ಆಂಡ್ರಾಯ್ಡ್‌ ಕ್ಯೂ ಅಂತಿಮ ಬೀಟಾ ಆವೃತ್ತಿ ಬಿಡುಗಡೆ; ಹೊಸ ಫೀಚರ್‌ಗಳೇನಿವೆ?

ಇದು ಆಂಡ್ರಾಯ್ಡ್‌ನ 15ನೇ ಆವೃತ್ತಿ. ಇಂಗ್ಲಿಷ್‌ ಅಕ್ಷರಮಾಲೆಗಳ ಅಕ್ಷರಗಳ ಅನುಕ್ರಮದಲ್ಲಿ ಹೊರಬಂದ ಆಂಡ್ರಾಯ್ಡ್‌ ಪ್ರತಿ ಬಾರಿಯೂ ಬಳಕೆದಾರನ ಅನುಭವವನ್ನು ಶ್ರೀಮಂತಗೊಳಿಸುವ, ಕೆಲಸಗಳನ್ನು ಸರಳವಾಗಿಸುವ ಮಾಡಿವೆ. ಕ್ಯೂ ಯಾವ ರೀತಿಯಲ್ಲಿ ಭಿನ್ನವಾಗಲಿದೆ ಎಂಬ ಕುತೂಹಲ ಇದ್ದೇ. ಬೀಟಾ ಆವೃತ್ತಿ ಕೆಲವು ಸುಳಿಗಳನ್ನು ಬಿಟ್ಟುಕೊಟ್ಟಿದೆ

  • ಟೆಕ್‌ಕನ್ನಡ ಡೆಸ್ಕ್‌

ಜಗತ್ತಿನ ಶೇ. 80ರಷ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಸಕ್ರಿಯವಾಗಿರುವ ಆಂಡ್ರಾಯ್ಡ್‌ ಒಎಸ್‌ ಮತ್ತೊಂದು ಆವೃತ್ತಿಯನ್ನು ಪಡೆದುಕೊಳ್ಳುತ್ತಿದೆ. ಗೂಗಲ್‌ ಸಂಸ್ಥೆಯ ಈ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ ಕಳೆ ಒಂದು ದಶಕದ ಅವಧಿಯಲ್ಲಿ ಹದಿನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಕಪ್‌ ಕೇಕ್‌ ನಿಂದ ಆರಂಭವಾದ ಈ ಸರಣಿ, ವಿವಿಧ ಸಿಹಿ ತಿನಿಸುಗಳ ಹೆಸರಿನಲ್ಲಿ ಹೊಸ ಹೊಸ ಆವೃತ್ತಿಗಳು ಹೊರಬಂದಿವೆ.
ಈ ಸರಣಿಯಲ್ಲಿ ಈಗ ಕ್ಯೂ ಸರದಿ. ಇದು ಆಂಡ್ರಾಯ್ಡ್‌ 10 ಆವೃತ್ತಿಯಾಗಿದ್ದು, ಪರೀಕ್ಷಾರ್ಥವಾಗಿ ಐದು ಬೀಟಾ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಕಡೆಯದಾಗಿ ಆರನೇಯ ಆವೃತ್ತಿ ಹೊರಬಂದಿದೆ.

ಡಾರ್ಕ್‌ ಮೋಡ್‌

ಗೂಗಲ್‌ ಈ ಹಿಂದೆ ಡಾರ್ಕ್‌ ಮೋಡ್‌ ಅನ್ನು ಪ್ರಯೋಗಿಸಿ ನೋಡಿತ್ತು. ಆದರೆ ಅಧಿಕೃತವಾಗಿ ಬಳಕೆದಾರರಿಗೆ ಬಿಡುಗಡೆ ಮಾಡಿರಲಿಲ್ಲ. ಈ ಆಂಡ್ರಾಯ್ಡ್‌ ಕ್ಯೂ ಮೂಲಕ ಡಾರ್ಕ್‌ಮೋಡ್‌ ಅಧಿಕೃತವಾಗಿ ಲಭ್ಯವಾಗಲಿದೆ. ಬಳಕೆದಾರರು ಬ್ಯಾಟರಿ ಸೇವರ್‌ ಆಯ್ಕೆಯನ್ನು ಬಳಸಿದಾಗ ಡಾರ್ಕ್‌ ಮೋಡ್‌ ಸಕ್ರಿಯವಾಗುತ್ತದೆ. ಈ ಫೀಚರ್‌ಗಾಗಿ ಅಸಂಖ್ಯ ಆಂಡ್ರಾಯ್ಡ್‌ ಬಳಕೆದಾರರು ಕಾಯುತ್ತಿದ್ದರು.

ಸ್ಮಾರ್ಟ್‌ ರಿಪ್ಲೇ

ಎಲ್ಲ ರೀತಿಯ ಮೆಸೇಜಿಂಗ್‌ ಆಪ್‌ಗಳಿಗೆ ಬರುವ ಮೆಸೇಜ್‌ಗಳಿಗೆ ಕೂಡಲೇ ರಿಪ್ಲೇ ಮಾಡುವುದೇ ರಗಳೆಯ ಕೆಲಸ. ಸ್ಮಾರ್ಟ್‌ ರಿಪ್ಲೇಯ ಅವಕಾಶ ಸದ್ಯ ಗೂಗಲ್‌ ಆಪ್‌ಗಳಿಗೆ ಮಾತ್ರ ಲಭ್ಯವಿದೆ. ಆದರೆ ಇದು ಎಲ್ಲ ಆಪ್‌ಗಳಿಗೆ ಅನ್ವಯವಾಗುವಂತೆ ಹೊಸ ಓಎಸ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಶೇರಿಂಗ್‌ ಸುಲಭ

ಶೇರಿಂಗ್‌ ಪ್ಲಾಟ್‌ಫಾರಂ ಅತ್ಯಂತ ನಿಧಾನವಾಗಿ ಸ್ಪಂದಿಸುತ್ತದೆ ಎಂಬ ದೂರು ಆಂಡ್ರಾಯ್ಡ್‌ ಬಳಕೆದಾರರಲ್ಲಿ ಬಹಳ ಕಾಲದಿಂದ ಇತ್ತು. ಗೂಗಲ್‌, ಈ ಶೇರಿಂಗ್ ಮೆನುವನ್ನು ಸುಧಾರಿಸಿದ್ದು, ನೀವು ಶೇರ್‌ ಮಾಡುವುದನ್ನು ಸರಳವಾಗಿಸಲು ಕಾಂಟ್ಯಾಕ್ಟ್‌ಗಳನ್ನು ಮತ್ತು ಆಪ್‌ಗಳನ್ನು ಶಿಫಾರಸು ಮಾಡುತ್ತದೆ.

ಫೋಕಸ್‌ ಮೋಡ್

ಡಿಜಿಟಲ್‌ ವೆಲ್‌ಬಿಯಿಂಗ್‌ ಸೂಟ್‌ ಎಕ್ಸ್‌ಟೆನ್ಷನ್‌ ಇದು. ಅಂದರೆ ಇದು ನಿಮ್ಮ ಏಕಾಗ್ರತೆಗೆ ಭಂಗ ತರದಂತೆ ಕೆಲವು ಆಪ್‌ಗಳನ್ನು, ಅವುಗಳ ನೋಟಿಫಿಕೇಷನ್‌ಗಳನ್ನು ಬಚ್ಚಿಡುವ ಮೂಲಕ ನಿಮ್ಮ ಕೆಲಸಕ್ಕೆ ಭಂಗ ಉಂಟು ಮಾಡುವುದಿಲ್ಲ. ಜೊತೆಗೆ ಪೇರೆಂಟಲ್‌ ಕಂಟ್ರೋಲ್‌ ಕೂಡ ಇದೆ.

ಇವುಗಳ ಜೊತೆಗೆ ಫೈಲ್ಸ್‌ ಆಪ್‌, ಆಪ್‌ ಪರ್ಮಿಷನ್‌, ಕ್ಯೂರ್‌ ಕೋಡ್‌ ಮೂಲಕ ವೈಫೈ ಶೇರ್‌ ಮಾಡುವುದು, ಗೆಸ್ಚರ್ಸ್‌ ಮೂಲಕ ಆಪ್‌ಗಳನ್ನು ಬಳಸುವುದು, ಗೂಗಲ್‌ ಅಸಿಸ್ಟಂಟ್‌ಗಳಲ್ಲಿ ಸಣ್ಣ ಪುಟ್ಟ ಸುಧಾರಣೆಗಳು ಮಾಡಿದೆ. ಅಂತಿಮವಾಗಿ ಒಎಸ್‌ ಬಿಡುಗಡೆಯಾಗುವ ಹೊತ್ತಿಗೆ ಮತ್ತಷ್ಟು ಸುಧಾರಣೆಗಳನ್ನು ಆಂಡ್ರಾಯ್ಡ್‌ ಬಳಕೆದಾರರು ನಿರೀಕ್ಷಿಸುತ್ತಿದ್ದಾರೆ.