್ನು ನೀಡುತ್ತದೆ.
೪. ಮಾಹಿತಿ ಬಳಕೆಗೆ ನಿರ್ಬಂಧ: ನಾಗರಿಕರು ಈ ಹಿಂದೆ ಯಾವುದಾದರೂ ಕಂಪನಿಯೊಂದಿಗೆ ಹಂಚಿಕೊಂಡ ತಮ್ಮ ಖಾಸಗಿ ಮಾಹಿತಿಯನ್ನು ಯಾವುದೇ ಉದ್ದೇಶಕ್ಕೆ ಬಳಸದಂತೆ ನಿರ್ಬಂಧಿಸುವ ಅವಕಾಶ ನೀಡುತ್ತದೆ.
ಮೇಲ್ನೋಟಕ್ಕೆ ಇವು ಪ್ರತಿಯೊಬ್ಬ ನಾಗರಿಕನ ಮಾಹಿತಿ ಕಾಪಾಡಿಕೊಳ್ಳುವ ಅವಕಾಶವನ್ನು ಗಟ್ಟಿ ಮಾಡಿದಂತೆ ಕಾಣುತ್ತದೆ. ಆದರೆ ಈ ಮಾಹಿತಿಯನ್ನು ಸಂಗ್ರಹಿಡುವ ನಿಟ್ಟಿನಲ್ಲಿ ಕರಡು ನೀಡುವ ಸಲಹೆ ಆತಂಕ ಹುಟ್ಟಿಸುತ್ತದೆ.
ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಕಡ್ಡಾಯವಾಗಿ ಸ್ಥಳೀಯಗೊಳಿಸಬೇಕೆಂದು ಅದು ಸೂಚಿಸಿದೆ. ಅದರೆ ಸರ್ವರ್‌ಗಳು ಅಥವಾ ಮಾಹಿತಿ ಕೇಂದ್ರಗಳು ಭಾರತದಲ್ಲೇ ಇರಬೇಕು. ಕಡೆಯ ಪಕ್ಷ ಈ ಕಾಯ್ದೆ ಅನ್ವಯಿಸುವಂತೆ ಒಂದು ಪ್ರತಿ ಖಾಸಗಿ ಮಾಹಿತಿ ಭಾರತದಲ್ಲೇ ಇರುವಂತೆ ನೋಡಿಕೊಳ್ಳಬೇಕೆಂದು ಹೇಳುತ್ತದೆ.
ಆದರೆ ಹಾಗೇ ಮಾಹಿತಿ ಸಂಗ್ರಹಿಸುವ ಸರ್ವರ್ ಅಥವಾ ಕೇಂದ್ರವನ್ನು ಸ್ಥಾಪಿಸುವುದು ಭಾರಿ ಪ್ರಮಾಣದ ಆರ್ಥಿಕ ವೆಚ್ಚವನ್ನು ತರುತ್ತದೆ. ಖಾಸಗಿ ಕಂಪನಿಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದಕ್ಕೆ ಮುಂದಾಗುವುದು ಅನುಮಾನವೇ. ಮತ್ತೆ ಇಲ್ಲಿ ಟೆಕ್ ದೈತ್ಯರೆನಿಸಿಕೊಂಡ ಫೇಸ್‌ಬುಕ್ ಮತ್ತು ಟ್ವಿಟರ್ ಕಂಪನಿಗಳೇ ಮೇಲುಗೈ ಸಾಧಿಸುವ ಅವಕಾಶವೂ ಇದೆ. ಈಗಾಗಲೇ ಕೋಟ್ಯಂತರ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡಿರುವ ಈ ಕಂಪನಿಗಳಿಗೆ ಇಂಥ ಅವಕಾಶವನ್ನು ಬಳಸಿಕೊಳ್ಳುವುದು ಕಷ್ಟವಲ್ಲ. ಆದರೆ ಸಣ್ಣ ಹಾಗೂ ಮಧ್ಯಮ ಗಾತ್ರದ ಟೆಕ್ ಕಂಪನಿಗಳು ಈ ಅವಕಾಶದಿಂದ ವಂಚಿತವಾಗುತ್ತವೆ. ಅಷ್ಟೇ ಅಲ್ಲ ವಹಿವಾಟಿನ ದೃಷ್ಟಿಯಿಂದಲೂ ಇದು ಅನನುಕೂಲ ಉಂಟು ಮಾಡುತ್ತದೆ ಎಂದು ನ್ಯಾಸ್‌ಕಮ್ ಹೇಳಿದೆ.
ಸ್ಟಾರ್ಟಪ್‌ಗಳು ಈ ಮಸೂದೆ ಜಾರಿಯಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನಗಳಿಸುವುದೂ ಕಷ್ಟವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮಸೂದೆಯಲ್ಲಿ ಹಲವು ಲೋಪಗಳಿರುವುದಾಗಿ ಐಟಿ ತಜ್ಞರು ಅಭಿಪ್ರಾಯಪಟ್ಟಿದ್ದು, ಒಂದು ವೇಳೆ ಮಾರ್ಪಾಡುಗಳಿಲ್ಲದೆ ಜಾರಿಗೆ ಬಂದರೆ ಆಳುವ ಸರ್ಕಾರದ ಕೈಗೆ ಬಲವಾದ ಅಸ್ತ್ರವೇ ಸಿಕ್ಕಂತಾಗುತ್ತದೆ. ದೈತ್ಯ ಖಾಸಗಿ ಸಂಸ್ಥೆಗಳು ಇದರ ಲಾಭವನ್ನು ಯಥೇಚ್ಚವಾಗಿ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ.