38 ಲಕ್ಷ ವರ್ಷ ಹಳೇ ಬುರುಡೆ ಪತ್ತೆ; ಮಾನವ ವಿಕಾಸ ಸಿದ್ಧಾಂತಕ್ಕೆ ಹೊಸ ತಿರುವು

ಮನುಷ್ಯನ ವಿಕಾಸದಲ್ಲಿ ಇಂದಿಗೂ ಮಿಸ್ಸಿಂಗ್‌ ಲಿಂಕ್‌ಗಳು ಹಲವು ಇವೆ. ಅವುಗಳನ್ನು ಅರಿಯುವ ನಿಟ್ಟಿನಲ್ಲಿ ಸಂಶೋಧನೆಗಳು, ಅಧ್ಯಯನಗಳು ನಡೆಯುತ್ತಿವೆ. ಇಥಿಯೋಪಿಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಅಧ್ಯಯನದಲ್ಲಿ ಮಹತ್ವದ ಪುರಾವೆಯೊಂದು ದೊರೆತಿದೆ

ಇಥಿಯೋಪಿಯಾದ ಆಫಾರ್‌ ಪ್ರದೇಶಲ್ಲಿ ಕಳೆದ ಹದಿನೈದು ವರ್ಷಗಳಿಂದ ಮಾನವಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನಾ ಯೋಜನೆಯೊಂದು ಸಕ್ರಿಯವಾಗಿದೆ. ಮೂರು ವರ್ಷಗಳ ಹಿಂದೆ ಅಂದರೆ 2016ರ ಫೆಬ್ರವರಿ 16ರಲ್ಲಿ ಮನುಷ್ಯನ ಮೇಲ್ದವಡೆ ಪತ್ತೆ ಮಾಡಿತ್ತು. ಅದೇ ಜಾಗದಲ್ಲಿ ಇತ್ತೀಚೆಗೆ ಸುಮಾರು ಹದಿನಾರು ಗಂಟೆಗಳ ಅಧ್ಯಯನ ನಡೆಸಿದ ತಂಡಕ್ಕೆ ಆ ದವಡೆಯನ್ನು ಹೊಂದಿದ್ದ ತಲೆಬುರುಡೆ ದೊರೆತಿದೆ. ಇದು 38 ಲಕ್ಷ ವರ್ಷಗಳಷ್ಟು ಹಳೆಯದು ಎಂದು ತಜ್ಞರು ಹೇಳಿದ್ದಾರೆ.

ಈ ಕುರಿತು ಪೂರ್ಣ ಪ್ರಮಾಣದ ವಿಶ್ಲೇಷಣೆ ಮತ್ತು ತಲೆಬುರುಡೆ ಪತ್ತೆಯಾದ ಸ್ಥಳದ ವಿವರಗಳನ್ನು ನೇಚರ್‌ ಪತ್ರಿಕೆ ಪ್ರಕಟಿಸಿದೆ.

ಕ್ಲೀವ್‌ಲ್ಯಾಂಡ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯ ಕ್ಯುರೇಟರ್‌, ಯೋಹೆನ್ನಸ್‌ ಹೈಲಿ-ಸೆಲಾಸ್ಸಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ‘ ನನ್ನ ಕಣ್ಣುಗಳನ್ನು ನಾನೇ ನಂಬಲು ಆಗಲಿಲ್ಲ. ಅದೊಂದು ಯುರೆಕಾ ಎಂದು ಕೂಗಿಕೊಳ್ಳುವ ಕ್ಷಣ. ಕನಸು ನನಸು ಆದಂತೆ ಇತ್ತು. ಅತಿ ದೂರದ ಪ್ರದೇಶದಲ್ಲಿ ಸಿಕ್ಕಿರುವ ಈ ಮನುಷ್ಯನ ದೇಶದ ಭಾಗವು ಅತ್ಯಂತ ಮಹತ್ವದ್ದಾಗಿದ್ದು, ಬಹುಮುಖ್ಯ ಮನುಷ್ಯ ಪ್ರಬೇಧದ ಸುಳಿವು ನೀಡುತ್ತದೆ ಎಂದು ಹೇಳಿದರು.

39 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಸಿದ್ದ ಆಸ್ಟ್ರೊಲೊಪಿಥಿಕಸ್‌ ಅನಾಮೆನ್‌ಸಿಸ್‌ ಎಂಬ ಪೂರ್ವಜನ ಈ ಬುರುಡೆಯಾಗಿದೆ. 1974ರಲ್ಲಿ ಲೂಸಿ ಅಸ್ಥಿಪಂಜರ ದೊರೆತ ಸ್ಥಳದಿಂದ 34 ಕಿ.ಮೀಗಳಷ್ಟು ದೂರದ ಉತ್ತರ ಭಾಗದಲ್ಲಿ ಈ ತಲೆ ಬುರುಡೆ ದೊರೆತಿದೆ. ಲೂಸಿಯ ಅಸ್ಥಿಪಂಜರವು ಹೋಮೋಸೇಪಿಯನ್‌ಗಳ ಕಾಲಘಟ್ಟವನ್ನು ನಿರ್ಧರಿಸುವುದಕ್ಕೆ ನೆರವಾಗಿತ್ತು.

ಈಗ ದೊರೆತಿರುವ ತಲೆಬುರುಡೆಯೂ ನಾವು ಕಲ್ಪಿಸಿಕೊಂಡಿದ್ದಕ್ಕಿಂತ ಹಿಂದೆ ಮನುಷ್ಯನನ್ನು ಹೋಲುವ ಜೀವಿ ಬದುಕಿದ್ದರೆ ಪುರಾವೆಯನ್ನು ಒದಗಿಸುತ್ತದೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾ ಭಾಗದಲ್ಲಿ ಜೀವಿಸಿದ್ದ ಈ ಮನುಷ್ಯ ಪ್ರಬೇಧ ಮನುಷ್ಯನ ಹೋಲಿಕೆಗಳನ್ನು ಪ್ರತಿಬಿಂಬಿಸುತ್ತದೆ. ಆಸ್ಟ್ರಲೊಪಿಥ್‌ಗಳು ದೊಡ್ಡ ಮುಖಗಳನ್ನು ಹೊಂದಿದ್ದವು ಎಂದು ಮ್ಯಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎವಲ್ಯೂಷನರಿ ಆಂಥ್ರೋಪಾಲಜಿಯ ಸಂಶೋಧಕ ಸ್ಟೆಫಾನಿ ಮೆಲಿಲೊ ಹೇಳಿದ್ದರು. ಆದರೆ ಹೋಮೋಸೇಫಿಯನ್‌ಗಳಿಗೆ ಹೋಲುವ ಲಕ್ಷಣಗಳನ್ನು ಹೊಂದಿರುವ ಈ ತಲೆಬುರುಡೆ ಮಾನವ ವಿಕಾಸದ ಹೊಸ ಸಾಧ್ಯತೆಗಳತ್ತ ಕುತೂಹಲ ಕೆರಳಿಸಿದೆ.
ಇಷ್ಟು ದಿನ ಮನುಷ್ಯನ ವಿಕಾಸವನ್ನು ಕಾಲಾನುಕ್ರಮದಲ್ಲಿ ಜರುಗಿದ್ದು ಎಂದು ಗ್ರಹಿಸಿಕೊಳ್ಳಲಾಗಿತ್ತು. ಆದರೆ ಸುಮಾರು ಒಂದು ಲಕ್ಷ ಅವಧಿಗೆ ಭಿನ್ನ ಪ್ರಬೇಧಗಳು ಜೊತೆಗೆ ಇದ್ದಿರಬಹುದು. ಇದು ಮನುಷ್ಯನ ಸಂಬಂಧಗಳಲ್ಲಿ ಬದಲಾವಣೆಗೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಇದನ್ನೂ ಓದಿ | ಜಾಣ ಸುದ್ದಿ 4 | ಚಿಟ್ಟೆಗಳ ಬಣ್ಣದ ರೆಕ್ಕೆಗಳು ಮಾಸಿ ಹೋಗಬಹುದೆ?

ಅಂದರೆ ಆಸ್ಟ್ರಲೋಪಿಥಿಕಸ್‌ ಅನಮೆನ್ಸಿಸ್‌ ನಂತರ ಆಸ್ಟ್ರಲೋಪಿಥಿಕಸ್‌ ಆಫರೆನ್ಸಿಸ್‌ ಆಗಿ ವಿಕಾಸ ಹೊಂದಿದ್ದು ಎಂದು ಇದುವರೆಗೆ ನಂಬಿದ್ದೇವೆ. ಆದರೆ ಹೊಸ ತಲೆಬುರುಡೆ ಈಗ ಹೇಳಿದ ಎರಡು ಪ್ರಬೇಧಗಳು ಒಂದೇ ಕಾಲದಲ್ಲಿ ವಾಸವಾಗಿದ್ದವು ಎಂಬ ಸುಳಿವನ್ನು ನೀಡುತ್ತಿದೆ. ಇದು ಮಾನವ ವಿಕಾಸದ ಕುರಿತು ಹೊಸ ಪ್ರಶ್ನೆಗಳಿಗೆ ಅವಕಾಶ ನೀಡುತ್ತಿದ್ದ ವಿಕಾಸದ ಹಾದಿಯಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಬಗ್ಗೆ ಹೊಸ ಆಲೋಚನೆಗಳಿಗೆ ಕಾರಣವಾಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.