ಕಂಪ್ಯೂಟರ್‌ವೊಂದು ಬರೆದಿದೆ 300 ಪುಟಗಳ ವಿಜ್ಞಾನದ ಪುಸ್ತಕ!

ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕಾಲ. ಯಾವ ಕೆಲಸಕ್ಕೂ ಮನುಷ್ಯನ ಅಗತ್ಯವಿಲ್ಲ ಎಂಬಷ್ಟು ಹೊಸ ಪ್ರಯೋಗಗಳಾಗುತ್ತಿವೆ. ಸೃಜನಶೀಲ ಕೆಲಸವೂ ಈಗ ಹೊರತಲ್ಲ. ಕಂಪ್ಯೂಟರ್‌ವೊಂದರ ಮೂಲಕ ಪುಸ್ತಕ ಬರೆಸಿದ್ದಾರೆ ವಿಜ್ಞಾನಿ!

ಬರಹಗಾರರಿಗೆ ತಮ್ಮ ಬರೆಯುವ ಪ್ರಕ್ರಿಯೆ ಯಾಂತ್ರಿಕವಾಗಬಾರದು ಎಂಬ ಎಚ್ಚರವಿರುತ್ತದೆ. ಅದರಿಂದಾಗಿ ಬರಹದ ಗುಣಮಟ್ಟ, ಹೇಳಬೇಕಾದ ವಿಚಾರ ಸಪ್ಪೆ ಎನಿಸಬಹುದು ಎಂಬ ಕಾಳಜಿಯೂ ಇರುತ್ತದೆ. ಯಂತ್ರವೇ ಬರೆಯುವಂತಾದರೆ ಈ ಎಲ್ಲ ಪ್ರಶ್ನೆಗಳು ಹೇಗೆ ಏಳಬಹುದು?

ಕೆಮಿಕಲ್ ಅಂಡ್ ಇಂಜಿನೀಯರಿಂಗ್ ನ್ಯೂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಯಾಂತ್ರಿಕ ಬರಹ ಸಾಧ್ಯವಂತೆ. ಸುಪ್ರಸಿದ್ಧ ಪುಸ್ತಕ ಪ್ರಕಾಶಕರಾದ ಸ್ಪ್ರಿಂಗರ್ ನೇಚರ್ ಪ್ರಕಾಶನ ಸಂಸ್ಥೆ ಯಾವುದೇ ಲೇಖಕರ, ಹಾಗೂ ಲೇಖನಿಯ, ನೆರವು ಇಲ್ಲದೆಯೇ ಒಂದು ಪುಸ್ತಕವನ್ನು ಪ್ರಕಟಿಸಿದೆ. ಸುಮಾರು ೩೦೦ ಪುಟಗಳ ಈ ವೈಜ್ಞಾನಿಕ ಪುಸ್ತಕವನ್ನು ಬರೆದದ್ದು ಒಂದು ಕಂಪ್ಯೂಟರ್ ತಂತ್ರಾಂಶ. ಲಿಥಿಯಮ್ ಬ್ಯಾಟರಿಗಳು ಎನ್ನುವ ಹೆಸರಿನಲ್ಲಿ ಪ್ರಕಟವಾಗಿರುವ ಇದು ಬ್ಯಾಟರಿಗಳ ಸಂಶೋಧನೆಯನ್ನೆಲ್ಲ ಸಂಗ್ರಹಿಸಿ ನೀಡುತ್ತದೆ. ನೀವೂ ಬೇಕಿದ್ದರೆ ಈ ಪುಸ್ತಕವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

ಇದು ತಂತ್ರಜ್ಞಾನ ಪುಸ್ತಕ. ಕಥೆ, ಕಾದಂಬರಿ ಅಲ್ಲ ಕಥೆ, ಕಾದಂಬರಿಗಳು ಎಂದಾಗ ಇತ್ತೀಚೆಗೆ ತರಂಗದಲ್ಲಿ ಕರ್ನಾಟಕದ ಹಿರಿಯ ವೈಜ್ಞಾನಿಕ ಕಥೆಗಾರರಾದ ಹಶಿ ಭೈರನಟ್ಟಿಯವರು ಡ್ಯೂರೋಯುಗ ಎನ್ನುವ ನೀಳ್ಗತೆ ಬರೆದಿದ್ದರು. ಅದರಲ್ಲಿನ ನಾಯಕಿ ಒಬ್ಬ ಅರೆಯಾಂತ್ರಿಕ ಮಾನುಷಿ. ಅರ್ಥಾತ್, ಸೈಬೋರ್ಗ್. ಅದರ ವೃತ್ತಿ: ಬರೆಹ. ಸೈಬೋರ್ಗ್ ಕಥೆ ಬರೆಯಬಹುದೇ ಎನ್ನುವುದೇ ವಿಚಿತ್ರ. ಇನ್ನು ಸೈಬೋರ್ಗೂ ಅಲ್ಲದ ಗಣಕಯಂತ್ರವೊಂದು ಹೀಗೆ ಬರಹಗಾರನಾಗುವುದು ಎಂದರೆ ಅದು ಅತೀತ ಕಲ್ಪನೆಯೇ ಎನಿಸುತ್ತದಲ್ಲವೇ? ಆದರೆ ಅದುವೂ ಸತ್ಯವಾಗಬಹುದು ಎಂದು ಸ್ಪ್ರಿಂಗರ್ ನಿರೂಪಿಸಿದೆ.

ಹೌದೇ? ಕಂಪ್ಯೂಟರು ಲೇಖನ ಬರೆಯಿತೇ ಎಂದಿರಾ? ಹೌದು. ಅದೂ ಕಥೆ, ಕವನವಲ್ಲ. ವಿಜ್ಞಾನ ಜಗತ್ತಿನಲ್ಲಿ ಬಲು ತೂಕವಿರುವ ಪರಾಮರ್ಶನ ಪ್ರಬಂಧ. ಅಥವಾ ರಿವ್ಯೂ. ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಸಂಶೋಧನೆಗಳ ವಿವರಗಳನ್ನೂ ಹೆಕ್ಕಿ, ಒತ್ತಟ್ಟಿಗೆ ಕೂಡಿಸಿ ಬರೆದ ಸಾರಾಂಶ. ಇದರಲ್ಲಿ ಮಾಹಿತಿಯನ್ನು ಬರೆಯುವುದಷ್ಟೆ ಅಲ್ಲ, ಅದು ಎಲ್ಲಿಂದ ಬಂತು? ಹೇಗೆ ಅದನ್ನು ಪಡೆಯಬಹುದು ಎನ್ನುವ ಉಲ್ಲೇಖಗಳೂ ಇರಬೇಕಾಗುತ್ತದೆ. ಪ್ರತಿಯೊಂದು ಹೇಳಿಕೆಗೂ ಪುರಾವೆಯಾಗಿ ಅದಿರುವ ಪುಸ್ತಕದ, ಪತ್ರಿಕೆಯ ವಿವರಗಳನ್ನು ಜೋಡಿಸಬೇಕಾಗುತ್ತದೆ. ಹೀಗೆ ನೀಡಿದ ಎಲ್ಲ ಮಾಹಿತಿ ಆಧರಿಸಿದ ಪುಸ್ತಕವನ್ನು ಕಂಪ್ಯೂಟರ್‌ ಸಿದ್ಧಪಡಿಸುತ್ತದೆ. ಈಗ ಸಿದ್ಧಪಡಿಸಿರುವ ೨೭೮ ಪುಟಗಳ ಪುಸ್ತಕದಲ್ಲಿ ಈ ಎಲ್ಲ ಮಾಹಿತಿಗಳು ಇವೆ.

ಇದು ಹೇಗೆ ಸಾಧ್ಯವಾಯಿತು? ಲಿಥಿಯಂ ಅಯಾನು ಬ್ಯಾಟರೀಸ್ ಪುಸ್ತಕ ಸಾವಿರಾರು ಸಂಶೋಧನಾ ಪ್ರಬಂಧಗಳ ಸಾರ ಸಂಗ್ರಹ ಎಂದೆನಷ್ಟೆ. ಓ ಅಷ್ಟೇ ತಾನೇ? ಶಾಲೆಯಲ್ಲಿ ಪ್ರಾಜೆಕ್ಟು ಮಾಡುತ್ತೇವಲ್ಲ ಹಾಗೆ ಇಂಟರ್ ನೆಟ್ಟಿನಲ್ಲಿ ಇರುವ ಪಾಠಗಳನ್ನು ನಕಲು ಮಾಡಿ, ಅಂಟಿಸಿ ಬರೆದ ಪುಸ್ತಕ ತಾನೇ ಎಂದಿರಾ? ತಾಳಿ. ಇದು ಹಾಗಲ್ಲ. ವಿಜ್ಞಾನ ಜಗತ್ತಿನಲ್ಲಿ ಯಾರೇ ಏನೇ ಪ್ರಬಂಧ ಬರೆದರೂ ಅದನ್ನು ಓರಗೆಯವರು ವಿಮರ್ಶಿಸಬೇಕು. ಇದನ್ನು ಪಿಯರ್ ರಿವ್ಯೂ ಎನ್ನುತ್ತಾರೆ. ಇಂತಹ ವಿಮರ್ಶೆ, ಪರಾಮರ್ಶೆಗಳು ಇಲ್ಲದೆ ಯಾವುದೇ ಪಾಠವೂ ಪ್ರಕಟವಾಗುವುದಿಲ್ಲ. ಹೀಗಾಗಿ ಈ ಪುಸ್ತಕವನ್ನೂ ಸ್ಪ್ರಿಂಗರ್ ಸಂಸ್ಥೆ ಪಿಯರ್ ರಿವ್ಯೂ ಮಾಡಿಸಿದೆ. ಪಿಯರ್ ರಿವ್ಯೂವಿನ ಸಂದರ್ಭದಲ್ಲಿ ಲೇಖಕರ ಹೆಸರನ್ನೂ ಗುಟ್ಟಾಗಿ ಇಡುವ ಪದ್ಧತಿ ಇದೆ (ಇತ್ತೀಚೆಗೆ ಈ ಪದ್ಧತಿ ಬದಲಾಗುತ್ತಿದೆ). ಆದರೂ ಸ್ಪ್ರಿಂಗರ್ ಹಳೆಯ ಆಲದ ಮರಕ್ಕೇ ಜೋತು ಬಿದ್ದಿತು. ಈ ಪುಸ್ತಕದ ಲೇಖಕರ ಹೆಸರನ್ನು ಗುಟ್ಟಾಗಿ ಇಟ್ಟು ಪಿಯರ್ ರಿವ್ಯೂ ಮಾಡಿಸಿತು. ರಿವ್ಯೂ ಮಾಡಿದರು ಸೂಚಿಸಿದ ಬದಲಾವಣೆಗಳನ್ನೂ ಮಾಡಿತು. ಪುಸ್ತಕವನ್ನು ಪ್ರಕಟಿಸಿತು.

ಅಂದರೆ ಪಿಯರ್ ರಿವ್ಯೂ ಮಾಡುವವರು ಈ ಪುಸ್ತಕವನ್ನು ಯಾರೋ ವ್ಯಕ್ತಿಯೊಬ್ಬ ಬರೆದಿದ್ದಾನೆ ಎಂದೇ ಭಾವಿಸಿದರು. ಅಂದ ಹಾಗೆ ಈ ಪುಸ್ತಕದ ಲೇಖಕರು ‘ಬೀಟ ರೈಟರ್’. ಸಾಮಾನ್ಯವಾಗಿ ತಂತ್ರಾಂಶಗಳು ಪರಿಪಕ್ವವಾಗಿಲ್ಲದಾಗ, ಅವನ್ನು ಬೀಟ ತಂತ್ರಾಂಶಗಳು ಎನ್ನುವ ಪರಿಪಾಠವಿದೆ. ಇದೂ ಹಾಗೆಯೇ. ಇದು ಬೀಟ ಲೇಖಕ ಅರ್ಥಾತ್ ಎಲ್ ಬೋರ್ಡಿನ ಲೇಖಕ ತಂತ್ರಾಂಶ. ಈ ಬೀಟ ರೈಟರಿನ ಶೈಲಿ ಹೇಗಿರಬಹುದು ಎನ್ನಿಸಿತೇ? ವಿಜ್ಞಾನ ಲೇಖನಗಳಲ್ಲಿ ಸಾಮಾನ್ಯವಾಗಿ ಬರೆದವರು ಯಾರೆಂಬ ಛಾಪು ಇರದಂತೆ ಭಾಷೆ ಇರುತ್ತದೆ. ವಿಜ್ಞಾನ ಲೇಖನಗಳು ನೀರಸ ಎನ್ನಿಸುವುದು ಅದೇ ಕಾರಣ. ಇಂತಹ ಲೇಖನಗಳನ್ನು ಬರೆಯುವುದೇನೂ ಕಷ್ಟವಲ್ಲ. ಅದಕ್ಕೇ ಕಂಪ್ಯೂಟರು ಕೂಡ ಅದನ್ನು ಬರೆಯಿತು ಎಂದಿರಾ? ಒಂದು ಮಟ್ಟಿಗೆ ನಿಮ್ಮ ಮಾತನ್ನು ಒಪ್ಪಬಹುದಾದರೂ, ವಿಜ್ಞಾನ ಲೇಖನಗಳನ್ನೂ ಬರೆಯುವುದಕ್ಕೂ ಒಂದು ಭಾಷೆ ಇರುತ್ತದೆ. ವ್ಯಾಕರಣ ಇರುತ್ತದೆ. ಇವು ಯಥಾವತ್ತಾಗಿ ಇಲ್ಲದಿದ್ದರೆ ಯಾರೇ ಬರೆದರೂ ಲೇಖನ ಅರ್ಥವಾಗಲಿಕ್ಕಿಲ್ಲ. ಹೀಗೆ ವ್ಯಾಕರಣಬದ್ಧವಾದ ಬರೆವಣಿಗೆಯನ್ನು ಯಾಂತ್ರೀಕರಿಸುವುದು ಸುಲಭವಲ್ಲ. ಸ್ಪ್ರಿಂಗರ್ ಸಾಧನೆ ಇದು ಕೂಡ ಸಾಧ್ಯ ಎಂದು ನಿರೂಪಿಸಿದೆ.

ಈ ಪುಸ್ತಕವನ್ನು ಬರೆದ ಕಂಪ್ಯೂಟರು ತಂತ್ರಾಂಶ ಮೊದಲಿಗೆ ಎಲ್ಲ ಲೇಖನಗಳನ್ನೂ ಒಟ್ಟಾಗಿಸಿಕೊಂಡಿತು. ಅನಂತರ ಅವುಗಳಲ್ಲಿ ಇರುವ ಪ್ರಮುಖ ವಿಷಯಗಳ ಪದಗಳನ್ನು ಪಟ್ಟಿ ಮಾಡಿತು. ಈ ಪಟ್ಟಿಯನ್ನು ಮತ್ತೆ ನಿಕಟ ಸಂಬಂಧವಿರುವ ಪದಗಳ ಅರ್ಥಾತ್ ಯಾವುದೇ ಲೇಖನದಲ್ಲಿ ಅತಿ ಹೆಚ್ಚಿಗೆ ಜೊತೆಯಾಗಿರುವಂತಹ ಪದಗಳನ್ನು ಗುರುತಿಸಿ ಪರಿಷ್ಕರಿಸಿತು. ಇದೇ ರೀತಿಯಲ್ಲಿ ವಿಷಯಗಳನ್ನೂ ಪಟ್ಟಿ ಮಾಡಲಾಯಿತು. ಹೀಗೆ ವರ್ಗೀಕರಿಸಿದಾಗ ವಿವಿಧ ಅಧ್ಯಾಯಗಳು ದೊರೆತುವು. ಇದು ಒಂದು ರೀತಿಯಲ್ಲಿ ನಾವು ಲೇಖನ ಬರೆಯುವಾಗ ಏನೇನು ಬರೆಯಬೇಕು ಎಂದು ಪಟ್ಟಿ ಮಾಡಿಕೊಂಡ ಹಾಗೆ. ಅನಂತರ ಆಯಾ ಪದಗಳು ಉಲ್ಲೇಖಿಸುವ ಪಾಠಗಳನ್ನು ನಕಲು ಮಾಡಿ ಜೋಡಿಸಲಾಯಿತು. ಹೀಗೆ ಜೋಡಿಸಿದ ಪಾಠಗಳು ಬಿಡಿ, ಬಿಡಿ ಎನಿಸದಂತೆ ಅವನ್ನು ಜೋಡಿಸಿ, ವ್ಯಾಕರಣ ಬದ್ಧವಾಗಿರುವಂತೆ ಮಾಡಿದಾಗ ಪುಸ್ತಕ ಸಿದ್ಧವಾಯಿತು.
ಕೊನೆಗೊಂದು ಮಾತು. ಲಿಥಿಯಂ ಅಯಾನು ಬ್ಯಾಟರಿ ಎನ್ನುವ ವಿಷಯವೇ ಏಕೆ? ಏಕೆಂದರೆ ಕಳೆದ ಎರಡು ದಶಕಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದಲ್ಲ ಎರಡಲ್ಲ, 50000 ಕ್ಕೂ ಹೆಚ್ಚು ಶೋಧ ಪ್ರಬಂಧಗಳು ಪ್ರಕಟವಾಗಿವೆಯಂತೆ. ಅದಕ್ಕೇ ಅದಕ್ಕೆ ಇಷ್ಟು ಪ್ರಾಮುಖ್ಯತೆ.

ಬೀಟ ರೈಟರು ಪಕ್ವವಾಗಿ ರೈಟರೇ ಆದರೆ ಏನಾಗಬಹುದು? ಬಹುಶಃ ಲಿಥಿಯಂ ಅಯಾನು ಬ್ಯಾಟರಿಯಂತಹ ಪ್ರಮುಖ ವಿಷಯಗಳ ಸಾರ ಸಂಗ್ರಹಗಳ ಪ್ರಕಟಣೆ ಹೆಚ್ಚಬಹುದು. ಏಕೆಂದರೆ ಅಷ್ಟೊಂದು ಸಾವಿರಾರು ಶೋಧ ಪ್ರಬಂಧಗಳನ್ನು ಓದಿ, ಅರ್ಥ ಮಾಡಿಕೊಂಡು, ಬರೆಯುವ ತಾಳ್ಮೆ, ಸಾಹಸ ಯಾರು ಮಾಡುತ್ತಾರೆ. ಕೇವಲ ಯಂತ್ರವಷ್ಟೆ ಮಾಡಬಹುದು. ಹಾಗಿದ್ದರೆ ಸಂಪೂರ್ಣ ರಾಮಾಯಣದಂತಹ ಕೃತಿಯನ್ನೂ ಬರೆಯುವ ರೈಟರು ಬರಬಹುದೋ? ಅದು ಬಹುಶಃ ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಕಲ್ಪನೆಯ ಸಾಮರ್ಥ್ಯ ಬೇಕು. ತನ್ನ ಓದುಗರ ಜಗತ್ತಿನ ಅರಿವು ಇರಬೇಕು. ಹೀಗಾಗಿ ಬಹುತೇಕ ವಿಜ್ಞಾನ ಪುಸ್ತಕಗಳನ್ನಷ್ಟೆ ಬರೆಯುವ ರೈಟರು ತಯಾರಾಗಬಹುದು. ಸ್ಪ್ರಿಂಗರು ಈಗಾಗಲೇ ಸಮಾಜಶಾಸ್ತ್ರ, ಸಾಹಿತ್ಯ ಹಾಗೂ ವಿಜ್ಞಾನದ ಇತರೆ ವಿಷಯಗಳಲ್ಲಿಯೂ ಇಂತಹ ಪರಾಮರ್ಶನ ಗ್ರಂಥಗಳನ್ನು ಹೊರತರುವ ಯೋಜನೆ ಇದೆ ಎಂದಿದೆ.