ಇಂಟರ್ನೆಟ್ ಬಳಸುವವರಿಗೆ ಪಾಸ್‌ವರ್ಡ್ ಮಹತ್ವ ಏನೆಂದು ಗೊತ್ತು. ಒಂದು ವೇಳೆ ಹೋದರೆ, ಅದನ್ನು ಮರಳಿ ಪಡೆಯುವುದಕ್ಕೆ ಕೊಂಚ ಮಟ್ಟಿನ ಸಾಹಸ ಮಾಡಬೇಕಾಗುತ್ತಿತ್ತು. ಇನ್ನು ಅದನ್ನೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ

ಪಾಸ್‌ವರ್ಡ್‌ಗಳು ಎಂದರೆ ಖಜಾನೆ ಕೀಲಿಕೈಗಳಷ್ಟು ಮಹತ್ವದವು. ಇಂಟರ್ನೆಟ್‌ನಲ್ಲಿ ವಿವಿಧ ಸೇವೆಗಳನ್ನು ಖಾಸಗಿಯಾಗಿ ಬಳಸಲು ಇರುವ ಕೀಲಿ ಕೈ ಪಾಸ್‌ವರ್ಡ್. ಹಾಗಾಗಿ ಅವುಗಳನ್ನು ಆದಷ್ಟು ಕ್ಲಿಷ್ಟಕರವಾಗಿ, ಯಾರೂ ಸುಲಭವಾಗಿ ಕದಿಯಲು ಸಾಧ್ಯವಾಗದಂತೆ ಪಾಸ್‌ವರ್ಡ್‌ಗಳನ್ನು ಬಳಕೆದಾರರೂ ಹೊಂದಿದ್ದಾರೆ.
ಆದರೆ ಇನ್ನು ಅಂಥ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ದಿ ವೆಬ್ ಅಂಥೆಟಿಫಿಕೇಷನ್ ಸ್ಟ್ಯಾಂಡರ್ಡ್ ಪಾಸ್‌ವರ್ಡ್‌ಗಳ ಬದಲಿಗೆ ಸೆಕ್ಯುರಿಟಿ ಫಿನ್, ಫಿಂಗರ್‌ಪ್ರಿಂಟ್ ಸ್ಕ್ಯಾನ್, ವೆಬ್‌ಕ್ಯಾಮ್‌ಗಳನ್ನು ಬಳಸುವ ಮೂಲಕ ಯಾವುದೇ ಖಾತೆಗೆ ಲಾಗಿನ್ ಆಗುವ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗುತ್ತಿದೆ.
ಅಕ್ಷರ, ಅಂಕಿ ಮತ್ತು ಚಿಹ್ನೆಗಳನ್ನು ಒಳಗೊಂಡ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದೇ ಸವಾಲಿನ ಕೆಲಸ. ಅದರಲ್ಲೂ ಈಮೇಲ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹತ್ತು ವೆಬ್‌ಸೈಟ್‌ಗಳಲ್ಲಿ ಲಾಗಿನ್ ಆಗಬೇಕಾದಾಗ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ಹೊಂದಬೇಕು. ನೆನಪಿಟ್ಟುಕೊಳ್ಳುವುದು ಕಷ್ಟವೆಂದು ಒಂದೇ ಪಾಸ್‌ವರ್ಡನ್ನು ವಿವಿಧ ಸೈಟ್‌ಗಳಲ್ಲಿ ಬಳಸುವ ರೂಢಿಯೂ ಇದೆ. ಆದರೆ ಇದು ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಿದ ವೆಬ್ ಅಂಥೆಟಿಫಿಕೇಷನ್ ಸ್ಟ್ಯಾಂಡರ್ಡ್ ಜನ ಇಂಟರ್ನೆಟ್ ಬಳಸುವ ಕ್ರಮವನ್ನು ಬದಲಿಸುವುದಕ್ಕೆ ಮುಂದಾಗಿದೆ. ದೇಹದ ಭಾಗಗಳ ಮೂಲಕ ಇಂರ್ಟನೆಟ್ ನಿಯಂತ್ರಿಸುವ ಸಾಧ್ಯತೆಯನ್ನು ಪರೀಕ್ಷಿಸಿ, ಜಾರಿಗೆ ತರುವುದಕ್ಕೆ ಸಿದ್ಧವಾಗಿದೆ.
ಹೇಗೆ ಕೆಲಸ ಮಾಡುತ್ತದೆ? ಬಳಕೆದಾರರು ಒಂದು ವೆಬ್‌ಸೈಟಿಗೆ ಬಳಕೆದಾರರು ಭೇಟಿ ನೀಡುತ್ತಾರೆ ಎಂದಿಟ್ಟುಕೊಳ್ಳಿ. ಅಲ್ಲಿ ಲಾಗಿನ್ ಆಗಬೇಕು. ಆಗ ಮೊದಲು ಯೂಸರ್ ನೇಮ್ ದಾಖಲಿಸುತ್ತಾರೆ. ಆಗ ಅವರ ಸ್ಮಾರ್ಟ್‌ಫೋನಿಗೆ ಸಂದೇಶವೊಂದು ಬರುತ್ತದೆ. ಅದನ್ನು ಟಚ್ ಮಾಡಿದಾಗ, ಕಂಪ್ಯೂಟರ್ ಪರದೆ ಮೇಲೆ ತೆರೆದುಕೊಂಡಿರುವ ವೆಬ್‌ಸೈಟ್ ಲಾಗಿನ್ ಆಗುತ್ತದೆ. ಇಲ್ಲಿ ಪಾಸ್‌ವರ್ಡ್ ಅಗತ್ಯವೇ ಇರುವುದಿಲ್ಲ.
ಈ ಮೂಲಕ ಸೈಬರ್ ಅಟ್ಯಾಕ್‌ಗಳು, ಹ್ಯಾಂಕಿಂಗ್‌ಗಳ ಮೂಲಕ ಪಾಸ್‌ವರ್ಡ್ ಕದಿಯುವುದನ್ನು ತಪ್ಪಿಸಬಹುದು. ಈ ಲಾಗಿನ್ ಆಗುವ ಕ್ರಮ ಪ್ರತಿ ಬಾರಿ ಭಿನ್ನವಾಗಿರುತ್ತದೆ. ಹಾಗಾಗಿ ಕದಿಯುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ವರ್ಲ್ಡ್ ವೈಡ್ ಕನ್ಸೋರ್ಟಿಯಂ ನ ಮುಖ್ಯ ಕಾರ್ಯಾಧಿಕಾರಿ ಜೆಫ್ ಜಾಫೆ ಹೇಳುತ್ತಾರೆ.
ಇತ್ತೀಚನ ವರ್ಷಗಳಲ್ಲಿ ಹೆಚ್ಚುತ್ತಿರುವ ಮಾಹಿತಿ ಕಳವು, ಸೋರಿಕೆಯು ಬಳಕೆದಾರರಲ್ಲಿ ಇಂಟರ್ನೆಟ್ ಸುರಕ್ಷತೆಯ ಬಗ್ಗೆ ಭಯ ಹುಟ್ಟಿಸಿದೆ. ಪಾಸ್‌ವರ್ಡ್‌ನಂತಹ ಮಹತ್ವದ ಮಾಹಿತಿಯನ್ನು ಕದ್ದರೆ, ಆ ಮೂಲಕ ಹಲವು ಮಾಹಿತಿಯನ್ನು ಕಲೆಹಾಕುವುದು ಸುಲಭವಾಗಿರುವುದರಿಂದ ಅದನ್ನು ರಕ್ಷಿಸುವುದು ದೊಡ್ಡ ಸವಾಲು. ಈಗಿರುವ ಕ್ರಮಕ್ಕೆ ಪರ್ಯಾಯವನ್ನು ಸೃಷ್ಟಿಸಿದರೆ, ಅದು ಕದಿಯಲು ಸಾಧ್ಯವಿಲ್ಲದಂತಹ ಮಾದರಿಯಾದರೆ ಉತ್ತಮವೆಂದು ಕಂಡುಕೊಂಡ ಕನ್ಸೋರ್ಟಿಯಂ ಈ ವಿಧಾನವನ್ನು ಪ್ರಯೋಗಿಸಲು ತಯಾರಾಗಿದೆ.
ಈಗಾಗಲೇ ಫೇಸ್‌ಬುಕ್, ಗೂಗಲ್ ಸೇರಿದಂತೆ ಕೆಲವು ವೆಬ್‌ತಾಣಗಳು ಈ ಮಾದರಿಯ ಲಾಗಿನ್‌ಗಳನ್ನು ಪ್ರಯೋಗಿಸಿದೆ. ಆನ್‌ಲೈನ್ ಸುರಕ್ಷತೆಯ ಹಿನ್ನೆಲೆಯಲ್ಲಿ ಪಾಸ್‌ವರ್ಡ್ ಮಾದರಿಯನ್ನು ರದ್ದು ಗೊಳಿಸುವುದು ಅಗತ್ಯ. ಬಯೋಮೆಟ್ರಿಕ್ ಮತ್ತು ಸ್ಮಾರ್ಟ್‌ಫೋನ್‌ಗಳು ವಿಧಾನ ಆನ್‌ಲೈನ್ ಬಳಕೆಯನ್ನು ಸುಲಭವೂ ಆಗಿಸುತ್ತದೆ.