ಇಗ್ನೋಬೆಲ್‌ ಪ್ರಶಸ್ತಿ | ಪಿಜ್ಜಾ ತಿಂದರೆ ಸಾವಿನಿಂದ ರಕ್ಷಣೆ, ಕೆರೆತಕ್ಕೆ ಶಾಂತಿ ಪ್ರಶಸ್ತಿ!!

ಕಳೆದ 29 ವರ್ಷಗಳಿಂದ ಇಗ್ನೋಬೆಲ್‌ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವಿಜ್ಞಾನ, ವೈದ್ಯವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹುಟ್ಟಿಸುವ ಮಹತ್ವ ಉದ್ದೇಶದೊಂದಿಗೆ ನೀಡಲಾಗುವ ಈ ಪ್ರಶಸ್ತಿಗಳು ಈ ಬಾರಿಗೆ ಪುರಸ್ಕರಿಸಲಾಯಿತು. ವಿವರಗಳು ನಿಮ್ಮನ್ನು ನಗಿಸಲಿವೆ, ರಂಜಿಸಲಿವೆ

ಮೊದಲು ನಗಿಸಿ, ಆಮೇಲೆ ಆಲೋಚಿಸುವಂತೆ ಮಾಡುವ ಇಗ್ನೋಬೆಲ್‌ ಪ್ರಶಸ್ತಿಗಳ ಘೋಷಣೆಯಾಗಿದೆ. ಎಂದಿನಂತೆ ಈ ಬಾರಿಗೆ ನಿಮ್ಮ ಹೊಟ್ಟೆ ಹುಣ್ಣಾಗಿಸುವಂತೆ ಮಾಡುವ ಸಂಶೋಧನೆಗಳು ಗೌರವ ಪಡೆದಿವೆ.
ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆದ ನಡೆದ ಸಮಾರಂಭದಲ್ಲಿ ಹತ್ತು ವಿಭಾಗಗಳ ಪ್ರಶಸ್ತಿಗಳನ್ನು ನೀಡಲಾಯಿತು. ಹವ್ಯಾಸವನ್ನು ಕೇಂದ್ರ ವಿಷಯವಾಗಿಸಿಕೊಂಡು ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ನೀಡುವ ದಿ ಆನಲ್ಸ್‌ ಆಫ್‌ ಇಂಪ್ರಾಬಲ್ ಜರ್ನಲ್‌ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದ ವಿಡಿಯೋ

ವೈದ್ಯ ವಿಭಾಗ

ಪಿಜ್ಜಾ ಜಂಕ್‌ ಫುಡ್ ಎಂದು ಜರೆಯುತ್ತೇವೆ. ಅದು ಜೀವ ರಕ್ಷಕ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಇಟಲಿಯಲ್ಲಿ ಪಿಜ್ಜಾ ಸಿದ್ಧಪಡಿಸಿ ಅಲ್ಲಿಯೇ ತಿಂದರೆ ಮನುಷ್ಯ ಅನಾರೋಗ್ಯ ಮತ್ತು ಸಾವಿನಿಂದ ರಕ್ಷಿಸಿಕೊಳ್ಳಬಹುದು ಎಂಬ ಸಂಶೋಧನೆಗೆ ಸಿಲ್ವಾನೊ ಗ್ಯಾಲಸ್‌ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ವೈದ್ಯ ಶಿಕ್ಷಣ ವಿಭಾಗ

ಪ್ರಾಣಿಗಳಿಗೆ ನೀಡುವ ಕ್ಲಿಕರ್‌ ತರಬೇತಿಯನ್ನು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಗೆ ನೀಡಬಹುದು ಎಂಬ ಸಂಶೋಧನೆ ಮಾಡಿದ ಕ್ಯಾರೆನ್‌ ಪ್ರಾಯರ್‌, ಥೆರೆಸಾ ಮ್ಯಾಕಿಯೋನ್‌ಗೆ ಪ್ರಶಸ್ತಿ ಸಂದಿದೆ.

ದೇಹಶಾಸ್ತ್ರ ವಿಭಾಗ

ಬಟ್ಟೆ ತೊಟ್ಟ ಮತ್ತು ನಗ್ನವಾಗಿರುವ ಪೋಸ್ಟ್‌ಮ್ಯಾನ್‌ ವೃಷಣಗಳ ತಾಪಮಾನದಲ್ಲಾಗುವ ವ್ಯತ್ಯಾಸ ಕುರಿತು ಅಧ್ಯಯನ ನಡೆಸಿದ ರೋಜರ್‌ ಮಿಸೆಟ್‌ ಮತ್ತು ಬೌರಸ್‌ ಬೆಂಗೊಡಿಫಾಗೆ ಅವರಿಗೆ ಪ್ರಶಸ್ತಿ ಲಭಿಸಿದೆ.

ಜೀವಶಾಸ್ತ್ರ ವಿಭಾಗ

ಆಯಸ್ಕಾಂತೀಯ ಗುಣಪಡೆದ ಸತ್ತ ಜಿರಲೆಗಿಂತ, ಆಯಸ್ಕಾಂತೀಯ ಗುಣ ಪಡೆದ ಜೀವಂತ ಜಿರಲೆ ಭಿನ್ನವಾಗಿ ವರ್ತಿಸುತ್ತದೆ ಎಂಬ ಸಂಶೋಧನೆ ಮಾಡಿದ ಲಿಂಗ್‌ ಜುನ್‌ ಕಾಂಗ್‌, ಹರ್ಬರ್ಟ್‌ ಕ್ರೆಪಾಜ್‌, ಅಗ್ನಿಸ್ಕಾ ಗೊರೆಕಾ, ಅಲೆಕ್ಸಾಂಡರ್‌ ಅರ್ಬನೇಕ್‌, ರೈನರ್‌ ಡಮ್ಕೆ ಮತ್ತು ಟೋಮಜ್‌ ಪ್ಯಾಟೆರೆಕ್‌ ಅವರಿಗೆ ಪ್ರಶಸ್ತಿ ಲಭಿಸಿದೆ.

ರಸಾಯನಶಾಸ್ತ್ರ ವಿಭಾಗ

ಐದು ವರ್ಷದ ಮಗು ಒಂದು ದಿನಕ್ಕೆ ಎಷ್ಟು ಜೊಲ್ಲು ಉತ್ಪಾದಿಸುತ್ತದೆ ಎಂದು ಅಧ್ಯಯನ ಮಾಡಿದ ಶಿಗೆರು ವಾಟಾಂಬೆ, ಮಿನೆಕೊ ಓಹ್ನಿಶಿ, ಕೊರಿ ಇಮಾಯಿ, ಎಜಿ ಕವಾನೊ, ಸಿಜಿ ಇಗಾರ್ಶಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಎಂಜಿನಿಯರಿಂಗ್‌ ವಿಭಾಗ

ಮಕ್ಕಳ ಡೈಪರ್‌ ಬದಲಿಸುವ ಯಂತ್ರ ರೂಪಿಸಿದ ಇಮಾನ್‌ ಫರಾಹ್‌ಬಕ್ಷ್‌ ಅವರಿಗೆ ಲಭಿಸಿದೆ.

ಅರ್ಥಶಾಸ್ತ್ರ ವಿಭಾಗ

ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹರಡುವಲ್ಲಿ ಯಾವ ದೇಶ ಕಾಗದದ ಹಣ ಉತ್ತಮ ಎಂಬುದನ್ನು ಸಂಶೋಧನೆಯ ಮಾಡಿದ ಹಬಿಪ್‌ ಗೆಡಿಕ್‌, ತಿಮೋತಿ ವಾಸ್‌ ಮತ್ತು ಆಂಡ್ರೀಯಾ ವಾಸ್‌ ಅವರಿಗೆ ಪ್ರಶಸ್ತಿ ಲಭಿಸಿದೆ.

ಮನಃಶಾಸ್ತ್ರ ವಿಭಾಗ

ಪೆನ್ನನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಸಂತೋಷವನ್ನು ಉಂಟು ಮಾಡುತ್ತದೆ ಮತ್ತು ಮಾಡುವುದಿಲ್ಲ ಎಂಬುದನ್ನು ಕಂಡುಕೊಂಡ ಫ್ರಿಟ್ಜ್‌ ಸ್ಟ್ರಾಕ್‌ ಅವರಿಗೆ ಲಭಿಸಿದೆ.

ಭೌತಶಾಸ್ತ್ರ ವಿಭಾಗ

ವೊಂಬಾಟ್‌ಗಳು ಯಾಕೆ ಮತ್ತು ಹೇಗೆ ಚೌಕಾಕಾರದ ಹಿಕ್ಕೆಯನ್ನು ಹಾಕುತ್ತವೆ ಎಂಬುದನ್ನು ಕಂಡುಹಿಡಿದ ಪ್ಯಾಟ್ರಿಶಿಯಾ ಯಾಂಗ್‌, ಅಲೆಕ್ಸಾಂಡರ್‌ ಲೀ, ಮೈಲ್ಸ್‌ ಚಾನ್‌, ಅಲಿನ್‌ ಮಾರ್ಟಿನ್‌, ಆಶ್ಲೆ ಎಡ್ವರ್ಡ್ಸ್‌, ಸ್ಕಾಟ್‌ ಕಾರ್ವರ್‌ ಮತ್ತು ಡೇವಿಡ್‌ ಹು ಅವರಿಗೆ ಪ್ರಶಸ್ತಿ ಸಂದಿದೆ.

ಕಡೆಯದಾಗಿ

ಶಾಂತಿ ಪುರಸ್ಕಾರ

ತುರಿಕೆ ಇರುವಲ್ಲಿ ಕೆರೆದರೆ ಎಷ್ಟು ಸುಖ ಸಿಗುತ್ತದೆ ಎಂಬುದನ್ನು ಅಳೆಯಲು ಯತ್ನಿಸಿದ ಗಾದಾ ಬಿನ್ ಸೈಫ್‌, ಅಲೆಕ್ಸಾಂಡ್ರು ಪಪಿಯು, ಲಿಲಿಯಾನ ಬನಾರಿ, ಫ್ರಾನ್ಸಿಸ್‌ ಮ್ಯಾಕ್‌ಗ್ಲೋನ್‌, ಶ್ವಾ ಕ್ವಾಟ್ರಾ, ಯಿಯಾಂಗ್‌ ಹುಕ್‌ ಚಾನ್‌ ಮತ್ತು ಗಿಲ್‌ ಯೊಸಿಪೊವಿಚ್‌ ಅವರಿಗೆ ಲಭಿಸಿದೆ.