ಕಳೆದ ನಾಲ್ಕು ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಅತಿ ಹೆಚ್ಚು ಹೂಡಿಕೆ ಕಂಡ ವಿಶ್ವದ ನಂಬರ್ 1 ನಗರ ಬೆಂಗಳೂರು! ಈ ಅವಧಿಯಲ್ಲಿ 5.2 ಪಟ್ಟು ಹೆಚ್ಚು ಹೂಡಿಕೆಯಾಗಿದ್ದು, ದೊಡ್ಡ ದೊಡ್ಡ ಟೆಕ್ ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ

ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ, ಟೆಕ್ ಹಬ್, ಸ್ಟಾರ್ಟಪ್ ಕ್ಯಾಪಿಟಲ್.. ಹೀಗೆ ಹಲವು ಬಿರುದುಗಳಿವೆ. ಅಷ್ಟೇ ಅಲ್ಲ ಅತಿ ವೇಗವಾಗಿ ಬೆಳೆಯುತ್ತಿರುವ ಟೆಕ್ ಪರಿಸರವಿರುವ ನಗರವೆಂದು ಆಮ್‌ಸ್ಟರ್‌ಡ್ಯಾಂ ಮೂಲದ ಡಾಟಾ ಕಂಪನಿ ಡೀಲ್‌ರೂಮ್ ವರದಿ ಹೇಳಿದೆ.
2016ರಿಂದಲೂ ಬೆಂಗಳೂರು ತಂತ್ರಜ್ಞಾನ ಅಭಿವೃದ್ಧಿ, ಪ್ರಯೋಗಳಿಗೆ ಉತ್ತಮವಾದ ಪರಿಸರವನ್ನು ಹೊಂದಿದೆ. ಈ ಸಾಲಿನಲ್ಲಿ ಲಂಡನ್, ಬರ್ಲಿನ್, ಮ್ಯುನಿಕ್ ಮತ್ತು ಪ್ಯಾರಿಸ್ ನಗರಗಳಿವೆ ಎಂದು ವರದಿ ಹೇಳುತ್ತದೆ.

ಲಂಡನ್ ಅಂಡ್ ಪಾರ್ಟನರ್ಸ್ ಜೊತೆ ಸೇರಿ ನಡೆಸಲಾದ ಅಧ್ಯಯನದ ಅಂಶಗಳನ್ನು ಬಿಡುಗಡೆ ಮಾಡಿರುವ ಡೀಲ್‌ರೂಮ್, ಬೆಂಗಳೂರಿನಲ್ಲಿ ತಂತ್ರಜ್ಞಾನ ವಲಯಕ್ಕೆ ಆಗುತ್ತಿರುವ ಹೂಡಿಕೆ 2016ರಲ್ಲಿ 1.3 ಬಿಲಿಯನ್ ಡಾಲರ್‌ನಷ್ಟಿತ್ತು. 2020ರಲ್ಲಿ ಇದು 7.2 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿದೆ ಎಂದು ವಿವರಿಸಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟೆಕ್ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಇಲ್ಲಿ ಅಗತ್ಯ ಪರಿಸರ ಮತ್ತು ಮೂಲಸೌಕರ್ಯಗಳಿರುವುದೇ ಇದಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ.
ಶ್ರೇಷ್ಠವಾದ ಮೂಲಸೌಕರ್ಯ, ಗುಣಮಟ್ಟದ ಹಾಗೂ ಕಡಿಮೆ ಬೆಲೆಗೆ ಕೆಲಸ ಮಾಡುವ ಸಿಬ್ಬಂದಿ ಸಿಗುವುದೇ ಹೂಡಿಕೆ ಹೆಚ್ಚುವುದಕ್ಕೆ, ವಿದೇಶ ಕಂಪನಿಗಳು ಬೆಂಗಳೂರಿನತ್ತ ಧಾವಿಸುವುದಕ್ಕೆ ಕಾರಣ ಎಂದಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ನೋಕಿಯಾ, ಝೂಮ್ ಸೇರಿದಂತೆ ಹಲವು ಜಾಗತಿಕ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಕಚೇರಿಗಳನ್ನು ಬೆಂಗಳೂರಿನಲ್ಲಿ ಆರಂಭಿಸಿರುವುದೇ ಇದಕ್ಕೆ ಕಾರಣ. ಅಷ್ಟೇ ಅಲ್ಲ ಟೆಸ್ಲಾ ಕೂಡ ಬೆಂಗಳೂರಿಗೆ ಬರುತ್ತಿದೆ. ಈ ಕಾರಣಗಳಿಂದಾಗಿ ಬೆಂಗಳೂರಿನಲ್ಲಿ ಹೂಡಿಕೆ ಹೆಚ್ಚಿದೆ ಎಂದು ಡೀಲ್ ರೂಮ್ ವರದಿ ವಿವರಿಸಿದೆ.