ಗೂಗಲ್‌ ಪಿಕ್ಸೆಲ್‌ 4 ಭಾರತದಲ್ಲಿ ಬಿಡುಗಡೆಯಾಗದಿರಲು ಈ ಅತ್ಯಾಧುನಿಕ ಚಿಪ್‌ ಕಾರಣ!

ಪಿಕ್ಸೆಲ್‌ 4, ಗೂಗಲ್‌ನ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿದ್ದು ಮಂಗಳವಾರ ಬಿಡುಗಡೆಯಾಗಿದೆ. ಇದರ ಫೀಚರ್‌ಗಳ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಜಗತ್ತಿನಾದ್ಯಂತ ಲಭ್ಯವಾಗಲಿರುವ ಈ ಫೋನ್‌ ಭಾರತೀಯರಿಗೆ ಮಾತ್ರ ಸಿಗುತ್ತಿಲ್ಲ. ಅದಕ್ಕೆ ಕಾರಣ ಈ ಫೋನಿನಲ್ಲಿ ಬಳಸಲಾಗಿರುವ ಸೋಲಿ ಹೆಸರಿನ ಮೋಷನ್‌ ಸೆನ್ಸಾರ್ ಚಿಪ್‌

ಪಿಕ್ಸೆಲ್‌ 4 ಗೂಗಲ್‌ನ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿದ್ದು ಮಂಗಳವಾರ ಬಿಡುಗಡೆಯಾಗಿದೆ. ಇದರ ಫೀಚರ್‌ಗಳ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಜಗತ್ತಿನಾದ್ಯಂತ ಲಭ್ಯವಾಗಲಿರುವ ಈ ಫೋನ್‌ ಭಾರತೀಯರಿಗೆ ಮಾತ್ರ ಸಿಗುತ್ತಿಲ್ಲ. ಅದಕ್ಕೆ ಕಾರಣ ಈ ಫೋನಿನಲ್ಲಿ ಬಳಸಲಾಗಿರುವ ಸೋಲಿ ಹೆಸರಿನ ಮೋಷನ್‌ ಸೆನ್ಸಾರ್ ಚಿಪ್‌

ಆ್ಯಪಲ್‌, ಸ್ಯಾಮ್‌ಸಂಗ್‌ ವಿನೂತನವಾದ, ಬೆರಗು ಹುಟ್ಟಿಸುವಂತಹ ಸ್ಮಾರ್ಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವಾಗ ಗೂಗಲ್‌ ಸುಮ್ಮನಿರುಲು ಹೇಗೆ ಸಾಧ್ಯ! ಐಫೋನ್‌ಗೆ ಪ್ರತಿಸ್ಪರ್ಧಿಯಾಗಲೆಂದೇ ಪಿಕ್ಸೆಲ್‌ ಫೋನು ಪರಿಚಯಿಸಿದ್ದ ಗೂಗಲ್‌ಗೆ ಹಿನ್ನಡೆಯಾಗಿತ್ತು. ಆದರೆ ಮಂಗಳವಾರ ಬಿಡುಗಡೆಯಾದ ಪಿಕ್ಸೆಲ್‌ 4 ಹಲವು ವಿಶೇಷಗಳೊಂದಿಗೆ ಹೊರಬಂದಿದೆ.

ಅತ್ಯಾಧುನಿಕ ತಾಂತ್ರಿಕ ಅಂಶಗಳನ್ನು ಹೊಂದಿರುವ ಈ ಫೋನ್‌, ಇದೇ ಕಾರಣಕ್ಕೆ ಭಾರತೀಯರಿಗೆ ಲಭ್ಯವಾಗುತ್ತಿಲ್ಲ. ಪಿಕ್ಸೆಲ್‌ 4 ಫೋನಿನಲ್ಲಿ 60 ಗಿಗಾ ಹರ್ಟ್ಸ್‌ನ ಐಎಸ್‌ಎಂ ಬ್ಯಾಂಡ್‌ ಸಾಮರ್ಥ್ಯದ ಸೋಲಿ ರೆಡಾರ್‌ ಚಿಪ್‌ ಅನ್ನು ಬಳಸಲಾಗಿದೆ. ಭಾರತದ ನ್ಯಾಷನಲ್‌ ಫ್ರೀಕ್ವೆನ್ಸಿ ಅಲೋಕೇಷನ್‌ ಪ್ಲಾನ್‌ ಪ್ರಕಾರ, ಈ ಚಿಪ್‌ನ ವಾಣಿಜ್ಯ ಬಳಕೆಗೆ ಅವಕಾಶವಿಲ್ಲ. ಈ ಕಾರಣಕ್ಕಾಗಿ ಪಿಕ್ಸೆಲ್‌ 4 ಭಾರತದಲ್ಲಿ ಬಿಡುಗಡೆಯಾಗುತ್ತಿಲ್ಲ.

ಸೋಲಿ ರೆಡಾರ್‌ ಚಿಪ್‌ ಪ್ರಾಜೆಕ್ಟ್‌ ಅನ್ನು ಗೂಗಲ್‌ 2015ರಲ್ಲಿ ನಡೆದ ಐ/ಒ ಡೆವೆಲಪರ್‌ ಕಾನ್ಫರೆನ್ಸ್‌ನಲ್ಲಿ ಘೋಷಿಸಿತ್ತು. ನಂತರದ ಗೂಗಲ್‌ನ ಅಡ್ವಾನ್ಸ್ಡ್‌ ಟೆಕ್ನಾಲಜಿ ಅಂಡ್‌ ಪ್ರಾಜೆಕ್ಟ್ಸ್‌ ವಿಭಾಗವನ್ನು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿತ್ತು. ಈ ತಂತ್ರಜ್ಞಾನ ಮುಖ್ಯ ಬಳಕೆ ತೊಡುವ ಎಲೆಕ್ಟ್ರಾನಿಕ್‌ ಸಾಧನಗಳು, ಫೋನ್‌ಗಳು, ಕಂಪ್ಯೂಟರ್‌, ಕಾರು ಮತ್ತು ಐಒಟಿ ಸಾಧನಗಳಲ್ಲಿ ಬಳಸುವುದು ಉದ್ದೇಶವಾಗಿತ್ತು.

ಅತ್ಯಂತ ಸೂಕ್ಷ್ಮವಾದ ಚಲನೆಯನ್ನು ಗುರುತಿಸುವುದು ಈ ಚಿಪ್‌ನ ಕೆಲಸ. ಈ ಚಿಪ್‌ನಲ್ಲಿರುವ ರೆಡಾರ್‌ ಇದನ್ನು ಗ್ರಹಿಸುತ್ತದೆ. ಎಷ್ಟು ಮಿಲಿಮೀಟರ್‌ಗಿಂತ ಸಣ್ಣ ಪ್ರಮಾಣದ ಸರಿದಾಟವನ್ನು ಅತ್ಯಂತ ವೇಗವಾಗಿ ಮತ್ತು ಅತ್ಯಂತ ನಿಖರವಾಗಿ ಗುರುತಿಸುತ್ತದೆ. ಆಯಸ್ಕಾಂತೀಯ ಅಲೆಗಳನ್ನು ಹೊರ ಹಾಕುವ ಮೂಲಕ ತನ್ನ ವ್ಯಾಪ್ತಿಯ ಚಲನೆಗಳನ್ನು ಗ್ರಹಿಸಿ, ಸಂಸ್ಕರಿಸುತ್ತದೆ. ಅತ್ಯಂತ ಸಂಕೀರ್ಣವಾದ ಚಲನೆಗಳನ್ನು ಸಮರ್ಥವಾಗಿ ಗುರುತಿಸಿ ಮಾಹಿತಿಯಾಗಿ ಪರಿವರ್ತಿಸಬಲ್ಲದು ಈ ಚಿಪ್‌.

ಫೇಸ್‌ ಅನ್‌ಲಾಕ್‌, ಪರದೆಯನ್ನು ಝೂಮ್‌ ಮಾಡುವುದಿರಲಿ, ಕೇಳುತ್ತಿರುವ ಸಂಗೀತ ವಾಲ್ಯುಮ್‌ ಹೆಚ್ಚಿಸುವುದಿರಲಿ, ಅಲಾರಮ್‌ ಅನ್ನು ಥಟ್ಟನೆ ಬಂದ್‌ ಮಾಡುವುದಿರಲಿ, ಬರುತ್ತಿರುವ ಕರೆಯನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದಿರಲಿ, ಎಲ್ಲವನ್ನೂ ಶ್ರಮವಿಲ್ಲದೆ ಮಾಡಬಹುದು. ಇದುವರೆಗೆ ರಡಾರ್‌ಗಳನ್ನು ದೊಡ್ಡ ಪ್ರಮಾಣ ಯಂತ್ರ, ವಸ್ತುಗಳನ್ನು ಗುರುತಿಸುವುದಕ್ಕೆ ಬಳಸಲಾಗಿದೆ. ಈ ಚಿಪ್‌ ಮೂಲಕ ಮನುಷ್ಯನ ಅತ್ಯಂತ ಸೂಕ್ಷ್ಮ ಚಲನೆಗಳನ್ನು ಸೆರೆಹಿಡಿಯುವ ಮೂಲಕ ಎಲೆಕ್ಟ್ರಾನಿಕ್‌ ಸಾಧನೆಗಳ ಬಳಕೆಯ ವಿಧಾನವನ್ನೇ ಬದಲಿಸಲು ಹೊರಟಿದೆ ಚಿಪ್‌.

ಪಿಕ್ಸೆಲ್‌ನಲ್ಲಿರುವ ಈ ರೆಡಾರ್‌ ಮೊದಲು, ತನ್ನ ಸುತ್ತ ಸುಮಾರು ಒಂದು ಅಥವಾ ಎರಡು ಅಡಿಗಳ ಪರಿಧಿಯನ್ನು ಸೃಷ್ಟಿಸುತ್ತದೆ. ಎರಡನೆಯದಾಗಿ ನಿಮ್ಮ ದೇಹ ಇದರ ಸಂಪರ್ಕಕ್ಕೆ ಬಂದ ಕೂಡಲೇ ರೆಡಾರ್‌ ಸಕ್ರಿಯವಾಗುತ್ತದೆ. ನಂತರ ಬಳಕೆದಾರನ ದೈಹಿಕ ಚಲನೆಯನ್ನು ಗ್ರಹಿಸಿ ಕಾರ್ಯನಿರ್ವಹಿಸುತ್ತದೆ.

ಈಗಾಗಲೇ ಈರೀತಿಯ ಪ್ರಯತ್ನ ಮಾಡಿರುವುದನ್ನು ಐಫೊನ್‌ನಲ್ಲಿ ಕಾಣಬಹುದು. ಆದರೆ ಗೂಗಲ್‌ನ ಸೋಲಿ ಪ್ರಾಜೆಕ್ಟ್‌, ಹೆಚ್ಚು ನಿಖರತೆ ಮತ್ತು ವೇಗದ ಕಾರಣಕ್ಕೆ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟಿಸಿದೆ. ಗೂಗಲ್‌ ಪರಿಚಯಿಸುತ್ತಿರುವ ಫೋನ್‌ ಅಷ್ಟೇ ಅಲ್ಲದೆ, ಇತರೆ ಸಾಧನಗಳಲ್ಲೂ ಈ ಚಿಪ್‌ ಇರಿಸಲಾಗಿದೆ.