ಬಡ ದೇಶಗಳಿಗೆ ಸಹಾಯ ಮಾಡುವ ಮುಖವಾಡ ತೊಟ್ಟ ದೈತ್ಯ ಟೆಕ್ ಕಂಪನಿಗಳ ಮೊದಲ ಹೆಜ್ಜೆ…!

ಈಗಾಗಲೇ ತಮ್ಮ ಸೇವೆಯ ಮೂಲಕ ಇಡೀ ವಿಶ್ವದ ಜನ ಸಮುದಾಯದ ಮೇಲೆ ಒಂದು ರೀತಿಯ ಹಿಡಿತವನ್ನು ಸಾಧಿಸಿರುವ ದೈತ್ಯ ಟೆಕ್‌ ಕಂಪನಿಗಳು, ಈಗೀಗ ಹೊಸ ಮಾದರಿಯಲ್ಲಿ ವ್ಯವಹಾರಗಳನ್ನು ನಡೆಸಲು ಮುಂದಾಗುತ್ತಿವೆ. ಪ್ರತಿಯೊಂದು ವಿಷಯಕ್ಕೂ ತಮ್ಮ ಮೇಲೆಯೇ ಎಲ್ಲರು ಅವಲಂಬಿತರಾಗಬೇಕು ಎಂಬ ಮಹಾದಾಸೆಯನ್ನು ಹೊಂದಿರುವುದು ಈ ಮಹತ್ವಕಾಂಕ್ಷಿ ಯೋಜನೆಗಳ ಹಿಂದಿದೆ ಎನ್ನುವುದನ್ನು ಯಾರು ಬೇಕಾದರು ಊಹಿಸಬಹುದು.

ಹಲವು ಮಾದರಿಯ ಯೋಜನೆಗಳನ್ನು ತಯಾರಿಸುತ್ತಿರುವ ಟೆಕ್‌ ಕಂಪನಿಗಳು, ಅವುಗಳ ಅನುಷ್ಠಾನಕ್ಕಾಗಿ ಬಡರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಒಂದು ಮಾದರಿಯಲ್ಲಿ ಸಹಾಯ ಮಾಡುವ ಮುಖವಾಡವನ್ನು ಧರಿಸಿ ದೀರ್ಘವಾಧಿಯಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಳ್ಳುವುದನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ.

ಇದರ ಮೊದಲ ಹೆಜ್ಜೆ ಎನ್ನುವಂತೆ ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್, ಕೀನ್ಯಾದಲ್ಲಿ ತನ್ನ ಹೊಸ ಯೋಜನೆಯನ್ನು ಆರಂಭಿಸಿದೆ. ಕೀನ್ಯಾದ ರಿಫ್ಟ್ ಕಣಿವೆಯ ದೂರದ ಪ್ರದೇಶಗಳಲ್ಲಿನ ಗ್ರಾಮಸ್ಥರಿಗೆ ಬುಧವಾರದಿಂದ ಬಲೂನ್‌ (ಆಕಾಶಬುಟ್ಟಿ)ಗಳನ್ನು ಬಳಸಿಕೊಂಡು ವಿಶ್ವದ ಮೊದಲ ವಾಣಿಜ್ಯ ಹೈಸ್ಪೀಡ್ ಇಂಟರ್ನೆಟ್ ಅನ್ನು ನೀಡಲು ಪ್ರಾರಂಭಿಸಿದೆ.

ಈ ಸೇವೆಯನ್ನು ಆಲ್ಫಾಬೆಟ್‌ನ ಒಂದು ಘಟಕವಾದ ಲೂನ್ ಮತ್ತು ಪೂರ್ವ ಆಫ್ರಿಕಾದ ರಾಷ್ಟ್ರದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಟೆಲ್ಕಾಮ್ ಕೀನ್ಯಾ ಜಂಟಿಯಾಗಿ ನಡೆಸುತ್ತಿದೆ ಎನ್ನಲಾಗಿದೆ.  ಆದರೆ ಲೂನ್ ಮತ್ತು ಟೆಲಿಕಾಮ್ ಕೀನ್ಯಾ ನಡುವಿನ ವಾಣಿಜ್ಯ ಒಪ್ಪಂದದ ವಿವರಗಳನ್ನು ಬಹಿರಂಗವಾಗಿಲ್ಲ.

ಇದನ್ನು ಓದಿ: ಇತಿಹಾಸ ಬದಲಿಸಿದ ಸ್ನಾಪ್‌ಡ್ರಾಗನ್ 865+: 5G ಜೊತೆಗೆ 3GHz ವೇಗವನ್ನು ಕ್ರಾಸ್ ಮಾಡಿದ ಮೊದಲ SoC

ಈ ಸೇವೆಯನ್ನು ಪ್ರಾರಂಭಿಸಿದ ನಂತರ ಮಾತನಾಡಿದ ಕೀನ್ಯಾದ ಮಾಹಿತಿ ಸಚಿವ ಜೋ ಮುಚೇರು, “ಕೀನ್ಯಾ ಈ ಮಾದರಿಯನ್ನು ಸೇವೆಯನ್ನು ಪಡೆಯುತ್ತಿರುವ ಮೊದಲ ದೇಶ, ಬೇಸ್ ಸ್ಟೇಷನ್‌ಗಳನ್ನು ಆಕಾಶದಲ್ಲಿ ಎತ್ತರಕ್ಕೆ ಇಟ್ಟಿದೆ. ಇದರ ನಂತರ ನಾವು ಇಡೀ ದೇಶವನ್ನು ಬಹಳ ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗುತ್ತದೆ ”ಎಂದಿದ್ದಾರೆ. ಆದರೆ ಇದರಿಂದ ಕಂಪನಿಗೆ ಆಗುವ ಲಾಭದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ತೆರೆದ ಗ್ರಾಮೀಣ ಸಮುದಾಯಗಳಿಗೆ ಕೈಗೆಟುಕುವ ನಾಲ್ಕನೇ ತಲೆಮಾರಿನ (4 ಜಿ) ಅಂತರ್ಜಾಲವನ್ನು ಒದಗಿಸುವ ಉದ್ದೇಶ ಈ ಯೋಜನೆಯಾಗಿದೆ. ಇದಕ್ಕಾಗಿ ಹತ್ತು ವರ್ಷಕ್ಕೂ ಹೆಚ್ಚು ತಯಾರಿಯನ್ನು ನಡೆಸಲಾಗಿದೆ. ನಾವು ವಿಶ್ವದಾದ್ಯಂತ ಮೊಬೈಲ್ ನೆಟ್‌ವರ್ಕ್‌ನ ಮುಂದಿನ ಪದರವನ್ನು ಪರಿಣಾಮಕಾರಿಯಾಗಿ ನಿರ್ಮಿಸುತ್ತಿದ್ದೇವೆ. ನಾವು ಆಕಾಶದಲ್ಲಿ 20 ಕಿ.ಮೀ ದೂರದಲ್ಲಿರುವ ಸೆಲ್ ಟವರ್‌ನಂತೆ ಕಾಣುತ್ತೇವೆ ಎಂದು ಲೂನ್‌ನ ಮುಖ್ಯ ಕಾರ್ಯನಿರ್ವಾಹಕ ಅಲಾಸ್ಟೇರ್ ವೆಸ್ಟ್ಗಾರ್ತ್ ಹೇಳಿದ್ದಾರೆ.

ಈ ಸೇವೆಯನ್ನು ನೀಡುವ ಮೂಲಕ ಆಲ್ಫಾಬೆಟ್‌ ಯಾವ ಮಹತ್ವದ ಯೋಜನೆಗೆ ಕೈ ಹಾಕಿದೆ ಎನ್ನುವುದು ಇನ್ನು ತಿಳಿದಿಲ್ಲ. ಬಡ ದೇಶಗಳಿಗೆ ಸಹಾಯ ಮಾಡುವ ಮೂಲಕ ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವ ಹುನ್ನಾರವನ್ನು ನಡೆಸಿರುತ್ತದೆ. ಅಲ್ಲಿಯ ಜನರಿಗೆ ತಮ್ಮದೇ ಸೇವೆಗಳ ಮೇಲೆ ಅವಲಂಬಿತರಾಗುವಂತೆ ಮಾಡಿ, ಅಲ್ಲಿಯೇ ತಮ್ಮ ಸೇವೆಯನ್ನು ಮಾರಾಟ ಮಾಡಿ ಹಣವನ್ನು ಗಳಿಕೆ ಮಾಡುತ್ತವೆ.

ಇದೇ ಮಾದರಿಯಲ್ಲಿ ಭಾರತದಲ್ಲಿ ನೂಟ್ರಲ್ ಇಂಟರ್ನೆಟ್ ಎನ್ನುವ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಿದ ಫೇಸ್‌ಬುಕ್ ನಂತರದಲ್ಲಿ ಜನರ ವಿರೋಧವನ್ನು ಎದುರಿಸಲಾಗದೆ ಕೈಬಿಟ್ಟಿದ್ದು ಇನ್ನು ನೆನಪಿನಲ್ಲಿ ಹಾಗೇ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.