ಸ್ಮಾರ್ಟ್‌ ಫೋನ್‌ಗಳ ಹೊಸ ಅವತಾರ| ಮಡಿಚುವ ಫೋನ್‌ಗಳು ಮಾಡುತಿವೆ ಸದ್ದು

ಮೊಬೈಲ್‌ ಫೋನ್‌ಗಳು ಕಾಲದಿಂದ ಕಾಲಕ್ಕೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಗಮನಸೆಳೆಯುತ್ತಿವೆ. ಕೇವಲ ಮಾತಿನ ಸಂವಹನಕ್ಕೆಂದು ಅಭಿವೃದ್ಧಿಯಾದ ಈ ಸಾಧನ ಈಗ ಎಲ್ಲ ಕೆಲಸಗಳನ್ನು ಮಾಡುತ್ತಿದೆ. ಈ ರೂಪಾಂತರಗಳ ಸಾಲಿಗೆ ಈಗ ಹೊಸ ಸೇರ್ಪಡೆ

ಮೂರು ದಶಕಗಳ ಹಿಂದೆ ಮೊಬೈಲ್‌ ಒಂದು ಅಚ್ಚರಿ. ಎಲ್ಲಿ ಬೇಕಾದರೂ ನಿಂತು, ದೂರದಲ್ಲಿ ಎಲ್ಲೋ ಇರುವವರೊಂದಿಗೆ ಮಾತನಾಡುವ ಸಾಧ್ಯತೆಯೇ ಒಂದು ಬೆರಗು. ದೊಡ್ಡ ಗಾತ್ರದಲ್ಲಿ ಈ ಫೋನ್‌ ನಿಧಾನವಾಗಿ ಚಿಕ್ಕದಾಯಿತು. ಆಕರ್ಷಕವಾಯಿತು. ಬಣ್ಣದೊಂದಿಗೆ ಬಂತು. ಹಾಡುಗಳನ್ನು ಕೇಳುವಂತಾಯಿತು. ಫೋಟೋ ವಿಡಿಯೋಗಳನ್ನು ಸೆರೆ ಹಿಡಿಯುವಂತೆಯೂ ಆಯಿತು. ಮೊಬೈಲ್‌ ಫೋನ್‌ಗಳು ಹೀಗೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡು ಬರಲಾರಂಭಿಸಿದವು. ಸಂವಹನದ ಸಾಧ್ಯತೆಯನ್ನು ವಿಸ್ತೃತವಾಗಿಸುವ ಜೊತೆಗೆ, ಈಗ ಮನರಂಜನೆಯ ಸಾಧನವೂ ಆಗಿ ಬಿಟ್ಟಿದೆ.

ತಂತ್ರಜ್ಞಾನದ ಸಾಧ್ಯತೆಗಳು ಹೆಚ್ಚು ಹೆಚ್ಚು ವಿಶಾಲವಾಗುತ್ತಾ ಬಂದಂತೆ, ಫೋನಿನ ವೈಶಿಷ್ಟ್ಯಗಳು ವಿಸ್ಮಯವೆನಿಸುವಷ್ಟು ವೈವಿಧ್ಯಮಯವಾಗಿವೆ. ಸ್ಲೈಡರ್‌, ಫ್ಲಿಪ್‌ ರೂಪದಲ್ಲಿದ್ದ ಫೋನ್‌ಗಳನ್ನು ನೋಡಿದ್ದ ನಮಗೆ, ಈಗ ಮಡಿಚಿಟ್ಟುಕೊಳ್ಳುವ ಫೋನ್‌ಗಳು ನೋಡುವ, ಬಳಸುವ ಅವಕಾಶ ಲಭ್ಯವಾಗುತ್ತಿದೆ.

ಜಗತ್ತಿನ ಪ್ರತಿಷ್ಠಿತ ಫೋನ್‌ ಕಂಪನಿಗಳು ಮಡಿಚ್ಚಿಟ್ಟುಕೊಳ್ಳಬಹುದಾದ ಐಷಾರಾಮಿ ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಸ್ಪರ್ಧೆಗೆ ಇಳಿದಿವೆ. ನವೀನ ಆವಿಷ್ಕಾರಗಳೊಂದಿಗೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಸದಾ ಬಿಗಿಯಾಗಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದರೆ ಅಪ್ರಸ್ತುತವಾಗಿ ಬಿಡುವುದು ಸತ್ಯ. ಇಂಥ ಸವಾಲನ್ನು ಸ್ಯಾಮ್‌ ಸಂಗ್‌, ಮೋಟೋರೊಲಾ, ಎಲ್‌ಜಿ ಫೋನ್‌ಗಳು ಎದುರಿಸಿವೆ.

ಒಂದು ಕಾಲದಲ್ಲಿ ಸ್ಯಾಮ್‌ಸಂಗ್‌ ಮತ್ತು ಆಪಲ್‌ ಕಂಪನಿಗಳು ಮುಂಚೂಣಿ ಪ್ರತಿಸ್ಪರ್ಧಿಗಳಾಗಿದ್ದರು. ಆದರೆ ಸ್ಯಾಮ್‌ಸಂಗ್‌ ಹೊಸತನಗಳಿಲ್ಲದೆ ಹಿನ್ನಡೆ ಕಂಡಿತು. ಆಪಲ್‌ ಕೂಡ ಹೊಸ ಆವಿಷ್ಕಾರಗಳಿಲ್ಲದ ಮಾರುಕಟ್ಟೆಯಲ್ಲಿ ತನ್ನ ನೆಲೆ ಗಟ್ಟಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಿಸಿತು.

ಇಂಥ ಹೊತ್ತಲ್ಲಿ ಸ್ಯಾಮ್‌ಸಂಗ್‌ ಫೋಲ್ಡಬಲ್‌ (ಮಡಿಚಬಲ್ಲ) ಫೋನ್‌ ಅನ್ನು ಅಭಿವೃದ್ಧಿಪಡಿಸುತ್ತಿರುವ ಸುಳಿವನ್ನು ಎರಡು ವರ್ಷಗಳ ಹಿಂದೆ ಬಿಟ್ಟುಕೊಟ್ಟಿತು. ಈಗ ಫೋನ್‌ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್‌ 26ಕ್ಕೆ ಲೋಕಾರ್ಪಣೆಯಾಗಲಿದೆ. ಸ್ಯಾಮ್‌ಸಂಗ್‌ ಈ ಹೊಸ ಫೋನ್‌ ಕುರಿತ ವಿಷಯ ಸೋರಿಕೆಯಾದಾಗಿನಿಂದ ಅಪಲ್‌ ನಿದ್ರೆಗೆಡಿಸಿಕೊಂಡಿದೆ.

ಸ್ಟೀವ್‌ ಜಾಬ್ಸ್‌ ಅಕಾಲಿಕ ಮರಣದ ನಂತರ ಆಪಲ್‌ ಚುಕ್ಕಾಣಿ ಹಿಡಿದ ಟಿಮ್‌ ಕುಕ್‌ ಆರು ತಿಂಗಳಿಗೆ ಒಂದು ಮಾಡೆಲ್‌ ಪರಿಚಯಿಸುತ್ತಾ ಬಂದರು, ಆಪಲ್‌ ಜನಪ್ರಿಯತೆ ಎಂದಿನಂತೆ ಉಳಿಯಲಿಲ್ಲ. ವಿಶೇಷತೆಗಳೆ ಇಲ್ಲವೆಂಬ ಕಾರಣಕ್ಕೆ ಹಿಂದಿನ ಸೆಳೆತವನ್ನೂ ಕಳೆದುಕೊಂಡಿತ್ತು. ಸ್ಯಾಮ್‌ ಸಂಗ್‌ ನವೀನ ಆಲೋಚನೆಯಿಂದ ಕಂಗೆಟ್ಟಿರುವ ಆಪಲ್‌ ಅಂಥದ್ದೇ ಫೋಲ್ಡಬಲ್‌ ಫೋನ್‌ ಮತ್ತು ಟ್ಯಾಬ್‌ ಅನ್ನು ಹೊರತರುವುದಕ್ಕೆ ತೋಳೇರಿಸಿ ಸಿದ್ಧವಾಗಿದೆ.

ಈ ದೈತ್ಯ ಸಂಸ್ಥೆಗಳ ನಡುವೆ ಪಿಕ್ಸೆಲ್‌ ಫೋನ್‌ನೊಂದಿಗೆ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೆ ಕಾಲಿಟ್ಟಿದ್ದ ಗೂಗಲ್‌ ಕೂಡ ಹಿಂದೆ ಉಳಿದಿಲ್ಲ. ಅದೂ ಫೋಲ್ಡಬಲ್‌ ಫೋನ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಮುಂದಾಗಿದೆ. ಈ ನಡುವೆ ಸ್ವತಃ ಸ್ಯಾಮ್‌ಸಂಗ್‌ ತನ್ನ ಫೋಲ್ಡಬಲ್‌ ಫೋನ್‌ ಟೆಕ್ನಾಲಜಿಯನ್ನು ಗೂಗಲ್‌ಗೆ ಮಾರಿಕೊಳ್ಳುವ ಸುದ್ದಿಯೂ ಹೊರಬಿದ್ದಿದೆ.

ಏನೀ ಫೋಲ್ಡಬಲ್‌ ಫೋನಿನ ವಿಶೇಷ?

ಫೋಲ್ಡಬಲ್‌ ಫೋನ್‌ ಯಾಕೆ ಖರೀದಿಸಬೇಕು ಎಂಬ ಆಕರ್ಷಕ ಶೀರ್ಷಿಕೆಗಳು ಆನ್‌ಲೈನ್‌ಗಳಲ್ಲಿ ಗಮನಸೆಳೆಯುತ್ತಿವೆ. ನಿಜಕ್ಕೂ ಈ ಫೋನ್‌ಗಳನ್ನು ಯಾಕೆ ಖರೀದಿಸಬೇಕು?

ಡಬಲ್‌ ಸ್ಕ್ರೀನ್‌, 6.5 ರಿಂದ 7.2 ಇಂಚ್‌ ಗಾತ್ರದಲ್ಲಿ ಹೊರಬರುತ್ತಿರುವ ಈ ಫೋನ್‌, ಸ್ಲಿಮ್‌ ಆದ ಅಂಚನ್ನು ಹೊಂದಿದೆ. ಡಬಲ್‌ ಸ್ಕ್ರೀನ್‌ ಆದರೂ ಆಪ್ತವೆನಿಸುವಂತಿದೆ.

ಡಬಲ್‌ ಸ್ಕ್ರೀನ್‌ ಬಿಚ್ಚಿದರೆ ದೊಡ್ಡ ಪರದೆಯಾಗುತ್ತದೆ. ಇಲ್ಲವೇ ಎರಡೂ ಪರದೆಗಳನ್ನು ಪ್ರತ್ಯೇಕವಾಗಿ ಬಳಸಬಹುದು. ಎರಡರಲ್ಲೂ ಬೇರೆ ಅಪ್ಲಿಕೇಷನ್‌ ಬಳಸಬಹುದು.

ಒಂದೇ ಬಾರಿಗೆ ಬಹು ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿಸುತ್ತವೆ ಈ ಫೋಲ್ಡಬಲ್‌ ಫೋನ್‌ಗಳು. ವಿಡಿಯೋ ನೋಡುತ್ತಾ, ಚಾಟ್‌ ಮಾಡಬಹುದು. ಗೂಗಲ್‌ನಲ್ಲಿ ಯಾವುದಾದರೂ ಮಾಹಿತಿಯನ್ನು ಹುಡುಕಲೂಬಹುದು. ಮೇಲ್‌ ಬರೆಯಬಹುದು.  12ಜಿಬಿ ವರೆಗೆ ರ್ಯಾಮ್‌ ಹೊಂದಿರುವ ಈ ಫೋನ್‌ಗಳು ಏಕಕಾಲಕ್ಕೆ ಇಷ್ಟೆಲ್ಲಾ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿವೆ.  ಇನ್ನು ಮೆಮೊರಿಯಂತೂ 500 ಜಿಬಿಗಳವರೆಗೆ ಇದ್ದು, ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವ ಅವಕಾಶಕ್ಕೆ ಎಣೆಯೇ ಇಲ್ಲ. ಎರಡು ಪರದೆಗಳಿಗೆ ಜೋಡಿಸಲಾದ ಎರಡು ಪ್ರತ್ಯೇಕ ಬ್ಯಾಟರಿಗಳು ಒಟ್ಟಾಗಿ ದೀರ್ಘಕಾಲದ ಕೆಲಸ ಮಾಡುವುವುದರಿಂದ ಫೋಲ್ಡಬಲ್‌ ಫೋನ್‌ಗಳು ಹೆಚ್ಚು ಕಾಲ ಸೇವೆಯನ್ನು ನೀಡುತ್ತವೆ. ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌ ಬಿಚ್ಚಿದರೆ ಟ್ಯಾಬ್‌ನಷ್ಟು ಅಗಲವಾಗುವಂತಿದೆ. ಇನ್ನು ಮೋಟೋರೋಲಾ ಅವರ ರೇಜರ್‌ ಆರ್‌, ಶಿಯೋಮಿ ಅವರ ಮಿಕ್ಸ್‌ ಫ್ಲೆಕ್ಸ್‌, ಎಲ್‌ ಜಿ ಅವರ ಬೆಂಡಿ, ಹುವಾಯಿ ಅವರ ಮೇಟ್‌ ಎಕ್ಸ್‌ ಫೋನ್‌ಗಳನ್ನು ತನ್ನದೇ ವೈಶಿಷ್ಟ್ಯಗಳೊಂದಿಗೆ ಸಿದ್ಧವಾಗುತ್ತಿವೆ. ಏಪ್ರಿಲ್‌ನಂತರ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಲ್ಲಿ ಹೊಸ ರೋಮಾಂಚನ, ಹೊಸ ಸಂಚಲನದ ಸುದ್ದಿಗಳು ಕೇಳಿ ಬರಲಿವೆ.

%d bloggers like this: