ವಾಹನೋದ್ಯಮ ಇತ್ತೀಚೆಗೆ ಪ್ಲಾಟ್ಫಾರ್ಮ್ಗಳ ಮೊರೆ ಹೋಗಿದೆ. ಇಲ್ಲಿ ಹೊರವಿನ್ಯಾಸ ಹಲವು ಇದ್ದರೂ ಮೇಲ್ನೋಟಕ್ಕೆ ಕಾಣದ ಎಂಜಿನ್, ಗೇರ್ಬಾಕ್ಸ್, ಚಾಸ್ಸಿ, ವಯರಿಂಗ್ ಹಾರ್ನೆಸ್ಗಳು, ಸ್ವಿಚ್ಗಳು ಇತ್ಯಾದಿ ಒಳಗೊಂಡ ಅಸ್ಥಿಪಂಜರವನ್ನು – ಮಾಡ್ಯುಲಾರ್ – ಅಂದರೆ ಹಲವು ವಿನ್ಯಾಸಕ್ಕೆ ಹೊಂದಿಸಬಹುದಾದಂತೆ ವಿನ್ಯಾಸ ಮಾಡಿರಲಾಗುತ್ತದೆ

ಮೊದಲೆಲ್ಲ ಕಾರುಗಳನ್ನು ನೋಡಿದ ಕೂಡಲೇ ಇದು ಇಂತಿಂಥದ್ದು ಎಂದು ಹೇಳಿಬಿಡಬಹುದಿತ್ತು. ಅಂಬಾಸೆಡರ್ಗೂ ಪ್ರೀಮಿಯರ್ ಪದ್ಮಿನಿಗೂ ಗಾತ್ರ-ಗೋತ್ರ ಎರಡರಲ್ಲೂ ವ್ಯತ್ಯಾಸ. ಮಹೀಂದ್ರದ ಜೀಪೇ ಬೇರೆ, ಮಾರುತಿ ಜಿಪ್ಸಿಯೇ ಬೇರೆ. ಆದರೆ ಈಗೀಗ ಹೆಸರು ಪೂರ್ತಿ ನೋಡದೇ ಪಕ್ಕನೆ ಹೇಳಲಾಗುವುದಿಲ್ಲ. ಕೆಲವೊಮ್ಮೆ ಸಣ್ಣದು, ದೊಡ್ಡದು, ಬಿಳಿ, ಕೆಂಪು ಎಂಬುದರ ಹೊರತು ಹೆಚ್ಚಿನೆಲ್ಲಾ ಕಾರುಗಳೂ ಹೆಚ್ಚೂಕಮ್ಮಿ ಒಂದೇ ರೀತಿ ಕಾಣುತ್ತವೆ. ಯಾಕ್ಹೀಗೆ ಅಂದರೆ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಪರಿಣಾಮ ಅನ್ನಬಹುದು.
ವಾಹನೋದ್ಯಮ ಇತ್ತೀಚೆಗೆ ಪ್ಲಾಟ್ಫಾರ್ಮ್ಗಳ ಮೊರೆ ಹೋಗಿದೆ. ಇಲ್ಲಿ ಹೊರವಿನ್ಯಾಸ ಹಲವು ಇದ್ದರೂ ಮೇಲ್ನೋಟಕ್ಕೆ ಕಾಣದ ಎಂಜಿನ್, ಗೇರ್ಬಾಕ್ಸ್, ಚಾಸ್ಸಿ, ವಯರಿಂಗ್ ಹಾರ್ನೆಸ್ಗಳು, ಸ್ವಿಚ್ಗಳು ಇತ್ಯಾದಿ ಒಳಗೊಂಡ ಅಸ್ಥಿಪಂಜರವನ್ನು – ಮಾಡ್ಯುಲಾರ್ – ಅಂದರೆ ಹಲವು ವಿನ್ಯಾಸಕ್ಕೆ ಹೊಂದಿಸಬಹುದಾದಂತೆ ವಿನ್ಯಾಸ ಮಾಡಿರಲಾಗುತ್ತದೆ.
90ರ ದಶಕದಲ್ಲಿ ನಮ್ಮ ದೇಶದಲ್ಲಿದ್ದ ವಾಹನಗಳಲ್ಲಿ ಪ್ಲಾಟ್ಫಾರ್ಮ್ ಶೇರಿಂಗ್ ಅಷ್ಟಾಗಿ ಇರಲಿಲ್ಲ. ಮಾರುತಿ 800 ಹಾಗೂ ಮಾರುತಿ ಓಮ್ನಿ ಒಂದೇ ಎಂಜಿನ್ ಬಳಕೆ ಮಾಡುತ್ತಿದ್ದರೂ ಇತರೆ ಬಿಡಿಭಾಗಗಳ ವಿಚಾರದಲ್ಲಿ ಎರಡಕ್ಕೂ ಸಮಾನವಾಗುವ ಬಿಡಿಭಾಗಗಳ ಬಳಕೆ ಇದ್ದುದು ಅತ್ಯಲ್ಪ.
ಅಂತೆಯೇ ಜಿಪ್ಸಿ, ಎಸ್ಟೀಮ್ ಇವುಗಳು ಒಳಗಿನಿಂದ ಹೊರಗೆ ಭಿನ್ನ ಕಾರುಗಳು. ಅದೇ ಕಂಪನಿಯ ಇಂದಿನ ಸ್ಥಿತಿ ಗಮನಿಸಿದರೆ ವಿಟಾರಾ ಬ್ರೆಝ್ಝಾ, ಬಲೆನೋ, ಸ್ವಿಫ್ಟ್, ಎರ್ಟಿಗಾ, ಇಗ್ನಿಸ್ ಇವೆಲ್ಲಾ ಒಂದೇ ಪ್ಲಾಟ್ಫಾರ್ಮ್. ಮಾರುತಿ-ಸುಝುಕಿ ತನ್ನ ಹೊಸ ಪ್ಲಾಟ್ಫಾರಿಗೆ ಹಾರ್ಟ್ಟೆಕ್ಟ್ ಎಂದು ನಾಮಕರಣ ಮಾಡಿದೆ.
ಪ್ಲಾಟ್ಫಾರ್ಮ್ ವಿನ್ಯಾಸ ಮಾಡುವಾಗ ಎಂಜಿನ್ ಬೇ, ಪ್ಯಾಸೆಂಜರ್ ಕ್ಯಾಬಿನ್, ಹಿಂಬಾಗದ ಹಲವು ಅಂತರ್ಭಾಗಗಳು ಇವೆಲ್ಲಾ ಹಲವು ಮಾಡೆಲ್ಗಳಿಗೆ ಹೊಂದಿಕೆಯಾಗುವಂತೆ ದೂರದೃಷ್ಟಿ ಇಟ್ಟುಕೊಂಡು ವಿನ್ಯಾಸ ಮಾಡಲಾಗುತ್ತದೆ. ಈ ಅಂತರಿಕ ವಿನ್ಯಾಸಗಳು ಅಂತರ್ವಿನ್ಯಾಸಗಳಾಗಿರುವ ಕಾರಣ ಕಾರಿನಿಂದ ಕಾರಿಗೆ ಬದಲಾಗುವುದಿಲ್ಲ. ಮಾಡೆಲ್ನಿಂದ ಮಾಡೆಲ್ಗೆ ಕನಿಷ್ಠ ಶೇ.30 ರಿಂದ ಬಹುತೇಕ ಶೇ.70ರ ವರೆಗೂ ಬಿಡಿಭಾಗಗಳ ಶೇರಿಂಗ್ ಇಂದು ವಾಹನೋದ್ಯಮದಲ್ಲಿ ನಡೆಯುತ್ತಿದೆ. ಕೆಲವು ಮಾಡೆಲ್ಗಳ ವಿಚಾರದಲ್ಲಂತೂ ಇರುವ ವ್ಯತ್ಯಾಸವೇ ಶೇ.10ರಷ್ಟು ಮಾತ್ರ. ಉದಾಹರಣೆಗೆ ಎರ್ಟಿಗಾ ಹಾಗೂ ಎಕ್ಸ್ಎಲ್6. ಹೊರಗಿನಿಂದ ಹೆಡ್ಲೈಟ್, ಗ್ರಿಲ್, ಬಂಪರ್ ಒಳಗೊಂಡ ಮುಂಭಾಗವಷ್ಟೇ ವ್ಯತ್ಯಾಸ. ಒಳಗೆ ಮಧ್ಯದಲ್ಲಿ ಎರ್ಟಿಗಾದಲ್ಲಿ ಬೆಂಜ್ ಸೀಟಾದರೆ ಎಕ್ಸ್ಎಲ್6ನಲ್ಲಿ ಕ್ಯಾಪ್ಟನ್ ಸೀಟುಗಳು, ಎರಡರ ನಡುವೆ ಅಷ್ಟೇ ಅಂತರ.
ಹ್ಯಾಚ್ಬ್ಯಾಕ್ ಹಾಗೂ ಸೆಡಾನ್ ಎರಡಕ್ಕೂ ಒಂದೇ ಪ್ಲಾಟ್ಫಾರ್ಮ್ ಬಳಕೆ ಮಾಡುವುದಿದೆ. ಇತ್ತೀಚಗೆ ಭಾರತದಿಂದ ನಿರ್ಗಮಿಸಿದ ಫಿಯೆಟ್ ಲೀನಿಯಾ-ಪುಂಟೋ, ಈಗಲೂ ಮಾರುಕಟ್ಟೆಯಲ್ಲಿರುವ ಫೋಕ್ಸ್ವ್ಯಾಗನ್ ಪೋಲೋ-ವೆಂಟೋ, ನಿಸ್ಸಾನ್ ಮೈಕ್ರಾ-ಸನ್ನಿ, ಇವೆಲ್ಲಾ ಒಂದೇ ಪ್ಲಾಟ್ಫಾರ್ಮಿನ ಭಿನ್ನ ಕಾರುಗಳು.
ಇದಲ್ಲದೆ ಕಂಪನಿ-ಕಂಪನಿ ನಡುವಿನ ಒಡಂಬಡಿಕೆ, ಕೆಲವು ಸಂದರ್ಭದಲ್ಲಿ ಒಂದ ಕಂಪನಿಯನ್ನು ಮತ್ತೊಂದು ಖರೀದಿ ಮಾಡಿದ ಪರಿಣಾಮ ಒಂದೇ ಪ್ಲಾಟ್ಫಾರ್ಮನ್ನು ಒಂದಕ್ಕಿಂತ ಹೆಚ್ಚು ಕಂಪನಿಗಳು ಬಳಸುವುದಿದೆ. ನಷ್ಟದಲ್ಲಿದ್ದ ಬ್ರಿಟಿಷ್ ಬ್ರ್ಯಾಂಡ್ ಜಾಗ್ವಾರ್-ಲ್ಯಾಂಡ್ರೋವರನ್ನು ಟಾಟಾ ಖರೀದಿಸಿದ್ದ ಪರಿಣಾಮ ಟಾಟಾದ ಇತ್ತೀಚಿನ ಹ್ಯಾರಿಯರ್ ಲ್ಯಾಂಡ್ರೋವರ್ ಡಿಸ್ಕವರಿಯ ಪ್ಲಾಟ್ಫಾರ್ಮ್ ಬಳಸಿ ತಯಾರಿಸಲಾಗಿದೆ.
ದಶಕಗಳ ಹಿಂದೆ ಒಂದು ಕಾರಿನ ವಿನ್ಯಾಸಕ್ಕೆ ಕೊಡುತ್ತಿದ್ದುದಕ್ಕಿಂತಲೂ ಹೆಚ್ಚಿನ ಗಮನ ಈಗ ಪ್ಟಾಟ್ಫಾರ್ಮ್ ವಿನ್ಯಾಸಕ್ಕೆ ಕೊಡಲಾಗುತ್ತಿದೆ. ಭಾರತದಂಥ ಮಾರುಕಟ್ಟೆಗಾಗಿಯೇ ರೆನೋ ತನ್ನ “ಸಿಎಂಎಫ್-ಎ” ಪ್ಲಾಟ್ಫಾರ್ಮ್ ಸಿದ್ಧಪಡಿಸಿದೆ. ಐದು ಆಸನಗಳ ಕ್ವಿಡ್ ಹಾಗೂ ಏಳು ಮಂದಿ ಕೂರಬಹುದಾದ ಟ್ರೈಬರ್ನ ಅಡಿಪಾಯ ಸಿಎಂಎಫ್-ಎ ಪ್ಲಾಟ್ಫಾರ್ಮ್, ಟ್ರೈಬರಿಗಾಗುವಾಗ ಪ್ಯಾಸೆಂಜರ್ ಕ್ಯಾಬಿನ್ ತುಸು ಉದ್ದವಾಗಿದೆ.
ಕಾರುಗಳ ವಿನ್ಯಾಸದಲ್ಲಿ ಏನು ಬದಲಾವಣೆ?
ರೆನೋ-ನಿಸ್ಸಾನ್-ಡ್ಯಾಟ್ಸನ್ ಈ ಮೂರೂ ಬ್ರ್ಯಾಂಡ್ಗಳು ಒಂದೇ ಮಾಲೀಕತ್ವದಲ್ಲಿರುವ ಕಾರಣ ಡ್ಯಾಟ್ಸನ್ ರೆಡಿ ಗೋ ಸಿಎಂಎಫ್ ಎಯನ್ನೇ ಬಳಸುತ್ತದೆ. ಆದರೆ ಡ್ಯಾಟ್ಸನ್ ಬ್ರ್ಯಾಂಡನ್ನು ಮಾರುಕಟ್ಟೆಯಲ್ಲಿ ರೆನೋ ಹಾಗೂ ನಿಸ್ಸಾನ್ಗಿಂತ ಕೆಳ ಹಂತದ ಬ್ರ್ಯಾಂಡ್ ಆಗಿ ಇರಿಸಲಾಗಿದೆ. ಅದರಂತೆ ಬೆಲೆಯೂ ಕಡಿಮೆ.
ಹೋಂಡಾ ಬ್ರಿಯೋ ಪ್ಲಾಟ್ಫಾರ್ಮ್ನಲ್ಲಿ ಅಮೇಝ್, ಮೊಬಿಲಿಯೋ, ಬಿಅರ್ವಿ – ಇಂಥ ಮೂರು ಮಾಡೆಲ್ಗಳನ್ನು ಪರಿಚಯಿಸಿತು. ಆದರೆ ಮಾರುಕಟ್ಟೆಯಲ್ಲಿ ಅಮೇಝ್ನ ಯಶಸ್ಸನ್ನು ಇತರೆ ಮಾಡೆಲ್ಗಳು ಕಾಣಲು ಸಾಧ್ಯವಾಗಿಲ್ಲ. ಸಿಟಿಯ ಪ್ಲಾಟ್ಫಾರ್ಮ್ನಲ್ಲೇ ತಯಾರಾದ ಡಬ್ಲ್ಯುಆರ್ವಿ ಭಾರಪೊರ ಯಶಸ್ಸಲ್ಲದಿದ್ದರೂ ಕಂಪನಿಯ ಪಾಲಿಗೆ ಸಮಾಧಾನಕರ ಯಶಸ್ಸು ತಂದಿದೆ.
ಟೊಯೋಟಾ ಮತ್ತು ಸುಝುಕಿ ಜಂಟಿಯಾಗಿ ಹೊಸ ಪ್ಲಾಟ್ಫಾರ್ಮ್ ವಿನ್ಯಾಸ ಮಾಡಲಿರುವುದಾಗಿ ಈಗಾಗಲೇ ಹೇಳಿಕೆ ನೀಡಿವೆ. ಜತೆ ಜತೆಗೆ ಒಂದೇ ಕಾರನ್ನು ಎರಡು ಕಂಪನಿಗಳು ಎರಡು ಹೆಸರಿನೊಂದಿಗೆ ಮಾರಾಟ ಮಾಡುವ “ಬ್ಯಾಡ್ಜ್ ಎಂಜಿನಿಯರಿಂಗ್”ಗೂ ಕೈ ಹಾಕಿವೆ. ಅದರಂತೆ ಸುಝುಕಿ ಬಲೆನೋ ಟೊಯೋಟ ಗ್ಲಾನ್ಝಾ ಆಗಿದೆ. ಎಕ್ಸ್ಎಲ್6 ಹೊಸ ಹೆಸರಿನೊಂದಿಗೆ ಟೊಯೋಟಾ ಶೋರೂಂ ಹೊಗ್ಗಲಿದೆ.
ರೆನೋ ಡಸ್ಟರ್ ನಿಸ್ಸಾನ್ನ ಟೆರೆನೋ ಆಗಿತ್ತು. ಫೊಕ್ಸ್ವ್ಯಾಗನ್ ವೆಂಟೋ-ಸ್ಕೋಡಾ ರ್ಯಾಪಿಡ್ ನಡುವೆ ಲೋಗೋ ಮಾತ್ರವೇ ವ್ಯತ್ಯಾಸ. ಜಾಗತಿಕವಾಗಿ ಫೊಕ್ಸ್ವ್ಯಾಗನ್ ಬ್ರ್ಯಾಂಡ್ಗಿಂತ ಕೆಳಗೆ ಸ್ಕೋಡಾವನ್ನು ಇರಿಸಲಾಗಿದೆ. ಆದರೆ ಭಾರತದಲ್ಲಿ ಮೊದಲ ತಲೆಮಾರಿನ ಸ್ಕೋಡಾ ಆಕ್ಟೇವಿಯಾದ ಯಶಸ್ಸಿನ ಕಾರಣ ಸ್ಕೋಡಾ ತಾನಾಗಿ ಪ್ರೀಮಿಯಂ ಬ್ರ್ಯಾಂಡ್ ಪಟ್ಟಿಗೆ ಸೇರಿಕೊಂಡಿತು. ಹಾಗಾಗಿ ಕಂಪನಿಯೂ ಸ್ಕೋಡಾದ ಬೆಲೆಯನ್ನು ಫೋಕ್ಸ್ವ್ಯಾಗನ್ಗಿಂತ ಮೇಲ್ಮಟ್ಟದಲ್ಲಿಡುವ ಮೂಲಕ ಅದೇ ಸೂತ್ರ ಮುಂದುವರಿಸಿದೆ.
ಈ ವರ್ಷ ದೇಶದ ಮಾರುಕಟ್ಟೆ ಪ್ರವೇಶಿಸಿದ ಕೊರಿಯಾದ ಕಿಯಾ ಅದೇ ದೇಶದ ಹ್ಯುಂಡೈ ಒಡೆತನದಲ್ಲಿದೆ. ಹಾಗಾಗಿ ಕಿಯಾ ಸೆಲ್ಟೋಸ್ ಹ್ಯುಂಡೈ ಕ್ರೇಟಾದ ಅಡಿಪಾಯ ಮಾತ್ರವಲ್ಲ, ಹೊರಗಿಂದ ಕಾಣುವ ಪ್ಯಾನಲ್ಗಳ ವರೆಗೆ ಒಂದೇ. ಮುಂಭಾಗದ ಲೈಟುಗಳ ವಿನ್ಯಾಸ ಹಾಗೂ ಒಳಗೆ ಅಲ್ಪ ಬದಲಾವಣೆ ಹೊಂದಿ ಸೆಲ್ಟೋಸ್ ಜನ್ಮ ಪಡೆದಿದೆ.
ಹಾಗೆಯೇ ಇದೇ ವರ್ಷ ನಮ್ಮಲ್ಲಿಗೆ ಬಂದ ಬ್ರಿಟಿಷ್ ಮೂಲದ ಆದರೆ ಪ್ರಸ್ತುತ ಚೀನಿ ಕಂಪನಿ ಒಡೆತನದಲ್ಲಿರುವ ಎಂಜಿ ಬ್ರ್ಯಾಂಡಿನ ಹೆಕ್ಟರ್ ಶವರ್ಲೆ ಕ್ಯಾಪ್ಟಿವಾದ ಪ್ಲಾಟ್ಫಾರ್ಮ್ನ ಹಲವು ಭಾಗಗಳನ್ನು ಬಳಕೆ ಮಾಡಿಕೊಂಡಿದೆ. ಮಾತೃ ಸಂಸ್ಥೆ ಎಸ್ಎಐಸಿ (ಶಾಂಘಾಯ್ ಆಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಶನ್) ಅಮೆರಿಕದ ಜನರಲ್ ಮೋಟಾರ್ಸ್, ಇಟಲಿಯ ಇವಿಕೊ ಹಾಗೂ ಜರ್ಮನಿಯ ಫೋಕ್ಸ್ವ್ಯಾಗನ್ನೊಂದಿಗೆ ಜಂಟಿ ಒಪ್ಪಂದವಿರುವ ಕಾರಣ ಆ ಎಲ್ಲಾ ಕಂಪನಿಗಳ ಪ್ಲಾಟ್ಫಾರ್ಮನ್ನು ಬಳಕೆ ಮಾಡುವ ಹಕ್ಕು ಪಡೆದುಕೊಂಡಿದೆ.
ಎಲ್ಲಾ ಸರಿ, ಗ್ರಾಹಕರಿಗೇನು ಲಾಭ?
ಕಂಪನಿಗಳು ಹೇಳುವ ಪ್ರಕಾರ ಹೊಸ ಕಾರಿನ ಅಭಿವೃದ್ಧಿ ಶೀಘ್ರ ಹಾಗೂ ಕಡಿಮೆ ವೆಚ್ಚದಲ್ಲಿ ಆಗುವ ಕಾರಣ ಕಡಿಮೆ ಬೆಲೆ ಕಾರು ನೀಡಲಾಗುತ್ತದೆ. ಆದರೆ ವಾಸ್ತವದಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ, ಅಥವಾ ಯಾವ ಕಾರನ್ನು ಕಡಿಮೆ ಬೆಲೆಗೆ ಕಂಪನಿಗಳು ಮಾರಾಟ ಮಾಡುತ್ತಿವೆ ಎಂಬುದು ಚರ್ಚಾಸ್ಪದ ವಿಚಾರವೇ. ವಾಸ್ತವದಲ್ಲಿ ಕಂಪನಿಗಳು ಹೆಚ್ಚಿನ ಲಾಭವನ್ನು ಮಾಡಿಕೊಳ್ಳುತ್ತಿವೆ ಎಂದೇ ಹೇಳಬಹುದು.
ಗ್ರಾಹಕನ ಪಾಲಿಗೆ ಒಂದು ವಾಹನಕ್ಕೂ ಇನ್ನೊಂದು ವಾಹನಕ್ಕೂ ನಡುವಿನ ಅಂತರ ಅತೀ ಕಡಿಮೆಯಾಗಿದೆ. ನೋಡುವುದಕ್ಕೆ ಭಿನ್ನವಾಗಿದ್ದರೂ ಓಡಿಸುವ ವಿಚಾರದಲ್ಲಿ ಬಹುತೇಕ ಏಕರೂಪತೆ ಬಂದಂತಾಗಿದೆ. ಹಾಗೆ ನೋಡಿದರೆ ಗ್ರಾಹಕನ ಆಯ್ಕೆ ಕಡಿಮೆಯಾಗುತ್ತಾ ಬಂದಿದೆ. ವಾಹನ ಕಂಪನಿಗಳೂ ಡ್ರೈವಿಂಗ್ ಹಾಗೂ ರೋಡ್ ಡೈನಾಮಿಕ್ಸ್ ಬದಲಾಗಿ ಇನ್ಫೋಟೇನ್ಮೆಂಟ್ ಕಡೆಗೆ ಹೆಚ್ಚೆಚ್ಚು ವಾಲಿದೆ. ಎಂಜಿನಿಯರಿಂಗ್ಗಿಂತ ಮಾರ್ಕೆಟಿಂಗ್ ಕಡೆಗೆ ತಕ್ಕಡಿ ಹೆಚ್ಚು ವಾಲಿದೆ.
ಮುಂದೇನು?
ಇವತ್ತು ನಾವು ಸ್ಮಾರ್ಟ್ ಫೋನ್ ಎಂದು ಕರೆಯುತ್ತಿರುವುದು ಬಹುತೇಕ ಆ್ಯಂಡ್ರಾಯ್ಡ್ ಹಾಗೂ ಐಒಎಸ್ಗಳನ್ನು. ಇವು ಬರುವುದಕ್ಕೆ ಮುನ್ನ ಮಾರುಕಟ್ಟೆಯಲ್ಲಿದ್ದ ಬ್ಲ್ಯಾಕ್ ಬೆರಿ, ಸಿಂಬಿಯಾನ್, ವಿಂಡೋಸ್ ನಂಥ ಆಪರೇಟಿಂಗ್ ಸಿಸ್ಟಂ ಇದ್ದಾಗಿನ ಸ್ಥಿತಿಗೂ ಇಂದಿಗೂ ಮೊಬೈಲ್ ಲೋಕದಲ್ಲಿ ಅಜಗಜಾಂತರ. ಆದರೆ ಆ್ಯಂಡ್ರಾಯ್ಡ್, ಐಒಎಸ್ ದೃಢವಾಗಿ ಸ್ಥಾಪನೆಯಾಗಲು ಪೂರಕ ಹಾರ್ಡ್ವೇರ್ನ ಬೆಂಬಲವೂ ದೊರಕಿತು.
ಹಾಗೆಯೇ ಇಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಹಾರ್ಡ್ವೇರ್ ಈಗೀಗ ವಿಸ್ತಾರವಾಗುತ್ತಾ ಬಂದಿದೆ. ಅದರ ಸೂಕ್ತ ರೀತಿಯ ಬಳಕೆಗೆ ಸರಿಯಾದುದೊಂದು ದಾರಿ ಇನ್ನಷ್ಟೇ ಸಿಗಬೇಕಿದೆ. ಯಾವ ತಂತ್ರಜ್ಞಾನ ಗಟ್ಟಿಯಾಗಿ ತಳವೂರುತ್ತದೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಬರುವುದು ಸಹಜ. ಯಾವ ತಂತ್ರಜ್ಞಾನ ಗ್ರಾಹಕ ಸ್ನೇಹಿಯಾಗಿ ಇರುತ್ತದೋ ಅದು ಅಂತಿಮವಾಗಿ ಪ್ರವರ್ಧಮಾನಕ್ಕೆ ಬರುತ್ತದೆ ಎಂಬುದು ಈ ಹಿಂದಿನ ಬೆಳವಣಿಗೆಯನ್ನು ಗಮನಿಸಿದರೆ ಗಟ್ಟಿಯಾಗಿ ಹೇಳಬಹುದು. ಕಂಫರ್ಟ್ ಝೋನಿಗೆ ಹೋಗುವ ಕಂಪನಿಗಳು ಕ್ರಮೇಣ ಶಸ್ತ್ರತ್ಯಾಗ ಮಾಡಬೇಕಾಗುತ್ತದೆ ಎಂಬುದು ಮಾರುಕಟ್ಟೆಯ ಸತ್ಯ.