ಫೆಬ್ರವರಿ 28ರಿಂದ ಮೈಸೂರಿನಲ್ಲಿ ಮೂರು ದಿನಗಳ ವಿಜ್ಞಾನ ನಾಟಕೋತ್ಸವ

ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಮತ್ತು ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್‌ ಸಹಯೋಗದಲ್ಲಿ ನಡೆಯುತ್ತಿರುವ ಈ ನಾಟಕೋತ್ಸವ ವಿಜ್ಞಾನವನ್ನು ವಿಭಿನ್ನ ಜನರ ಬಳಿಗೆ ಕರೆದೊಯ್ಯುತ್ತಿದೆ

ವಿಜ್ಞಾನವನ್ನು ಜನಪ್ರಿಯಗೊಳಿಸುವ, ಜನರ ಬಳಿಗೆ ಒಯ್ಯುವ ಪ್ರಯತ್ನಗಳು ನಡೆಯುತ್ತಿವೆ. ರಂಗ ಪ್ರಯೋಗದ ಮೂಲಕ ವಿಜ್ಞಾನದ ವಿಚಾರಗಳು, ವಿಜ್ಞಾನಿಗಳ ಬದುಕನ್ನು ಮತ್ತು ವೈಜ್ಞಾನಿಕ ಸಾಧನೆಗಳನ್ನು ತಲುಪಿಸುವ ವಿಭಿನ್ನ ಪ್ರಯತ್ನವನ್ನು ಮೈಸೂರಿನ ವಿಜ್ಞಾನ ನಾಟಕೋತ್ಸವ ಟ್ರಸ್ಟ್‌ ಮಾಡುತ್ತಾ ಬಂದಿದೆ.

ಈ ಬಾರಿ ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ನವದೆಹಲಿಯ ವಿಜ್ಞಾನ್‌ ಪ್ರಸಾರ್‌, ಸಿಎಫ್‌ಟಿಆರ್‌ಐ ಮತ್ತು ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್‌ ಸಹಯೋಗದಲ್ಲಿ ವಿಜ್ಞಾನ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಮೂರು ದಿನಗಳ ನಾಟಕೋತ್ಸವದಲ್ಲಿ ಪ್ರತಿ ಸಂಜೆ ನಾಟಕ ಪ್ರದರ್ಶನ ನಡೆಯಲಿದೆ. ಜೊತೆಗೆ ಅನಿಲ್‌ ಕುಮಾರ್‌ ಜಗಳೂರು ಅವರು ರಚಿಸಿದ ವಿಜ್ಞಾನಿಗಳ ಭಾವಚಿತ್ರ ಪ್ರದರ್ಶನ ಹಾಗೂ ವಿಜ್ಞಾನ ಸಂವಹನ ಕುರಿತು ವಿಚಾರ ಸಂಕಿರಣ ನಡೆಯಲಿವೆ.

ಫೆ. 28ರಂದು ಸಂಜೆ 5ಗಂಟೆಗೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್ಮೆಂಟ್‌ ಸಂಸ್ಥಾಪಕ ಆರ್ ಬಾಲಸುಬ್ರಮಣ್ಯಂ ನಾಟಕೋತ್ಸವ ಉದ್ಘಾಟಿಸುವರು. ಸಿಎಫ್‌ಟಿಆರ್‌ಐ ನಿರ್ದೇಶಕರಾದ ಡಾ ಕೆ ಎಸ್‌ಎಂಎಸ್‌ ರಾಘವರಾವ್‌ ಅಧ್ಯಕ್ಷತೆ ವಹಿಸುವರು. ಅದೇ ದಿನ ಸಂಜೆ 7ಗಂಟೆಗೆ ಪರಿವರ್ತನ ರಂಗತಂಡದಿಂದ ಅರಿವಿನ ಅಂಗಳದಲ್ಲಿ ನಾಟಕವನ್ನು ಪ್ರದರ್ಶನ ಜರುಗಲಿದೆ. ಫೆ. 29ರಂದು 7ಗಂಟೆಗೆ ಅರಿವು ತಂಡವು ‘ನಿಲುಕದ ನಕ್ಷತ್ರ’ ನಾಟಕವನ್ನು ಪ್ರಸ್ತುತಪಡಿಸುವುದು.

ಮಾರ್ಚ್‌ 1ರಂದು ಬೆಳಗ್ಗೆ 10 ಗಂಟೆಯಿಂದ ವೈಜ್ಞಾನಿಕ ಕಥೆಗಳು ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ವೈಜ್ಞಾನಿಕ ಕಥೆಗಳು ಗೋಷ್ಠಿಯಲ್ಲಿ ಲೇಖಕ ಪ್ರೊ. ಕೆ.ಎನ್.ಗಣೇಶಯ್ಯ ಅವರು, ‘ನಾನೇಕೆ ವೈಜ್ಞಾನಿಕ ಕಥೆ ಬರೆದೆ?’, ಪೊಲೀಸ್‌ ಅಧಿಕಾರಿ ಮತ್ತು ಲೇಖಕಿ ಸವಿತಾ ಶ್ರೀನಿವಾಸ್ ಅವರು ‘ಮಹಾಸಂಪರ್ಕ, ಒಂದು ಹೊಳಹು’ ಮತ್ತು ಲೇಖಕ ತೋನ್ಸೆ ಗಣೇಶ ಶೆಣೈಅವರು ‘ಕನ್ನಡದಲ್ಲಿ ವೈಜ್ಞಾನಿಕ ಕಥೆಗಳು’ ಕುರಿತು ಮಾತನಾಡುವರು. ಬೆಂಗಳೂರು ವಿವಿ ಭೌತಶಾಸ್ತ್ರ ನಿವೃತ್ತ ಪ್ರಾಧ್ಯಾಪಕರಾದ ಡಾ ಜಿ ರಾಮಕೃಷ್ಣ ಅವರು ಅಧ್ಯಕ್ಷತೆ ವಹಿಸುವರು.

ಜನಸಾಮಾನ್ಯರಲ್ಲಿ ವಿಜ್ಞಾನ ಗೋಷ್ಠಿಯಲ್ಲಿ, ಲೇಖಕಿ ಡಾ. ಬಿ. ಎಸ್. ಶೈಲಜ ಅವರು ಸಾಹಿತ್ಯದಲ್ಲಿ ಖಗೋಳವಿಜ್ಞಾನ, ಡಾ. ಬಿ. ಎಸ್. ಸೋಮಶೇಕರ್ ಅವರು ವೈದ್ಯಕೀಯದಲ್ಲಿ ಪಾರಂಪರಿಕ ಜ್ಞಾನ ಮತ್ತು ಡಾ. ಟಿ. ಎಸ್. ಚನ್ನೇಶ್ ಅವರು ಪಾರಂಪರಿಕ ಕೃಷಿ ವಿಜ್ಞಾನ ಕುರಿತು ಮಾತನಾಡುವರು.
ಮಾರ್ಚ್‌ 1ರಂದು 7ಗಂಟೆಗೆ ಕಲಾಸುರುಚಿ ತಂಡದಿಂದ ಕ್ಯಾಲ್ಕುಲಸ್‌ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕೋತ್ಸವ ಸಂಘಟಕರಾದ ಸಿಎಫ್‌ಟಿಆರ್‌ಐನ ವಿಜ್ಞಾನಿ ಕೊಳ್ಳೆಗಾಲ ಶರ್ಮಾ ಅವರು ವಿಜ್ಞಾನ ನಾಟಕೋತ್ಸವ ಕುರಿತು ಮಾತನಾಡಿ, ”ಕನ್ನಡದಲ್ಲಿ ವಿಜ್ಞಾನ ಸಂವಹನದ ಮಾರ್ಗಗಳಲ್ಲಿ ನಾಟಕ, ನೃತ್ಯ ಹಾಗೂ ವೈಜ್ಞಾನಿಕ ಕಥಾ ಪ್ರಕಾರಗಳು ಇನ್ನೂ ಎದ್ದು ತೋರುವಷ್ಟು ಬೆಳೆದಿಲ್ಲ. ಅವನ್ನು ಬೆಂಬಲಿಸುವ ನಿಟ್ಟಿನಲ್ಲಿ ವಿಜ್ಞಾನ್ ಪ್ರಸಾರ್ ಹಾಗೂ ಮೈಸೂರಿನ ಸಿಎಫ್ಟಿಆರ್ ಐ ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿಯ ಜೊತೆ ಸೇರಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಇದನ್ನು ಒಂದು ಚಳುವಳಿಯಾಗಿಸುವ ಕನಸು ಇದೆ’‘ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.