ದೈಹಿಕವಾಗಿ ಆರೋಗ್ಯವಾಗಿರುವುದಕ್ಕೆ ಕಸರತ್ತುಗಳನ್ನು ಮಾಡಿಬಿಡಬಹುದು. ಆದರೆ ಅದರಿಂದಷ್ಟೇ ಏನನ್ನಾದರೂ ಸಾಧಿಸಿ ಬಿಡಲು ಸಾಧ್ಯವಿಲ್ಲ ಅಲ್ಲವೆ. ಮನಸ್ಸು ಆರೋಗ್ಯವಾಗಿರಬೇಕು, ಮನೋಬಲ ದೃಢವಾಗಿರಬೇಕು. ಅದಕ್ಕಾಗಿ ನಾವು ದಾರಿಗಳನ್ನು, ಪರಿಹಾರಗಳನ್ನು ಹುಡುಕುತ್ತಿರುತ್ತಿರುತ್ತೇವೆ. ನೀವು ಹಾಗೇ ಹುಡುಕುವವರಲ್ಲಿ ಒಬ್ಬರಾಗಿದ್ದರೆ, ಈ ಆ್ಯಪ್ ನಿಮಗೆ ನೆರವಾಗಬಹುದು

ಪ್ರತಿಯೊಬ್ಬರು ಒಂದಲ್ಲ ಒಂದು ವಿಷಯವನ್ನು ನಿಭಾಯಿಸುವುದರಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಕೆಲವರಿಗೆ ಹಣಕಾಸಿನ ವಿಷಯವೆಂದರೆ ದುಃಸ್ವಪ್ನ, ಇನ್ನು ಕೆಲವರಿಗೆ ಸಂಬಂಧಗಳೆಂದರೆ ಬರೀ ತೊಡಕು, ಸಿಕ್ಕು. ಕೆಲವರಿಗೆ ಓದಿನ ಮೇಲೆ ಆಸಕ್ತಿ ಪಡೆದುಕೊಳ್ಳುವುದು ಹೇಗೆ ಎಂಬುದೇ ಸವಾಲು.
ಹೀಗೆ ಒಂದಲ್ಲ ಒಂದು ವಿಷಯವನ್ನು ತಮ್ಮದಾಗಿಸಿಕೊಳ್ಳುವ, ನಿಭಾಯಿಸುವ, ಗೆಲ್ಲುವ ಸವಾಲನ್ನು ನಾವುಗಳು ಎದುರಿಸುತ್ತಿರುತ್ತೇವೆ. ಆದರೆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನದಲ್ಲಿ ನಮ್ಮನ್ನು ನಾವು ಒಟ್ಟಾರೆಯಾಗಿ ಗ್ರಹಿಸಿಕೊಳ್ಳುವುದಕ್ಕೆ ಸೋಲುತ್ತೇವೆ. ರಿಮೆಂಟ್ ಎಂಬ ಈ ಆ್ಯಪ್ ನಿಮಗೆ ಸಮಗ್ರವಾದ ಒಳನೋಟ ನೀಡಿ, ನೀವು ಸಾಧಿಸಬೇಕಾದ ಗುರಿಯನ್ನು ತಲುಪುವುದಕ್ಕೆ ನೆರವಾಗುತ್ತದೆ.

ಪ್ರೀತಿ-ಸಂಬಂಧಗಳು, ಆರೋಗ್ಯ, ವೃತ್ತಿ -ಶಿಕ್ಷಣ, ಸಾಮಾಜಿಕ ಜೀವನ, ಹಣಕಾಸು ವ್ಯವಹಾರಗಳು, ವ್ಯಕ್ತಿತ್ವ ವಿಕಸನ ಹೀಗೆ ನಿಮ್ಮ ಜೀವನಕ್ಕೆ ಸಂಬಂಧಿಸಿದ ಮುಖ್ಯ ಎಂಟು ಕ್ಷೇತ್ರಗಳಲ್ಲಿ ನಿಮ್ಮ ಆದ್ಯತೆ ಯಾವುದು ತಿಳಿದುಕೊಳ್ಳುತ್ತದೆ. ನಂತರ ದಿನದ ಕಾರ್ಯಕ್ರಮಗಳು, ಅವುಗಳನ್ನು ಪೂರೈಸುವ ಹಂತಗಳು, ರಿಮೈಂಡರ್‌ಗಳನ್ನು ಸೇರಿಸುವುದು ಇತ್ಯಾದಿ ವಿಷಯಗಳಲ್ಲಲಿ ಮಾರ್ಗದರ್ಶನ ನೀಡುತ್ತದೆ. ನಿಮಗೆ ಹೊಳೆದದ್ದನ್ನು ದಾಖಲಿಸುವುದಕ್ಕೆ ಜರ್ನಲ್ ಕೂಡ ಇದರಲ್ಲಿದೆ.
ನೀವು ನಿಗದಿ ಮಾಡಿದ ಕೆಲಸ ಪೂರೈಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವಾಗ, ಇಡೀ ದಿನ ಈ ಆ್ಯಪ್ ಬಳಸುತ್ತಲೇ ಇರಬೇಕೆಂದಿಲ್ಲ. ಇದೇ ಈ ಆ್ಯಪ್‌ನ ವಿಶೇಷ.
ನಿಮ್ಮ ಗುರಿ ಮುಟ್ಟುವುದಕ್ಕೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ, ಗುರಿ ಮುಟ್ಟುವುದಕ್ಕೆ ಒಂದು ಯೋಜನೆ ರೂಪಿಸುವುದಕ್ಕೆ, ನಿಮ್ಮ ಅಭ್ಯಾಸ, ಹವ್ಯಾಸಗಳನ್ನು ಕ್ರಿಯಾಶೀಲವಾಗಿಸಿ, ವ್ಯಕ್ತಿತ್ವದಲ್ಲಿ ಮೆರಗು ತರುವುದಕ್ಕೆ, ಮಾನಸಿಕ ಒತ್ತಡ, ಕಿರಿಕಿರಿಗಳನ್ನು ನಿಭಾಯಿಸುವುದಕ್ಕೆ, ನಿದ್ರೆ, ನಡಿಗೆಯಿಂದ ಹಿಡಿದು ನಿಮ್ಮ ದೈನಂದಿನ ಚಟುವಟಿಕೆಗಳ ಪ್ರಭಾವವನ್ನು ಅರಿಯುವುದಕ್ಕೆ ಈ ಆ್ಯಪ್ ಉಪಯುಕ್ತ.
ಪ್ರತಿ ದಿನ ನಿಮ್ಮ ಕೆಲಸದ ಫಲಿತಾಂಶವನ್ನು ಪ್ರತ್ಯೇಕವಾಗಿ ನೀಡುತ್ತದೆ. ಇದು ನಾಳೆಯ ಯೋಜನೆಗೆ, ಮಾಡಬೇಕಿರುವ ಕೆಲಸಗಳಿಗೆ ಸ್ಫೂರ್ತಿ ತುಂಬುತ್ತದೆ.
4.6 ರೇಟಿಂಗ್ ಪಡೆದಿಕೊಂಡಿರುವ ರಿಮೆಂಟ್ ಆ್ಯಪ್, ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳೆರಡಕ್ಕೂ ಉಚಿತವಾಗಿ ಲಭ್ಯವಿದ್ದು, ಹೆಚ್ಚಿನ ಫೀಚರ್‌ಗಳಿಗೆ ಖರೀದಿಸಬೇಕಾಗುತ್ತದೆ. ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಡೌನ್ ಮಾಡಿಕೊಳ್ಳಬಹುದು – ರಿಮೆಂಟ್ ಆಂಡ್ರಾಯ್ಡ್ | ರಿಮೆಂಟ್ ಐಒಎಸ್