2024ಕ್ಕೆ ಬರಲಿದೆಯಂತೆ ಆಪಲ್‌ನ ಸೆಲ್ಫ್‌ ಡ್ರೈವಿಂಗ್‌ ಎಲೆಕ್ಟ್ರಿಕ್‌ ಕಾರ್‌!

ಉತ್ಕೃಷ್ಟ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮೂಲಕ ಜಗತ್ತಿನ ಶ್ರೇಷ್ಠ ಕಂಪನಿಗಳಲ್ಲಿ ಒಂದಾಗಿರುವ ಆಪಲ್‌, ಕಾರು ಉತ್ಪಾದನೆಗೆ ತೊಡಗಲಿದೆ ಎಂಬ ಸುದ್ದಿ ಬಂದಿದೆ. ಇನ್ನು ನಾಲ್ಕು ವರ್ಷಗಳಲ್ಲಿ ವಿಶಿಷ್ಟವಾದ ಎಲೆಕ್ಟ್ರಿಕ್‌ ಕಾರು ರಸ್ತೆಗಿಳಿಯಬಹುದು ಎಂದು ರಾಯ್ಟರ್ಸ್‌ ಸಂಸ್ಥೆ ವರದಿ ಮಾಡಿದೆ

ಆಪಲ್ ಎಂದರೆ ಉತ್ಕೃಷ್ಟತೆ, ಅದರ ಉತ್ಪನ್ನಗಳ ಗುಣಮಟ್ಟ ಯಾವತ್ತಿಗೂ ಶ್ರೇಷ್ಠ. ಐಫೋನ್‌, ಐಪ್ಯಾಡ್‌, ಐಮ್ಯಾಕ್‌ನಂತಹ ಗ್ಯಾಜೆಟ್‌ಗಳು ಅವುಗಳ ವಿನ್ಯಾಸ, ಕಾರ್ಯಕ್ಷಮತೆ, ಗುಣಮಟ್ಟದ ಕಾರಣಕ್ಕೆ ಇಂದಿಗೂ ವಿಶೇಷ ಮನ್ನಣೆ ಪಡೆದುಕೊಂಡಿವೆ. ಈ ಸಾಲಿಗೆ ಕಾರು ಸೇರಲಿದೆ ಎಂದು ರಾಯ್ಟರ್ಸ್‌ ಸಂಸ್ಥೆ ವರದಿ ಹೇಳುತ್ತಿದೆ.

ಆಪಲ್‌ 2014ರಲ್ಲಿ ಎಲೆಕ್ಟ್ರಿಕ್‌ ಕಾರಿನ ಯೋಜನೆ ಟೈಟನ್‌ಗೆ ಚಾಲನೆ ನೀಡಿತ್ತು. ಫೋಕ್ಸ್‌ವ್ಯಾಗನ್‌ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್‌ ಕಾರು ನಿರ್ಮಾಣಕ್ಕೆ ಅಗತ್ಯವಾದ ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಮತ್ತು ಇತರೆ ಬಿಡಿ ಭಾಗಗಳ ಅಭಿವೃದ್ಧಿ ಕಾರ್ಯವನ್ನು ನಡೆಸಿತ್ತು. ನಿಧಾನಗತಿಯಲ್ಲಿ ಸಾಗಿದ ಈ ಕೆಲಸ 2018ರಲ್ಲಿ ವೇಗ ಪಡೆದುಕೊಂಡಿತು.

5000 ಮಂದಿ ಆಪಲ್‌ನ ಕಾರು ಅಭಿವೃದ್ಧಿ ಕಾರ್ಯದಲ್ಲಿ ದುಡಿಯುತ್ತಿದ್ದಾರೆ ಎಂದು ಜಪಾನ್‌ ಟೈಮ್ಸ್‌ ಪತ್ರಿಕೆ ಕೆಲ ತಿಂಗಳ ಹಿಂದೆ ವರದಿ ಮಾಡಿತ್ತು. ಟೆಸ್ಲಾ ಕಂಪನಿ ಮಾಲಿಕ ಎಲಾನ್‌ ಮಸ್ಕ್‌ ಕೂಡ ಕುತೂಹಲ ತೋರಿದ್ದಲ್ಲದೆ, ‘ಆಪಲ್‌ ಪ್ರಬಲವಾದ ಎಲೆಕ್ಟ್ರಿಕ್‌ ಕಾರನ್ನೇ ಸಿದ್ಧಪಡಿಸುತ್ತದೆ ಎಂದೆನಿಸುತ್ತದೆ. ಸಾವಿರಾರು ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತಿರುವಾಗ, ಇಂತಹ ಬೆಳವಣಿಗೆಯನ್ನು ಮುಚ್ಚಿಡುವುದು ಕಷ್ಟ’ ಎಂದಿದ್ದರು.

ಕಳೆದ ವರ್ಷ ಆಪಲ್‌ ಡ್ರೈವರ್ ಇಲ್ಲದ ಕಾರುಗಳ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದ ಡ್ರೈವ್‌.ಎಐ ಸ್ಟಾರ್ಟಪ್‌ ಅನ್ನು ಖರೀದಿ ಮಾಡಿತು.

ಈ ವರೆಗಿನ ಮಾಹಿತಿಯಂತೆ, ಆಪಲ್‌ ಸಂಸ್ಥೆ ತಾನು ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಇತರೆ ಕಾರುಗಳಲ್ಲಿ ಬಳಸಿ ಪ್ರಯೋಗ ಮಾಡುತ್ತಿದೆ. ಅದಕ್ಕಾಗಿ 66 ರಸ್ತೆಗಳಲ್ಲಿ ಪ್ರಯೋಗಕ್ಕೆ ನೊಂದಾಯಿಸಿಕೊಂಡಿದೆ ಎನ್ನಲಾಗಿದೆ.

ಏನಿದೆಯಂತೆ?
ಐಒಎಸ್‌ ಇಂಟಿಗ್ರೇಷನ್‌ ಅಂದರೆ ಆಪಲ್‌ ಎಲ್ಲ ಗ್ಯಾಜೆಟ್‌ಗಳನ್ನು ಪರಸ್ಪರ ಬೆಸೆಯುವ ವ್ಯವಸ್ಥೆ ಇರುತ್ತದೆ. ತೈವಾನ್‌ ಸೆಮಿಕಂಡಕ್ಟರ್ಸ್‌ ಸಂಸ್ಥೆ ವಿಶೇಷವಾದ ಆಪಲ್‌ ಚಿಪ್‌ ಸಿದ್ಧಪಡಿಸುತ್ತಿದ್ದು, ಇದು ಕಾರಿನ ವೈಶಿಷ್ಟ್ಯವನ್ನು ಹೆಚ್ಚಿಸಲಿದೆ. ಈಗ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸುತ್ತಿದ್ದು, ಮೊನೊಸೆಲ್‌ ವಿನ್ಯಾಸವನ್ನು ತರಲಿದೆ. ಅಂದರೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚು ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ಷಮತೆಯನ್ನು ಈ ವಿನ್ಯಾಸ ಹೊಂದಿರಲಿದೆ. ಇದು ಬ್ಯಾಟರಿಗಳ ಬೆಲೆಯನ್ನು ತಗ್ಗಿಸಬಹುದು ಎನ್ನಲಾಗುತ್ತಿದೆ.

ಲೈಡಾರ್‌ ಎಂಬ 3ಡಿ ತಂತ್ರಜ್ಞಾನವೂ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಆಪಲ್‌ ಕಾರು ಸಿದ್ಧವಾಗುತ್ತಿದೆ.

ಟೆಸ್ಲಾ, ಫೋರ್ಡ್‌, ಜಿಎಂ, ಸ್ಯಾಮ್‌ಸಂಗ್‌, ಎನ್‌ವಿಡಿಯಾ, ಫೋಕ್ಸ್‌ವ್ಯಾಗನ್‌, ಟಾಟಾ ಮೋಟರ್ಸ್‌, ಬ್ಲಾಕ್‌ಬೆರ್ರಿ, ಮೈಕ್ರೋಸಾಫ್ಟ್‌ನಿಂದ ಉನ್ನತ ಹುದ್ದೆಯಲ್ಲಿದ್ದ, ಅನುಭವಿ ಪರಿಣಿತರನ್ನು ನೇಮಕಮಾಡಿಕೊಂಡಿದ್ದು, ಆಟೋ ಜಗತ್ತಿನಲ್ಲಿ ಕ್ರಾಂತಿಕಾರಿ ಎನ್ನಿಸುವ ಕಾರು ಸಿದ್ಧಪಡಿಸುವುದಕ್ಕೆ ಹೊರಟಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.