ಸ್ಮಾರ್ಟ್‌ ವಾಚ್‌ ಇನ್ನೂ ಸ್ಮಾರ್ಟ್‌ ಆಗಿದೆ; ನಿಮ್ಮ ಕೈ ಏನು ಮಾಡುತ್ತಿದೆ ಎಂದು ಹೇಳುತ್ತದೆ!

ಸ್ಮಾರ್ಟ್‌ ವಾಚ್‌ಗಳು ಇನ್ನೂ ಸ್ಮಾರ್ಟ್‌ ಆಗಿವೆ; ನಿಮ್ಮ ಕೈ ಏನು ಮಾಡುತ್ತಿದೆ ಎಂದು ಹೇಳುತ್ತದೆ! ಸ್ಮಾರ್ಟ್‌ ವಾಚ್‌ಗಳು ಈಗ ನಮ್ಮ ಸಮಯ ಹೇಳುವ ಸಾಧನವಾಗಿ ಅಷ್ಟೇ ಉಳಿದಿಲ್ಲ. ನಮ್ಮ ನಮ್ಮ ಆರೋಗ್ಯದ ಸಂಗತಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಲಾರಂಭಿಸಿವೆ. ಈಗ ಇನ್ನೂ ಒಂದು ಹೆಜ್ಜೆ ಮುಂದುವರೆದಿದೆ

ಸ್ಮಾರ್ಟ್ ವಾಚ್‌ಗಳು ಸಂವಹನವನ್ನು ಬಹಳ ಸರಳೀಕರಿಸಿದ ಸಾಧನಗಳು. ಮೊಬೈಲ್‌ ಫೋನಿಗೆ ಬರುವ ಸಂದೇಶ, ಕರೆ, ಮೇಲ್‌ ಇತ್ಯಾದಿಗಳನ್ನು ಮುಂಗೈಯಲ್ಲೇ ನೋಡುವುದಕ್ಕೆ ಸಾಧ್ಯವಾಗಿದ್ದು ಈ ಸಾಧನದಿಂದ. ಅಷ್ಟೇ ಅಲ್ಲ,
ನಿಮ್ಮ ಎದೆ ಬಡಿತ ಹೇಗಿದೆ? ಒತ್ತಡ ಎಷ್ಟಿದೆ? ನೀರು ಎಷ್ಟು ಕುಡಿದಿರಿ? ಎಷ್ಟು ಹೆಜ್ಜೆ ನಡೆದಿರಿ? ಎಂಬ ಅಂಶಗಳನ್ನು ಸೆನ್ಸಾರ್‌ಗಳ ಮೂಲಕ ದಾಖಲಿಸಿ, ನಮ್ಮ ಆರೋಗ್ಯದ ಮೇಲೆ ನಿಗಾ ಇಡುವುದಕ್ಕೆ ನೆರವಾಯಿತು.
ಈಗ ಈ ಸ್ಮಾರ್ಟ್‌ ವಾಚ್‌ಗಳು ಇನ್ನಷ್ಟು ಸ್ಮಾರ್ಟ್‌ ಆಗಿವೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ನಿಮ್ಮ ಮುಂಗೈಯ ಚಲನೆಯನ್ನು ಗ್ರಹಿಸಿ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಗ್ರಹಿಸಿಕೊಳ್ಳಬಲ್ಲವು ಎಂದಿದ್ದಾರೆ. ಹಲ್ಲುಜ್ಜುವುದು, ಸಿಗರೇಟ್‌ ಸೇದುವುದು ಎಲ್ಲವನ್ನೂ ಗ್ರಹಿಸಬಲ್ಲವಂತೆ.

ಅಮೆರಿಕದ ಕಾರ್ನಿಗಿ ಮೆಲ್ಲಾನ್‌ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್‌ ವಾಚ್‌ ಅನ್ನು ಬಳಸಿ, ಅದನ್ನು ತೊಟ್ಟಿರುವ ವ್ಯಕ್ತಿ ಟೈಪಿಂಗ್‌ ಮಾಡುತ್ತಿದ್ದಾರೊ, ಬಟ್ಟೆ ತೊಳೆಯುತ್ತಿದ್ದಾರೊ, ನಾಯಿಯನ್ನು ಮುದ್ದು ಮಾಡುತ್ತಿದ್ದಾರೊ, ಗಿಡವನ್ನು ಕತ್ತರಿಸುತ್ತಿದ್ದೀರೊ ಎಂಬುದನ್ನು ತಿಳಿಯಲು ಸಾಧ್ಯವೇ ಎಂದು ಪರೀಕ್ಷಿಸಿದರು.
ಅದಕ್ಕಾಗಿ ವಾಚಿನ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಸಣ್ಣ ಬದಲಾವಣೆ ಮಾಡಿದರು. ಆಕ್ಸಲೆರೋಮೀಟರ್‌ ಅಳವಡಿಸಿ, ಕೈಯ ಚಲನೆಯನ್ನು ಗ್ರಹಿಸುವಂತೆ ಮಾಡಿದರು. ಜೊತೆಗೆ ಕೆಲವು ಪ್ರಕರಣಗಳಲ್ಲಿ 25 ವಿವಿಧ ಬಯೋ ಅಕಾಸ್ಟಿಕ್‌ ಸೌಂಡ್‌ಗಳನ್ನು ಬಳಸಿ ಕೈಯ ಚಟುವಟಿಕೆಗಳನ್ನು ಗುರುತಿಸಲು ಪ್ರಯತ್ನಿಸಲಾಯಿತು. ಇದರಲ್ಲಿ ಶೇ. 95ರಷ್ಟು ಕರಾರುವಕ್ಕಾದ ಫಲಿತಾಂಶ ಲಭಿಸಿದೆ.
ಸಂಶೋಧನಾ ತಂಡದಲ್ಲಿರುವ ಸಹಾಯಕ ಪ್ರಾಧ್ಯಾಪಕ ಕ್ರಿಸ್‌ ಹ್ಯಾರಿಸನ್‌ ಅವರು ಹೇಳುವುದೇನೆಂದರೆ, ” ನಿತ್ಯದ ದೇಹದ ಚಟುವಟಿಕೆಗಳನ್ನು ಅತಿ ಸೂಕ್ಷ್ಮವಾಗಿ, ಅತ್ಯಂತ ಕರಾರುವಕ್ಕಾಗಿ ದಾಖಲಿಸುವಲ್ಲಿ ಸ್ಮಾರ್ಟ್‌ ವಾಚ್‌ಗಳು ಬಹಳ ಮುಖ್ಯ ಪಾತ್ರವಹಿಸಬಲ್ಲವು. ಹಾಗಾಗಿ ಸಮಯ ಮತ್ತು ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಸಂವಹನವನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗುತ್ತದೆ”.
ಸದ್ಯ ನಮ್ಮ ಸ್ಮಾರ್ಟ್‌ಫೋನ್‌ಗಳೇ ವಾಹನ ಚಲಾಯಿಸುವಾಗ, ಎಸ್ಸೆಮ್ಮೆಸ್‌ಗಳನ್ನು ಬ್ಲಾಕ್‌ ಮಾಡಿಬಿಡುತ್ತವೆ. ಹಾಗಾಗಿ ಸ್ಮಾರ್ಟ್‌ ವಾಚ್‌ಗಳನ್ನು ಕೈಗಳ ಚಲನೆಗಳ ಮೂಲಕ ಅವರ ಕೆಲಸವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅಡ್ಡಿಪಡಿಸದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಆರೋಗ್ಯದ ಮೇಲಾಗುವ ಪರಿಣಾಮವನ್ನು ಬಳಕೆದಾರನಿಗೆ ಎಚ್ಚರ ನೀಡಬಹುದು. ಆರೋಗ್ಯ ಸಂಬಂಧಿಸಿದ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಅವು ಆರೋಗ್ಯದ ಬಗ್ಗೆ ಕಾಳಜಿಯನ್ನು ಮತ್ತು ದೇಹದಲ್ಲಾಗುವ ಬದಲಾವಣೆಗಳನ್ನು ತಿಳಿಸಿ ಎಚ್ಚರಿಸುತ್ತದೆ. ಉದಾಹರಣೆಗೆ ಸತತವಾಗಿ ಟೈಪ್‌ ಮಾಡುತ್ತಿದ್ದರೆ, ರಿಪಿಟಿಟಿವ್‌ ಸ್ಟ್ರೇನ್‌ ಇಂಜುರಿಯ ಸಾಧ್ಯತೆಯ ಬಗ್ಗೆ ಎಚ್ಚರಿಸುತ್ತದೆ.
ಕಾರ್ನಿಗಿ ವಿಶ್ವವಿದ್ಯಾಲಯದ ತಂಡ 50 ಜನರನ್ನು ಆಯ್ಕೆ ಮಾಡಿಕೊಂಡು 1000 ಗಂಟೆಗಳ ಕಾಲ ವಿಶೇಷವಾಗಿ ಪ್ರೊಗ್ರಾಮ್‌ ಮಾಡಿದ ಸ್ಮಾರ್ಟ್‌ ವಾಚ್‌ ಕಟ್ಟಿದ ಅವರ ಕೈಗಳ ಚಲನೆಯನ್ನು ಗಮನಿಸಿವೆ. ಅವುಗಳನ್ನು ಆಧರಿಸಿ ಸಂಶೋಧನೆಯ ನಿಖರತೆಯನ್ನು ತಂಡವು ಪರಿಶೀಲಿಸಿದ್ದು, ಈ ಹೊಸ ಸಾಧ್ಯತೆ ಮನುಷ್ಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವಲ್ಲಿ, ನಿತ್ಯದ ಚಟುವಟಿಕೆಗಳಲ್ಲಿ ಒತ್ತಡವನ್ನು ನಿಯಂತ್ರಿಸುವಲ್ಲಿ ಮಹತ್ವದ ರೀತಿಯಲ್ಲಿ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿದೆ.