ಉತ್ತರ ಕೋರಿಯಾ ಸರ್ವಾಧಿಕಾರ ಇರುವ ದೇಶ. ತಂತ್ರಜ್ಞಾನ ಬಳಸಿಕೊಂಡು ಜಗತ್ತಿನ ಶಕ್ತಿಶಾಲಿ ದೇಶಗಳ ತಂತ್ರಜ್ಞಾನ, ರಾಜಕೀಯ ಆಗುಹೋಗುಗಳನ್ನು ತಿಳಿಯುವ ಕೆಲಸ ಮಾಡುತ್ತಿತ್ತು. ಮಾಹಿತಿ ಕದಿಯುತ್ತಿತ್ತು. ಈಗ ಸರ್ಕಾರವೇ ಹ್ಯಾಕರ್‌ಗಳನ್ನು ಹಣ ಕದಿಯುವುದಕ್ಕೆ, ಬಲಿಷ್ಠ ದೇಶಗಳ ಆನ್‌ಲೈನ್‌ಗಳನ್ನು ಹಾಳುವುದಕ್ಕೆ ಬಳಸುತ್ತಿದೆ!

ಹ್ಯಾಕಿಂಗ್ ಈಗ ಹಲವು ಕಾರಣಗಳಿಗೆ ನಡೆಯುತ್ತದೆ. ತಂತ್ರಜ್ಞಾನ ತಿಳಿದ ವ್ಯಕ್ತಿಯೊಬ್ಬ ಎಲ್ಲೋ ಕೂತ ಯಾವುದೇ ನಿರ್ದಿಷ್ಟ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ, ಮಾಹಿತಿ ಕದಿಯುತ್ತಾನೆ, ಸುಲಿಗೆ ಮಾಡುತ್ತಾನೆ. ತನ್ನ ವಿಕೃತ ಸಂತೋಷಕ್ಕೆ ಒಂದು ಗೌರವಾನ್ವಿತ ಸಂಸ್ಥೆಗೆ ಸಂಬಂಧಿಸಿದ ವೆಬ್‌ಸೈಟ್‌ನ್ನು ನಿಷ್ಕ್ರಿಯಗೊಳಿಸಿ ತನ್ನದೊಂದು ಸಂದೇಶ ಪ್ರಕಟಿಸಿ ಸಂತೋಷ ಪಡುತ್ತಾನೆ. ಸಾರ್ವಜನಿಕ ಸೇವೆ ನೀಡುವ ವ್ಯವಸ್ಥೆಯನ್ನು ಅಲುಗಾಡಿಸುತ್ತಾನೆ.
ಸೈಬರ್ ದಾಳಿ ವ್ಯಕ್ತಿಯೊಬ್ಬನೇ ಅಥವಾ ನಿರ್ದಿಷ್ಟ ವಿಷಯ, ವ್ಯಕ್ತಿಯನ್ನು ಬೆಂಬಲಿಸುವ ಗುಂಪುಗಳು ನಡೆಸುತ್ತವೆ. ಆದರೆ ಉತ್ತರ ಕೋರಿಯಾದ ವಿಷಯವೇ ಬೇರೆ. ಅಲ್ಲೀಗ ಕಿಮ್ ಜಾಂಗ್ ಉನ್ ನೇತೃತ್ವ ಸರ್ವಾಧಿಕಾರಿ ವ್ಯವಸ್ಥೆ ಆಯ್ದ ಯುವಕರಿಗೆ ಹ್ಯಾಕಿಂಗ್ ತರಬೇತಿ ನೀಡಿ ತನಗೆ ಬೇಕಾದಂತೆ ದುಡಿಸಿಕೊಳ್ಳುತ್ತಿದೆ! ತನಗೆ ಬೇಕಾದಂತೆ ಎಂದರೆ.. ಮುಂದೆ ಹೇಳುತ್ತೇನೆ. ಆದರೆ ಉತ್ತರ ಕೋರಿಯಾದಲ್ಲಿ ಎಲ್ಲವೂ ಎಲ್ಲರಿಗೂ ಸಿಕ್ಕುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.
ಉತ್ತರ ಕೊರಿಯಾ ಸರ್ವಾಧಿಕಾರಿ ವ್ಯವಸ್ಥೆ. ಅಲ್ಲಿ ಎಲ್ಲರಿಗೂ ಇಂರ್ಟನೆಟ್ ಸೇವೆ ಇಲ್ಲ. ಅದು ಶ್ರೀಮಂತರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ಮಾತ್ರ. ಚೀನಾದಿಂದ ಇಂರ್ಟನೆಟ್ ಸೇವೆಯನ್ನು ಪಡೆಯುತ್ತದೆ. ಹಾಗಾಗಿ ಇಲ್ಲಿನ ಪ್ರಜೆಗಳಿಗೆ ತಂತ್ರಜ್ಞಾನ, ರಾಜಕೀಯ ವಿದ್ಯಮಾನ, ವಿವಿಧ ಕ್ಷೇತ್ರಗಳ ಹೊಸ ಬೆಳವಣಿಗೆಗಳೇನು ಗೊತ್ತಾಗುವುದಿಲ್ಲ. ಹಾಗಾಗಿಯೇ ಇಂರ್ಟನೆಟ್ ಮೂಲಕ ಓದಿ, ಕಲಿಯುವ ಅವಕಾಶವೂ ಇಲ್ಲಿ ಸಾಧ್ಯವಿಲ್ಲ.
ಸೈಬರ್ ದಾಳಿಯ ಶಕ್ತಿಯರಿತ ಮೇಲೆ ತಾನೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಯುವಕರನ್ನು ಗುರುತಿಸಿ, ಅವರಿಗೆ ಪ್ಯೋಗ್ಯಾಂಗ್ ಯೂನಿವರ್ಸಿಟಿ ಆಫ್ ಅಟೋಮೇಷನ್‌ನಲ್ಲಿ ತರಬೇತಿ ನೀಡುತ್ತಿದೆ. ಕೋರಿಯಾದ ಜನಸೇನೆಯಲ್ಲಿ ಈಗ ಇಂಥ ೬೦೦೦ ಮಂದಿ ಪರಿಣಿತರು ಇದ್ದಾರೆ ಎನ್ನಲಾಗುತ್ತಿದೆ.