ನಾಸಾ ಕಾರ್ಯಕಾರಿ ಮುಖ್ಯಸ್ಥರಾಗಿ ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ನೇಮಕ

ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹಂಗಾಮಿ ಕಾರ್ಯಕಾರಿ ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ

Photo Credit: (NASA/Bill Ingalls)

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಿರ್ವಹಿಸಿರುವ ‘ಏಜೆನ್ಸಿ ರಿವ್ಯೂ ಟೀಮ್‌ನಲ್ಲಿ’ ಸದಸ್ಯರಾಗಿ ಕಾರ್ಯನಿರ್ವಹಿಸಿದ ಭವ್ಯಾ ಲಾಲ್‌ ಅವರಿಗೆ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಲ್ಲಿ ಪ್ರಮುಖ ಹುದ್ದೆ ನೀಡಲಾಗಿದೆ.

ವಿಜ್ಞಾನಕ್ಕೆ ಒತ್ತು ನೀಡುವ ಭರವಸೆಯೊಂದಿಗೆ ಅಧಿಕಾರ ಸ್ವೀಕರಿಸಿದ ಬೈಡನ್‌, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಮಹತ್ವದ ಬದಲಾವಣೆ ಹಾಗೂಪ್ರೋತ್ಸಾಹಕರ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ್ದಾರೆ.’

‘ಇನ್‌ಸ್ಟಿಟ್ಯೂಟ್‌ ಫಾರ್‌ ಡಿಫೆನ್ಸ್‌ ಅನಾಲಿಸಿಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ (ಎಸ್‌ಟಿಪಿಐ) ಸಂಶೋಧನಾ ಸಿಬ್ಬಂದಿ ಸದಸ್ಯೆಯಾಗಿ 2005ರಿಂದ 2020ರ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಎಂಜೆನಿಯರಿಂಗ್‌ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಅವರು ಅನುಭವ ಪಡೆದಿದ್ದಾರೆ’ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

Photo credit: Nasa

ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಯೋಜನಾ ನೀತಿಯ ವಿಶ್ಲೇಷಣೆ ಕಾರ್ಯಗಳನ್ನು ಮುನ್ನಡೆಸಿದ್ದರು. ನಾಸಾ, ರಕ್ಷಣಾ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಭವ್ಯಾ ಅನುಭವ ಹೊಂದಿದ್ದಾರೆ.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಮಿತಿಗಳಲ್ಲಿ ಉನ್ನತ ಸ್ಥಾನಗಳನ್ನು ನಿರ್ವಹಿಸಿದ ಅನುಭವ ಭವ್ಯ ಅವರಿಗಿದೆ. ಸುಮಾರು ಹದಿನೈದು ವರ್ಷಗಳ ಕಾಲ ರಕ್ಷಣಾ ವಿಶ್ಲೇಷಣಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಭವ್ಯ ಲಾಲ್‌ ಅವರು ನ್ಯೂಕ್ಲಿಯರ್‌ ಎಂಜಿನಿಯರಿಂಗ್‌ ವಿಷಯದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಜಾರ್ಜ್‌ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ 50 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.