ಬಜಾಜ್‌ ಪಲ್ಸರ್ ಶ್ರೇಣಿಗೆ 125ಸಿಸಿ ಸೇರ್ಪಡೆ

ಇದುವರೆಗೆ 150ಸಿಸಿಯಿಂದ ಆರಂಭಗೊಂಡು 220 ಸಿಸಿಯ ವರೆಗೆ ಇದ್ದ ಬಜಾಜ್ ಪಲ್ಸರ್ ಕುಟುಂಬಕ್ಕೆ ಈಗ 125ಸಿಸಿಯ ಹೊಸ‌ ಬೈಕ್ ಸೇರ್ಪಡೆಗೊಂಡಿದೆ. ₹64,000ದ ಶೋರೂಮ್ ಬೆಲೆಯೊಂದಿಗೆ ಆರಂಭವಾಗುವ ಪಲ್ಸರ್ 125ನ ಡಿಸ್ಕ್ ಬ್ರೇಕ್‌ನ ಆವೃತ್ತಿಗೆ ₹66,700 ಬೆಲೆ ನಿಗದಿ ಮಾಡಲಾಗಿದೆ .

ವಿನ್ಯಾಸದಲ್ಲಿ ಎಲ್ಲಾ ರೀತಿಯಿಂದಲೂ 150ಯನ್ನು ಹೋಲುವ ಈ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮಾತ್ರ 11.5ಲೀಗೆ ಕುಗ್ಗಿಸಲಾಗಿದೆ. ಬೈಕಿನ ಒಟ್ಟು ತೂಕ ಕಡಿಮೆ ಮಾಡಿ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶ ಇದಾಗಿದೆ. ಆದರೂ 140 ಕೆಜಿಯ ಒಟ್ಟಾರೆ ತೂಕವಿರುವ ಅತಿ ಕಿರಿಯ ಪಲ್ಸರ್ 125 ಶ್ರೇಣಿಯ ಇತರೆ ಬೈಕ್‌ಗಳಿಂದ ಕನಿಷ್ಠ 15 ಕೆಜಿ ಹೆಚ್ಚಿನ ಭಾರ ಹೊಂದಿದೆ.

11.8 ಬಿಎಚ್‌ಪಿ ಹಾಗೂ 11 ನ್ಯೂಟನ್ ಮೀಟರ್ ಟಾರ್ಕ್‌ನ ಸಾಮರ್ಥ್ಯದ ಪಲ್ಸರ್ 125 ಪಟ್ಟಣದ ಸವಾರಿಗೆ ಸೂಕ್ತ. 100/90 ಆರ್17 ಗಾತ್ರದ ಹಿಂಬದಿ ಟೈರು 125 ಶ್ರೇಣಿಯ ಇತರೆಲ್ಲಾ ಬೈಕ್‌ಗಳಿಂದ ಅಗಲ.