ಮೂರು ವರ್ಷಗಳಲ್ಲಿ ಏಳು ದೊಡ್ಡ ಸೋರಿಕೆ; ಫೇಸ್‌ಬುಕ್‌ ಬಳಕೆದಾರರು ಮಾಹಿತಿಗಿಲ್ಲ ರಕ್ಷೆ!

ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಫೇಸ್‌ಬುಕ್‌ ಪದೇಪದೇ ಮುಜುಗರ ಎದುರಿಸುತ್ತಿದೆ. ಕೋಟ್ಯಂತರ ಸಂಖ್ಯೆಯಲ್ಲಿ ಮಾಹಿತಿ ಸೋರಿಕೆಯಾಗಿದೆ. ಬಳಕೆದಾರರ ಮಾಹಿತಿ ಬಗ್ಗೆ ಫೇಸ್‌ಬುಕ್‌ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ

ಫೇಸ್‌ಬುಕ್‌ ಜಗತ್ತಿನ ಅತಿ ದೊಡ್ಡ ಪ್ರಭಾವಿ ಸಾಮಾಜಿಕ ಜಾಲತಾಣ. ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಪ್ರಭಾವಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಆರೋಪ ಬಂದ ಮೇಲೆ ಫೇಸ್‌ಬುಕ್‌ ವಿಶ್ವಾಸಾರ್ಹತೆ ತೀವ್ರವಾಗಿ ಪ್ರಶ್ನಿಸಲ್ಪಡುತ್ತಿದೆ.

ಯುರೋಪಿಯನ್‌ ಒಕ್ಕೂಟ, ಅಮೆರಿಕದ ಕಾಂಗ್ರೆಸ್‌ ಫೇಸ್‌ಬುಕ್‌ ಮಾಲೀಕರನ್ನು ವಿಚಾರಣೆಗೆ ಒಳಪಟ್ಟಿದ್ದು, ಸೇವೆಯಲ್ಲಿ ಲೋಪಗಳನ್ನು ಗುರುತಿಸಿ ದಂಡ ಹಾಕಿದ ಪ್ರಕರಣಗಳು ವರದಿಯಾಗಿವೆ. ಆದರೂ ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡುವ ಬದ್ಧತೆಯಲ್ಲಿ ಮಾತ್ರ ಪದೇಪದೇ ಲೋಪವಾಗುತ್ತಲೇ ಇದೆ. ಮಹತ್ವದ ಮಾಹಿತಿ ಸೋರಿಕೆಯ ವಿವರಗಳು ಮುಂದಿವೆ

2013- 60 ಲಕ್ಷ ಬಳಕೆದಾರರ ಮಾಹಿತಿ ಸೋರಿಕೆ

2013ರ ಜೂನ್‌ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಬಗ್‌ ಪತ್ತೆಯಾಯಿತು. ಈ ಬಗ್‌ನಿಂದಾಗಿ 60 ಲಕ್ಷ ಬಳಕೆದಾರರ ಫೋನ್‌ ನಂಬರ್‌ ಮತ್ತು ಮೇಲ್‌ ಅಡ್ರೆಸ್‌ ಸೋರಿಕೆಯಾಗಿತ್ತು. ಈ ಪೈಕಿ ಯಾವುದೇ ಒಂದು ಮಾಹಿತಿ ಇದ್ದರು ಯಾವುದೇ ಬಳಕೆದಾರರ ಎಲ್ಲ ಮಾಹಿತಿಯನ್ನು ತಿಳಿಯಬಹುದಾಗಿತ್ತು. ಇಲ್ಲಿಂದಲೇ ಫೇಸ್‌ಬುಕ್‌ ಸಮಸ್ಯೆಗಳು ಆರಂಭ ಎನ್ನಬಹುದು

2018- 1.4 ಕೋಟಿ ಬಳಕೆದಾರರು
ಮೇ ತಿಂಗಳಲ್ಲಿ ಫೇಸ್‌ಬುಕ್‌ ಪ್ರೈವೇಸಿ ಸೆಟಿಂಗ್ಸ್‌ನಲ್ಲಿ ಬದಲಾವಣೆ ಮಾಡಿತು. ನೀವು ಪೋಸ್ಟ್‌ ಮತ್ತು ಪ್ರೊಫೈಲ್‌ ಅನ್ನು ಯಾರು ನೋಡಬಹುದು, ನೋಡಬಾರದು ಎಂಬುದನ್ನು ನಿಯಂತ್ರಿಸುವ ಸೆಟ್ಟಿಂಗ್‌. ಇದರಲ್ಲಿ ಇದ್ದ ಲೋಪದಿಂದಾಗಿ ಎಲ್ಲ ಖಾಸಗಿ ಫೋಸ್ಟ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಾಯಿತು. ಈ ಲೋಪದಿಂದ 1.4 ಕೋಟಿ ಬಳಕೆದಾರರ ಮಾಹಿತಿಗೆ ಸುಲಭವಾಗಿ ಕನ್ನಡ ಹಾಕಲಾಯಿತು.

2018- 5 ಕೋಟಿ ಬಳಕೆದಾರರು
ಕೇಂಬ್ರಿಡ್ಜ್‌ ಅನಾಲಿಟಿಕ್ ಬಯಲಾದ ವರ್ಷ. ಸೆಪ್ಟೆಂಬರ್‌ ತಿಂಗಳಲ್ಲಿ ಫೇಸ್‌ಬುಕ್‌ 5ರಿಂದ 9 ಕೋಟಿ ಬಳಕೆದಾರರ ಮಾಹಿತಿಗೆ ಹ್ಯಾಕರ್‌ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿತು. ‘ವ್ಯೂ ಆಸ್‌’ ಎಂಬ ಫೀಚರ್‌ನಲ್ಲಿದ್ದ ಲೋಪದಿಂದಾಗಿ ಖಾಸಗಿತನದ ನಿಯಮ ಸಡಿಲಾಗಿತ್ತು. ಇದು ಫೇಸ್‌ಬುಕ್‌ಗೆ ಬಹುದೊಡ್ಡ ಮುಜುಗರವನ್ನು ಎದುರಿಸಿತು. ಫೇಸ್‌ಬುಕ್‌, ಎಫ್‌ಬಿಐ ತನಿಖೆಗೆ ನೆರವು ಪಡೆದುಕೊಂಡಿತು.

2019 – 60 ಕೋಟಿ ಬಳಕೆದಾರರು
ಹಿಂದೆಂದಿಗಿಂತ ಅತಿ ದೊಡ್ಡ ಮಾಹಿತಿ ಸೋರಿಕೆ ಮಾರ್ಚ್‌ ತಿಂಗಳಲ್ಲಿ ನಡೆಯಿತು. ಬ್ರಿಯನ್‌ ಕ್ರೆಬ್ಸ್‌ ವರದಿಯಿಂದ ಬಹಿರಂಗವಾದ ಪ್ರಕಾರ 60 ಕೋಟಿ ಬಳಕೆದಾರರ ಪಾಸ್‌ವರ್ಡ್‌ಗಳು ಬಯಲಾಗಿದ್ದವು. ಕೇವಲ ಉದ್ಯೋಗಿಗಳಿಗೆ ಮಾತ್ರ ಎಟುಕುವಂತಿದೆ ಈ ಮಾಹಿತಿಯನ್ನು ಟೆಕ್ಸ್ಟ್‌ ಫೈಲ್‌ ರೂಪದಲ್ಲಿ ಅಂದರೆ ಯಾವುದೇ ಸುರಕ್ಷಿತ ಕ್ರಮವಲ್ಲದ ರೀತಿಯಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂತು.

2019 – 55.5 ಕೋಟಿ ಬಳಕೆದಾರರು
ಏಪ್ರಿಲ್‌ ತಿಂಗಳಲ್ಲಿ ಎರಡು ಬಾರಿ ದಾಳಿ ನಡೆಯಿತು. ಸರ್ವರ್‌ನಲ್ಲಿದ್ದ ಲೋಪದಿಂದಾಗಿ ಮಾಹಿತಿ ಸೋರಿಕೆಯಾದ ಸಂಗತಿಯನ್ನು ಅಪ್‌ಗಾರ್ಡ್‌ ಸಂಸ್ಥೆ ಪತ್ತೆ ಮಾಡಿತು. ಇನ್ನೊಂದು ಸಂದರ್ಭದಲ್ಲಿ ಪ್ರೊಫೈಲ್‌ ವೆರಿಫಿಕೇಷನ್‌ ಮಾಡಲು ಈ ಮೇಲ್‌ ವಿಳಾಸ ಬಳಸುವಂತೆ ಸೂಚಿಸಿತ್ತು. ಈ ಕ್ರಮದ ಬಗ್ಗೆ ಸುರಕ್ಷತಾ ತಜ್ಞರು ಟೀಕಿಸಿದ್ದರು.

2019 – 41.9 ಕೋಟಿ ಬಳಕೆದಾರರು
ತಮ್ಮದಲ್ಲದ ಸರ್ವರ್‌ನಲ್ಲಿ ಇದ್ದ 40 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಯ್ತು. ಮಾಹಿತಿ ಸುರಕ್ಷತೆಯಲ್ಲಿ ಫೇಸ್‌ಬುಕ್‌ ತಳೆದ ಬೇಜವಾಬ್ದಾರಿತನ ತೀವ್ರವಾಗಿ ಟೀಕೆಗೆ ಕಾರಣವಾಯಿತು.

2019 – 30 ಕೋಟಿ ಬಳಕೆದಾರರು
ವಿಯಟ್ನಾಂನಲ್ಲಿ ಕೂತ ಹ್ಯಾಕರ್‌ಗಳು ಫೇಸ್‌ಬುಕ್‌ ಎಪಿಐನಲ್ಲಿದ್ದ ಲೋಪವನ್ನು ಬಳಸಿಕೊಂಡು 30 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ ಹಾಕಿದ್ದರು. ಮಾಹಿತಿ ಸುರಕ್ಷತಾ ತಜ್ಞ ಬಾಬ್‌ ಡಾಯ್‌ಚೆಂಕೊ ಈ ಸೋರಿಕೆಯನ್ನು ಬಯಲು ಮಾಡಿದ್ದರು.

ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಅಗಾಧವಾದ ಆದಾಯವನ್ನು ಸಂಪಾದಿಸುತ್ತಿರುವ ಫೇಸ್‌ಬುಕ್‌, ಅವರ ಮಾಹಿತಿಯನ್ನು ಸುರಕ್ಷಿತವಾಗಿಸುವ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದಲೇ ಮತ್ತೆ ಮತ್ತೆ ಸೋರಿಕೆಯಾಗುತ್ತಿದೆ. ಒಂದೇ ವರ್ಷದಲ್ಲಿ 100 ಕೋಟಿ ಬಳಕೆದಾರರ ಮಾಹಿತಿ ಸುಲಭವಾಗಿ ಸೋರಿಕೆಯಾಗಿದ್ದು ಆತಂಕ, ಅಚ್ಚರಿಗೆ ಕಾರಣವಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.