ವಿಡಿಯೋದಿಂದ ವೈರಲ್ ಆದಳು ನವವಿವಾಹಿತೆ

ತಂತ್ರಜ್ಞಾನದಿಂದ ಏನೇನೆಲ್ಲಾ ಸಾಧ್ಯವಾಗಿದೆ. ಅವುಗಳಲ್ಲಿ ನಗೆಯೂ ಒಂದು. ತಂತ್ರಜ್ಞಾನ ನಗಿಸುವುದಿಲ್ಲ, ಆದರೆ ನಗೆಯುಕ್ಕಿಸುವ ಒಂದಷ್ಟು ದೃಶ್ಯಗಳನ್ನು ಕಣ್ಣೆದುರು ತಂದಿಡುತ್ತದೆ. ಅದರಲ್ಲೂ ಕೆಲವು ವಿಡಿಯೋಗಳಂತೂ ಸಾಂಕ್ರಾಮಿಕ. ಪ್ಯಾರಾ ಗ್ಲೈಡಿಂಗ್ ಮಾಡಲು ಹೊರಟು ನಭಕ್ಕೆ ಚಿಮ್ಮಿದ ಮೇಲೆ ಭಯಭೀತನಾಗಿ ‘ಲ್ಯಾಂಡ್ ಕರಾದೋ ಜೀ’ ಎಂದು ಹೇಳುತ್ತಾ ಭಯದಿಂದ ಮನಸೋಇಚ್ಛೆ ಬೈದಿದ್ಸ ವಿಪಿನ್ ಸಾಹು‌ವಿನ ವಿಡಿಯೋ ವೈರಲ್ ಆದದ್ದು ನೆನಪಿರಬಹುದು. 2019ರ ಆ ವಿಡಿಯೋದ ನಂತರ ಈಗ ಓರ್ವ ಮಹಿಳೆಯ ಸರದಿ. 

ತನ್ನ ಗಂಡನ ಒತ್ತಾಯಕ್ಕೆ ಪ್ಯಾರಾಗ್ಲೈಡಿಂಗ್ ಸಾಹಸಕ್ಕಿಳಿದ ಈಕೆ ಹಾರುವ ಹೊತ್ತಲ್ಲೇ ಸ್ವಲ್ಪ ಪ್ರಮಾಣದ ಹೆದರಿಕೆ ವ್ಯಕ್ತಪಡಿಸಿದ್ದಾಳೆ. ಬೇಡ ಬೇಡ ಎನ್ನುತ್ತಲೇ ಹಾರಿದ ಅವಳು ಕೆಳಗೆ ಪಾತಾಳ‌ ನೋಡಿ ಬೆದರಿದಾಗ ಮೊದಲು ಬೈದದ್ದೇ ಗಂಡನನ್ನು‌. ಅಷ್ಟೇ ಅಲ್ಲ, ತನ್ನ ಮದುವೆಯ ಬಗೆಗೇ ವಿಷಾದ ವ್ಯಕ್ತಪಡಿಸಿದ್ದಾಳೆ.

“ಅಯ್ಯೋ ದೇವ್ರೇ, ನಂಗ್ಯಾಕಾದ್ರೂ ಮದ್ವೆ ಮಾಡ್ಸೊದ್ಯೋ.. ಹೇ ಬ್ರಿಜೇಶ್ I will kill you” ಎಂದು ಗಂಡನಿಗೆ ಬೈಯುವ ಈ ಯುವತಿ ಈಗ ಎಲ್ಲಾ ಹೆಂಡತಿಯರ ಪ್ರತಿನಿಧಿಯಾಗಿದ್ದಾಳೆ. ಜತೆಗಿರುವ ತಜ್ಞ ವೇಗ ಕಡಿಮೆ ಮಾಡಿ ಅವಳ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದರೂ ಈಕೆ ಕಣ್ಬಿಟ್ಟು ನೋಡಲು ತಯಾರಿಲ್ಲ. ವಾಗ್ಝರಿ ಮುಂದುವರಿಸುವ ಅವಳನ್ನು ಸಮಾಧಾನ ಪಡಿಸಲು ಆತ ಯತ್ನಿಸುತ್ತಾನೆ. “ಹೀಗೇ‌ ಮಾಡಿದ್ರೆ ಲ್ಯಾಂಡ್ ಕರಾದೋ ವಿಡಿಯೋದವನ ಥರ ನೀವೂ ವೈರಲ್‌ ಆಗ್ತೀರ” ಎಂಬ ಲಘು ಎಚ್ಚರಿಕೆ ಕೊಟ್ಟರೂ ಆಕೆ ಕ್ಯಾರೆ ಅನ್ನುವುದಿಲ್ಲ.

ಅಷ್ಟಕ್ಕೂ ಪ್ಯಾರಾಗ್ಲೈಡಿಂಗ್ ಎಂಬುದು ಆರಂಭವಾದದ್ದು 1966ರಲ್ಲಿ. ಯುದ್ಧವಿಮಾನ ಹಾರಿಸುವಾಗ ಅಪಾಯ ಎದುರಾದರೆ ಸುರಕ್ಷಿತವಾಗಿ ಧುಮುಕಲು‌ ಪ್ಯಾರಾಚೂಟ್ ಬಳಕೆ‌ಗೆ ಬಂತು. ದಢಾರನೆ ನೆಲಕ್ಕೆ ಬೀಳುವುದನ್ನು ಅದು ತಪ್ಪಿಸುತ್ತದೆಯೇ ವಿನಃ ಬೇಕುಬೇಕಾದಂತೆ ಅದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದರೆ ಪ್ಯಾರಾಚೂಟ್‌ನಂತೆಯೇ ಗಾಳಿಯಲ್ಲಿ ತೇಲುತ್ತಾ ಬೇಕಾದ ಕಡೆಗೆ ತಿರುಗಿಸುವಂತೆ‌ ಮತ್ತು ಬೀಸುವ ಗಾಳಿಯನ್ನು ಬಳಸಿ ಮೇಲೆ ಕೆಳಗೆ ಹೋಗುವಂತೆ ಮಾಡುವ ಪ್ಯಾರಾಗ್ಲೈಡಿಂಗ್ ಸಾಧನ ಕಂಡುಹಿಡಿದದ್ದು ಕೆನಡಾ ಮೂಲದ ಡೊಮಿನಾ ಜಾಲ್ಬರ್ಟ್ ಎಂಬ ವೈಮಾನಿಕ ವಿಜ್ಞಾನಿ. 

ತನ್ನ ವಿನ್ಯಾಸಕ್ಕೆ ಆತ 1966ರಲ್ಲಿ ಪೇಟೆಂಟ್ ಪಡೆದ ಮೇಲೆ ಪ್ಯಾರಾಗ್ಲೈಡಿಂಗ್ ಒಂದು ಉದ್ಯಮವಾಗಿ ಬೆಳೆಯಿತು. ಅದನ್ನು ಬೆನ್ನಿಗೆ ಕಟ್ಟಿಕೊಂಡು ಬೆಟ್ಟದ ಮೇಲಿಂದ ಹಾರಿ ಕಣಿವೆಯ ಅಂದ ಸವಿಯುತ್ತಾ ಗಾಳಿಯಲ್ಲಿ ತೇಲುವ ಸುಖವನ್ನು ಅನುಭವಿಸಿದವರಿಗೆ ಲೆಕ್ಕವಿಲ್ಲ. ಆದರೆ ಅದನ್ನು‌ ಚಿತ್ರೀಕರಣ ಮಾಡುವ ಸೌಕರ್ಯ ಒದಗಿ ಬಂದದ್ದು 4K ಗುಣಮಟ್ಟದ ವಿಡಿಯೋಗಳನ್ನು ಸಣ್ಣ ಸಾಧನದಿಂದ ಚಿತ್ರೀಕರಿಸುವ ಗೋಪ್ರೋ ಕ್ಯಾಮರಾ ಬಂದ‌ ಮೇಲೆ. ಇತ್ತೀಚೆಗೆ ಅಂಥ ಹಲವು ಕ್ಯಾಮರಾಗಳು ಮಾರುಕಟ್ಟೆ ಪ್ರವೇಶಿಸಿದ್ದು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿವೆ. ಹಾಗಾಗಿ ಪ್ರವಾಸಿಗರ ಕೈಯಲ್ಲಿ ಅಂಥದ್ದೊಂದು ಕ್ಯಾಮರಾ ಮಾಮೂಲು. ಪ್ಯಾರಾಗ್ಲೈಡಿಂಗ್‌ನಂಥ ವಿಶೇಷ ಸಂದರ್ಭಗಳನ್ನು ವಿಡಿಯೋದಲ್ಲಿ‌ ದಾಖಲಿಸುವುದು‌ ಹೆಚ್ಚಿನವರ ಹಂಬಲ. ಅಂಥ ಅವಿಸ್ಮರಣೀಯ ಘಟನೆಗಳಲ್ಲಿ ಅಲ್ಲೊಲ ಕಲ್ಲೋಲ ಆದಾಗ ಅದು ವೈರಲ್ ಆಗಿ ಎಲ್ಲರ‌ ಪಾಲಿಗೂ ಅವಿಸ್ಮರಣೀಯ ಆಗುತ್ತದೆ.  

ಈ ರೀತಿ ಚೀರಾಡಿದ ಆಕೆ ಯಾರು, ಏನು, ಎತ್ತ ಎಂಬ ಹೆಚ್ಚಿನ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಅವಳ ಗಂಡ ಬ್ರಿಜೇಶ್ ಮಾತ್ರ ತೆರೆಯ ಮರೆಯಲ್ಲೇ ಇದ್ದು ಫೇಮಸ್ ಆದ. ಆತ ಹೊಸದಾಗಿ ಮದುವೆಯಾದವನೇ ಇರಬೇಕು ಎಂಬುದು ಗುಮಾನಿ. ಅನುಭವಿ ಗಂಡನಾಗಿದ್ದರೆ ಆತ ಅಂಥ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಅಷ್ಟೆಲ್ಲ ಚೀರಾಡಿದ‌ ಮೇಲೆಯೂ ಅವಳೇನೋ ಲ್ಯಾಂಡ್ ಆಗಿ ಸುರಕ್ಷಿತವಾಗಿದ್ದಾಳೆ. ಆದರೆ ಬ್ರಿಜೇಶ್ ಕತೆ ಏನಾಯಿತು ಎಂಬುದು ಇನ್ನೂ ವರದಿಯಾಗಿಲ್ಲ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.