ನಿಮ್ಮ ಫೋನ್‌ನಲ್ಲಿ ನಕಲಿ ಗೂಗಲ್‌ ಪ್ಲೇ ಸ್ಟೋರ್‌ ಇರಬಹುದು, ಚೆಕ್‌ ಮಾಡಿಕೊಳ್ಳಿ!

ನಿಜದ ಸೋಗಿನಲ್ಲಿ ಇಂದು ಎಲ್ಲವು ಬಿಕರಿಯಾಗುತ್ತವೆ. ಜನಪ್ರಿಯವಾದ ವಸ್ತು, ವಿಷಯಗಳನ್ನು ನಕಲು ಮಾಡುವುದು, ಅದರ ಮೂಲಕ ಲಾಭ ಮಾಡಿಕೊಳ್ಳುವುದು ಮಾಮೂಲಿ. ಈಗ ಗೂಗಲ್‌ ಪ್ಲೇ ಸ್ಟೋರ್‌ ಆಪ್‌ ಅಂಥದ್ದೇ ಸನ್ನಿವೇಶವನ್ನು ಎದುರಿಸುತ್ತಿದೆ

ಲಕ್ಷಾಂತರ ಆಂಡ್ರಾಯ್ಡ್‌ ಬಳಕೆದಾರರಿಗೆ ದಿನವೂ ಒಂದಲ್ಲ ಒಂದು ಹೊಸ ಮೊಬೈಲ್‌ ಅಪ್ಲಿಕೇಷನ್‌ ಅನ್ನು ನೀಡುತ್ತಿರುವುದು ಗೂಗಲ್ ಪ್ಲೇ ಸ್ಟೋರ್‌. ಆದರೆ ನಕಲಿ ಮೊಬೈಲ್ ಆ್ಯಪ್‌ವೊಂದು ಗೂಗಲ್‌ ಪ್ಲೇ ಸ್ಟೋರ್‌ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ನುಸುಳಿದೆಯಂತೆ. ಆ್ಯಂಟಿ ವೈರಸ್‌ ಕಂಪನಿ ಕ್ವಿಕ್‌ ಹೀಲ್‌ ನಡೆಸಿರುವ ಅಧ್ಯಯನ ಈ ಸಂಗತಿಯನ್ನು ಬೆಳಕಿಗೆ ತಂದಿದೆ.

ಇದಾಗಿದ್ದು, ಗೂಗಲ್‌ ಪ್ಲೇಸ್ಟೋರ್‌ನಲ್ಲೇ ಇರುವ 27 ಆ್ಯಪ್‌ಗಳಿಂದ. ಇವು ನಕಲಿ ಗೂಗಲ್‌ ಪ್ಲೇ ಸ್ಟೋರ್ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಪ್ರೇರೇಪಿಸಿವೆ. ಒಮ್ಮೆ ಇನ್‌ಸ್ಟಾಲ್‌ ಆದ ಈ ಆ್ಯಪ್‌ ನಂತರದಲ್ಲಿ ಇನ್‌ಸ್ಟಾಲ್‌ ಮಾಡಲು ಪ್ರೇರೇಪಿಸಿದ ಆ್ಯಪ್ ಡಿಲೀಟ್‌ ಆದಮೇಲೆ ಸಕ್ರಿಯವಾಗಿರುತ್ತದೆ.

ಈ ಆ್ಯಪ್‌ ಮೂಲ ಉದ್ದೇಶ ಅತಿಯಾಗಿ ಜಾಹೀರಾತುಗಳನ್ನು ಮೊಬೈಲ್‌ ಸ್ಕ್ರೀನ್‌ ಮೇಲೆ ಪ್ರದರ್ಶಿಸುವುದು, ಅದರಿಂದ ಹಣ ಮಾಡುವುದು. ಕೆಲವು ವಾಲ್‌ಪೇಪರ್‌ಗಳನ್ನು ಹೊಂದಿರುವ ಈ ನಕಲಿ ಆ್ಯಪ್‌ ಮೊಬೈಲ್‌ ಮಾಲೀಕನ ಚಟುವಟಿಕೆಗಳಿಗೆ ತಕ್ಕಂತೆ ಜಾಹೀರಾತುಗಳನ್ನು ಬಿತ್ತರಿಸುತ್ತದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವಂತೆ ಐಕಾನ್‌ಗಳನ್ನು ಹೊಂದಿರುವ ಈ ನಕಲಿ ಆ್ಯಪ್, ಕೆಲವು ಸೆಕೆಂಡ್‌ಗಳಷ್ಟೇ ಕಾಣಿಸಿಕೊಂಡು ನಂತರ, ಕಣ್ಮರೆಯಾಗುತ್ತದೆ. ಹಿನ್ನೆಲೆಯಲ್ಲಿ ಸಕ್ರಿಯವಾಗಿದ್ದು, ಫುಲ್‌ ಸ್ಕ್ರೀನ್‌ ಜಾಹೀರಾತುಗಳನ್ನು ಬಿತ್ತರಿಸುತ್ತದೆ.

ನಿಮ್ಮ ಮೊಬೈಲ್‌ ನಲ್ಲಿ ಇರಬಹುದೆ?

ಇದನ್ನು ತಿಳಿಯುವುದು ತುಂಬಾ ಸುಲಭ. ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ ಅಂಡ್‌ ನೋಟಿಫಿಕೇಷನ್ಸ್‌ ಆಯ್ಕೆ ಮಾಡಿ, ಅದರಲ್ಲಿ ನಿಜವಾದ ಗೂಗಲ್‌ ಪ್ಲೇ ಸ್ಟೋರ್‌ ಅನ್‌ ಇನ್‌ಸ್ಟಾಲ್‌ ಮಾಡಿ. ನಿಜವಾದ, ಇನ್‌ ಬಿಲ್ಟ್‌ ಪ್ಲೇ ಸ್ಟೋರ್‌ ಫೋನ್‌ನಲ್ಲಿ ಇದ್ದರೆ ಅನ್‌ ಇನ್‌ಸ್ಟಾಲ್‌ ಆಗುವುದಿಲ್ಲ. ಬದಲಿಗೆ ಡಿಸೇಬಲ್‌ ಮಾಡಬಹುದು. ನಕಲಿ ಆ್ಯಪ್‌ ಇದ್ದಲ್ಲಿ ಅನ್‌ ಇನ್‌ಸ್ಟಾಲ್‌ ಆಗುತ್ತದೆ.

ಹೊಸ ಹೊಸ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡು ಪರೀಕ್ಷಿಸುವ ಉತ್ಸಾಹದಲ್ಲಿ ಇಂಥ ನಕಲಿ ಆ್ಯಪ್‌ಗಳಿಗೆ ಬಲಿಯಾಗಬೇಡಿ, ಒಮ್ಮೆ ನಿಮ್ಮ ಮೊಬೈಲ್‌ ಪರೀಕ್ಷಿಸಿಕೊಳ್ಳಿ.