ಏಮ್ಸ್‌ ಸೈಬರ್‍‌ ಅಟ್ಯಾಕ್‌ | ಡಿಜಿಟಲ್‌ ಇಂಡಿಯಾದಲ್ಲಿ ಡೇಟಾ ಎಷ್ಟು ಸುರಕ್ಷಿತ? ಕಳೆದ 8 ವರ್ಷಗಳಲ್ಲಿ ಎಷ್ಟು ಸೈಬರ್ ದಾಳಿಗಳಾಗಿವೆ ಗೊತ್ತೆ?

ಡೇಟಾ ಸುರಕ್ಷಿತಗೆ ಕಾಯ್ದೆ ಜಾರಿಗೆ ಬರದೆ ಇನ್ನೂ ಚರ್ಚೆಯ ಹಂತದಲ್ಲೇ ಇರುವ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್‌ ಮೇಲೆ ಸೈಬರ್‍‌ ದಾಳಿ ನಡೆದಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಇಂತಹ ದಾಳಿಗಳು ಹಲವು ನಡೆದಿವೆ ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ

ನವೆಂಬರ್‍‌ 23ರಂದು ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್‌ ( ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್) ಮೇಲೆ ಸೈಬರ್ ದಾಳಿ ನಡೆಯಿತು. ರ್‍ಯಾನ್ಸಂ ವೇರ್‍‌ ( ನೀವು ಬಳಸುವ ಅಥವಾ ಮಾಹಿತಿ ಸಂಗ್ರಹಿಸಿರುವ ಸಾಧನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಹಣಕ್ಕಾಗಿ ಬೇಡಿಕೆ ಇಡಲು ಬಳಸುವ ಮಾಲ್‌ವೇರ್‍‌ ) ಮೂಲಕ ಏಮ್ಸ್‌ನ 5 ಸರ್ವರ್‍‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬೆಳವಣಿಗೆ ನಡೆದು ಇಂದಿಗೆ 6 ದಿನಗಳಾಗಿವೆ.

ದಾಳಿ ಮಾಡಿದವರು ಸರ್ವರ್‍‌ಗಳ ನಿಯಂತ್ರಣವನ್ನು ಬಿಟ್ಟು ಕೊಡುವುದಕ್ಕೆ 200 ಕೋಟಿ ರೂ.ಗಳನ್ನು ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ನೀಡುವುದಕ್ಕೆ ಬೇಡಿಕೆ ಇಟ್ಟಿದ್ದರು. ಏಮ್ಸ್‌ನಲ್ಲಿ 40 ಭೌತಿಕ ರೂಪದ ಸರ್ವರ್‍‌ಗಳಿದ್ದು 100 ವರ್ಚುವಲ್‌ ಕ್ಲೌಡ್‌ ಸರ್ವರ್‍‌ಗಳು ಬಳಕೆಯಾಗುತ್ತಿವೆ. ಈ ಪೈಕಿ ದಾಳಿಗೆ ಒಳಗಾಗಿರುವ 5 ಸರ್ವರ್‍‌ಗಳಲ್ಲಿ 3 ರಿಂದ 4 ಕೋಟಿ ರೋಗಿಗಳ ಮಾಹಿತಿ ಇದ್ದು, ಇವು ಹ್ಯಾಕರ್‍‌ಗಳ ನಿಯಂತ್ರಣಕ್ಕೆ ಸಿಲುಕಿವೆ.

ಬುಧವಾರ ಬೆಳಗ್ಗೆ 7ಗಂಟೆಯಿಂದಲೇ ಸೈಬರ್‍‌ ದಾಳಿಯಿಂದಾಗಿ ದೈನಂದಿನ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಸ್ಮಾರ್ಟ್ ಲ್ಯಾಬ್‌, ಬಿಲ್ಲಿಂಗ್‌, ರಿಪೋರ್ಟ್ ಜನರೇಷನ್‌, ಇತ್ಯಾದಿ ಸೇವೆಗಳೆಲ್ಲವೂ ಡಿಜಿಟಲ್‌ ರೂಪದಲ್ಲಿ ನಡೆಯುತ್ತಿತ್ತು. ಕಳೆದ ಜನವರಿಯಲ್ಲಿ ಏಮ್ಸ್‌ ಸಂಪೂರ್ಣವಾಗಿ ಕಾಗದ ಮುಕ್ತ ಡಿಜಿಟಲ್ ಸೇವೆಯನ್ನು ಆರಂಭಿಸಿತ್ತು. ಆದರೆ ತಾಂತ್ರಿಕ ನ್ಯೂನತೆಗಳು ಭಾರಿ ದೊಡ್ಡ ದಾಳಿಗೆ ಅವಕಾಶ ನೀಡಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರೀಯ ತನಿಖಾ ದಳ, ಕಂಪ್ಯೂಟರ್‍‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಸದಸ್ಯರು ಹಾಗೂ ದೆಹಲಿಯ ಪೋಲೀಸ್‌ ತನಿಖೆ ನಡೆಸುವ ಹಾಗೂ ಸರ್ವರ್‍‌ಗಳಿಂದ ಡೇಟಾವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಈ ಇಡೀ ಬೆಳವಣಿಗೆ ಡೇಟಾ ಸುರಕ್ಷತೆಯ ಪ್ರಶ್ನೆಯನ್ನು ಮತ್ತೊಮ್ಮೆ ಪ್ರತಿಯೊಬ್ಬರ ಮುಂದೆ ತಂದು ನಿಲ್ಲಿಸಿದೆ.

ಡಿಜಿಟಲ್ ಇಂಡಿಯಾ ಎಷ್ಟು ಸುಭದ್ರ?
ದೇಶವನ್ನು ಡಿಜಿಟಲ್‌ ಮಾಡುವುದಾಗಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಹಲವು ಡಿಜಿಟಲ್‌ ಕೇಂದ್ರಿತ ಸೇವೆಗಳನ್ನು ಜಾರಿಗೆ ತರುತ್ತಲೇ ಬಂದಿದೆ. ಸರ್ಕಾರಿ ಸೇವೆಗಳನ್ನು ವರ್ಚುವಲ್‌ ಗೊಳಿಸುವ ಮೂಲಕ ಎಲ್ಲರಿಗೂ ಸುಲಭವಾಗಿ ಸೇವೆ ಲಭ್ಯವಾಗುವಂತೆ, ಮನೆಯ ಬಾಗಿಲಿಗೆ, ಮನೆಯ ಬಾಗಿಲಿಗೆ ತಲುಪಿಸುವ ಮಹತ್ವಕಾಂಕ್ಷೆ ಕಾಣಿಸುತ್ತದೆ.

ಆದರೆ ಇಂತಹದ್ದೊಂದು ಹೆಜ್ಜೆ ಇಡುವ ಮೊದಲು ಪೂರ್ವ ತಯಾರಿಯೂ ಇರಬೇಕಲ್ಲವೆ? ದೇಶದ 2ನೇ ಅತಿದೊಡ್ಡ ಇಂಟರ್ನೆಟ್‌ ಬಳಸುವ ದೇಶವೆನಿಸಿಕೊಂಡ ಮೇಲೆ ಡೇಟಾ ಸುರಕ್ಷತೆ ಮೊದಲ ಆದ್ಯತೆಯಾಗಬೇಕು. ಅದಕ್ಕೆ ಸೂಕ್ತ ಭದ್ರತೆಯ ಕ್ರಮಗಳನ್ನೂ, ಕಾನೂನನ್ನು ಮತ್ತು ಜಾಗೃತಿಯನ್ನು ಮೂಡಿಸುವ ಬದ್ಧತೆ ಸರ್ಕಾರಕ್ಕೆ ಇರಬೇಕು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರ ಯೋಚಿಸಿಲ್ಲ ಎಂಬುದನ್ನು ಗಮನಿಸಬೇಕು. ಕೆಲವು ಘಟನೆಗಳು ಈ ಉಪೇಕ್ಷೆಯ ಧೋರಣೆಯನ್ನು ಸಮರ್ಥಿಸುತ್ತವೆ.

2020ರಲ್ಲಿ ಎನ್‌ಟಿಪಿಸಿ ಸೇರಿದಂತೆ 12 ಸಂಸ್ಥೆಗಳ ಮೇಲೆ ಚೈನಾದ ಹ್ಯಾಕರ್‍‌ಗಳು ದಾಳಿ ನಡೆಸಿದರು. ಬಹಳ ಮುಖ್ಯವಾಗಿ ವಿದ್ಯುತ್‌ ಸರಬರಾಜು ಮಾಡುವ ಘಟಕಗಳ ಮೇಲೆ ದಾಳಿ ನಡೆಸಲಾಗಿತ್ತು. ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದಂತೆ 2021ರಲ್ಲಿ ಗೃಹ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಸೈಬರ್‍‌ ದಾಳಿಗೆ ಗುರಿಯಾಗಿದ್ದರು!

ದಾಳಿಗಳು 200 ಪಟ್ಟು ಹೆಚ್ಚಿವೆ?!
ಕಳೆದ 8 ವರ್ಷಗಳಲ್ಲಿ ದೇಶವನ್ನು ಡಿಜಿಟಲ್‌ಮಯಗೊಳಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವಾಗಲೇ, ಸೈಬರ್ ದಾಳಿ ಅವ್ಯಾಹತವಾಗಿ ಹೆಚ್ಚುತ್ತಿರುವುದನ್ನು ಸ್ವತಃ ಸರ್ಕಾರಿ ಸಂಸ್ಥೆಯ ವರದಿಗಳು ದೃಢಪಡಿಸುತ್ತಿವೆ. ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ನ ವರದಿಯ ಪ್ರಕಾರ 2020ರಲ್ಲೇ 194%ನಷ್ಟು ಸೈಬರ್‍‌ ದಾಳಿಯಾಗಿದೆ! ಲೋಕಸಭೆಯ ಅಂಕಿ ಅಂಶಗಳನ್ನು ಆಧರಿಸಿದ, ಬ್ಯುಸಿನೆಸ್‌ ಟುಡೆಯ ಈ ಗ್ರಾಫನ್ನೇ ಗಮನಿಸಿ.

ಸೋಷಿಯಲ್‌ ಮೀಡಿಯಾವನ್ನು ಅತಿ ವ್ಯಾಪಕವಾಗಿ ಬಳಸುವ ಭಾರತ, ಸೈಬರ್‍‌ ದಾಳಿಗೆ ಗುರಿಯಾದ ಜಗತ್ತಿನ 2ನೇ ರಾಷ್ಟ್ರ ಎಂಬ ಶ್ರೇಯವನ್ನು ಗಳಿಸಿದೆ ಕೂಡ. ಆನ್‌ಲೈನ್‌ ಬಳಕೆದಾರರ ಮಾಹಿತಿ ಸುರಕ್ಷತೆಯ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಈ ಸರ್ಕಾರ ಡೇಟಾ ಸುರಕ್ಷೆಯ ಮಸೂದೆಯನ್ನು 2 ವರ್ಷಗಳಿಗೂ ಹೆಚ್ಚು ಕಾಲ ದೂಳು ತಿನಿಸುತ್ತಿದ್ದಾಗಲೇ ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಚುನಾವಣೆ ಸಮೀಪಿಸುತ್ತಿರುವ, ಹಲವು ರಾಜಕೀಯ ಹಿತಾಸಕ್ತಿಗಳ ಕಾರಣಕ್ಕೆ ಈ ಮತ್ತೆ ಮಸೂದೆಯಲ್ಲಿ ಹಲವು ಕಾರ್ಪೋರೇಟ್‌ ಹಿತಾಸಕ್ತಿಯನ್ನು ಪೊಷಿಸುವ ತಿದ್ದುಪಡಿಗಳೊಂದಿಗೆ ಜನಾಭಿಪ್ರಾಯ ಸಂಗ್ರಹಕ್ಕೆ ಬಿಡುಗಡೆ ಮಾಡಲಾಗಿದೆ. ಜನರ ಮಾಹಿತಿಯನ್ನು ಯಾರಿಗಾದರೂ ನೀಡುವ ನಿಯಂತ್ರಣವನ್ನು ಪಡೆಯುವ ಉದ್ದೇಶವೂ ಈ ಮಸೂದೆಯಲ್ಲಿದ್ದು, ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ. ಸ್ವತಃ ಸರ್ಕಾರವೇ ದೇಶದ ನಾಗರಿಕ ಮಾಹಿತಿಯ ಬಗ್ಗೆ ಕಾಳಜಿ ವಹಿಸದೇ ಇರುವುದೇ ದೇಶದ ಸುರಕ್ಷತೆಯನ್ನು ಬಲಿಕೊಡುವ ಸ್ಥಿತಿಗೆ ತಂದುನಿಲ್ಲಿಸಿದಂತೆ ಕಾಣುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.