ಜಪಾನಿನ ಕಂಪನಿಯೊಂದು ರೂಪಿಸಿದ ತಲೆ ಇಲ್ಲದ ರೊಬೊ ಬೆಕ್ಕು!

ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಭಾವನಾತ್ಮಕವಾದುದು. ಅದಕ್ಕಾಗಿ ಮನುಷ್ಯ ಬೆಕ್ಕು, ನಾಯಿಗಳನ್ನು ಮನೆಯಲ್ಲಿ ಸಾಕಿಕೊಳ್ಳುತ್ತಾನೆ. ಒತ್ತಡವನ್ನು ಈ ಪ್ರಾಣಿಗಳ ಒಡನಾಟದಲ್ಲಿ ಮರೆಯುತ್ತಾನೆ, ಹಗುರಾಗುತ್ತಾನೆ ಎಂಬ ಸಂಗತಿ ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಎಲ್ಲರಿಗೂ ಬೆಕ್ಕು ನಾಯಿಗಳನ್ನು ಸಾಕಲು ಆಗಬೇಕಲ್ಲ! ಅದೊಂದು ರೀತಿಯ ಜವಾಬ್ದಾರಿ! ಕೆಲವು ಕಡೆ ಮನೆ ಮಾಲೀಕರು ಅವಕಾಶ ಕೊಡುವುದಿಲ್ಲ!!

ಹೊಸ ತಾಂತ್ರಿಕ ಸಾಧನಗಳು ಮನುಷ್ಯನ ಕೆಲಸವನ್ನು ಹಗುರ ಮಾಡುವುದಕ್ಕೆ, ಸುಲಭವಾಗಿಸುವುದಕ್ಕೆ ಅಷ್ಟೇ ಅಲ್ಲ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕೂ ಬರುತ್ತಿವೆ.

ಸಾಮಾನ್ಯವಾಗಿ ಮನೆಯಲ್ಲಿ ಬೆಕ್ಕು-ನಾಯಿಗಳನ್ನು ಸಾಕಿಕೊಳ್ಳುತ್ತವೆ. ಇವು ಮನೆಯಲ್ಲಿರುವವರೊಂದಿಗೆ ಭಾವನಾತ್ಮಕ ನಂಟು ಬೆಸೆದುಕೊಳ್ಳುವ ಪ್ರಾಣಿಗಳು. ಹೀಗಾಗಿ ಈ ಪ್ರಾಣಿಗಳನ್ನು ಸಾಕಿಕೊಳ್ಳುತ್ತೇವೆ. ಆದರೆ ಪುರುಸೊತ್ತು ಇಲ್ಲ, ಒತ್ತಡ ಜೀವನದಲ್ಲಿ ಇವುಗಳನ್ನು ಸಾಕುವುದೂ ಒಂದು ಸವಾಲು.

ಅಲ್ಲದೆ ಇತ್ತೀಚೆಗೆ ಮನೆ ಮಾಲೀಕರು ಮನೆಯಲ್ಲಿ ಯಾವುದೇ ಪ್ರಾಣಿಯನ್ನು ಸಾಕುವಂತಿಲ್ಲ ಎಂಬ ಷರತ್ತಿನೊಂದಿಗೆ ಬಾಡಿಗೆ ಕೊಡುತ್ತಾರೆ. ಆದರೆ ಕೆಲವರಿಗೆ ಮನೆಯಲ್ಲಿ ಒಂದು ಪ್ರಾಣಿ ಇರಬೇಕೆಂಬ ಆಸೆ.

ಇಂಥವರನ್ನು ಗಮನದಲ್ಲಿಟ್ಟುಕೊಂಡು ಜಪಾನಿನ ಯೂಕೈ ಎಂಜಿನಿಯರಿಂಗ್‌ ಕಂಪನಿ ಕೂಬೊ ಎಂಬ ರೊಬೊಬೆಕ್ಕನ್ನು ಸಿದ್ಧಪಡಿಸಿದೆ. ತಲೆ ಇಲ್ಲದ ಬೆಕ್ಕಿದು. ಬೆನ್ನ ಮೇಲೆ ಕೈಇಟ್ಟರೆ, ಸವರಿದರೆ ಬಾಲ ಅಲ್ಲಾಡಿಸುತ್ತದೆ. ಸಿಂಥೆಟಿಕ್‌ ಕೂದಲಿನ ಹೊದಿಕೆ ಇರುವ ಈ ರೊಬೊ ಬೆಕ್ಕನ್ನು ಮುಟ್ಟುವುದೂ ವಿಶೇಷ ಅನುಭವ ಎನ್ನುತ್ತದೆ ಯೂಕೈ ಕಂಪನಿ.

ಈಗಾಗಲೇ ಹತ್ತು ಸಾವಿರ ರೊಬೊ ಬೆಕ್ಕುಗಳನ್ನು ಈ ಕಂಪನಿ ಮಾರಾಟ ಮಾಡಿದೆ. ಅಮೆರಿಕದಿಂದಲೂ ರೊಬೊ ಬೆಕ್ಕಿಗೆ ಬೇಡಿಕೆ ಬರಲಾರಂಭಿಸಿದೆ.