ಟೆಕ್‌ ಕನ್ನಡ ಕುರಿತು

ಇಂದು ಟೆಕ್ನಾಲಜಿಯನ್ನು ಹೊರತುಪಡಿಸಿದ ದಿನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಪ್ರತಿ ಕ್ಷಣ ನಾವು ಪರಿಚಿತ ಹಾಗೂ ಅಪರಿಚಿತರೊಂದಿಗೆ ಬೆಸೆದಿರುವ ಈ ತಂತ್ರಜ್ಞಾನ, ಪರೋಕ್ಷ ಹಾಗೂ ಪ್ರತ್ಯಕ್ಷಾಗಿ ನಮ್ಮ ಬದುಕಿನ ಹಲವು ಕೆಲಸಗಳನ್ನು ಸಲೀಸು ಮಾಡಿದೆ. ಹಾಗೆಯೇ ನಮ್ಮ ಬದುಕನ್ನು ನಿಯಂತ್ರಿಸುತ್ತಿದೆ. ಈ ಲೋಕದ ಒಳಹೊರಗನ್ನು ಅರಿಯುವುದು ಇಂದಿನ ಅಗತ್ಯ.

ತಂತ್ರಜ್ಞಾನ ಕುರಿತು ಕನ್ನಡ ಭಾಷೆಯಲ್ಲೇ ಓದಲು ಸಾಧ್ಯವಾಗಬೇಕು. ಆದರೆ ಸದ್ಯದ ಮಟ್ಟಿಗೆ ಮಾಧ್ಯಮಗಳು ಸಾಂದರ್ಭಿಕವಾಗಿ ತಂತ್ರಜ್ಞಾನದ ವಿಷಯಗಳನ್ನು ವಿವರವಾಗಿ ನೀಡುತ್ತವೆ. ಜೊತೆಗೆ ಅವೆಲ್ಲವೂ ತಾಂತ್ರಿಕ ಅಚ್ಚರಿಗಳನ್ನು ಪರಿಚಯಿಸುವ ಉತ್ಸಾಹದಲ್ಲಿ ಹೆಚ್ಚಾಗಿರುತ್ತವೆ ಅಥವಾ ಬಳಸುವುದು ಹೇಗೆ ಎಂದು ಟಿಪ್ಸ್‌ ನೀಡುವುದನ್ನು ಆದ್ಯತೆ ಎಂದುಕೊಂಡಿವೆ. ಟೆಕ್ನಾಲಜಿಯನ್ನು ಗ್ಯಾಜೆಂಟ್‌ಗಳೆಂದು ಸೀಮಿತ ಚೌಕಟ್ಟಿನಲ್ಲಿ ನೋಡುತ್ತಾ ಬಂದಿದೆ. ಆದರೆ ತಂತ್ರಜ್ಞಾನ ಪಡೆದುಕೊಂಡಿರುವ ವೇಗ, ಮತ್ತು ಅವು ಆರೋಗ್ಯ, ಶಿಕ್ಷಣ, ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರಭಾವಿಸುತ್ತಿವೆ. ಆಗ್ಮೆಂಟೆಡ್‌ ರಿಯಾಲಿಟಿ, ವರ್ಚ್ಯುವಲ್‌ ರಿಯಾಲಿಟಿ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನಂತಹ ತಂತ್ರಜ್ಞಾನಗಳ ಬಗ್ಗೆ ಕನ್ನಡದ ಓದುಗರಿಗೆ ಸಿಕ್ಕಿರುವ ಜ್ಞಾನ ಮತ್ತು ಒಳನೋಟಗಳು ಎಷ್ಟೆಂಬುದು ನಮ್ಮನ್ನ ಕಾಡಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು, ಇಂಟರ್ನೆಟ್‌ಗಳನ್ನು ನಿಯಂತ್ರಣವಿಲ್ಲದೇ ಬಳಸುತ್ತಿರುವ ಹೊತ್ತಲ್ಲಿ, ಮಾಹಿತಿ ಹಕ್ಕು, ಮಾಹಿತಿ ಸುರಕ್ಷತೆಯಂತಹ ಮೂಲಭೂತ ವಿಷಯಗಳ ಕುರಿತು ನಮ್ಮ ತಿಳಿವಳಿಕೆ ಏನು ಎಂಬ ಪ್ರಶ್ನೆಯೂ ನಮ್ಮನ್ನು ತಾಕುತ್ತಲೇ ಇದೆ.

ಜಗತ್ತಿನ ಎಲ್ಲ ಜ್ಞಾನಶಾಖೆಗಳು ಮಾತೃಭಾಷೆಯಲ್ಲಿ ಲಭ್ಯವಾಗಬೇಕೆಂದು ಪ್ರತಿಪಾದಿಸುವರಲ್ಲಿ ನಾವು ಒಬ್ಬರು. ಹೀಗೆ ಮಾಡುವುದರಿಂದ ನಮ್ಮ ಸುತ್ತಲ ಸಮಾಜ ಪಡೆದುಕೊಳ್ಳುವ ವಿವೇಕ, ವಿವೇಚನೆ, ವೈಚಾರಿಕತೆ ಕಾಲಘಟ್ಟದ ಬೌದ್ಧಿಕತೆಯನ್ನು ಬೆಳೆಸುತ್ತದೆ, ಪೋಷಿಸುತ್ತದೆ, ಶ್ರೀಮಂತಗೊಳಿಸುತ್ತದೆ.

ಪರಭಾಷೆಗಳಿಂದ ಸೃಜನಶೀಲ ಸಾಹಿತ್ಯ ಬಂದಷ್ಟು ಪ್ರಮಾಣದಲ್ಲಿ ವಿಜ್ಞಾನ-ತಂತ್ರಜ್ಞಾನ ಸಾಹಿತ್ಯ ಬಂದಿಲ್ಲ. ಹಾಗಾಗಿ ಸಮಕಾಲೀನ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳು ತಮ್ಮ ಮಿತಿಯಲ್ಲಿ ನೀಡುವ ಸುದ್ದಿ-ಬರಹಗಳೇ ನಮಗೆ ಸಿಕ್ಕ ಜ್ಞಾನಾರ್ಜನೆಯ ಅವಕಾಶ.

ಭಾಷೆ, ಸಂಸ್ಕೃತಿ, ಸಮಾಜ ಎಲ್ಲ ದೃಷ್ಟಿಯಿಂದಲೂ ಕಾಲದ ಜೊತೆಗೆ, ಜ್ಞಾನವೂ ನಮಗೆ ಲಭ್ಯವಾಗಬೇಕು. ಈ ತುರ್ತು ಮತ್ತು ಅಗತ್ಯವನ್ನು ಅರಿತು ನಾವು ಕನ್ನಡದಲ್ಲಿ ಸಂಪೂರ್ಣವಾದ ತಂತ್ರಜ್ಞಾನದ ಜಾಲವಾಣವೊಂದು ರೂಪಿಸುವುದಕ್ಕೆ ಮುಂದಾದೆವು. ಅದರ ಫಲ ನಿಮ್ಮ ಮುಂದೆ.

ಟೆಕ್‌ ಕನ್ನಡ, ತಂತ್ರಜ್ಞಾನ ಲೋಕದ ನಿತ್ಯದ ಆಗುಹೋಗುಗಳನ್ನು ವರದಿ ಮಾಡುವ ಜೊತೆಗೆ, ತಾಂತ್ರಿಕ ಬೆಳವಣಿಗೆಗಳ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳುವ ಒಳನೋಟಗಳನ್ನು ನೀಡಲಿದೆ. ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ.

ಕುಮಾರ್ ಎಸ್, ಪ್ರಧಾನ ಸಂಪಾದಕ

editor.techkannada@gmail.com

%d bloggers like this: