ಕರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಈಗ ಮೊಬೈಲ್ ಫೋನ್‌ಗಳ ಸರದಿ. ಭಾರತದಲ್ಲಿ ಪ್ರಮುಖ ಮೊಬೈಲ್ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ

ಕರೋನಾ ವೈರಸ್ ಸೋಂಕು ಎಲ್ಲ ವಲಯಗಳನ್ನು ನಡುಬಗ್ಗಿಸುವಂತೆ ಮಾಡಿದೆ. ಉದ್ಯಮ ಮತ್ತು ಉತ್ಪಾದನಾ ವಲಯಗಳನ್ನು ಪ್ರಭಾವಿಸಿರುವ ಕರೋನಾ ಈಗ ಭಾರತದ ಐದು ಮೊಬೈಲ್ ಕಂಪನಿಗಳು ಮುಚ್ಚುವಂತೆ ಮಾಡಿದೆ. ಶಿಯೋಮಿ, ಸ್ಯಾಮ್‌ಸಂಗ್, ವಿವೊ, ಒಪ್ಪೊ ಮತ್ತು ಎಲ್‌ಜಿ ಕಂಪನಿಗಳು ಉತ್ಪಾದನೆಯನ್ನು ನಿಲ್ಲಸುತ್ತಿರುವುದಾಗಿ ಪ್ರಕಟಣೆ ಹೊರಡಿಸಿವೆ.
ನೊಯ್ಡಾದಲ್ಲಿ ವಿಶ್ವದ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಕಾರ್ಖಾನೆ ಹೊಂದಿದ್ದ ಸ್ಯಾಮ್‌ಸಂಗ್ ಮಾರ್ಚ್ 25ರವರೆಗೆ ಮುಚ್ಚುವುದಾಗಿ ಹೇಳಿದೆ.
ಎಲ್‌ಜಿ ಮಾತ್ರ ಈ ತಿಂಗಳ ಅಂತ್ಯದವರೆಗೆ ಮುಚ್ಚುವುದಾಗಿ ಹೇಳಿದೆ. ಈ ಬೆನ್ನಲ್ಲೇ ದೇಶದಲ್ಲೇ ಅತಿ ಹೆಚ್ಚು ಮೊಬೈಲ್ ಮಾರುಕಟ್ಟೆ ಹೊಂದಿರುವ ಶಿಯೋಮಿಯೋ ಲಾಕ್‌ಡೌನ್ ಘೋಷಣೆ ಹೊರಡಿಸಿದೆ. ಕಾರ್ಪೋರೇಟ್ ಹೌಸ್, ವೇರ್‌ಹೌಸ್, ಸರ್ವಿಸ್ ಸೆಂಟರ್, ಎಂ ಐ ಹೋಮ್, ಮತ್ತು ಉತ್ಪಾದನಾ ಘಟಕೆಗಳನ್ನು ಮುಚ್ಚುತ್ತಿರುವುದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ ಅಂತ್ಯದ ಹೊತ್ತಿಗೆ 38% ರಷ್ಟು ಸ್ಮಾರ್ಟ್‌ಫೋನ್ ಸಾಗಾಣಿಕೆ ಕುಸಿದಿದ್ದು, ಇದು ಇನ್ನಷ್ಟು ಹೆಚ್ಚಲಿದೆ ಎಂಬುದನ್ನು ಕಂಪನಿಗಳ ಲಾಕ್‌ಡೌನ್ ಹೇಳಿಕೆ ಸ್ಪಷ್ಟಪಡಿಸಿದೆ.