ನೆರಳು ಬೆಳಕಿನ ರಂಗದ ಮೇಲೆ ವಿಜ್ಞಾನ ಲೋಕ ಅನಾವರಣ ಮಾಡುತ್ತಿರುವ ರಂಗೋತ್ಸವ

ರಂಗಭೂಮಿ ಮತ್ತು ವಿಜ್ಞಾನವನ್ನು ಬೆಸೆಯುವ ಅಪೂರ್ವ ಪ್ರಯತ್ನವೊಂದು ಮೈಸೂರಿನಲ್ಲಿ ನಡೆಯುತ್ತಿದೆ ಕಲಾಸುರುಚಿ ಹೆಸರಿನ ರಂಗ ವಿಜ್ಞಾನವನ್ನು ಎಲ್ಲರಿಗೂ ತಲುಪಿಸುವ ಮಹದಾಸೆಯೊಂದಿಗೆ ವಿಜ್ಞಾನಾಧಾರಿತ ನಾಟಕಗಳನ್ನು ಪ್ರದರ್ಶಿಸುತ್ತಾ ವಿಜ್ಞಾನವನ್ನು ಜನರಿಗೆ ಸೃಜನಶೀಲವಾಗಿ ತಲುಪಿಸುತ್ತಿದೆ

ಕನ್ನಡ ಭಾಷೆಯಲ್ಲಿ ವಿಜ್ಞಾನ ಮತ್ತು ಕಲೆಯ ನಡುವೆ ವಿಚಿತ್ರವಾದ ಅಂತರವಿದೆ. ಈ ಎರಡು ಶಿಸ್ತುಗಳ ನಡುವೆ ಕೊಡುಕೊಳ್ಳುವಿಕೆಯೇ ಇಲ್ಲ. ವಿಜ್ಞಾನ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದರೂ ಅದನ್ನು ನೋಡುವ ಕಣ್ಣು, ಅದನ್ನು ನಮ್ಮ ವಿವೇಕ ಭಾಗವಾಗಿಸುವ ಪ್ರಯತ್ನದಲ್ಲಿ ಸೃಜನಶೀಲ ಸಾಹಿತ್ಯವಲಯದ ಕಾಣ್ಕೆ ನಿಜಕ್ಕೂ ನಗಣ್ಯ. ವಿಜ್ಞಾನ ಮತ್ತು ಕಲೆ ಎರಡು ಭಿನ್ನದಾರಿ ಎಂಬಂತೆ ಅಪರೋಕ್ಷವಾಗಿ ಪ್ರತಿಪಾದಿಸುತ್ತಾ ಬಂದಿರುವ ನಮ್ಮ ಬುದ್ಧಿಜೀವಿಗಳು ಅವರೆಡರ ಸಮ್ಮಿಲನದಿಂದ ಸಮಾಜದ ಪ್ರಜ್ಞೆ ಪಡೆಯಬಹುದಾದ ಅಗಾಧ ಶಕ್ತಿಯನ್ನು ಉಪೇಕ್ಷಿಸುತ್ತಲೇ ಬಂದಿದ್ದಾರೆ.
ಸಿ ಪಿ ಸ್ನೋ ತಮ್ಮ ಪ್ರಸಿದ್ಧ ‘ ಎರಡು ಸಂಸ್ಕೃತಿಗಳು’ ಪ್ರಬಂಧದಲ್ಲಿ ಈ ವಿಚಾರವನ್ನು ವಿಸ್ತ್ರೃತವಾಗಿ ಚರ್ಚಿಸಿದ್ದಾರೆ ಮತ್ತು ಬೆಸೆಯುವ ಸಾಧ್ಯತೆಗಳ ಕುರಿತು ಹೇಳಿದ್ದಾರೆ. ಅವುಗಳಲ್ಲಿ ಒಂದು ರಂಗಭೂಮಿ. ಕಲೆ ಮತ್ತು ವಿಜ್ಞಾನ, ಎರಡೂ ಕ್ಷೇತ್ರಗಳನ್ನು ರಂಗಭೂಮಿ ಬೆಸೆಯಬಲ್ಲದು ಎಂದು ಪ್ರತಿಪಾದಿಸಿದ್ದಾರೆ. ಇದರಿಂದ ಪ್ರೇರಿತರಾದ ಮೈಸೂರಿನ ಶಶಿಧರ ಡೋಂಗ್ರೆ ಹಾಗೂ ಅವರ ಸ್ನೇಹ ಬಳಗ ವಿಜ್ಞಾನವನ್ನು ರಂಗದ ಮೂಲಕ ಕನ್ನಡದ ಮನಸ್ಸುಗಳಿಗೆ ತಲುಪಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅದೇ ವಿಜ್ಞಾನ ರಂಗೋತ್ಸವ.
ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ಪರಿವರ್ತನಾ ರಂಗಸಮಾಜ, ಕಲಾ ಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌, ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ನಡೆಯುತ್ತಿರುವ ಈ ರಂಗೋತ್ಸವದ ಮೂಲಕ, ವಿಜ್ಞಾನವು ನಮ್ಮ ದೈನಂದಿನ ಬದುಕಿನಲ್ಲಿ ಉಂಟುಮಾಡುವ ಒಳಿತು ಕೆಡುಕುಗಳನ್ನು ಮತ್ತು ವಿಜ್ಞಾನಿಗಳ ಬದುಕನ್ನು, ಅದರ ಎಲ್ಲ ಆಯಾಮಗಳಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿದೆ.

” ವಿಜ್ಞಾನದ ಶಾಖೆಯನ್ನು ಅಥವಾ ಅದರಲ್ಲಿ ಅಡಕವಾಗಿರುವ ಯೋಚನಾಲಹರಿಯನ್ನು ನೇರವಾಗಿ ಪ್ರಸ್ತುತಪಡಿಸುವುದು ಮತ್ತು ಒಬ್ಬ ವಿಜ್ಞಾನಿಯ ಅಥವಾ ವೈಜ್ಞಾನಿಕ ಇತಿಹಾಸದ ಒಂದು ತುಣುಕನ್ನು, ವಿಜ್ಞಾನಿಯನ್ನು ಕೇಂದ್ರವಾಗಿಟ್ಟುಕೊಂಡು, ಆ ಇತಿಹಾಸವನ್ನು ಮತ್ತೆ ಅರ್ಥೈಸಲು ಅಥವಾ ಇತಿಹಾಸದ ಆ ಕಾಲವನ್ನು ಮತ್ತಷ್ಟು ವಿಶದವಾಗಿ ಅರಿತುಕೊಳ್ಳುವ ಪ್ರಯತ್ನವನ್ನೂ ಈ ರಂಗೋತ್ಸವ ಮಾಡುತ್ತಿದೆ”

ಶಶಿಧರ ಡೋಂಗ್ರೆ. ಸಂಘಟಕರು

ಜಾಗತಿಕವಾಗಿ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ, ಮಾನವ ವಿರೋಧಿ ನಡೆಯನ್ನು ಪ್ರಶ್ನಿಸುವ ಮತ್ತು ಅದರ ವಿರುದ್ಧ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಹಲವು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ ಎನ್ನುತ್ತಾರೆ ಅವರು.

ವಿಜ್ಞಾನ ನಾಟಕಗಳು

ವಿಜ್ಞಾನ ನಾಟಕೋತ್ಸವ ಬಹುಶಃ ಭಾರತದಲ್ಲಿಯೇ ಅಪರೂಪದ ಸಂಘಟನೆ. ಇಂಗ್ಲಿಷ್‌ ನಾಟಕಗಳು ಅಲ್ಲಲ್ಲಿ ಪ್ರದರ್ಶನ ಕಾಣುತ್ತವೆ. ಆದರೆ ಪ್ರಾದೇಶಿಕ ಭಾಷೆಯಲ್ಲಿ ಇಂಥದ್ದೊಂದು ರಂಗೋತ್ಸವ ಭಾರತದಲ್ಲೇ ಮೊದಲು. ಈ ಎರಡು ವರ್ಷಗಳಲ್ಲಿ ಆರು ನಾಟಕಗಳು ಪ್ರದರ್ಶನಗೊಂಡಿವೆ.

ಮೊದಲ ವರ್ಷ ಅಂದರೆ 2018ರಲ್ಲಿ ಮೂರು ನಾಟಕಗಳು ಪ್ರದರ್ಶನಗೊಂಡವು. ಶಶಿಧರ ಡೋಂಗ್ರೆ ಅವರು ಅನುವಾದಿಸಿದ ಮೈಕೇಲ್‌ ಫ್ರೇನ್‌ ಅವರ ಕೊಪನ್‌ಹೇಗನ್‌ ನಾಟಕವು ಎಸ್‌ ಆರ್‌ ರಮೇಶ್‌ ಅವರ ನಿರ್ದೇಶನದಲ್ಲಿ ಪ್ರದರ್ಶನಕಂಡಿತು. 1941 ರಲ್ಲಿ ಕೊಪನ್ ಹೇಗನ್ ಪಟ್ಟಣದಲ್ಲಿ ಭೌತ ಶಾಸ್ತ್ರಜ್ಞರಾದ – ನೀಲ್ಸ್ ಬೋರ್ ಮತ್ತು ವರ್ನರ್ ಹೈಸನ್‍ಬರ್ಗ್ ಮತ್ತು ಇನ್ನೊಬ್ಬರು ಬೋರಿ ಅವರ ಪತ್ನಿ ಮಾರ್ಗರ್ತ್ ನಡುವೆ ಆದ ಭೇಟಿಯನ್ನು ಕಥಾವಸ್ತುವನ್ನಾಗಿಸಿಕೊಂಡಿರುವ ಈ ನಾಟಕ ಜಾಗತಿಕ ವೈಜ್ಞಾನಿಕ ರಂಗಭೂಮಿಯ ಇತಿಹಾಸದಲ್ಲಿ ಕೊಪನ್ ಹೇಗನ್ ನಾಟಕ ಪಡೆದ ಪ್ರೇಕ್ಷರ ಮೆಚ್ಚುಗೆ ಪಡೆದಿದೆ.

ಮತ್ತೊಂದು ನಾಟಕ, ಪ್ರೂಫ್‌. ಡೇವಿಡ್‌ ಆರ್ಬನ್‌ ಅವರ ಈ ನಾಟಕವನ್ನು ಶಶಿಧರ ಡೋಂಗ್ರೆ ಅವರು ಕನ್ನಡಕ್ಕೆ ತಂದಿದ್ದಾರೆ. ಗಣಿತದ ಪ್ರಮುಖ ಸಂಶೋಧನೆಗಳನ್ನು ಇಪ್ಪತ್ತೈದು ವರ್ಷ ವಯಸ್ಸಾಗುವ ಮೊದಲೇ ಮಾಡುತ್ತಾರೆಂಬುದು ಜನಪ್ರಿಯ ನಂಬಿಕೆ. ಮತ್ತು ಗಣಿತದಲ್ಲಿ ಶ್ರೇಷ್ಠತೆಗೂ ಮಾನಸಿಕ ಆರೋಗ್ಯಕ್ಕೂ ವಿರುದ್ಧ ಸಂಬಂಧವಿರುತ್ತದೆಂಬುದೂ ಒಂದು ನಂಬಿಕೆ. ಈ ಎರಡು ನಂಬಿಕೆಗಳಿಗೂ ತಳಹದಿ ಇಲ್ಲದೇ ಇಲ್ಲ. ಗಣಿತದಲ್ಲಿ ಶ್ರೇಷ್ಠತೆ ಎನ್ನುವುದು ಅನುವಂಶೀಯವಾಗಿ ಬರಲು ಸಾಧ್ಯವೇ ಎನ್ನುವುದೂ ಕುತೂಹಲಕಾರಿ ಪ್ರಶ್ನೆಯೇ. ಈ ಎಲ್ಲ ಪ್ರಶ್ನೆಗಳನ್ನು ಕೇಳುವ ಮತ್ತು ಇಂದಿನ ಅಕಾಡೆಮಿಕ್ ಸಂದರ್ಭದಲ್ಲಿ ಒದಗುವ ಆಶಯ ಮತ್ತು ನೈಜತೆಗಳ ನಡುವಿನ ತಿಕ್ಕಾಟ ಡೇವಿಡ್ ಆಬರ್ನ್ ಅವರ ’ಪ್ರೂಫ್’ ನಾಟಕದ ವಸ್ತು.

ಸಾರಾ ಟ್ರೀಮ್‌ ಅವರ ಹೌ ಅಂಡ್‌ ವೈ’ ನಾಟಕದಿಂದ ಪ್ರೇರಣೆ ಪಡೆದ ಬ್ರೋಕನ್‌ ಬ್ಲಾಸಂ ಅನ್ನು ಎಸ್‌ ಆರ್‌ ರಮೇಶ್‌ ಅವರು ರಚಿಸಿ ನಿರ್ದೇಶಿಸಿದರು. ಹೆಣ್ಣಿನ ದೇಹದ ಜೀವ ವಿಕಸನ ಕೇಂದ್ರವನ್ನಾಗಿಸಿಕೊಂಡಿದ್ದ ಈ ನಾಟಕ ಅಕಾಲಿಕ ಸಂತಾನೋತ್ಪತ್ತಿ, ವೃದ್ಧಾಪ್ಯ, ಹೆಣ್ಣಿಗೆ ವರದಾನವಾ? ಬಸಿರು, ಹೆರಿಗೆ, ಹಾಲುಣಿಸುವ ಕ್ರಿಯೆಯಿಂದ ದೂರವಾಗುವ ಹೆಣ್ಣು ತನ್ನ ಮಕ್ಕಳ ಪೋಷಣೆಗೆ ಸಹಾಯಕಳಾಗಿರುತ್ತಾಳೆಯೇ? ಅಜ್ಜಿಯಿಂದಾಗಿ ಬಾಲ್ಯವೆಂಬುದು ಆವಿಷ್ಕಾರವಾಯಿತೇ? ಹೀಗೆ ಹಲವು ಪ್ರಶ್ನೆಗಳನ್ನು ನಾಟಕ ಮುಂದಿಡುತ್ತದೆ. ಬೌದ್ಧಿಕ ಪರಿಸರಕ್ಕೆ ಭಿನ್ನವಾಗಿರುವ ದೇಹದ ಆಂತರಿಕ ರಚನೆಗಳ ಮೂಲಕ ಸ್ತ್ರೀ ಸಂವೇದನೆಯನ್ನು ಕಟ್ಟಿಕೊಡುತ್ತದೆ.
2019ರಲ್ಲಿ ಜೆ ಆರ್ ಲಕ್ಷ್ಮಣರಾವ್ ಮತ್ತು ಎಚ್ ಕೆ ರಾಮಚಂದ್ರಮೂರ್ತಿ ಅನುವಾದಿಸಿದ ಬರ್ಟೋಲ್ಡ್‌ ಬ್ರೆಕ್ಟ್‌ನ ಗೆಲಿಲಿಯೋ, ಕೆ ಪಿ ವಾಸುದೇವನ್ ಅವರು ಅನುವಾದಿಸಿದ ರಾರ್ಬರ್ಟ್‌ ಮಾರ್ಕ್‌ ಫ್ರೀಡ್ಮನ್‌ ಅವರ ಮುಸ್ಸಂಜೆಯ ಸ್ವಗತಗಳು, ಶಶಿಧರ ಡೋಂಗ್ರೆ ಅವರು ಅನುವಾದಿಸಿದ ನೀಲಂಜನ್‌ ಚೌಧರಿ ಅವರ ಕವಿತೆಯ ವರ್ಗಮೂಲ ನಾಟಕಗಳು ಪ್ರದರ್ಶನಗೊಂಡವು.

ರಂಗೋತ್ಸವದ ಜೊತೆಗೆ ಈ ಬಾರಿ ವಿಜ್ಞಾನ ನಾಟಕ ರಚನಾ ಶಿಬಿರ ಜರುಗಿತು. ಇದರಲ್ಲಿ ಪಾಲಹಳ್ಳಿ ವಿಶ್ವನಾಥ್, ಕೆ ಪಿ ವಾಸುದೇವನ್, ಬಿ ಆರ್‌ ಮಂಜುನಾಥ್, ಪ್ರಕಾಶ್‌ ಅರಸ್, ಸಬ್ಯಸಾಚಿ ಚಟರ್ಜಿ, ಬಾಲಚಂದ್ರರಾವ್, ಎಚ್‌ ಎಸ್‌ ಉಮೇಶ್, ಎಚ್‌ ಆರ್‌ ಕೃಷ್ಣಮೂರ್ತಿ ನಾಟಕ ರಚನೆ ಕುರಿತು ಮಾರ್ಗದರ್ಶನ ನೀಡಿದರು.

ವಿಜ್ಞಾನ, ಸಾಮಾಜಿಕ ಬದಲಾವಣೆ ಮತ್ತು ಕಲೆ-ಪ್ರಯೋಗ ಮತ್ತು ಪ್ರಗತಿ ಕುರಿತು ವಿಚಾರ ಸಂಕಿರಣ ರಂಗಭೂಮಿ ಮತ್ತು ವಿಜ್ಞಾನ ಸಂವಹನ ಕುರಿತು ಮಹತ್ವದ ವಿಚಾರ ವಿನಿಮಯ ನಡೆದವು.