ಭಾರತಕ್ಕೂ ಚಾಚಿಕೊಂಡಿತೆ ಕೇಂಬ್ರಿಡ್ಜ್‌ ಅನಾಲಿಟಿಕಾ ಹಗರಣದ ನೆರಳು?

ಲಂಡನ್‌ ಮೂಲದ ಕೇಂಬ್ರಿಡ್ಜ್‌ ಅನಾಲಿಟಿಕಾ ಸುದ್ದಿಯಲ್ಲಿದೆ. ಅಮೆರಿಕ ಚುನಾವಣೆಯನ್ನು ಪ್ರಭಾವಿಸಿದ್ದನ್ನು ಲಂಡನ್ನಿನ ಪತ್ರಿಕೆ, ಚಾನೆಲ್‌ಗಳು ಬಯಲಿಗೆಳೆದಿವೆ. ಇದೇ ಸಂಸ್ಥೆ ಕಳೆದ ಎಂಟು ವರ್ಷಗಳಿಂದ ಭಾರತದ ಚುನಾವಣೆಗಳಲ್ಲೂ ಕೆಲಸ ಮಾಡಿದೆ ಎಂಬ ವಿಷಯ ಈಗ ಬಯಲಾಗಿದೆ

ಕುಮಾರ್ ಎಸ್

ಈ ಲೇಖನದ ಆಡಿಯೋ ರೂಪ, ಇಲ್ಲಿ ಕೇಳಿ

ಡೊನಾಲ್ಡ್‌ ಟ್ರಂಪನ್ನು ಅಧಿಕಾರಕ್ಕೆ ತಂದ ೨೦೧೬ರ ಅಮೆರಿಕದ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಯ ಬಗ್ಗೆ ಚರ್ಚೆ ನಡೆದಿತ್ತು. ಎರಡು ದಿನಗಳ ಹಿಂದೆ ಲಂಡನ್‌ ಮೂಲದ ಡಾಟಾ ವಿಶ್ಲೇಷಣೆ ಮಾಡುವ ಕಂಪನಿ ಕ್ಯಾಂಬ್ರಿಡ್ಜ್‌ ಅನಾಲಿಟಿಕಾ ೫೦ ಮಿಲಿಯನ್‌ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕದ್ದ ಹಗರಣ ಬಯಲಿತು. ಈ ಮಾಹಿತಿಯನ್ನು ಅಮೆರಿಕದ ಚುನಾವಣೆಯಲ್ಲಿ ಬಳಕೆ ಮಾಡಲಾಗಿತ್ತು ಎಂಬುದನ್ನು ವರದಿ ಮಾಡಿದ ದಿ ಗಾರ್ಡಿಯನ್‌, ದಿ ಅಬ್ಸರ್ವರ್‌, ದಿ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಚಾನೆಲ್‌ ೪ ವರದಿಗಳು ಕುಟುಕು ಕಾರ್ಯಾಚರಣೆ ಮೂಲಕ ಬಯಲು ಮಾಡಿದ್ದಾರೆ.
ಕದ್ದ ೫೦ ಮಿಲಿಯನ್‌ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲುವಿಗಾಗಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ. ಇದಕ್ಕೂ ಭಾರತಕ್ಕೂ ಏನು ಸಂಬಂಧ?
ಹಲವು ಕಾರಣಗಳಿವೆ; ಭಾರತದಲ್ಲಿ ಚುನಾವಣೆ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣವೂ ಮಹತ್ವದ ಪಾತ್ರವಹಿಸಿದ್ದನ್ನು ೨೦೧೪ ಚುನಾವಣೆಯಲ್ಲಿ ನೋಡಿದ್ದೇವೆ. ಈ ಮಾದರಿಯನ್ನು ಅನುಸರಿಸಿರುವ ಭಾರತದ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳನ್ನು, ವಿಶೇಷವಾಗಿ ಫೇಸ್‌ಬುಕ್‌ವನ್ನು ವ್ಯಾಪಕವಾಗಿ ಬಳಸುತ್ತಿದ್ದು, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ, ರಾಜಕಾರಣಿಗಳ ವೈಯಕ್ತಿಕ ಪ್ರಚಾರ ನಡೆಯುತ್ತಿದೆ. ಬರಲಿರುವ ೨೦೧೯ರ ಚುನಾವಣೆಯು ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕೇಂಬ್ರಿಡ್ಜ್‌ ಅನಾಲಿಟಿಕ ಹಗರಣ ವಿವಿಧ ಆಯಾಮದ ಸಾಧ್ಯತೆಗಳತ್ತ ಗಮನಸೆಳೆದಿದೆ.
ಚುನಾವಣೆಯಲ್ಲಿ ಇಂದು ಇತರೆ ಎಲ್ಲ ಸಂಪ್ರದಾಯಿಕ ಮಾದರಿಗಳಿಗಿಂತ ಡಾಟಾ ಅನಾಲಿಟಿಕ್ಸ್‌ ಹೆಚ್ಚು ಮಹತ್ವ ಪಡೆದುಕೊಂಡಿದೆ. ನೈಜೀರಿಯಾ, ಕೀನ್ಯಾ, ಝೆಕ್‌ ರಿಪಬ್ಲಿಕ್, ಅರ್ಜೆಂಟಿನಾ ದೇಶಗಳಲ್ಲಿ ೨೦೦ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸಿದೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ಕೇಂಬ್ರಿಡ್ಜ್‌ ಸಂಸ್ಥೆ ೨೦೧೦ರಿಂದಲೇ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಸ್ವತಃ ಕಂಪನಿಯ ವೆಬ್‌ಸೈಟ್‌ ಹೇಳುವಂತೆ ೨೦೧೦ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮಗ್ರ ಚುನಾವಣಾ ವಿಶ್ಲೇಷಣೆಯನ್ನು ನಡೆಸಿದೆ. ವಾಸ್ತವದಲ್ಲಿ ಕೇಂಬ್ರಿಡ್ಜ್‌ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದೇ ೨೦೧೩ರಲ್ಲಿ. ಆದರೆ ಅದರ ಮಾತೃ ಸಂಸ್ಥೆ ಸ್ಟ್ರಾಟಜಿಕ್‌ ಕಮ್ಯುನಿಕೇಷನ್ಸ್‌ ಲ್ಯಾಬೊರೇಟರಿಸ್‌ ಗ್ರೂಪ್‌ ಸಕ್ರಿಯವಾಗಿತ್ತು ಮತ್ತು ಬಿಹಾರದ ರಾಜಕೀಯ ವಿಶ್ಲೇಷಣೆಯ ಹೊಣೆ ಹೊತ್ತಿತ್ತು. ಈ ವಿಶ್ಲೇಷಣೆಯಲ್ಲಿ ಎಲ್ಲ ಪಕ್ಷಗಳಲ್ಲು ಕಂಡು ಬರುವ ನಿಲುವು ಬದಲಿಸುವ ಮತದಾರರ ಸಂಖ್ಯೆ, ಅವರ ಚುನಾವಣಾ ವ್ಯವಸ್ಥೆ ಬಗ್ಗೆ ಉದಾಸೀನತೆಯನ್ನು ಅಳೆದಿದ್ದಾರೆ. ತಮ್ಮ ಪ್ರಯತ್ನದ ಯಶಸ್ಸನ್ನು ವೆಬ್‌ ಸೈಟ್‌ನಲ್ಲಿ ಹೀಗೆ ದಾಖಲಿಸಿದ್ದಾರೆ, ” ನಮ್ಮ ಸೇವೆ ಪಡೆದವರು ಅಭೂತಪೂರ್ವ ಗೆಲವನ್ನು ಸಾಧಿಸಿದ್ದಾರೆ. ಸಿಎ (ಕೇಂಬ್ರಿಡ್ಜ್‌ ಅನಾಲಿಟಿಕಾ) ಊಹಿಸಿದ್ದ ಗೆಲುವಿನ ಶೇ.೯೦ರಷ್ಟು ಸೀಟುಗಳನ್ನು ಗೆದ್ದಿದೆ”.
ಬಿಹಾರದ ಈ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷವು ಒಟ್ಟು ಸೀಟುಗಳಲ್ಲಿ ೪ನೇಯ ಐದು ಭಾಗದಷ್ಟು ಗೆದ್ದು ಅಧಿಕಾರ ಹಿಡಿಯಿತು. ರಾಜ್ಯ ಚುನಾವಣೆಗಳ ಪೈಕಿ ಇದು ಅತಿ ದೊಡ್ಡ, ಐತಿಹಾಸಿಕ ಗೆಲುವಾಗಿತ್ತು. ಈ ಸಂಸ್ಥೆಗೆ ಸ್ಥಳೀಯವಾಗಿ ಜೆಡಿಯುನ ನಾಯಕ ಕೆ ಸಿ ತ್ಯಾಗಿ ಅವರ ಪುತ್ರ ಅಮ್ರಿಶ್‌ ತ್ಯಾಗಿ ನಡೆಸುತ್ತಿದ್ದ ಒವ್ಲೀನ್‌ ಬ್ಯುಸಿನೆಸ್‌ ಇಂಟೆಲಿಜೆನ್ಸ್‌ ಸಂಸ್ಥೆ ನೆರವಾಗಿತ್ತು.
ಇದೇ ಅಮ್ರಿಶ್‌ ತ್ಯಾಗಿ ಅವರು ಟ್ರಂಪ್‌ ಪ್ರಚಾರ ತಂಡದಲ್ಲೂ ಇದ್ದರು ಎಂಬುದನ್ನು ಗಮನಿಸಬೇಕು. ಕಳೆದ ವರ್ಷ ನವೆಂಬರ್‌ ತಿಂಗಳು ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ತ್ಯಾಗಿ ಈ ಕುರಿತು ವಿವರ ನೀಡಿದ್ದು, ” ಭಾರತ-ಅಮೆರಿಕನ್ನರ ಕಾಳಜಿಗಳನ್ನು ಅರ್ಥಮಾಡಿಕೊಳ್ಳುವುದು ನನ್ನ ಹೊಣೆಯಾಗಿತ್ತು” ಎಂದು ಹೇಳಿದ್ದರು.
ಇದೇ ಸಂಸ್ಥೆ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮತ್ತು ಭಾರತೀಯ ಜನತಾಪಕ್ಷಗಳನ್ನು ಸಂಪರ್ಕಿಸಿತ್ತು ಎಂಬುದು ಈಗ ಚರ್ಚೆಯಾಗುತ್ತಿದೆ. ಆದರೆ ಎರಡೂ ಪಕ್ಷಗಳು ಆಸಕ್ತಿ ತೋರಿಸದೇ ಇದ್ದುದರಿಂದ ಕೇಂಬ್ರಿಡ್ಜ್‌ ಸಂಸ್ಥೆ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ ಎನ್ನಲಾಗುತ್ತಿದೆ. ಆದರೆ ರಾಜಕೀಯ ಪಕ್ಷಗಳು ಈಗ ಪರಸ್ಪರ ಆರೋಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಕೇಂಬ್ರಿಡ್ಜ್‌ ಸಂಸ್ಥೆ ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಪರ್ಕಿಸಿ ಬಿಜೆಪಿಯನ್ನು ಎದುರಿಸಲು ಯಾವ ರೀತಿಯ ತಂತ್ರ ಅಗತ್ಯ. ಬರಲಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ಛತ್ತೀಸ ಗಢ ಚುನಾವಣೆಯಲ್ಲಿ ಈ ತಂತ್ರಗಳನ್ನು ಪರೀಕ್ಷಿಸುವ ಮೂಲಕ ಲೋಕಸಭೆ ಚುನಾವಣೆಗೆ ಗೆಲ್ಲುವ ತಂತ್ರವನ್ನು ಹೂಡಬಹುದು ಎಂದು ವಿವರಿಸಿದೆ ಎಂದು ಮನಿ ಕಂಟ್ರೋಲ್‌ ವರದಿ ಉಲ್ಲೇಖಿಸಿದೆ.
ವಿಪರ್ಯಾಸದ ಸಂಗತಿಯೆಂದರೆ ಕೇಂಬ್ರಿಡ್ಜ್‌ ಸಂಸ್ಥೆ ಬಲಪಂಥೀಯ ವಿಚಾರಧಾರೆಯ ಬಿಲಿಯಾಧಿಪತಿ ರಾಬರ್ಟ್‌ ಮರ್ಸೆರ್‌ ಬೆಂಬಲದೊಂದಿಗೆ ನಡೆಯುತ್ತಿರುವ ಸಂಸ್ಥೆಯಾಗಿದ್ದು, ಇದೇ ಕಾರಣಕ್ಕೆ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪರವಾಗಿ ಕೆಲಸ ಮಾಡಿತ್ತು. ಆದರೆ ಭಾರತದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಪರ್ಕಿಸಿತ್ತು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯೂ ಕೇಂಬ್ರಿಜ್‌ ಸಂಸ್ಥೆ ಸೇವೆ ಪಡೆದಿರುವುದನ್ನು ಸ್ವತಃ ಕಂಪನಿಯ ವೆಬ್‌ಸೈಟ್‌ ಮಾಹಿತಿ ನೀಡಿರುವುದು ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಟ್ಟಿದೆ.
ಕೇಂಬ್ರಿಡ್ಜ್‌ ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದ ವಕ್ತಾರ ಮನೀಶ್‌ ತಿವಾರಿ, “ಚುನಾವಣೆ ಆಯೋಗ ವಿಚಾರಣೆ ನಡೆಸಬೇಕು ಅಥವಾ ತನಿಖೆಗೆ ಶಿಫಾರಸ್ಸು ಮಾಡಬೇಕು, ಈ ಸಂಸ್ಥೆ ಭಾರತದಲ್ಲಿ ಯಾರ ಪರವಾಗಿ ಸೇವೆ ಸಲ್ಲಿಸುತ್ತಿದೆ ಎಂಬುದನ್ನು ತಿಳಿಯಬೇಕು’ ಟ್ವೀಟ್‌ ಮಾಡಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ನಾಯಕ, ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್‌ ಕೂಡ ತಮ್ಮ ವೈಯಕ್ತಿಕ ಹಾಗೂ ಹುದ್ದೆಯ ಟ್ವಿಟರ್‌ ಖಾತೆಗಳ ಮೂಲಕ ಕಾಂಗ್ರೆಸ್‌, ಕೇಂಬ್ರಿಡ್ಜ್‌ ಸಂಸ್ಥೆಗೆ ಭಾರತೀಯರ ಮಾಹಿತಿಯನ್ನು ನೀಡಿದೆ? ಎಂಬ ಪ್ರಶ್ನೆಯನ್ನು ಎತ್ತಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ಈ ನಡುವೆ ಕೇಂಬ್ರಿಡ್ಜ್‌ ಅನಾಲಿಟಿಕಾದ ನಿರ್ದೇಶಕರಲ್ಲಿ ಒಬ್ಬರು ತಮ್ಮ ಲಿಂಕ್ಡ್‌ಇನ್‌ ಪ್ರೊಫೈಲ್‌ನಲ್ಲಿ, ಆಡಳಿತಾರೂಢ ಬಿಜೆಪಿಯ ಪರ ನಾಲ್ಕು ಚುನಾವಣೆಗಳಲ್ಲಿ ಸಂಸ್ಥೆ ಕೆಲಸ ಮಾಡಿರುವುದಾಗಿ, ೨೭೨ರ ಗುರಿ ಮುಟ್ಟುವುದಕ್ಕಾಗಿ ಕಾಲ್‌ಸೆಂಟರ್‌ ಮ್ಯಾನೇಜ್‌ಮೆಂಟ್‌ ಯೋಜನೆಯನ್ನು ನಿಭಾಯಿಸಿರುವುದಾಗಿಯೂ ಬರೆದುಕೊಂಡಿದ್ದಾರೆ. ಮುಂದುವರೆದು, ಹೆಚ್ಚುವರಿಯಾಗಿ ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ದೆಹಲಿ ಚುನಾವಣೆಗಳಲ್ಲಿ ಕ್ಷೇತ್ರವಾರು ಮಾಹಿತಿಯನ್ನು ಪೂರೈಸಿರುವುದಾಗಿ ತಿಳಿಸಿದ್ದಾರೆ.
ಇಡೀ ಬೆಳವಣಿಗೆ, ಸಾಮಾಜಿಕ ತಾಣಗಳಲ್ಲಿ ಬಳಕೆದಾರರ ಮಾಹಿತಿಯ ಸುರಕ್ಷಿತವಾಗಿವೆಯೇ? ಚುನಾವಣೆಗಳಲ್ಲಿ ಮತದಾರರನ್ನು ಪ್ರಭಾವಿಸಲು ಅನುಸರಿಸುತ್ತಿರುವ ತಂತ್ರಗಳು ಯಾವುವು? ಅಭಿಪ್ರಾಯ ರೂಪಿಸುವಲ್ಲಿ ಅನುಮತಿಯೇ ಇಲ್ಲದೆ ಸಾಮಾಜಿಕ ತಾಣಗಳಲ್ಲಿರುವ ಬಳಕೆದಾರರನ್ನು ಮಾಹಿತಿಯನ್ನು ಬಳಸಲಾಗುತ್ತಿದೆಯೇ? ಫೇಸ್‌ಬುಕ್‌ ವಿಶ್ವಾಸಾರ್ಹತೆ ಏನು? ರಾಜಕಾರಣಿಗಳು ಅನುಸರಿಸುತ್ತಿರುವ ಈ ಮಾರ್ಗ ನೈತಿಕವಾದುದೆ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.