ಜನ್ಮ ದಿನ | ಬಿ ಜಿ ಎಲ್‌ ಸ್ವಾಮಿ A Botanist with big ‘B’!

ಮಹಾನ್ ಸಸ್ಯಶಾಸ್ತ್ರಜ್ಞ, ಸಂಶೋಧಕ, ಶಿಕ್ಷಕ, ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರ ಡಾ. ಬಿ.ಜಿ. ಎಲ್ ಸ್ವಾಮಿ, ಲೇಖಕ ಅ. ರಾ. ಮಿತ್ರ ಅವರು ತಮ್ಮ ಈ ಸುದೀರ್ಘ ವ್ಯಕ್ತಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

A Botanist with big ‘B’  ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ನರ್ ಅವರಿಂದ ಪ್ರಶಂಸಿತರಾದ ಬಿ.ಜಿ.ಎಲ್. ಸ್ವಾಮಿ (ಬೆಂಗಳೂರು ಲಕ್ಷ್ಮೀನಾರಾಯಣ ಸ್ವಾಮಿ) ಕನ್ನಡದ ಒಬ್ಬ ವಿಶಿಷ್ಟ ಬರಹಗಾರ, ಚಿಂತಕ ಹಾಗೂ ಸಂಶೋಧಕ.

  ಅವರ ವ್ಯಂಗ್ಯಬರಹಗಳಲ್ಲಾಗಲೀ, ಪ್ರವಾಸ ಕಥನಗಳಲ್ಲಾಗಲಿ, ಸಂಶೋಧನ ಗ್ರಂಥಗಳಲ್ಲಾಗಲಿ ಅವರ ‘ಸ್ವಾಮಿತನ’ ಎನ್ನಬಹುದಾದ ವಿಶಿಷ್ಟತೆ ಎದ್ದುಕಾಣುವಂಥದು.  ಸಾಹಿತ್ಯದಲ್ಲಿ ಈ ಬಗೆಯ ಸಾವಯವ ಶಿಲ್ಪ ಅಪೂರ್ವವಾದದ್ದು.  ಯಾವ ವಿಷಯವನ್ನೇ ಆರಿಸಿಕೊಂಡರೂ ಅದರ ಮೂಲ ಬೇರುಗಳನ್ನೇ ಅಲುಗಾಡಿಸುವ ಸ್ವಭಾವ ಅವರದು.  ಅವರು ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾವನ್ನು ರೇಖಿಸುತ್ತಾ ನಮ್ಮ ದೇಶಕ್ಕೆ ದಕ್ಷಿಣ ಅಮೆರಿಕಾದಿಂದ ಬಂದ ತರಕಾರಿಗಳನ್ನೆಲ್ಲ ಗುರುತಿಸುತ್ತಾರೆ.  ಅವರು ದಕ್ಷಿಣ ಭಾರತದ ಶಾಸನಗಳ ಕೂಲಂಕಷ ಅಧ್ಯಯನ ಮಾಡುವುದು ಅವುಗಳಲ್ಲಿ ಉಕ್ತವಾದ ಗಿಡಮರಗಳ ಹಿನ್ನೆಲೆಯಲ್ಲಿ.  ಕರ್ನಾಟಕದ ಸಂಗೀತದ ಬಗೆಗೆ ಚಿಂತಿಸುವುದರ ಜತೆಗೇ ವಿಜಯನಗರದ ಪತನದ ವಾಸ್ತವಗಳ ಶೋಧನೆಗೆ ಹೊರಡುತ್ತಾರೆ.  ತಂಬಾಕಿನಂಥ ಮಾದಕ ವಸ್ತುವಿನ ಕಥನವನ್ನು ಅಷ್ಟೇ ಮಾದಕವಾದ ಮೋಹಕ ಶೈಲಿಯಲ್ಲಿ ಮಂಡಿಸುತ್ತಾರೆ.  ಅವರು ಕೊಡುವ ವ್ಯಕ್ತಿಚಿತ್ರಗಳೂ, ತಮಿಳು ಅನುವಾದಗಳೂ ಸ್ವಾಮಿಯವರದೇ ಎಂದು ಹೇಳಬಹುದಾದ ಒಂದು ಗಡಸುತನದಿಂದ ಕೂಡಿರುತ್ತವೆ.  ‘ಪಂಚಕಲಶಗೋಪುರ’ದಲ್ಲಿ ಅವರು ಬಿ.ಎಂ.ಶ್ರೀಯವರ ಭಾಷಣ ಶ್ರದ್ಧೆ-ಗೀಳು ಎರಡನ್ನೂ ಹಾಸ್ಯ-ಮೆಚ್ಚಿಕೆಗಳ ವಿಚಿತ್ರ ಮಿಶ್ರಣದಿಂದ ಪರಿಚಯ ಮಾಡಿಕೊಟ್ಟಿರುವ ಬಗೆಯನ್ನು ನೋಡಬೇಕು.  ಬಿ.ಜಿ.ಎಲ್. ಸ್ವಾಮಿಯವರು ಸ್ವಯಂ ರೇಖಾಚಿತ್ರಕಾರರೂ ಆಗಿರುವುದರಿಂದ ತಮ್ಮ ವಿವರಣೆಯ ಕಲಾತ್ಮಕ ದೃಶ್ಯಚಿತ್ರಗಳನ್ನು ತಮ್ಮದೇ ಅದ ದೃಷ್ಟಿಕೋನದಿಂದ ಬಿಡಿಸುವ ಹವ್ಯಾಸವನ್ನು ಪ್ರದರ್ಶಿಸಿ ತಮ್ಮ ಬರಹಗಳಿಗೆ ಒಂದು ಹೊಸ ಅಯಾಮವನ್ನು ಒದಗಿಸುತ್ತಾರೆ.  ವಿವಾದಾತ್ಮಕ ವಿಷಯಗಳ ಸುಳಿಯಲ್ಲಿ ಸಿಲುಕಬಯಸುವುದೂ ಅವರಿಗೆ ಒಂದು ಪ್ರಿಯವಾದ ಹವ್ಯಾಸ.  ತಮಿಳು ಭಾಷೆಯ ಪ್ರಾಚೀನತೆಯನ್ನು ತೋರಿಸುವ ವಿಷಯದಲ್ಲಿ ತಮಿಳು ವಿದ್ವಾಂಸರು ಮಾಡಿರುವ ಆತುರದ ತೀರ್ಮಾನಗಳನ್ನು ಪ್ರಬಲ ಸಾಕ್ಷಾಧಾರಗಳಿಂದ ಖಂಡಿಸಿ ತಮಿಳರ ಅಸಹನೆಗೆ ಪಾತ್ರರಾದದ್ದನ್ನಾಗಲಿ, ಪುರಂದರ ದಾಸರ ಕೀರ್ತನೆಗಳ ಕೆಲವು ಮಿತಿಗಳನ್ನು ಶುದ್ಧ ಸಂಗೀತದ ದೃಷ್ಟಿಯಿಂದ ಚರ್ಚಿಸಿ ಕನ್ನಡದಲ್ಲಿ ದೊಡ್ಡ ವಿವಾದದ ಸುಳಿಯನ್ನು ಎಬ್ಬಿಸುವುದನ್ನಾಗಲಿ, ಚಿದಂಬರದ ನಟರಾಜನ ಆನಂದ ತಾಂಡವದ ಮೂಲವು ಕಾಶ್ಮೀರ ಶೈವದ ಪ್ರತ್ಯಭಿಜ್ಞಾದರ್ಶನದ ಪ್ರಭಾವದಿಂದ ಬಂದುದೆಂದು ಸಾಕ್ಷಾಧಾರಗಳಿಂದ ಗುರುತಿಸಿದ್ದುದನ್ನಾಗಲಿ ಇಲ್ಲಿ ನೆನಪಿಸಿಕೊಳ್ಳಬಹುದು.  ಬೇರೆ ಬೇರೆ ಪ್ರಸಂಗಗಳ ವ್ಯಂಗ್ಯ ವಿಮರ್ಶೆ ಮಾಡುವ ಸಂದರ್ಭದಲ್ಲಿ ಆನುಷಂಗಿಕವಾಗಿ ತಮ್ಮ ಮನೋಧರ್ಮ ಯಾವ ಧಾತುವಿನದು ಎಂಬುದನ್ನು ಧ್ವನಿಸುತ್ತ ಹೋಗುವ ಜಾಯಮಾನ ಅವರದು.  ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಂತಹ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕ, ಪ್ರಾಚಾರ್ಯ ಸ್ಥಾನಗಳಲ್ಲಿದ್ದೂ ದೊಗಲೆ ಜುಬ್ಬ, ಪೈಜಾಮಾ ಅಥವಾ ನಿಕ್ಕರ್ ಗಳಲ್ಲಿ ಓಡಾಡಿ ಕೆಲವು ಸಂಪ್ರದಾಯಸ್ಥ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳಿಗೆ ಅವರು ನುಂಗಲಾರದ, ಉಗುಳಲಾರದ ತುತ್ತಾಗಿದ್ದುದೂ ಉಂಟು.  ‘ಆನೆ ನಡೆದುದೆ ಮಾರ್ಗ’ ಎಂದು ಕೇಶಿರಾಜ ಹೇಳಿರುವುದು ಇಂಥವರನ್ನೇ ಕುರಿತು ಎಂದು ಕಾಣುತ್ತದೆ.

ಭಾಷೆಯ ನೆಲದಲ್ಲಿ ವ್ಯಂಗ್ಯದ ಮಳೆಯನ್ನು ಹರಿಸಿದ್ದು, ಸಸ್ಯ ಜಗತ್ತಿನ ನರುಗಂಪನ್ನು ತುಂಬಿದ್ದು ಮತ್ತು ಶೋಧನೆಯ ತಂಗಾಳಿಯಿಂದ ಲವಲವಿಸುವಂತೆ ಮಾಡಿದ್ದು ಬಿ.ಜಿ.ಎಲ್ ಸ್ವಾಮಿಯವರ ಸಾಧನೆ ಎನ್ನಬಹುದು.  ಸಸ್ಯವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಲೇಖನಗಳನ್ನು ಪ್ರಕಟಿಸಿ ಅಂತರರಾಷ್ಟ್ರೀಯ ಖ್ಯಾತಿಗೊಳಿಸಿರುವ ಸ್ವಾಮಿಯವರು ‘ಹಸಿರು ಹೊನ್ನು’ ಗ್ರಂಥದಲ್ಲಿ ಓದುಗರನ್ನು ತಮ್ಮ ಪಾಂಡಿತ್ಯದ ಸಾಗರದಲ್ಲಿ ಮುಳುಗಿಸದೆ, ತಬ್ಬಿಬ್ಬು ಮಾಡುವ ಪರಿಭಾಷೆಯನ್ನು ಬಳಸದೆ, ಜತೆಯಲ್ಲಿ ಬಂದಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರಚಂಡ ಅಜ್ಞಾನವನ್ನು ಹಿಯಾಳಿಸದೆ ಸಲೀಲವಾಗಿ ನಮ್ಮೆದುರಿಗೆ ಒಂದು ಸುಂದರ ಸಸ್ಯಲೋಕವನ್ನು ಸೃಷ್ಟಿಸಿ, ಅದರ ಎಲ್ಲ ಜಟಿಲತೆಗಳೊಂದಿಗೆ ಪರಿಚಯಿಸಿಕೊಡುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ.  ಪ್ರಕೃತಿಯ ಸಸ್ಯವಿಸ್ಮಯಗಳನ್ನು ನೋಡುತ್ತ ನೋಡುತ್ತ ಅದರ ವಿಶ್ವರೂಪದರ್ಶನದಿಂದ ನಾವು ಬೆರಗಾಗುವಂತೆ ಮಾಡಬಲ್ಲ ಒಂದು ಕಲಾಮೋಡಿ ಅವರ ಬರಹದಲ್ಲಿದೆ.  ಸಸ್ಯಜಗತ್ತಿನ ವಿಷಯಗಳ ಗಹನತೆಯನ್ನಾಗಲಿ, ಜಟಿಲತೆಯನ್ನಾಗಲಿ ಹಗುರಗೊಳಿಸದೆ ಎಷ್ಟು ತಿಳಿಯಾಗಿ ಹೇಳ ಬಹುದೆಂಬುದಕ್ಕೆ ‘ಹಸಿರು ಹೊನ್ನು’ ಗ್ರಂಥದ ಪ್ರವಾಸ ಕಥನ ವ್ಯಾಖ್ಯಾನಗಳು ಸಾಕ್ಷಿಯಾಗಿ ನಿಲ್ಲುತ್ತವೆ.  “ಸ್ವಾಮಿ ನನಗೆ ಬಹು ದೊಡ್ಡವರಾಗಿ ಕಾಣಿಸಿದುದು ಸಂಶೋಧನೆಗಳ ಲವಲವಿಕೆಯಿಂದ ಮತ್ತು ಶಾಸ್ತ್ರಪ್ರೇಮವನ್ನು ಇನ್ನೊಬ್ಬರಿಗೆ ಅಂಟಿಸಬಲ್ಲ ಆಕರ್ಷಣೆಯಿಂದ” ಎಂಬ ಶಿವರಾಮ ಕಾರಂತರ ಮಾತು ಎಷ್ಟು ಸತ್ಯವೆಂಬುದು ಹಸಿರು ಹೊನ್ನಿನ ಪುಟಪುಟದಲ್ಲೂ ಕಂಡುಕೊಳ್ಳಬಹುದಾಗಿದೆ.

ಹೊಸಗನ್ನಡದ ಆಚಾರ್ಯರಲ್ಲೊಬ್ಬರಾದ ಡಿ.ವಿ. ಗುಂಡಪ್ಪನವರ ಮಗ ಬಿ.ಜಿ.ಎಲ್.ಸ್ವಾಮಿ ಜನಿಸಿದ್ದು 1916ನೇ ಇಸವಿಯ ಫೆಬ್ರವರಿ 5ರಂದು.  ಅವರ ಐದನೆಯ ವಯಸ್ಸಿನಲ್ಲಿ ತಾಯಿ ಬೆಂಕಿ ಅಪಘಾತದಲ್ಲಿ ತೀರಿಕೊಂಡರು.  ಡಿ.ವಿ.ಜಿಯವರಂಥ ಹಿರಿಯ ಚೇತನದ ಮೊದಲನೆಯ ಮಗನಾಗಿ ಬೆಳೆದ ಸ್ವಾಮಿ ತಂದೆಯವರಿಗಿಂತ ಹೆಚ್ಚಾಗಿ ತಂದೆಯವರ ಪುಸ್ತಕ ಭಂಡಾರದಿಂದ ಪ್ರಭಾವಿತರಾದ ವ್ಯಕ್ತಿ.  ನೂರಾರು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಡಿ.ವಿ.ಜಿ. ಮಗನನ್ನು ಸ್ವತಂತ್ರವಾಗಿ ಬೆಳೆಯಲು ಬಿಡಬೇಕಾದದ್ದು ಅನಿವಾರ್ಯವಾಯಿತು.  ಹೈಸ್ಕೂಲಿನಲ್ಲಿ ‘ಜಗಳಗಂಟ’ ಎಂದೇ ಪ್ರಸಿದ್ಧನಾಗಿದ್ದ ಸ್ವಾಮಿ, ಚರ್ಚೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲವೆಂದು ಅವರ ಜೀವನ ಚರಿತ್ರಕಾರ ಡಾ.ಬಿ.ಪಿ. ರಾಧಾಕೃಷ್ಣ ಹೇಳಿದ್ದಾರೆ.  ಅಲ್ಲದೆ ಆ ವಯಸ್ಸಿನಲ್ಲೇ ಅವರಿಗೆ ನಾಟಕದ ಗೀಳೂ ಹಿಡಿದಿತ್ತಂತೆ.  ಮರಣದ ಮಣೆಯ ಮೇಲೆ ಶಯನ.  ಉಡುಪಿನಲ್ಲಿ ಅಂಥ ನಯ ನಾಜೂಕು ಇರುತ್ತಿರಲಿಲ್ಲವೆಂದು ರಾಧಾಕೃಷ್ಣ ಅವರು ಹೇಳುತ್ತಾರೆ.  ಉದ್ದಕ್ಕೂ ಅಷ್ಟೇ.  ದೊಗಲೆ ಜುಬ್ಬದ ಗಡಸು ನಡಿಗೆಯ ಧಡೂತಿ ಮನುಷ್ಯ ಸ್ವಾಮಿ.  ತಿವಿಯುವ ಕಣ್ಣ,  ಕೈ ಕಾಲುಗಳನ್ನು ವಿಲಕ್ಷಣವಾಗಿ ತಿರುಚುತ್ತ, ಚುರೋಟಿನ ಒಳಗೊಳವೆಯನ್ನು ಕೆಲದ ಒಸಡಿಗೆ ಸರಿಸುತ್ತ, ಗಟ್ಟಿಯಾಗಿ ಅರಚುತ್ತ, ಕೇಕೆ ಹಾಕುತ್ತ ಮಾತಾಡುವುದು ಅವರ ಸ್ವಭಾವ.  ತುಂಟ ಗಂಭೀರ ಮುಖಮುದ್ರೆ.  ಅವರ ಮುಖ ಒಬ್ಬ ಕೊಲೆಗಾರನ ಮುಖವನ್ನು ಅಭಿವ್ಯಕ್ತಿಸುವಂತಿದೆ ಎಂದು ಡಿ.ವಿ.ಜಿ ಆಗಾಗ ಹಾಸ್ಯಮಾಡುತ್ತಿದ್ದರಂತೆ.  “ಇದು ನನ್ನ ತಪ್ಪಲ್ಲ.  ಈ ಮಡಿಕೆ ಮಾಡಿದ ಕುಂಬಾರನ ತಪ್ಪು” ಎಂದು ಸ್ವಾಮಿಯವರು ಆ ವಿಧಾತನನ್ನೂ ಲೇವಡಿ ಮಾಡಿರುವುದುಂಟು.  ಸೆಂಟ್ರಲ್ ಕಾಲೇಜಿನಲ್ಲಿ 1936ರಲ್ಲಿ ಪ್ರಾಣಿಶಾಸ್ತ್ರದ ಆನರ್ಸ್ ಗೆ ಸೇರಬೇಕಾಗಿದ್ದ ಸ್ವಾಮಿ ಎ. ಆರ್. ಕೃಷ್ಣಶಾಸ್ತ್ರಿಗಳ ಬಲವಂತಕ್ಕೆ ಸಸ್ಯಶಾಸ್ತ್ರದ ಕಡೆ ತಿರುಗಿದರು.  ಇತ್ತ ಕನ್ನಡದ ಬಗೆಗೂ ಆಸಕ್ತಿ ಬಲಿತು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಕಾರ್ಯದರ್ಶಿಯಾದರು.  ಅವರನ್ನು ಕನ್ನಡದ ವೈಜ್ಞಾನಿಕ ಬರವಣಿಗೆಯ ಕಡೆಗೆ ತಿರುಗಿಸಿದ ಶ್ರೇಯಸ್ಸು ಎ.ಆರ್. ಕೃ ಅವರಿಗೇ ಸಲ್ಲುತ್ತದೆ.  ಅವರ ಒತ್ತಾಸೆಯಿಂದ “ಆರ್ಜಿತ ಗುಣಗಳೂ ಅನುವಂಶೀಯತೆಯೂ” ಎಂಬ ಪ್ರಥಮ ಲೇಖನವನ್ನು ಸ್ವಾಮಿಯವರು ಬರೆದದ್ದು 1939ರಲ್ಲಿ.  ಅನಂತರ 1944ರಲ್ಲಿ ‘ವಿಜ್ಞಾನ ವಿಹಾರ’ ಎಂಬ ತಲೆಬರಹದ ನಾಲ್ಕು ಲೇಖನಗಳು (ಜೇಡಗಳ ಪ್ರಣಯ ಪ್ರಸಂಗ, ಆಸ್ಟ್ರೇಲಿಯಾದ ಪ್ಲಾಟಿಪಸ್ ಎಂಬ ಪ್ರಾಣಿಯ ಬಗೆಗೆ ಒಗಟಿನ ರೂಪದ ಪದ್ಯಗುಚ್ಚ, ಹಸಿವಿನ ಬಳ್ಳಿ ಇತ್ಯಾದಿ) ಕನ್ನಡ ನುಡಿಯಲ್ಲಿ ಬೆಳಕು ಕಂಡವು.  ಮುಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧಕ ಸಹಾಯಕ ವೃತ್ತಿ.  ಈ ಅವಧಿಯಲ್ಲಿ ಇಂಗ್ಲೀಷಿನಲ್ಲಿ ಬರೆದ ವೈಜ್ಞಾನಿಕ ಬರಹಗಳಿಂದಾಗಿ ಸ್ವಾಮಿ ಸಸ್ಯಶಾಸ್ತ್ರದ ವಿಖ್ಯಾತ ವಿಜ್ಞಾನಿಗಳ ಗಮನವನ್ನು ಸೆಳೆದರು.  ತಂದೆಯ ನೆರವಿನಿಂದ ಮನೆಯಲ್ಲೇ ಪ್ರಯೋಗಾಲಯ ಸ್ಥಾಪಿಸಿ ವಿಶ್ವದ ಪ್ರಸಿದ್ಧ ಪತ್ರಿಕೆಗಳಲ್ಲಿ ತಮ್ಮ ಸಂಶೋಧನ ಲೇಖನಗಳನ್ನು ಪ್ರಕಟಿಸಿ 1947ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು.  ಮುಂದೆ ಸರ್ಕಾರದ ಶಿಷ್ಯವೇತನವನ್ನು ಪಡೆದು ಸುಪ್ರಸಿದ್ಧ ಸಸ್ಯವಿಜ್ಞಾನಿಯಾದ ಇರ್ವಿಂಗ್ ಬೈಲಿಯ ಶಿಷ್ಯರಾಗಿ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸೇರಿದರು.  ಅಮೇರಿಕಾ ಸಂಶೋಧನೆಗೆ ಹೆಸರಾದ ದೇಶ.  ಸಂಶೋಧನೆಯಲ್ಲಿ ತೊಡಗಿದವರು ಹಗಲು ರಾತ್ರಿಗಳ ಲಕ್ಷವಿಲ್ಲದೆ ಬೇರೆ ಎಲ್ಲವನ್ನೂ ಮರೆತು ವಿಷಯದಲ್ಲಿ ತನ್ಮಯರಾಗುವುದು ಅಮೆರಿಕನ್ನರಿಗೆ ಆಶ್ಚರ್ಯದ ಸಂಗತಿಯೇನೂ ಆಗಿರಲಿಲ್ಲ.  ಅಂಥ ಅಪೂರ್ವ ಸಂಶೋಧಕ ಇರ್ವಿಂಗ್ ಬೈಲಿಯವರೇ ಬಿ.ಜಿ. ಎಲ್. ಸ್ವಾಮಿ ಬಗೆಗೆ ಬರೆಯುತ್ತಾ “I consider Dr. Swamy to be the ablest oriental student with whom I have come in contact during a period of 40 years…..  Further more, I rate him as the top few of any race or nationality”  ಎಂದು ಹೇಳಿರುವುದು ಗುರುವಿನಿಂದ ಶಿಷ್ಯನೊಬ್ಬನಿಗೆ ಸಿಕ್ಕಬಹುದಾದ ಅಪೂರ್ವ ನುಡಿಕಾಣಿಕೆಯಾಗಿದೆ.  ವಿದ್ವಾಂಸರಲ್ಲಿರಬೇಕಾದ ಶ್ರಮ, ಶಕ್ತಿ, ವಿವರಾಸಕ್ತಿಗಳ ಜತೆಗೇ ಸ್ವಾಮಿಯವರಲ್ಲಿ ಅಂತಃಸೃಜನ ಶೀಲವಾದ ಚಿಂತನಶಕ್ತಿಯೂ ಬೆರೆತಿದೆ ಎಂದು ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಅನ ಅರ್ಬಲ್ ಹೇಳಿದ್ದಾರೆ.  ಮದರಾಸಿನಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಸ್ವಾಮಿಯವರು ವೈಜ್ಞಾನಿಕ ಶೋಧನೆ, ಸಾಹಿತ್ಯ ರಚನೆ ಎರಡರಲ್ಲೂ ಸಮಾನವಾದ ಆಸಕ್ತಿಯನ್ನು ಪ್ರಕಟಿಸಿದ್ದಾರೆ.  ಬಿ.ಜಿ.ಎಲ್ ಸ್ವಾಮಿಯವರ ಮನೆಯೇ ಒಂದು ಸಂಕ್ಷಿಪ್ತ ವಸ್ತುಸಂಗ್ರಹಾಲಯವಾಗಿತ್ತು.  ನಾನಾ ಬಗೆಯ ಶಿಲೆ, ಶಿಲೀಂದ್ರ, ಸಸ್ಯಗೈರಿಕಾದಿ ಧಾತುಗಳಿಗೆ ಅಲ್ಲಿ ಜಾಗವಿತ್ತು.  ನಾನಾ ಶಿಸ್ತುಗಳಿಗೆ ಸಂಬಂಧಿಸಿದ ಗ್ರಂಥಗಳೂ ಅಲ್ಲಿದ್ದುವು.  ಸ್ವಯಂ ಚಿತ್ರಕಾರರಾಗಿದ್ದ ಸ್ವಾಮಿ ಮರದ ಶಿಲ್ಪಗಳ ಕೆತ್ತನೆಯನ್ನು ಮಾಡುವುದರಲ್ಲಿಯೂ ಆಸಕ್ತರಾಗಿದ್ದರು.  ಈ ಕಾರಣಗಳಿಂದ ಅವರ ಬರವಣಿಗೆ ವೈವಿಧ್ಯಮಯವಾಗಿದೆ.

ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ ಸ್ವಾಮಿಯವರು ಆ ಕಾಲೇಜಿನ ಪ್ರಿನ್ಸಿಪಾಲರಾಗಿ, ಆನಂತರ ಆಡಳಿತಕ್ಕೆ ಶರಣುಹೊಡೆದು ಪ್ರಿನ್ಸಿಪಾಲ್ ಗಿರಿಯನ್ನು ತ್ಯಜಿಸಿ ಪ್ರಾಧ್ಯಾಪಕರಾಗಿ ಸಂಶೋಧನೆ ಮುಂದುವರೆಸಿದರು.  ನಿವೃತ್ತಿ ಹೊಂದಿದ ನಂತರ ಕೆಲವು ವರ್ಷ ಬೆಂಗಳೂರಿನಲ್ಲಿದ್ದು ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ನವೆಂಬರ್ 2, 1980ರಂದು ಹೃದಯಾಘಾತದಿಂದ ತೀರಿಕೊಂಡರು.

ಬಿ.ಜಿ. ಎಲ್ ಸ್ವಾಮಿಯವರ ಬರವಣಿಗೆ ಕನ್ನಡ, ಇಂಗ್ಲಿಷ್, ತಮಿಳು ಈ ಮೂರೂ ಭಾಷೆಗಳಲ್ಲೂ ಹರಡಿಕೊಂಡಿದೆ.  ವಿಜ್ಞಾನ ವಿಷಯಗಳನ್ನು ಕುರಿತು ತಮಿಳಿನಲ್ಲಿ ಸಾಕಷ್ಟು ಬರೆದಿದ್ದಾರೆ.  ಶಿವಶರಣರ ಕೆಲವು ವಚನಗಳನ್ನು ತಮಿಳಿಗೆ ಅನುವಾದಿಸಿದ್ದಾರೆ.  ಪುರಂದರದಾಸರ ಕೆಲವು ಕೀರ್ತನೆಗಳನ್ನು ತಮಿಳಿಗೆ ಅನುವಾದಿಸಿದ್ದಾರೆ.  ಅಲ್ಲದೆ ಈ ಕೀರ್ತನೆಗಳನ್ನು ಪ್ರಸಿದ್ಧ ಸಂಗೀತ ವಿದ್ವಾಂಸರಾದ ಎಂ.ಡಿ. ರಾಮನಾಥನ್ ಅವರು ಹಲವಾರು ಕಚೇರಿಗಳಲ್ಲಿ ಹಾಡಿದ್ದಾರೆ.

ಕನ್ನಡದಲ್ಲಿ ಅವರ ಬರವಣಿಗೆ ‘ಅಮೆರಿಕದಲ್ಲಿ ನಾನು’ ಎಂಬ ಪ್ರವಾಸಕಥನ ಗ್ರಂಥದಿಂದ ಆರಂಭವಾಗುತ್ತದೆ.  ಹಡಗಿನಲ್ಲಿ ಅಮೆರಿಕಾಗೆ ಪ್ರಯಾಣ ಮಾಡಿದ ಸ್ವಾಮಿ, ಹಡಗಿನ ಯಾನದ ಸ್ವಾರಸ್ಯಕರ ಪ್ರಸಂಗಗಳನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ.  ಅಮೆರಿಕನ್ ಕುಟುಂಬಗಳ, ಉತ್ಸವಗಳ, ಮತಪ್ರಚಾರಕರ ಸಜೀವ ವರ್ಣನೆ ಮಾಡುತ್ತಾರೆ.  ಉಳಿದ ಪ್ರವಾಸಿಗರಂತೆ ಬರಿಯ ಬೆರಗಿನ ಕಣ್ಣಿನಲ್ಲಿ ನೋಡಿ ಅದ್ಭುತಗಳ ಪಟ್ಟಿ ಮಾಡುವ ತಂಟೆಗೆ ಹೋಗದೆ ಅಮೆರಿಕನ್ನರೂ ನಮ್ಮಂತೆ ಮನುಷ್ಯರು ಎಂಬುದನ್ನು ಹಲವಾರು ಆತ್ಮೀಯ ಪ್ರಸಂಗಗಳ ವಿವರಣೆಯಿಂದ ಸ್ಪಷ್ಟಪಡಿಸುತ್ತಾರೆ.

ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ ಸ್ವಾಮಿಯವರು ಆ ಕಾಲೇಜಿನ ಪ್ರಿನ್ಸಿಪಾಲರಾಗಿ, ಆನಂತರ ಆಡಳಿತಕ್ಕೆ ಶರಣುಹೊಡೆದು ಪ್ರಿನ್ಸಿಪಾಲ್ ಗಿರಿಯನ್ನು ತ್ಯಜಿಸಿ ಪ್ರಾಧ್ಯಾಪಕರಾಗಿ ಸಂಶೋಧನೆ ಮುಂದುವರೆಸಿದರು.  ನಿವೃತ್ತಿ ಹೊಂದಿದ ನಂತರ ಕೆಲವು ವರ್ಷ ಬೆಂಗಳೂರಿನಲ್ಲಿದ್ದು ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ನವೆಂಬರ್ 2, 1980ರಂದು ಹೃದಯಾಘಾತದಿಂದ ತೀರಿಕೊಂಡರು.

ಬಿ.ಜಿ. ಎಲ್ ಸ್ವಾಮಿಯವರ ಬರವಣಿಗೆ ಕನ್ನಡ, ಇಂಗ್ಲಿಷ್, ತಮಿಳು ಈ ಮೂರೂ ಭಾಷೆಗಳಲ್ಲೂ ಹರಡಿಕೊಂಡಿದೆ.  ವಿಜ್ಞಾನ ವಿಷಯಗಳನ್ನು ಕುರಿತು ತಮಿಳಿನಲ್ಲಿ ಸಾಕಷ್ಟು ಬರೆದಿದ್ದಾರೆ.  ಶಿವಶರಣರ ಕೆಲವು ವಚನಗಳನ್ನು ತಮಿಳಿಗೆ ಅನುವಾದಿಸಿದ್ದಾರೆ.  ಪುರಂದರದಾಸರ ಕೆಲವು ಕೀರ್ತನೆಗಳನ್ನು ತಮಿಳಿಗೆ ಅನುವಾದಿಸಿದ್ದಾರೆ.  ಅಲ್ಲದೆ ಈ ಕೀರ್ತನೆಗಳನ್ನು ಪ್ರಸಿದ್ಧ ಸಂಗೀತ ವಿದ್ವಾಂಸರಾದ ಎಂ.ಡಿ. ರಾಮನಾಥನ್ ಅವರು ಹಲವಾರು ಕಚೇರಿಗಳಲ್ಲಿ ಹಾಡಿದ್ದಾರೆ.

ಕನ್ನಡದಲ್ಲಿ ಅವರ ಬರವಣಿಗೆ ‘ಅಮೆರಿಕದಲ್ಲಿ ನಾನು’ ಎಂಬ ಪ್ರವಾಸಕಥನ ಗ್ರಂಥದಿಂದ ಆರಂಭವಾಗುತ್ತದೆ.  ಹಡಗಿನಲ್ಲಿ ಅಮೆರಿಕಾಗೆ ಪ್ರಯಾಣ ಮಾಡಿದ ಸ್ವಾಮಿ, ಹಡಗಿನ ಯಾನದ ಸ್ವಾರಸ್ಯಕರ ಪ್ರಸಂಗಗಳನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ.  ಅಮೆರಿಕನ್ ಕುಟುಂಬಗಳ, ಉತ್ಸವಗಳ, ಮತಪ್ರಚಾರಕರ ಸಜೀವ ವರ್ಣನೆ ಮಾಡುತ್ತಾರೆ.  ಉಳಿದ ಪ್ರವಾಸಿಗರಂತೆ ಬರಿಯ ಬೆರಗಿನ ಕಣ್ಣಿನಲ್ಲಿ ನೋಡಿ ಅದ್ಭುತಗಳ ಪಟ್ಟಿ ಮಾಡುವ ತಂಟೆಗೆ ಹೋಗದೆ ಅಮೆರಿಕನ್ನರೂ ನಮ್ಮಂತೆ ಮನುಷ್ಯರು ಎಂಬುದನ್ನು ಹಲವಾರು ಆತ್ಮೀಯ ಪ್ರಸಂಗಗಳ ವಿವರಣೆಯಿಂದ ಸ್ಪಷ್ಟಪಡಿಸುತ್ತಾರೆ.

ಸ್ವಾಮಿಯವರ ಪಂಚಕಳಶಗೋಪುರ ಸೆಂಟ್ರಲ್ ಕಾಲೇಜಿನ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪ, ಟಿ. ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್. ಕೃ ಹಾಗೂ ವಿ.ಸೀ ಅವರ ಪರಿಚಯ ಮಾಡಿಕೂಡುತ್ತದೆ.  ಈ ಮಹನೀಯರ ಸಾಹಿತ್ಯಸಾಧನೆ, ಜೀವನಸಾಧನೆಗಳ ವಿವರಗಳನ್ನು ಕೈಬಿಟ್ಟು ಅವರ ಸಾಮಾನ್ಯ ಬದುಕಿನ ಕೆಲವು ವಿಶಿಷ್ಟ ಅಂಶಗಳನ್ನು ಪ್ರಸ್ತಾಪಿಸುವುದು ಸ್ವಾಮಿಯವರ ಸ್ವಭಾವ.  ತಮ್ಮ ಲೇಖನವನ್ನು ತಮ್ಮದೇ ಆದ ರೇಖಾಚಿತ್ರದಿಂದ ಅಲಂಕರಿಸಿ ಶೋಭೆ ತಂದಿದ್ದಾರೆ.  ಟಿ.ಎಸ್. ವೆಂಕಣ್ಣಯ್ಯನವರ ರೇಖಾಚಿತ್ರ ಹಾಗೂ ಅದರ ವಿವರವನ್ನು ಅವರ ಬಾಯಿಯಿಂದಲೇ ಕೇಳಬೇಕು.  ಬಿ. ವೆಂಕೋಬರಾಯರ ಮನೆಯಲ್ಲಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಹಾಡುಗಾರಿಕೆಯ ಸಂದರ್ಭದ ವರ್ಣನೆ ಇದು.  “ಎಲ್ಲರೂ ದಿವ್ಯಸುಧೆಯನ್ನು ಈಂಟಿದರು.  ಕೆಲವರು ನಡುನಡುವೆಯೇ ‘ಭಲೆ’, ಭೇಷ್’ ಎಂದು ರಸಾಭಾಸಕ್ಕೆಡೆಗೊಟ್ಟು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುತ್ತಿದ್ದರು.  ವೆಂಕಣ್ಣಯ್ಯನವರು ಅನುಭವಿಸಿದ ಮಾದರಿಯೇ ಬೇರೆ.  ಪದ್ಮಾಸನ, ಮುಚ್ಚಿದ ಕಣ್ಣುಗಳು; ಎದುರಿನಲ್ಲಿ ಕೈಗೆಟುಕುವಂತೆ ನಶ್ಯದ ಡಬ್ಬಿ, ಕರವಸ್ತ್ರ; ಬಲಗೈ ಹಸ್ತದಲ್ಲಿ ಯೋಗಮುದ್ರೆ, ಚಿಟಿಕೆಯಲ್ಲಿ ಜ್ಞಾನ ಚೂರ್ಣ; ಎಡಗೈ ಬೆರಳುಗಳಿಂದ ಆಗಾಗ ಅಪರೂಪವಾಗಿ ಕೃತಿ ಲಯ ವಿನ್ಯಾಸದ ಅನುಕರಣ, ತುಟಿಯ ಮೇಲೆ ಆತ್ಮೀಯವಾದ, ರಸಭಾವ ಆನಂದಗರ್ಭಿತವಾದ ಸುಳಿನಗು,  ಬಾಯಿಂದ ಒಂದು ಮಾತಿಲ್ಲ.  ಶ್ರೋತೃಗಳಿಗೆ ಸಂಗೀತಸುಧೆಯ ಆನಂದ ಒಂದು ಕಡೆ.  ಸಂಗೀತ ಸುಧೆಯನ್ನು ರಸಿಕತೆಯಿಂದ ಅನುಭವಿಸುತ್ತಿರುವವರನ್ನು ಕಾಣುವ ಆನಂದ ಒಂದು ಕಡೆ, ಹೀಗಿದ್ದಿತು.”

ಬಿ.ಜಿ.ಎಲ್. ಸ್ವಾಮಿಯವರ ‘ಫಲಶ್ರುತಿ’, ‘ಶಾಸನಗಳಲ್ಲಿ ಗಿಡಮರಗಳು’ , ‘ಹಸಿರು ಹೊನ್ನು’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ಮೊದಲಾದ ಗ್ರಂಥಗಳಲ್ಲಿ ಶಬ್ದದ ಬೆನ್ನು ಹಿಡಿದ ವಿಚಾರದ ಸಂಚಾರವಿದೆ.  ಸಂಶೋಧನೆ, ಶಬ್ಧಜಿಜ್ಞಾಸೆ, ಇತಿಹಾಸ, ಭೂಗೋಳಗಳನ್ನೆಲ್ಲಾ ಬೆರೆಸಿದ ಸಮೃದ್ಧ ಸಾಮಗ್ರಿಯಿದೆ.  ನೆಲೆಗಡಲೆ, ಈರುಳ್ಳಿಗಳಂಥ ಹಲವಾರು ವಸ್ತುಗಳು ನಮ್ಮ ದೇಶದ್ದಲ್ಲ, ಜನ ಆರಾಧಿಸುವ ತುಳಸಿಯೂ ಮೂಲತಃ ನಮ್ಮದಲ್ಲ ಎಂಬ ವಿಸ್ಮಯಕಾರೀ ಅಂಶಗಳನ್ನು ಪ್ರಸ್ತಾಪಿಸುವ ಸ್ವಾಮಿ ಆ ಶಬ್ದಗಳ ಮೂಲ, ಭೌಗೋಳಿಕ ಸ್ಥಾನವನ್ನೂ, ಅವು ನಮಗೆ ಬಂದ ಐತಿಹಾಸಿಕ ರಾಜಕೀಯ ಸಂದರ್ಭಗಳನ್ನೂ ಕೂಲಂಕಷವಾಗಿ ಚರ್ಚಿಸುತ್ತಾರೆ.  ಗಿಡ, ಹಣ್ಣು, ತರಕಾರಿ, ಧಾನ್ಯ, ತಂಬಾಕು ಮೊದಲಾದ ಯಾವುದೇ ವಸ್ತುವೇ ಆಗಲಿ ಅವುಗಳ ಮೂಲ ಹೆಸರು, ಲ್ಯಾಟಿನ್ ಹೆಸರು, ಭಾರತೀಯ ಭಾಷೆಗಳಲ್ಲಿ ಆ ಹೆಸರುಗಳ ಪ್ರಭೇದಗಳು ಇವುಗಳನ್ನೆಲ್ಲ ಚರ್ಚಿಸುತ್ತಾರೆ.  ಈ ಕಾರಣಗಳಿಂದ ಅವರ ಬರಹಗಳಲ್ಲಿ ವಸ್ತುವಿಜ್ಞಾನ, ಭಾಷಾವಿಜ್ಞಾನ, ಐತಿಹಾಸಿಕ ಹಿನ್ನೆಲೆ, ರಾಜಕೀಯ ಸಂದರ್ಭಗಳು ಇವೆಲ್ಲ ಬೆರೆತುಕೊಂಡಿರುತ್ತವೆ.  ತೆಂಗು, ಅಂಜೂರ, ಚಕ್ಕೋತ, ಲಾಂಟಾನಾ ಮೊದಲಾದುವುಗಳ ಬಗೆಗೆ ಅವರು ಕೊಡುವ ವಿವರಣೆಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ತಮಿಳು ತಲೆಗಳ ನಡುವೆ, ಕಾಲೇಜುರಂಗ, ಪ್ರಾಧ್ಯಾಪಕನ ಪೀಠದಲ್ಲಿ ಮೊದಲಾದ ಗ್ರಂಥಗಳು ಅಪ್ಪಟ ವ್ಯಂಗ್ಯ ಸಾಹಿತ್ಯಕ್ಕೆ ಸ್ವಾಮಿಯವರ ಉದಾರ ಕೊಡುಗೆ ಎಂದು ಹೇಳಬಹುದು.  ಇವುಗಳಲ್ಲಿ (ಮತ್ತು ‘ಹಸಿರು ಹೊನ್ನು’ ಗ್ರಂಥದಲ್ಲಿ ಸ್ವಲ್ಪಮಟ್ಟಿಗೆ) ಸ್ವಾಮಿಯವರು ನೇರವಾಗಿ ಮತ್ತು ಪ್ರಾಸಂಗಿಕವಾಗಿ ಇಂದಿನ ಶಿಕ್ಷಣಕ್ಷೆತ್ರದಲ್ಲಾಗಿರುವ ಮೌಲ್ಯಚ್ಛೇದಗಳ ವ್ಯಂಗ್ಯ ವಿವರಣೆ ನೀಡಿದ್ದಾರೆ.  ಶಿಕ್ಷಣಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳದ ಅಧ್ಯಾಪಕ ವರ್ಗ, ಮೌಲ್ಯಮಾಪನ ಕಾರ್ಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಶಿಕ್ಷಕ ವರ್ಗ, ‘ಸಂಶೋಧನೆ’ಗಳನ್ನು ಮಾಡಿ ಇತಿಮಿತಿಯಿಲ್ಲದಂತೆ ಪುಸ್ತಕಗಳನ್ನು ಪ್ರಕಟಿಸುವ ಸಂಶೋಧಕ ವರ್ಗ, ರಾಜಕಾರಣಿಗಳ ಪ್ರಭಾವದಿಂದ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವ ಯಾಚಕ ಶಿಕ್ಷಕ ವರ್ಗ, ವಿದೇಶಯಾತ್ರೆಯೊಂದೇ ತಮ್ಮ ಏಕೈಕ ಜೀವಿತೋದ್ದೇಶವೆಂದು ಭಾವಿಸುವ ಪ್ರಭಾವೀ ಪ್ರಾಧ್ಯಾಪಕ ವರ್ಗ, ಪ್ರಾಮಾಣಿಕರಾದ ಕೆಲವರು ಶಿಕ್ಷಕರು ಸಾಧಿಸುವ ಪ್ರಗತಿಯನ್ನು ತುಂಬಾ ಅಸೂಯೆಯಿಂದ ಕಂಡು ಅಪಪ್ರಚಾರದಲ್ಲಿ ತೊಡಗುವ ಮತ್ಸರಗ್ರಸ್ತ ಬೋಧಕ ವರ್ಗ, ಹೃದಯ ಹೀನ ನಡವಳಿಕೆಯ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ ಇವರೆಲ್ಲ ಸೇರಿ ಇಂದಿನ ಶಿಕ್ಷಣ ಭವನದ ಅಡಿಗಲ್ಲನ್ನೆ ಜಗ್ಗುವುದರಲ್ಲಿ ತೊಡಗಿರುವುದನ್ನು ಸ್ವಾಮಿಯವರು ವಿಪುಲ ಪ್ರಸಂಗೋದ್ಧರಣಗಳಿಂದ ಸ್ಪಷ್ಟಪಡಿಸುತ್ತ ಹೋಗುತ್ತಾರೆ.  ನುರಿತ ಶಿಕ್ಷಕರ ಪ್ರಾಮಾಣಿಕವಾದ ವರದಿಗಳಿಗೆ ಬೆಲೆಕೊಡದ ಅಧಿಕಾರಶಾಹಿಯ ದುರ್ವರ್ತನೆಗಳನ್ನು ಉಗ್ರ ವ್ಯಂಗ್ಯಶೈಲಿಯಲ್ಲಿ ನಿರೂಪಿಸಿದ್ದಾರೆ.  ಪೂರ್ವ ಸಿದ್ಧತೆಗಳಿಲ್ಲದೆ ಕಾಲೆಜುಗಳನ್ನು ತೆರೆಯುವ ಆಡಳಿತ ಮಂಡಲಿಗಳು ಎಷ್ಟೆಲ್ಲ ದೊಂಬರಾಟಗಳನ್ನಾಡುತ್ತವೆಂಬುದನ್ನು ಪ್ರತ್ಯಕ್ಷವಾಗಿ ಕಂಡು ವೀಕ್ಷಕ ವಿವರಣೆ ನೀಡಿದ್ದಾರೆ.  ಇಂಥ ಭ್ರಷ್ಟ ಆಡಳಿತ ಮಂಡಲಿ, ಶಿಕ್ಷಕ ವರ್ಗ, ಅಧಿಕಾರ ವರ್ಗಗಳ ಕ್ರೂರ ದವಡೆಗೆ ಸಿಕ್ಕಿ ನರಳುತ್ತಿರುವ ವಿದ್ಯಾರ್ಥಿ ವೃಂದದ ಬಗೆಗೆ ಸ್ವಾಮಿಯವರು ತೋರುವ ಕನಿಕರವೂ ಅರ್ಥಪೂರ್ಣವಾಗಿದೆ.  ವಿದ್ಯಾರ್ಥಿ – ವಿದ್ಯಾರ್ಥಿನಿಯರ ದೌರ್ಬಲ್ಯದ ಬಗೆಗೆ ಸ್ವಾಮಿಯವರು ಗಮನ ಹರಿಸಿಲ್ಲವೆಂದಲ್ಲ.  ಆದರೆ ಶಿಕ್ಷಕರ ಪ್ರಾಮಾಣಿಕ ಪ್ರಯತ್ನಗಳಿಗೆ ವಿದ್ಯಾರ್ಥಿವೃಂದ ಹೇಗೆ ಸೃಜನಶೀಲವಾಗಿ ಸ್ಪಂದಿಸಬಲ್ಲುದೆಂಬುದನ್ನೂ ಅವರ ಪ್ರವಾಸ, ಪ್ರದರ್ಶನ, ವಿಚಾರಕೂಟಗಳ ಉದಾಹರಣೆಗಳಿಂದ ಸ್ಪಷ್ಟಪಡಿಸಿದ್ದಾರೆ.  ಶಿಕ್ಷಣ ಜಗತ್ತನ್ನೇ ಅಖಂಡವಾಗಿ ಚರ್ಚೆಗೆ ಒಳಪಡಿಸಿದ್ದಾರೆ.  ಮೇಲುನೋಟಕ್ಕೆ ಕಹಿಯೆಂದೋ, ಸಿನಿಕನೊಬ್ಬನ ಅಪಸ್ವರವೆಂದೋ ಕಾಣಬಹುದಾದ ಉದ್ಗಾರಗಳ ಹಿಂದೆ ಈ ಶಿಕ್ಷಣ ಪರಿಸರದ ಮಾಲಿನ್ಯವನ್ನು ತಡೆಗಟ್ಟಬೇಕೆಂಬ ಕಳಕಳಿ ಧ್ವನಿತವಾಗುತ್ತದೆ.  ಈ ಚಿಕಿತ್ಸಕ ದೃಷ್ಟಿಯೇ ಸ್ವಾಮಿಯವರ ಬರವಣಿಗೆಗಳ ಮೂಲ ಆಶಯವಾಗಿದೆ.  ಅಲ್ಲದೆ ಈ ಬರವಣಿಗೆಯ ಹಾಸ್ಯಮುಖದ ಹಿಂದೆ ಅಪಾರ ನೋವಿರುವುದನ್ನು ನಾವು ಕಂಡುಕೊಳ್ಳಬೇಕು.  ಸ್ವಾಮಿಯವರಂಥ ಶಿಕ್ಷಣತಜ್ಞನಿಗೆ ಶಿಕ್ಷಣ ಲೋಕವೇ ಎಂಥ ಯಮಯಾತನೆಯದಾಗಿತ್ತೆಂಬುದನ್ನೂ ನಾವು ಊಹಿಸಿಕೊಳ್ಳಬೇಕು.  ಹಾಸ್ಯೋಕ್ತಿಗಳ ಮುಖವಾಡದ ಹಿಂದೆ ನಿರಂತರ ತುಳಿತಗಳಿಗೆ ಒಳಗಾಗಿ ಕುದಿಯುವ ಜೀವವೊಂದನ್ನೂ ನಾವು ಗುರುತಿಸಿಕೊಳ್ಳಬೇಕು.

ಸ್ವಾಮಿಯವರ ಬಹುತೇಕ ಬರಹಗಳ ಭಾಷೆ ವ್ಯಂಗ್ಯದ ನೆಲಗಟ್ಟಿನಿಂದ ಕೂಡಿದೆ.  ಹಾಸ್ಯಗಾರನಿಗೆ ಸಹಜವಾದ ವ್ಯಂಗ್ಯ ಧೋರಣೆಯಿಂದಲೇ ಅವರು ವಿಷಯಗಳ ಸುತ್ತ ಗಸ್ತು ತಿರುಗುತ್ತಾರೆ.  ಅಧುನಿಕ ಕರಟಕ ದಮನಕರನ್ನು ಇವರು ಸೃಷ್ಟಿಸಿಕೊಂಡದ್ದೂ ಈ ಹಾಸ್ಯಪ್ರಜ್ಞೆಯಿಂದಾಗಿಯೇ.  ಒಂದು ಪ್ರಸಂಗವನ್ನು ಗಮನಿಸಬಹುದು.  ಹಿಂದಿ ಭಾಷೆಯ ವಿರುದ್ಧ ತಮಿಳುನಾಡಿನಲ್ಲಿ ನಡೆದ ವ್ಯಾಪಕ ಘರ್ಷಣೆಯ ಬಿಸಿ ಸ್ವಾಮಿಯವರಿದ್ದ ಪ್ರೆಸಿಡೆನ್ಸಿ ಕಾಲೇಜಿಗೂ ತಟ್ಟಿತು. ಹುಡುಗರು ಮುಷ್ಕರ ಹೂಡಿದ್ದ ಸಂದರ್ಭದಲ್ಲಿ ಹುಡುಗರ ಕಾಟದಿಂದ ಸಿಟ್ಟಿಗೆದ್ದ ಒಬ್ಬ ತಮಿಳು ಪ್ರಾಧ್ಯಾಪಕ ಅವರನ್ನು ‘ಕೊಳೆತ ತಲೆಯ ಕತ್ತೆಗಳ’ ಎಂದು ಬೈದದ್ದು ವಿಪರೀತಕ್ಕಿಟ್ಟುಕೊಂಡಿತು.  ಹುಡುಗರು ಅಟ್ಟಿಸಿಕೊಂಡು ಬಂದಾಗ ಆ ಪ್ರಾಧ್ಯಾಪಕನನ್ನು ಸ್ವಾಮಿಯವರು ತಮ್ಮ ಡಿಪಾರ್ಟ್ ಮೆಂಟಿನ ಒಂದು ದೂಡ್ಡ ಬೀರುವಿನಲ್ಲಿ ಬಚ್ಚಿಟ್ಟರಂತೆ.  ಆ ನಿಮಿಷಕ್ಕೆ ಪ್ರಾಧ್ಯಾಪಕನು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೂ ಆನಂತರ ಸ್ವಾಮಿಯವರ ವಿರುದ್ಧ ಪ್ರಿನ್ಸಿಪಾಲರಿಗೆ ದೂರು ಕೊಡಬೇಕೆ!   “ಸ್ವಾಮಿಯವರು ಗುಂಪಿನ ಪುಂಡುಗಾರಿಕೆಯಿಂದ ನನ್ನನ್ನೇನೋ ಕಾಪಾಡಿದರು.  ಆದರೆ ನನ್ನನ್ನು ಮರದ ಬೀರುವಿನಲ್ಲಿ ಬಚ್ಚಿಟ್ಟಿದ್ದರಿಂದ ನನ್ನ ಸ್ಥಾನಮಾನದ ಪ್ರತಿಷ್ಠೆಗೆ ಧಕ್ಕೆ ತಗಲಿದೆ” ಇದು ಅವನ ದೂರಿನ ಒಕ್ಕಣೆ.  ಇದರ ಬಗೆಗೆ ಪ್ರಿನ್ಸಿಪಾಲರಿಂದ ಸಮಜಾಯಿಷಿ ನೀಡುವಂತೆ ಸ್ವಾಮಿಯವರಿಗೆ ಮೆಮೋ.  ರೇಗಿದ ಸ್ವಾಮಿ ಪ್ರಿನ್ಸಿಪಾಲರಿಗೆ ಬರೆದ ವಿವರಣೆ ಹೀಗಿದೆ:

“ಆಗ ಇದ್ದ ತುರ್ತುಪರಿಸ್ಥಿತಿಯಲ್ಲಿ ಇನ್ನೇನನ್ನೂ ಮಾಡುವ ಹಾಗಿರಲಿಲ್ಲ.  ಕಬ್ಬಿಣದ ಬೀರುಗಳೇನೋ ಇವೆ.  ಆದರೆ ಅವೊಂದೂ ಖಾಲಿಯಿಲ್ಲ.  ಒಂದು ವೇಳೆ ಖಾಲಿ ಮಾಡಿ ಅದರಲ್ಲಿಟ್ಟಿದ್ದರೆ ಪ್ರಾಧ್ಯಾಪಕರಿಗೆ ಉಸಿರು ಕಟ್ಟುವ ಸಂದರ್ಭ ಒದಗುತ್ತಿತ್ತು.  ಮುಂದೆ ಇಂಥ ಸ್ಥಿತಿ ಏರ್ಪಡುವುದು ಬೇಡ ಎಂದೇ ನನ್ನ ಹಾರೈಕೆ.  ಆದರೆ ಇಂಥ ಸಂದರ್ಭ ಒದಗಿದಾಗ ತಮಿಳು ಪ್ರಾಧ್ಯಾಪಕರನ್ನು ಸಂರಕ್ಷಿಸುವುದಕ್ಕಾಗಿ ವಜ್ರ ವೈಢೂರ್ಯ ಖಚಿತವಾದ ಚಿನ್ನದ ಬೀರುವೊಂದನ್ನು ನನ್ನ ಡಿಪಾರ್ಟ್ಮೆಂಟಿಗೆ ಸರಬರಾಜು ಮಾಡಬೇಕೆಂದು ಕೋರುತ್ತೇನೆ.  ಇಂಥ ಪ್ರಾಧ್ಯಾಪಕ ರತ್ನವನ್ನು ಅದರಲ್ಲಿಟ್ಟರೆ ಬೀರುವಿನ ಸ್ಥಾನಮಾನ, ಗೌರವ ಪ್ರತಿಷ್ಟೆಗಳು ಮತ್ತೂ ಹೆಚ್ಚುತ್ತವೆ.”

ಸ್ವತಃ ರೇಖಾಚಿತ್ರಕಾರರೂ ವ್ಯಂಗ್ಯ ಚಿತ್ರಕಾರರೂ ಆದ ಸ್ವಾಮಿ ವಕ್ರರೇಖೆಗಳಲ್ಲೇ ಭಾಷೆಯನ್ನೂ ನಡೆಸಿಕೊಂಡು ಹೋಗುತ್ತಾರೆ.  ಆಕಸ್ಮಿಕವಾಗಿ ತಾವು ಎಂ.ಜಿ. ರಾಮಚಂದ್ರನ್ ಅವರಿಗೆ ಕೈಕುಲುಕಿದ ಸಂದರ್ಭದ ಹಗರಣವನ್ನಾಗಲಿ, ಕಾಮ್ರಾಜರ ಭಾವಚಿತ್ರವನ್ನು ಕಂಡ ಕೂಡಲೇ ಎಗರಿ ಅದನ್ನು ಹರಿಯಲು ಧಾವಿಸುತ್ತಿದ್ದ ತಮ್ಮ ನಾಯಿಯಿಂದಾಗಿ ಎದ್ದ ಹಗರಣವನ್ನಾಗಲಿ, ಬೆಳ್ಳಾವೆ ವೆಂಕಟನಾರಣಪ್ಪನವರ ಸೀಮೆ ವೈದ್ಯರ ಸಲಹೆಯಂತೆ ಧೂಮಪಾನದ ಯೋಗದಲ್ಲಿದ್ದ ತಮ್ಮ ತಾತನವರ ಕಫದ ಪ್ರಕರಣವನ್ನಾಗಲಿ ಸ್ವಾಮಿಯವರು ತಮಗೆ ವಿಶಿಷ್ಟವಾದ ವ್ಯಂಗ್ಯ ಶಬ್ದರೇಖೆಗಳಿಂದ ನಡೆಸಿರುವುದನ್ನು ನೋಡಬಹುದು.

ವಿ.ಸೀ ಅವರ ಕಾವ್ಯವಾಚನ ವ್ಯಾಖ್ಯಾನಗಳ ಲಯ ಲಾಸ್ಯಗಳನ್ನು ಕೊಂಡಾಡುವ ಸ್ವಾಮಿ “ಪದ್ಯಕ್ಕೂ ನನಗೂ ಸಹೃದಯತೆಯ ನಂಟು ಅಷ್ಟಾಗಿ ಬೆಳೆದು ಬಂದಿಲ್ಲ.  ಮೊದಮೊದಲಂತೂ ಪದ್ಯ ವಧ್ಯವಾಗಿಯೇ ಇತ್ತು.  ನನ್ನ ಈ ‘ಅಸಂಸ್ಕೃತ’ ಅಭಿಪ್ರಾಯವನ್ನು ಕೆಲವು ಕಡೆ ಬಾಯಿ ಬಿಟ್ಟು ಹೇಳಿ ಕವಿಗಳ ಕೈಲಿ ಛೀಮಾರಿ ಹಾಕಿಸಿ ಕೊಂಡಿದ್ದೇನೆ” ಎಂದು ತಮ್ಮ ಒಲವು ಎತ್ತ ಕಡೆಗೆಂಬುದನ್ನು ಹೇಳಿಬಿಡುತ್ತಾರೆ.  ವಿ.ಸೀ ಅವರ ಶಿಸ್ತಿನ ಟೀ ಕುಡಿಯುವ ವಿಧಾನಕ್ಕೆ ತಮ್ಮನ್ನು ಹೋಲಿಸಿಕೊಂಡು ಹೇಳುವ ಮಾತು ಹೀಗಿದೆ.  “ ವಿ.ಸೀ ಅವರ ಟೀ ಸೇವನೆಯಲ್ಲಿ ಅದಾವುದೋ ಒಂದು ಬಗೆಯ ಅಪರಿಚಿತವಾದ, ಪ್ರತ್ಯೇಕವಾದ, ಅವರ್ಣನೀಯ ಅಂಶವೊಂದು ಮಿಶ್ರಿತವಾಗಿರುತ್ತಿತ್ತು.  ನನ್ನದು ಒರಟು ದೇಹ, ಅದಕ್ಕಿಂತಲೂ ಒರಟು ರುಚಿ. ತಿಳಿಯಾದ ನವುರಾದ ಮೃದುವಾದ ಸೂಕ್ಷ್ಮವಾದ ಹಗುರವಾದ ರುಚಿಗಳಿಗೆ ನನ್ನ ದೇಹ ಮನಸ್ಸುಗಳು ಒಗ್ಗವು – ಚೆನ್ನಾಗಿ ಉರಿದ ಕಪ್ಪುಬಣ್ಣದ ಕಷಾಯ ಒಂದು ಬಟ್ಟಲು, ಮೂರು ನಾಲ್ಕು ಚಮಚ ಸಕ್ಕರೆ, ಹಾಲು ಬೆರೆಸಿದ ಟೀಯನ್ನು ಸಲಕ್ಕೆ ಆರು ಬಟ್ಟಲು ಗಟಗಟನೆ ಕುಡಿದು ಕುಡಿದು ಜಡ್ಡು ಬಿದ್ದಿರುವ ನನಗೆ ವಿ.ಸೀ ಯವರ ತಿಳಿ ಟೀ ಹೇಗೆ ತಾನೇ ಒಗ್ಗೀತು!   ಆದರೂ ವಿ.ಸೀ ಅವರು ಟೀ ಬೆರೆಸಿಕೊಳ್ಳುತ್ತಿದ್ದ ವಿಧಾನ, ಕುಡಿಯುತ್ತಿದ್ದ ವಿಧಾನ, ಕುಡಿಯುತ್ತಿದ್ದ ಸಾವಧಾನ, ಪಡೆಯುತ್ತಿದ್ದ ಸಮಾಧಾನ, ಇವುಗಳನ್ನು ಕಂಡ ನನಗೆ ‘ಅಯ್ಯೋ ದೇವರೇ! ಮೃದು ರುಚಿಗಳನ್ನು ಅನುಭವಿಸಿ ಸವಿಯುವಂಥ ಯೋಗವನ್ನು ನನಗೇಕೆ ಕೊಟ್ಟಿಲ್ಲ’ ಏನು ಪಕ್ಷಪಾತ” ಎಂದು ಮೊರೆಯಿಡೋಣ ಎನ್ನಿಸುತ್ತದೆ”.

ಈ ಲೇಖನ ಕನ್ನಡ ಸಾಹಿತ್ಯ ಪರಿಷತ್‌ ಜಾಲತಾಣದಲ್ಲಿ ಮೊದಲು ಪ್ರಕಟಗೊಂಡಿತ್ತು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.