ತಾಪಮಾನಕ್ಕೆ ತಕ್ಕಂತೆ ವೇಗ ಬದಲಿಸಿಕೊಳ್ಳುವ, ಮೊಬೈಲ್ ಅಪ್ಲಿಕೇಷನ್ ಮೂಲಕ ನಿಯಂತ್ರಿಸಬಹುದಾದ ಫ್ಯಾನ್ ಇದು!

ಐಒಟಿ ಅಂದರೆ ಇಂಟರ್ನೆಟ್ ಆಫ್ ಥಿಂಗ್ಸ್ (ಇಂಟರ್ನೆಟ್ ಜಾಲದಲ್ಲಿರುವ ವಸ್ತುಗಳು) ನಮ್ಮನ್ನು ವ್ಯಾಪಿಸಿಕೊಳ್ಳುತ್ತಿರುವ ಈ ಕಾಲದಲ್ಲಿ, ಫೋನ್‌ಗಳು, ವಾಚುಗಳು, ಟಿವಿಗಳು, ಬಲ್ಬುಗಳು, ಸ್ಪೀಕರ್‌ಗಳು – ಇವೆಲ್ಲವೂ ನಮ್ಮ ಕಣ್ಣ ಮುಂದೆ ಸ್ಮಾರ್ಟ್ ಆಗಿಬಿಟ್ಟಿವೆ. ಫ್ಯಾನ್‌ಗಳು ಈ ಪಟ್ಟಿಯಿಂ ಸ್ವಲ್ಪ ದೂರವೇ ಇದ್ದವು. ವಿಶೇಷವಾಗಿ ಸೀಲಿಂಗ್ ಫ್ಯಾನ್‌ಗಳು. ಈಗ ಅವೂ ಸ್ಮಾರ್ಟ್ ಆಗಿವೆ.
ಒಟೋಮೇಟ್ ಇದನ್ನು ಸಾಧ್ಯವಾಗಿಸಿದೆ. ಗ್ರಾಹಕರು ನಿಗದಿತ ಹಣ ಪಾವತಿಸಿದರೆ ಒಟೋಮೇಟ್ ಕಂಪನಿಯವರೇ ಬಂದು ಫ್ಯಾನ್ ಅನ್ನು ಉಚಿತವಾಗಿ ಇನ್‌ಸ್ಟಾಲ್ ಮಾಡಿ ಹೋಗುತ್ತಾರೆ ಮತ್ತು ಹೇಗೆ ಬಳಸುವುದೆಂದೂ ವಿವರಿಸುತ್ತಾರೆ.
ಇದು ಆ್ಯಪ್ ಮೂಲಕ ನಿಯಂತ್ರಿಸಬಹುದಾದ ಫ್ಯಾನ್. ನೋಡಲು ಸಾಮಾನ್ಯ ಫ್ಯಾನ್‌ನಂತೆಯೇ ಇದ್ದರೂ, ಥಟ್ಟನೇ ನೋಡಿದಾಗ, ಏನೋ ವಿಶೇಷವಿದೆ ಅನ್ನಿಸದಿರದು. ಅಂಥ ವಿನ್ಯಾಸ ಇದರದ್ದು. ಈ ವಿನ್ಯಾಸ ರೂಪಿಸಿದ್ದು ಬೆಂಗಳೂರು ಮೂಲದ ಫೋಲೀ ಡಿಸೈನ್ಸ್ ಕಂಪನಿ.
ಇದರೊಳಗೆ ಕ್ವಾಲ್‌ಕಾಂ ಚಿಪ್‌ಸೆಟ್ ಇದೆ. ಇದೇ ಈ ಫ್ಯಾನ್‌ಗೆ ಸ್ಮಾರ್ಟ್‌ನೆಸ್ ನೀಡುವ ‘ಮಿದುಳು’. 60 ಬಿಟ್ ಪ್ರೊಸೆಸರ್, 80 ಕೆಬಿ RAM, 60kb ಆಂತರಿಕ ಸ್ಟೋರೇಜ್, ಬ್ಲೂಟೂತ್ 4.2 ಗಳೊಂದಿಗೆ ಸಿದ್ಧವಾಗಿರುವ ಫ್ಯಾನ್ ಇದು. ಇದರೊಳಗೆ ವಾತಾವರಣದ ಶುಷ್ಕತೆ ಹಾಗೂ ಉಷ್ಣತೆಯನ್ನು ಪತ್ತೆ ಮಾಡುವ ಸೆನ್ಸರ್‌ಗಳೂ ಇವೆ. ಈ ಸೆನ್ಸರ್‌ಗಳ ಮೂಲಕವೇ, ಕೊಠಡಿಯ ಉಷ್ಣತೆಗನುಗುಣವಾಗಿ ವೇಗವನ್ನು ಹೆಚ್ಚಿಸುವ ಮತ್ತು ತಗ್ಗಿಸಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯು ಇದರಲ್ಲಿದೆ.
ಇನ್ನು, ಇದನ್ನು ಇನ್‌ಸ್ಟಾಲ್ ಮಾಡಬೇಕಿದ್ದರೆ ನಾವು ಕಸ್ಟಮರ್ ಕೇರ್‌ಗೂ ಹೋಗಬೇಕಿಲ್ಲ. ಮೊದಲೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಇನ್‌ಸ್ಟಾಲೇಶನ್ ಮಾಡಲು ಮನವಿಯನ್ನು ಅದರಿಂದಲೇ ಸಲ್ಲಿಸಬಹುದು. ಕಂಪನಿಯ ಸಿಬ್ಬಂದಿ ಫ್ಯಾನ್ ಅಳವಡಿಸಿಕೊಡುತ್ತಾರೆ. ನಂತರ ಅಗತ್ಯವಿದ್ದಾಗ ಕಸ್ಟಮರ್ ಕೇರ್‌ಗೆ ಈ ಆ್ಯಪ್ ಮೂಲಕವೇ ಸಂದೇಶ ಕಳುಹಿಸಿದರೆ ಸಾಕು.
ಮನೆಯ ಯಾವುದೇ ಕೊಠಡಿಗಳಲ್ಲಿರುವ ಫ್ಯಾನ್‌ಗಳನ್ನೂ ಬ್ಲೂಟೂತ್ ಸಂಪರ್ಕದಿಂದ ಒಟೊಮೇಟ್ ಆ್ಯಪ್ ಮೂಲಕ ನಿಭಾಯಿಸಬಹುದು. ಇದಲ್ಲದೆ, ಪ್ರಧಾನ ಬಳಕೆದಾರನೊಬ್ಬ (ಆ್ಯಡ್ಮಿನ್ ರೀತಿ) ಮನೆಯ ಇತರ ಸದಸ್ಯರನ್ನೂ ‘ಗೆಸ್ಟ್’ ಆಗಿ ಸೇರಿಸಿಕೊಂಡು, ಅವರಿಗೂ ಆಹ್ವಾನ ಕಳುಹಿಸಿದರೆ, ಅವರ ಮೊಬೈಲ್ ಫೋನ್‌ನಲ್ಲಿ ಒಟೋಮೇಟ್ ಆ್ಯಪ್ ಅಳವಡಿಸಿಕೊಂಡು, ಅವರು ಕೂಡ ಫ್ಯಾನ್ ಅನ್ನು ನಿಯಂತ್ರಿಸಬಹುದು. ಅಂದರೆ, ಆಯಾ ಕೊಠಡಿಗಳಲ್ಲಿ ಮಲಗಿದವರು ಅವರ ಕೊಠಡಿಯ ಫ್ಯಾನುಗಳನ್ನು ಅವರೇ ಕಂಟ್ರೋಲ್ ಮಾಡಬಹುದು.
ಮನೆಯಿಂದ ಹೊರಬೀಳುವಾಗ ಅಥವಾ ಬೀಗ ಹಾಕಿದ ಬಳಿಕವೂ, ಮರೆತಿದ್ದರೆ ಎಲ್ಲ ಫ್ಯಾನ್‌ಗಳನ್ನೂ ಏಕಕಾಲದಲ್ಲಿ ಆ್ಯಪ್ ಮೂಲಕ ಹೊರಗಿನಿಂದಲೇ ಆಫ್ ಮಾಡುವ ವ್ಯವಸ್ಥೆಯಿದೆ. ಆದರೆ ತೀರಾ ದೂರ ಹೋದ ಬಳಿಕ ಆಫ್ ಮಾಡಲಾಗದು. ಇನ್ನು, ರಿಮೋಟ್ ಕಂಟ್ರೋಲ್ ಮೂಲಕವೂ ಈ ಫ್ಯಾನ್ ಅನ್ನು ನಿಯಂತ್ರಿಸಬಹುದು. ಆದರೆ ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.