ಆಮೆಜಾನ್‌, ಫ್ಲಿಪ್‌ಕಾರ್ಟ್‌ ಹಬ್ಬದ ಸೇಲ್‌| ಖರೀದಿಸುವಾಗ ಇರಲಿ ಈ ಐದು ವಿಷಯಗಳ ಬಗ್ಗೆ ಎಚ್ಚರ

ಇದು ಹಬ್ಬದ ಕಾಲ. ಈ ಕಾಮರ್ಸ್‌ ತಾಣಗಳಲ್ಲಿ ಈ ಮಾರಾಟದ ಭರಾಟೆ ಜೋರು. ವಿಶೇಷವಾಗಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳು ಭಾರಿ ಆಕರ್ಷಣೆಗಳನ್ನು ಒಡ್ಡಿ ಖರೀದಿಗೆ ಪ್ರೇರೇಪಿಸುತ್ತಾರೆ. ಆದರೆ ಈ ಕೊಳ್ಳುವ ಸಂಭ್ರಮವನ್ನು ವಂಚಕರೂ ಸಡಗರದಿಂದ ಕಾಯುತ್ತಿರುತ್ತಾರೆ. ಹಾಗಾಗಿ ಎಚ್ಚರವಹಿಸಿ

ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗ್ರ್ಯಾಂಡ್‌ ಸೇಲ್‌ ಆರಂಭವಾಗಿದೆ. ಹಬ್ಬದ ಸಂದರ್ಭದಲ್ಲಿ ಬರುವ ಈ ಸೇಲ್‌ಗಳಿಗೆ ದೇಶದ ಜನ ಕಾದು ಕೊಳ್ಳುತ್ತಾರೆ. ಆರ್ಕಷಕ ರಿಯಾಯಿತಿ ದರವೇ ಇಲ್ಲಿ ದೊಡ್ಡ ಆಕರ್ಷಣೆ. ಕೊಳ್ಳುವವ ಗ್ರಾಹಕರು ಕಾಯುವಷ್ಟೇ ಕಾತರದಿಂದ ವಂಚಕರೂ ಈ ಸಂದರ್ಭವನ್ನು ನಿರೀಕ್ಷಿಸುತ್ತಾರೆ. ಯಾಕೆಂದರೆ ಸುಲಭವಾಗಿ ಗ್ರಾಹಕರನ್ನು ಬೇಸ್ತು ಬೀಳಿಸಿ ಹಣ ಮಾಡಬಹುದು ಎಂಬ ಕಾರಣಕ್ಕಾಗಿ. ಹೌದು, ವಂಚಕರು ವಿವಿಧ ಕಾರಣಗಳನ್ನು ಒಡ್ಡಿ, ಗ್ರಾಹಕರಿಗೆ ವಂಚಿಸುವ ಸಾಧ್ಯತೆಗಳಿವು.

1. ಡೆಲಿವರಿ ನಂತರ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಬರುವ ಕರೆಗಳ ಬಗ್ಗೆ ಎಚ್ಚರವಿರಲಿ

ಆನ್‌ಲೈನ್‌ ಏನನ್ನೋ ಆರ್ಡರ್‌ ಮಾಡುತ್ತೀರಿ. ಡೆಲಿವರಿಯೂ ಆಗುತ್ತದೆ. ಹಿಂದೆಯೇ ನಿಮಗೊಂದು ಕರೆ ಬರುತ್ತದೆ. ಒಂದು ಕಂಪನಿಯ ಎಕ್ಸಿಕ್ಯುಟಿವ್‌ ಎಂದು ಪರಿಚಯಿಸಿಕೊಂಡು, ನೀವು ಪ್ರಾಡಕ್ಟ್‌ ಖರೀದಿಸಿದ ಹಿನ್ನೆಲೆಯಲ್ಲಿ ನಿಮ್ಮ ಹೆಸರು ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದ್ದು, ನೀವು ಹದಿನೈದು ಲಕ್ಷ ರೂ. ಬಹುಮಾನ ಗೆದಿದ್ದೀರಿ ಅಥತವಾ ಕಾರು ಗೆದ್ದಿದ್ದೀರಿ ಎಂದು ಹೇಳುತ್ತಾರೆ. ನಂತರ ಉಡುಗೊರೆಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಲು ರಿಜಿಸ್ಟ್ರೇಷನ್‌ ಫೀ ಕಟ್ಟುವಂತೆ ಹೇಳುತ್ತಾರೆ.

2. ವಾಟ್ಸ್‌ಆಪ್‌ನಲ್ಲಿ ಬರುವ ಕ್ಯಾಷ್‌ಬ್ಯಾಕ್‌ ಆಫರ್‌ಗಳು, ಡಿಸ್ಕೌಂಟ್‌ ಸೇಲ್‌ಗಳು

ಪ್ರತಿಯೊಂದು ಸಣ್ಣ ಬೆಳವಣಿಗೆಯನ್ನು ಗಮನಿಸುವ ವಂಚಕರು ಮಾರಾಟ, ರಿಯಾಯಿತಿ, ಕ್ಯಾಷ್‌ ಬ್ಯಾಕ್‌ಗಳ ಹೆಸರಿನಲ್ಲಿ ಸುಳ್ಳು ಮಾಹಿತಿಯೊಂದು ಒಂದು ಲಿಂಕನ್ನು ವಾಟ್ಸ್‌ ಆಪ್‌ನಲ್ಲಿ ಹರಿಯಬಿಡುತ್ತಾರೆ. ಇದು ಫಿಶಿಂಗ್‌ -ಅಂದರೆ ವಂಚಿಸಲು ಬಳಸುವ ಗಾಳ- ಪ್ರಯತ್ನ. ಈ ಲಿಂಕ್‌ಗಳು ಫ್ಲಿಪ್‌ಕಾರ್ಟ್‌/ಅಮೆಜಾನ್‌ ಖಾತೆಯ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತವೆ. ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಕದಿಯುವುದಕ್ಕೂ ಯತ್ನಿಸುತ್ತವೆ.

3. ಆನ್‌ಲೈನ್‌ ಖರೀದಿಸುವವರ ಕಾರ್ಡ್‌ಗಳ ಮೇಲೆ ಕಣ್ಣು

ನಾವು ಎಲ್ಲವನ್ನೂ ಆನ್‌ಲೈನ್‌ನಲ್ಲಿ ಖರೀದಿಸುತ್ತಿರುವುದರಿಂದ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳನ್ನು ಬಳಸುತ್ತಿರುತ್ತೇವೆ. ಹಾಗಾಗಿ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಕರೆ ಮಾಡಿ, ನಿಮ್ಮ ಕ್ರೆಡಿಟ್‌ ಲಿಮಿಟ್‌ ಮುಗಿದಿದೆ ಎಂದೊ, ಕಾರ್ಡ್‌ ಬ್ಲಾಕ್‌ ಆಗಿದೆ ಎಂದೋ ಹೇಳಿ, ಹೊಸ ಕಾರ್ಡ್‌ ಪೂರೈಸುವುದಕ್ಕೆ ನೆರವಾಗುವುದಾಗಿ ಹೇಳುತ್ತಾರೆ. ವಿವರಗಳನ್ನು ಕಲೆಹಾಕಲು ಯತ್ನಿಸುತ್ತಾರೆ.

4. ಎಸ್ಸೆಮ್ಮೆಸ್‌ ಅಥವಾ ಈ ಮೇಲ್‌ ರೂಪದಲ್ಲೂ ಬರುವ ಡೀಲ್‌ಗಳ ಆಕರ್ಷಣೆ

ವಾಟ್ಸ್‌ಆಪ್‌ನಲ್ಲಿ ಬರುವಂತೆಯೇ ಇವು ಕೂಡ ಸೋಗಿನ ಲಿಂಕ್‌ಗಳು. ಅಂದರೆ ಗ್ರಾಹಕರ ಮಾಹಿತಿ ಕದಿಯುವುದಕ್ಕಾಗಿ ವಿಶೇಷ ಡೀಲ್‌ಗಳು, ಭಾರಿ ರಿಯಾಯಿತಿಗಳು ಇತ್ಯಾದಿಗಳ ಹೆಸರಿನಲ್ಲಿ ಈ ಮೇಲ್‌ ಮತ್ತು ಎಸ್ಸೆಮ್ಮೆಸ್‌ಗಳ ರೂಪದಲ್ಲಿ ಬರುತ್ತವೆ. ಅದರಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಲು ಪ್ರೇರೇಪಿಸುತ್ತವೆ. ಈ ಲಿಂಕ್‌ಗಳು ಎಚ್‌ಟಿಟಿಪಿಎಸ್‌ ಎಂದು ಆರಂಭವಾಗುವುದೇ ಎಂದು ಪರಿಶೀಲಿಸಿ.

5. ಉಚಿತ ಅಥವಾ ರಿಯಾಯಿತಿ ಸೋಗಿನ ಕೂಪನ್‌ಗಳ ಜಾಲ

ನಮಗೆ ಉಚಿತವಾಗಿ ಸಿಗುವುದರ ಬಗ್ಗೆ ರಿಯಾಯಿತಿಯಲ್ಲಿ ಸಿಗುವ ಉತ್ಪನ್ನಗಳ ಬಗ್ಗೆ ಸೆಳೆತ. ಹಾಗಾಗಿ ಆನ್‌ಲೈನ್‌ ಖರೀದಿಸುವಾಗ, ಇಂಥ ಉಚಿತ ಅಥವಾ ರಿಯಾಯಿತಿ ಕೂಪನ್‌ಗಳಿಗೆ ಗೂಗಲ್‌ನಲ್ಲಿ ಹುಡುಕುತ್ತೇವೆ. ಹೀಗೆ ಸಿಕ್ಕುವ ಕೂಪನ್‌ಗಳು ವಾಸ್ತವದಲ್ಲಿ ವಂಚಕ ಲಿಂಕ್‌ಗಳೇ ಆಗಿರುತ್ತವೆ. ಅಧಿಕೃತ ತಾಣದಲ್ಲಿ ಸಿಗುವ ಕೊಡುಗೆ/ರಿಯಾಯಿತಿಗಳನ್ನು ಖಚಿತಪಡಿಸಿಕೊಂಡು ಖರೀದಿಗೆ ಮುಂದಾಗಿ