ಭಾರತಕ್ಕೆ 5ಜಿ ಸದ್ಯಕ್ಕೆ ಕನಸೇ; ಇಸ್ರೋ ಮಾಡಿದ ತಪ್ಪೇನು?

ಸದ್ಯ ನಾವೆಲ್ಲರೂ 4ಜಿಯನ್ನು ಬಳಸುತ್ತಿದ್ದೇವೆ. ಇದಕ್ಕಿಂತ ಅತ್ಯಂತ ವೇಗದ ಇಂಟರ್ನೆಟ್‌ ಸೇವೆ ನೀಡುವ 5ಜಿ ಕೂಡ ಅತಿ ಶೀಘ್ರದಲ್ಲೇ ಭಾರತಕ್ಕೆ ಕಾಲಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಸ್ರೋದ ನಡೆಯೊಂದು ಈಗ ಅಂತಹದ್ದೊಂದು ಮಹತ್ವಾಕಾಂಕ್ಷಿ ಬೆಳವಣಿಗೆಯೊಂದಕ್ಕೆ ಹಿನ್ನಡೆ ಉಂಟುಮಾಡಿದಂತಿದೆ

ಭಾರತವನ್ನು ಡಿಜಿಟಲ್‌ ದೇಶವಾಗಿಸಬೇಕೆಂಬುದು ಪ್ರಸ್ತುತ ಸರ್ಕಾರ ಮಹತ್ವಕಾಂಕ್ಷಿ ಕನಸು. ಸರ್ಕಾರದ ಹತ್ತಾರು ಸೇವೆಗಳಿಗೆ ಡಿಜಿಟಲ್ ಸ್ವರೂಪ ನೀಡಿದ್ದರು. ಬಿಎಸ್‌ಎನ್‌ಎಲ್‌ ಅತಂತ್ರವಾಗುತ್ತಿರುವಾಗ, ಖಾಸಗಿ ಟೆಲಿಕಾಂ ಕಂಪನಿಗಳು ಪರಸ್ಪರ ಸ್ಪರ್ಧೆಗೆ ಇಳಿದಿರುವ ಹೊತ್ತಲ್ಲಿ, ಜಿಯೋ ಇಡೀ ಟೆಲಿಕಾಂ ಮತ್ತು ಇಂಟರ್ನೆಟ್‌ ಸೇವೆಗಳ ಮೇಲೆ ಬಿಗಿ ಹಿಡಿದ ಸಾಧಿಸುವ ಧಾವಂತದ ಸಂದರ್ಭದಲ್ಲಿ 5ಜಿ ಸದ್ಯಕ್ಕೆ ಕನಸೇ ಆಗಿ ಉಳಿಯುವಂತಿದೆ.

ಭಾರತದ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಮತ್ತು ದೂರ ಸಂಪರ್ಕ ಇಲಾಖೆ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇಸ್ರೋ ಮೇಲುಗೈ ಸಾಧಿಸಿದ್ದು, ಇದರ ಪರಿಣಾಮ ಟೆಲಿಕಾಂ ಕಂಪನಿಗಳು ಎದುರಿಸುತ್ತಿವೆ. ವಿಶ್ವ ರೇಡಿಯೋ ಕಮ್ಯುನಿಷಕೇಷನ್‌ ಕಾನ್‌ಫರೆನ್ಸ್‌ ನಲ್ಲಿ ಇಸ್ರೋ ಮಂಡಿಸಿದಂತೆ 5ಜಿ ಬೇಸ್‌ ಸ್ಟೇಷನ್‌ಗಳ ಮಟ್ಟವನ್ನು 26ಗಿಗಾ ಹರ್ಟ್ಸ್‌ ಸ್ಪೆಕ್ಟ್ರಮ್‌ ಬ್ಯಾಂಡ್‌ ಅನ್ನು 8ನೇ ಒಂದು ಭಾಗಕ್ಕೆ ಇಳಿಸುವುದಕ್ಕೆ ನಿರ್ಧರಿಸಲಾಗಿದೆ. ಸಾಂಪ್ರದಾಯಿಕವಾದ ಬೇಸ್‌ ಸ್ಟೇಷನ್‌ನ ವಿದ್ಯುತ್‌ ಸಾಮರ್ಥ್ಯ 40 ವ್ಯಾಟ್‌ ಇದ್ದು, 5ಜಿ ಸ್ಟೇಷನ್‌ಗಳ ಸಾಮರ್ಥ್ಯ ಇದಕ್ಕಿಂತ ಹೆಚ್ಚಿರುತ್ತದೆ ಎಂಬುದು ಸಾಮಾನ್ಯವಾಗಿ ಗ್ರಹಿಕೆ. ಆದರೆ ಇವುಗಳ ವಿದ್ಯುತ್‌ ಸಾಮರ್ಥ್ಯವನ್ನು 0.5 ವ್ಯಾಟ್‌ಗೆ ಇಳಿಯುತ್ತದೆ.

ಬೇಸ್‌ ಸ್ಟೇಷನ್‌ಗಳ ವಿದ್ಯುತ್‌ ಮಿತಿಯನ್ನು ಕಡಿಮೆ ಮಾಡಿದ್ದರಿಂದಾಗಿ 5ಜಿ ಬೇಸ್‌ ಸ್ಟೇಷನ್‌ಗಳ ವೆಚ್ಚ ಅಧಿಕವಾಗಲಿದೆ. ಯಾಕೆಂದರೆ ಸಾಂಪ್ರದಾಯಿಕ ಮೊಬೈಲ್‌ ವ್ಯವಸ್ಥೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಬೇಸ್‌ ಸ್ಟೇಷನ್‌ಗಳನ್ನು ಸ್ಥಾಪಿಸಬೇಕಾಗುತ್ತದೆ. ಇವುಗಳನ್ನು ಸ್ಥಾಪಿಸುವುದಕ್ಕೆ ಸ್ಥಳದ ಅವಕಾಶವೂ ಕಡಿಮೆ ಇರುವುದರಿಂದ ಗುಣಮಟ್ಟದ ಸೇವೆಯನ್ನು ನೀಡುವುದೂ ಕಷ್ಟವಾಗುತ್ತದೆ.

ಸಮಸ್ಯೆ ಇಷ್ಟೇ ಇದ್ದಂತಿಲ್ಲ. ಒಟ್ಟು 26ಗಿಗಾ ಹರ್ಟ್ಸ್‌ ಸ್ಪೆಕ್ಟ್ರಮ್‌ ಬ್ಯಾಂಡ್‌ ಪೈಕಿ, ಭಾರತದ ಟೆಲಿಕಾಂ ಕಂಪನಿಗಳಿಗೆ 5ಜಿಗೆ ದೊರೆತಿರುವುದು ಕೇವಲ 3.5 ಗಿಗಾ ಹರ್ಟ್ಸ್‌ ಮಾತ್ರ. ಇದು ಈ ಸೇವೆಯ ವೇಗವನ್ನು ತಗ್ಗಿಸುತ್ತದೆ ಮತ್ತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಅತಿ ಹೆಚ್ಚಿನ ದರವನ್ನು ಹೇರಿದೆ.

ಭಾರತದಲ್ಲಿ ಮೂರು ಶ್ರೇಣಿಯಲ್ಲಿ 5ಜಿ ಬ್ಯಾಂಡ್‌ ಲಭ್ಯವಿದೆ. ಒಂದು 700 ಮೆಗಾ ಹರ್ಟ್ಸ್‌, 3.5 ಗಿಗಾ ಹರ್ಟ್ಸ್‌ ಮತ್ತು 26 ಗಿಗಾ ಹರ್ಟ್ಸ್‌. ಇವುಗಳ ಪೈಕಿ 26 ಗಿಗಾ ಹರ್ಟ್ಸ್‌ ಬ್ಯಾಂಡ್‌ ಅತಿ ಮುಖ್ಯವಾಗಿದ್ದು, ಅತಿ ಹೆಚ್ಚಿನ ವೇಗದ ಇಂಟರ್ನೆಟ್‌ ಪೂರೈಸಲು ತಕ್ಕುದಾದ ಸ್ಪೆಕ್ಟ್ರಮ್‌ ಹೊಂದಿದೆ. ಈ ಕಂಪನಾಂಕ ಲಭ್ಯವಾಗದೆ ವೇಗದ ಸೇವೆಯನ್ನು ನೀಡುವುದು ಅಸಾಧ್ಯ. ಒಂದು ವೇಳೆ ಈ ವೇಗದ ಸೇವೆಯನ್ನು ನೀಡಬೇಕೆಂದರೆ ಅತಿ ಹೆಚ್ಚು ಹಣವನ್ನು ತೆರಬೇಕಾಗುತ್ತದೆ. ಈಗಾಗಲೇ ಸ್ಪರ್ಧೆಯಲ್ಲಿ ಹೈರಾಣಾಗಿರುವ ಟೆಲಿಕಾಂ ಕಂಪನಿಗಳು ಹೆಚ್ಚು ಹಣವನ್ನು ತೆರುವುದಕ್ಕೆ ಸಿದ್ಧವಿದ್ದಂತಿಲ್ಲ. ಹಾಗಾಗಿ ಸದ್ಯಕ್ಕೆ 5ಜಿ ಸೇವೆ ನೀಡಲು ಹಿಂದೇಟು ಹಾಕಲಿದ್ದಾರೆ ಎಂದು ಈ ಕುರಿತು ವಿಸ್ತೃತವಾಗಿ ವರದಿ ಮಾಡಿರುವ ಫೈನಾನ್ಷಿಯಲ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಬೆಳವಣಿಗೆಯ ಹಿಂದೆ ಚೀನಾ ಮತ್ತು ರಷ್ಯಾದ ಕೈವಾಡವೂ ಇರಬಹುದು ಅನುಮಾನ ವ್ಯಕ್ತಪಡಿಸಲಾಗಿದೆ. 5ಜಿ ತಂತ್ರಜ್ಞಾನದಲ್ಲಿ ದೊಡ್ಡ ಹಿಡಿತ ಸಾಧಿಸಿರುವ ಚೀನಾ ಕಂಪನಿಯು 26 ಗಿಗಾ ಹರ್ಟ್ಸ್‌ ಬ್ಯಾಂಡ್‌ಗೆ ಅಗತ್ಯವಾದ ಯಾವುದೇ ಸಾಧನವನ್ನು ರೂಪಿಸಿಲ್ಲ. ಹಾಗಾಗಿ ಚೀನಾ ಮತ್ತು ರಷ್ಯಾದಲ್ಲಿ ಕಾರ್ಯನಿರ್ವಹಿಸುವ ಈ ಉತ್ಪಾದಕ ಸಂಸ್ಥೆ 5ಜಿ ಅನುಷ್ಠಾನಕ್ಕೆ ಕಡಿಮೆ ಸ್ಪ್ರೆಕ್ಟ್ರಮ್‌ ಬ್ಯಾಂಡ್‌ ಇರುವ ದೇಶಗಳತ್ತ ಚಿತ್ತ ಹರಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.