ನೊಬೆಲ್‌ ಪ್ರಶಸ್ತಿಯ ಪಡೆದ ಪೆನ್ರೋಸ್ ಸಂಶೋಧನೆಗೆ ಈ ಕನ್ನಡದ ವಿಜ್ಞಾನಿಯ ಅಧ್ಯಯನವೇ ಆಧಾರ | ಭಾಗ 1

ಕಳೆದ ಕೆಲವು ವರ್ಷಗಳಿಂದ ಕಪ್ಪುಕುಳಿ ಅಧ್ಯಯನದಲ್ಲಿ ವಿಶೇಷ ಬೆಳವಣಿಗಳಾಗುತ್ತಿವೆ. ಈ ಬಾರಿ ಭೌತಶಾಸ್ತ್ರದ ವಿಭಾಗದ ನೊಬೆಲ್‌ ಪುರಸ್ಕಾರವೂ ಕಪ್ಪುಕುಳಿಯ ಅಧ್ಯಯನಕ್ಕೆ ಸಂದಿದೆ. ವಿಶೇಷವೆಂದರೆ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡಿನ ವಿಜ್ಞಾನಿ ರೋಜರ್‌ ಪೆನ್‌ರೋಸ್‌ ಅವರಿಗೂ ಕನ್ನಡದ ವಿಜ್ಞಾನಿ ಸಿ ವಿ ವಿಶ್ವೇಶ್ವರ ಅವರಿಗೂ ಒಂದು ರೀತಿಯ ನಂಟು. ಕಪ್ಪುಕುಳಿಯ ಅಧ್ಯಯನದಲ್ಲಿ ವಿಶ್ವೇಶ್ವರ ಅವರು ಕಂಡುಕೊಂಡ ಗಣಿತಶಾಸ್ತ್ರೀಯ ವಿಧಾನಗಳೇ ರೋಜರ್‌ ಅವರ ಸಂಶೋಧನೆಗೆ ತಳಹದಿ! ಅಂತಹ ಮಹತ್ವದ ವಿಜ್ಞಾನಿಯ ಸಾಧನೆಗಳನ್ನು ಈ ಹೊತ್ತಲ್ಲಿ ನೆನಯಲೇಬೇಕು

ಈಗ್ಗೆ ಸುಮಾರು ಐವತ್ತು ವರ್ಷಗಳ ಹಿಂದಿನ ವರ್ಷಗಳ ಹಿಂದಿನ ಮಾತು. ಭೌತವಿಜ್ಞಾನದ ವಿದ್ಯಾರ್ಥಿಗಳೆಲ್ಲರಿಗೆ ನ್ಯೂಕ್ಲಿಯರ್‌ ಫಿಸಿಕ್ಸ್‌ ಆಕರ್ಷಣೆಯಾಗಿತ್ತು. ಹೊಸ ಹೊಸ ಸಂಶೋಧನೆಗಳನ್ನು ಮುಖ್ಯವಾಗಿ ಪರಮಾಣು ಬಾಂಬ್‌ನಂತಹ ಆವಿಷ್ಕಾರಗಳ ಮೂಲ ತತ್ವಗಳ ಅಧ್ಯಯನ ಎಲ್ಲರಿಗೂ ಆಸಕ್ತಿ ಮೂಡಿಸಿತ್ತು. ಮೈಸೂರು ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಅಪವಾದವೇನಾಗಿರಲಿಲ್ಲ. ಅವರಲ್ಲೊಬ್ಬರು ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋದರು. ಉನ್ನತ ಅಧ್ಯಯನಕ್ಕಾಗಿ ಆಯ್ದುಕೊಂಡ ವಿಷಯ ನ್ಯೂಕ್ಲಿಯರ್‌ ಫಿಸಿಕ್ಸ್‌; ಅದರಲ್ಲಿ ಮಾಸ್ಟರ್ಸ್‌ ಪದವಿ ಪಡೆದರು. ಮೂಲಭೂತಕಣಗಳ (ಎಲಿಮೆಂಟರಿ ಪಾರ್ಟಿಕಲ್ಸ್‌) ಬಗ್ಗೆ ಸಂಶೋಧನೆ ಮಾಡುವ ಮನಸ್ಸಿತ್ತು. ಅವರಿಗೆ ಆಗ ಅಲ್ಲಿಯ ಪ್ರೊಫೆಸರ್‌ ರಾಬರ್ಟ್‌ ಪುಲ್ಲರ್‌ ಒಂದು ಸಲಹೆ ಕೊಟ್ಟರು-” ನೀನೇಕೆ ಸಾಪೇಕ್ಷ ಸಿದ್ಧಾಂತದ (ರಿಲೆಟಿವಿಟಿ) ಬಗ್ಗೆ ಸಂಶೋಧನೆ ಮಾಡಬಾರದು?’ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಜಾನ್‌ ವ್ಹೀಲರ್‌ ಅವರ ಪುಸ್ತಕವೊಂದನ್ನು ಓದಿದ್ದ ಈ ವಿದ್ಯಾರ್ಥಿಗೆ ಐನ್‌ಸ್ಟೈನರ ‘ಜನರಲ್‌ ರಿಲೆಟಿವಿಟಿ’ (ಸಾಮಾನ್ಯ ಸಾಪೇಕ್ಷತಾವಾದ) ಎಂಬುದೊಂದು ರಹಸ್ಯವಾಗಿತ್ತು. ಆದರೆ ಆ ವಿಷಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಮೇರಿಲ್ಯಾಂಡ್‌ ವಿಶ್ವವಿದ್ಯಾಲಯಕ್ಕೆ ಹೊರಟು ನಿಂತೇ ಬಿಟ್ಟರು. ಮುಂದೆ ಅವರನ್ನು ಆ ವಿಷಯದಲ್ಲೊಂದು ಆಧಾರ ಸ್ತಂಬವನ್ನಾಗಿ ಮಾಡಬಹುದೆಂಬ ಕಲ್ಪನೆಯೂ ಆಗ ಅವರಿಗೆ ಇರಲಿಲ್ಲ. ಈ ನಿರ್ಧಾರ ಅವರ ಜೀವನದ ಮುಖ್ಯ ತಿರುವು ಎನಿಸಿಕೊಂಡಿತು.

ಈ ವಿದ್ಯಾರ್ಥಿಯೇ ಸಿ.ವಿ. ವಿಶ್ವೇಶ್ವರ. ವಿಶ್ವೇಶ್ವರಪುರ ಬಡಾವಣೆಯಲ್ಲಿ ನೆಲೆಸಿದ್ದ ಸರಸ್ವತಿ ಕೃಪಾ ಪೋಷಿತ ಕುಟುಂಬಗಳು ಅನೇಕ. ಅವುಗಳಲ್ಲಿ ಶ್ರೀ ಸಿ ಕೆ ವೆಂಕಟರಾಮಯ್ಯನವರ ಕುಟುಂಬವೂ ಒಂದು. ಸಾಹಿತ್ಯಾರಾಧಕರಿಗೆ ಅವರ ಹೆಸರಿನ ಚಿರಪರಿಚಯ ಉಂಟು. ಕನ್ನಡ ಸಾಹಿತ್ಯ ಪರಿಷತ್‌ ಹುಟ್ಟಿಗೆ, ಅಭಿವೃದ್ಧಿಗೆ ಕಾರಣರಾದವರಲ್ಲೊಬ್ಬರು ಇವರು. ತಮ್ಮ ನಾಟಕಗಳಿಂದ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದವರು. ‘ನಚಿಕೇತ’, ‘ಮಂಡೋದರಿ’, ‘ಸುಂದರಿ’ ಇವು ವಿಭಿನ್ನ ದೃಷ್ಟಿಕೋನದ ನಾಟಕಗಳು, ಸಮಾಜದ ವಿರುದ್ಧ ವಿಧವೆಯ ಹೋರಾಟದಂತಹ ಕಥಾವಸ್ತು ‘ಸುಂದರಿ’ಯದು. ಇದಲ್ಲದೆ ಜೀವನಚರಿತ್ರೆ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿಯೂ ಅವರದು ನುರಿತ ಕೈ. ನಾಲ್ಮಡಿ ಕೃಷ್ಣರಾಜರನ್ನು ಕುರಿತ ‘ಆಳಿದ ಮಹಸ್ವಾಮಿಯವರು’ ಎಂಬ ಕೃತಿ ರಚನೆ ಮಾಡಿದರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯನ್ನು ಕರ್ನಾಟಕ ಸರ್ಕಾರ ಹೊರತಾಗಿ ಆರಂಭಿಸಿದಾಗ ಅದರ ಮೊದಲ ನಿರ್ದೇಶಕ ಸ್ಥಾನ ಇವರಿಗೆ. ‘ತೆನಾಲಿ ರಾಮಕೃಷ್ಣ’ ಎಂಬ ಇವರ ಕೃತಿ ತೆಲುಗು, ತಮಿಳು ಭಾಷೆಗಳಲ್ಲಿ ಚಲನಚಿತ್ರವಾಯಿತು. ರಾಷ್ಟ್ರಪತಿಗಳ ಪ್ರಶಸ್ತಿಯನ್ನೂ ಪಡೆಯಿತು.

ಇಂತಹ ಸರಸ್ವತೀ ಆರಾಧಕರ ಪರಿಸರದಲ್ಲಿ ಬೆಳೆದರು ವಿಶ್ವೇಶ್ವರ, ತಂದೆಯೊಡನೆ ಭೇಟಿಗೆಂದು ಬರುತ್ತಿದ್ದವರಲ್ಲಿ (ನಾಟಕದಲ್ಲಿ ನಚಿಕೇತನ ತಂದೆ ವಾಜಶ್ರವಸನ ಪಾತ್ರವಹಿಸುತ್ತಿದ್ದ) ದೇವುಡು ನರಸಿಂಹ ಶಾಸ್ತ್ರೀಗಳಂಥ ಘನ ವಿದ್ವಾಂಸರೂ ಇರುತ್ತಿದ್ದರು. ಅಣ್ಣ ಸಂಗೀತ ವಿದ್ವಾಂಸರು, ಮನೆಯ ಇತರ ಹಿರಿಯರು ಜ್ಞಾನ ಘನರೇ ಆಗಿದ್ದರು. ತಮ್ಮ ತಂದೆಯವರ ಜೀವನ ಚರಿತ್ರೆ ಅಲ್ಲದೆ ತಮ್ಮ ನೆನಪುಗಳನ್ನು ಸೇರಿಸಿ ವಿಶ್ವೇಶ್ವರ ಇತ್ತೀಚಿಗೆ ಒಂದು ಕಿರುಹೊತ್ತಿಗೆಯನ್ನು ಸ್ವಾರಸ್ಯವಾಗಿ ರಚಿಸಿದ್ದಾರೆ.
ಈ ಪರಿಸರದಲ್ಲಿ ಬೆಳೆದವರಿಗೆ ಜ್ಞಾನತೃಷೆ ಸಹಜವೇ, ಓದಿದ ಶಾಲೆ ಖ್ಯಾತಿವೆತ್ತ ನ್ಯಾಷನಲ್‌ ಹೈಸ್ಕೂಲ್‌, ಅಲ್ಲಿಯ ಉಪಾಧ್ಯಾಯರಾಗಿದ್ದ ಎಚ್ ರಾಮರಾವ್‌ ಅವರು ಕುಂಬಳೆ ನಂಜುಂಡಯ್ಯ ಇವರನ್ನು ಇಂದಿಗೂ ನೆನೆಸಿಕೊಳ್ಳುತ್ತಾರೆ. ಆಯಸ್ಕಾಂತಗಳ ಯಕ್ಷಿಣಿಯಂತಹ ಪ್ರಯೋಗಗಳು, ಬಣ್ಣಗಳ ಕುರಿತು ಪ್ರಯೋಗಗಳು ಯಾವಾಗಲೂ ಅವರಲ್ಲಿ ಆಸಕ್ತಿ ಹೆಚ್ಚಿಸುತ್ತಿದ್ದವು. ಗಣಿತವೆಂದರೆ ಇವರಿಗೆ ಹೆಚ್ಚಿನ ಒಲವು. ಅದರಲ್ಲೂ ರೇಖಾಗಣಿತ. ಇದಕ್ಕೆ ಕಾರಣ ಗುರು ಎಚ್‌ ಶ್ರೀನಿವಾಸಮೂರ್ತಿ.

ನ್ಯಾಷನಲ್‌ ಕಾಲೇಜಿನಲ್ಲೂ ಒಳ್ಳೆಯ ಉಪಾಧ್ಯಾಯರು ಸಿಕ್ಕಿದ್ದು, ಇವರಿಗೊಂದು ಅದೃಷ್ಟವಾಯಿತು. ಎಚ್‌ ನರಸಿಂಹಯ್ಯ ಇವರಲ್ಲೊಬ್ಬರು. ಶ್ರೀಯುತ ಕೆ ಸಂಪದ್ಗಿರಿರಾಯರು ಇನ್ನೊಬ್ಬ ಆದರ್ಶ ಶಿಕ್ಷಕರು. ಅಲ್ಲದೆ ರೇಖಾಗಣಿತದ ಅಧ್ಯಾಪಕರಾಗಿದ್ದ ಕೆ ಮಂಜುನಾಥಯ್ಯ ಅವರನ್ನೂ ಸ್ಮರಿಸುತ್ತಾರೆ ವಿಶ್ವೇಶ್ವರ. ಕೆಲವು ಉಪಾಧ್ಯಾಯರು ಪ್ರಯೋಗಶಾಲೆಯಲ್ಲಿ ಯಕ್ಷಿಣಿಯನ್ನೇ ಮಾಡಬಹುದೇನೋ ಎನ್ನುವಷ್ಟು ಆಸಕ್ತಿ ಮೂಡಿಸುತ್ತಿದ್ದರು. ಇಂಟರ್ಮೀಡಿಯಟ್‌ನಲ್ಲಿ ಭೌತ ವಿಜ್ಞಾನದಲ್ಲಿ ಶೇ. 95 ಅಂಕ ಬಂದದ್ದು ಅಂದಿನ ದಿನಗಲಲ್ಲಿ ಒಂದು ಹೆಗ್ಗಳಿಕೆಯೇ ಅನ್ನಬಹುದು. ಇದೊಂದು ಮಹತ್ಸಾಧನೆಯಾದ್ದರಿಂದ ಭೌತವಿಜ್ಞಾನದ ಬಿ ಎಸ್ ಸಿ ಓದುವುದು ಒಳ್ಳೆಯದೆಂಬ ಸಲಹೆ ಎಲ್ಲರಿಂದ ದೊರಕಿತು. ಹೀಗೆ ಭೌತವಿಜ್ಞಾನವನ್ನೇ ಆಯ್ದುಕೊಂಡದ್ದು ಅವರ ಮುಂದಿನ ಗುರಿಯನ್ನೇ ಬದಲಿಸಿತು.

ಸೆಂಟ್ರಲ್‌ ಕಾಲೇಜು ವಿಶ್ವೇಶ್ವರ ಅವರಿಗೆ ಒಳ್ಳೆಯ ನೆನಪುಗಳನ್ನುಳಿಸಿದೆ. ಅಸಾಧಾರಣ ಅಧ್ಯಾಪಕರೆನಿಸಿಕೊಂಡಿದ್ದ ಪ್ರೊ ಆರ್ ಎಲ್ ನರಸಿಂಹಯ್ಯ, ಪ್ರೊ ಡಿ ಎಸ್ ಸುಬ್ಬರಾಮಯ್ಯ ಇಂತಹವರ ಶಿಷ್ಯವೃತ್ತಿಯೇ ಒಂದು ಸೌಭಾಗ್ಯ ಎನ್ನುತ್ತಾರವರು. ಆನರ್ಸ್‌ ಹಾಗೂ ಎಂ ಎಸ್ ಸಿ ಮುಗಿಸಿದ ನಂತರ ನ್ಯಾಷನಲ್‌ ಕಾಲೇಜು ಬಿಟ್ಟು ಅಮೆರಿಕಕ್ಕೆ ಪ್ರಯಣ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಮಹಾನ್‌ ವಿಜ್ಞಾನಿಗಳ ಪರಿಚಯವಾಯಿತು. ಬೇಸಿಗೆ ತರಗತಿಗಳಿಗಾಗಿ ವಿಶೇಷ ಉಪನ್ಯಾಸ ನೀಡಲು ಬಂದಿದ್ದವರಲ್ಲಿ ಪ್ರೊ ಚಂದ್ರಶೇಖರ್‌ ಮತ್ತು ಪ್ರೊ.ಫೌಲರ್‌ ಮುಂತಾದ ಖ್ಯಾತನಾಮರಿದ್ದರು. ಅವರ ಭಾಷಣಗಳು ಚಿಂತನೆಗೆ ಒಳ್ಳೆಯ ಗ್ರಾಸ ಒದಗಿಸುತ್ತಿದ್ದವು. ಎರಡು ವರ್ಷಗಳ ನಂತರ ಮಾಸ್ಟರ್ಸ್‌ ಪದವಿ ದೊರೆಯಿತು. ರಾಬರ್ಟ್‌ ಫುಲ್ಲರ್‌ ಅವರ ಅತ್ಯುತ್ತಮ ಸಲಹೆಯಂತೆ ವಿಶ್ವೇಶ್ವರ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯಕ್ಕೆ ಹೊರಟು ನಿಂತರು. ಪ್ರೊ ಚಾರ್ಲ್ಸ್‌ ಮಿಸ್ನರ್‌ ಅವರೊಡನೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡರು.

ಕಪ್ಪು ಕುಳಿಯ ಸೆಳೆತ

ಸಾಮಾನ್ಯವಾಗಿ ಭೌತ ವಿಜ್ಞಾನ ಎಂಬ ಶಬ್ದವು ವಿಜ್ಞಾನದ ಒಂದು ಶಾಖೆಯನ್ನು ಸೂಚಿಸುತ್ತದೆ. ಆದರೆ ಸಂಶೋಧನೆಯ ಆಳಕ್ಕಿಳಿದೊಡನೆ ವ್ಯಾಪ್ತಿ ಸಂಕುಚಿತವಾಗುತ್ತದೆ. ಈ ಕಾರಣದಿಂದ ಹೊಸ ಹೊಸ ಶಾಖೆಗಳೇ ಉದ್ಭವವಾಗುತ್ತವೆ. ಹೊಸ ಶಾಖೆಯೊಂದು ಹೀಗೆ ಹುಟ್ಟುವಾಗಲೇ ಅದರಲ್ಲಿ ಸೇರಿ ಅದರೊಡನೆ ಬೆಳೆಯುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಈ ದೃಷ್ಟಿಯಲ್ಲಿ ತಾನು ಅದೃಷ್ಟಶಾಲಿ ಎಂದು ವಿಶ್ವೇಶ್ವರ ಅವರ ಭಾವನೆ ಚಾರ್ಲ್ಸ್‌ ಮಿಸ್ನರ್‌ ಅವರೊಡನೆ ಸೇರುವ ಅವಕಾಶವೇ ಒಂದು ಅದೃಷ್ಟದ ಘಟನೆ. ಆಗ ಕಪ್ಪು ಕುಳಿತ ಕುರಿತ ಅಧ್ಯಯನ ಇನ್ನೂ ಚಿಗುರುತ್ತಿತ್ತು. ಅದರೊಡನೆ ಬೆಳೆಯಲು ಅವಕಾಶ ಸಿಕ್ಕಿದ್ದು ಇನ್ನೊಮದು ಅದೃಷ್ಟ. ಕಪ್ಪು ಕುಳಿ ಮತ್ತು ಸಾಪೇಕ್ಷತಾವಾದಗಳ ಪ್ರವಾಹದಲ್ಲಿ ಬಿದ್ದು ಯಶಸ್ವಿಯಾಗಿ ಈಜಿದ ಅವರು ಈಗ ಈ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಆ ಬಗ್ಗೆ ಘಂಟಾಘೋಷವಾಗಿ ವಿವರಿಸಬಲ್ಲ ಕೆಲವೇ ಪರಿಣಿತರಲ್ಲಿ ಒಬ್ಬರಾಗಿದ್ದಾರೆ. ಕಪ್ಪುಕುಳಿ ಎಂಬ ಪದ ಚಾಲ್ತಿಗೆ ಬಂದದ್ದೇ ಸುಮಾರು ನಾಲ್ಕು ದಶಕಗಳ ಹಿಂದೆ. ವಸ್ತುವಿನ ಎಷ್ಟು ಸಾಧ್ಯವೋ ಅಷ್ಟಕ್ಕಿಂತಲೂ ಹೆಚ್ಚು ಒತ್ತರಿಸಿದರೆ ಏನಾಗಬಹುದು ಎಂಬ ಸೈದ್ಧಾಂತಿಕ ಪ್ರಯೋಗದ ಫಲಿತಾಂಶ ಇದು. ಕ್ಲಿಷ್ಟ ಗಣಿತ ಸೂತ್ರಗಳನ್ನು ಬಳಸಿ ವಿಚಿತ್ರವಾದ ಫಲಿತಾಂಶ ಪಡೆಯುವ ಚಮತ್ಕಾರ ಇದು.
ಯಾವುದೇ ಕ್ಲಿಷ್ಟ ವಿಷಯವನ್ನು ತಿಳಿಯಾಗಿ ಬಿಡಿಸಿ ಹೇಳುವ ವಿಶ್ವೇಶ್ವರ ಅವರು ತಿಳಿಹಾಸ್ಯವನ್ನು ಬೆರೆಸುವುದರಲ್ಲೂ ನಿಪುಣರು. ಕಪ್ಪು ಕುಳಿ ಎಂಬ ಪದವೇ ಅದು ಇಂದು ದೊಡ್ಡ ಶಾಖೆಯಾಗಿ ಬೆಳೆಯಲು ಕಾರಣ ಎನ್ನುತ್ತಾರೆ. ಇದಕ್ಕೆ ಅವರು ಕೊಡುವ ಉಪಮೆ ಹಿಟ್ಲಿರ್‌ದು-ಶಿಕಲ್‌ ಗ್ರುಬರ್‌ ಎಂಬ ಹೆಸರನ್ನು ಆತ ಹಿಟ್ಲರ್‌ ಎಂದು ಬದಲಾಯಿಸಿಕೊಂಡಿದ್ದೇ ಜರ್ಮನಿಯಲ್ಲಿ ಅವರ ಜನಪ್ರಿಯತೆ ಕಾರಣವಾಯಿತು. ಹಾಗೆಯೇ ಕಪ್ಪು ಕುಳಿ ಎಂಬ ಪದವೇ ಸಂಶೋಧನಾಸಕ್ತರನ್ನು ಆಕರ್ಷಿಸಿತು; ಬೆಳೆಯಿತು.

ಜಾನ್‌ ವ್ಹೀಲರ್‌ ಅವರು ಕಪ್ಪು ಕುಳಿ ಎಂಬ ಪದವನ್ನು ಉಪಯೋಗಿಸಿದ್ದು, ತಪ್ಪಿಸಿಕೊಂಡು ಹೊರಬರಲಾರದ ಸ್ಥಿತಿಯನ್ನು ವಿವರಿಸುವುದಕ್ಕಾಗಿ. ಈ ಪರಿಸ್ಥಿತಿ ಉಂಟಾಗಿದ್ದು ಬೆಳಕಿಗೆ. ಕಪ್ಪು ಕುಳಿಯ ವ್ಯಾಖ್ಯೆ ಎನಿಸಿಕೊಂಡಿತು ಈ ವಿವರಣೆ. ಹಾಗೆಂದ ಮಾತ್ರಕ್ಕೆ ಅದಕ್ಕೆ ಮೊದಲು ಈ ಕಲ್ಪನೆಯೇ ಇರಲಿಲ್ಲವೆಂದಲ್ಲ. ಮುನ್ನೂರು ವರ್ಷಗಳ ಹಿಮದೆ ನ್ಯೂಟನ್‌ ಎಬ್ಬಿಸಿದ ಬಿರುಗಾಳಿ ಗುರುತ್ವಶಕ್ತಿ. ಅನೇಕ ನೈಸರ್ಗಿಕ ವಿದ್ಯಮಾನಗಳನ್ನು ಒಟ್ಟುಗೂಡಿಸಿದ ಇದು ಸಾರ್ವತ್ರಿಕ ನಿಯಮ ಎಂಬ ಖ್ಯಾತಿ ಪಡೆಯಿತು. ಫಿರಂಗಿಯಿಂದ ಹಾರುವ ಗುಂಡು, ಭೂಮಿಯನ್ನು ಸುತ್ತುವ ಚಂದ್ರ, ಹನ್ನೆರಡೂವರೆ ಗಂಟೆಗಳ ಅಂತರದಲ್ಲಿ ಸಮುದ್ರವು ಏರಿಳಿಯುವ ಭರತ ಇಳಿತ ಈ ಎಲ್ಲ ಅಂಶಗಳನ್ನೂ ಇದು ಸಮಪರ್ಕವಾಗಿ ವಿವರಿಸಿತು.

ಈ ತತ್ವದಿಂದ ಹೊಮ್ಮಿದ ಹೊಸ ಪರಿಕಲ್ಪನೆ, ”ವಿಮೋಚನಾ ವೇಗ”. ಯಾವುದಾದರೂ ಆಕಾಶಕಾಯದ ಗುರುತ್ವಾಕರ್ಷಣೆಯ ಹಿಡಿತದಿಮದ ತಪ್ಪಿಸಿಕೊಂಡು ಹೋಗಲು ಬೇಕಾಗುವ ಕನಿಷ್ಠ ವೇಗವೇ ಇದು. ಆಯಾ ಕಾಯದ ದ್ರವ್ಯರಾಶಿಗನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ. ಈ ಬಗೆಯ ಚಿಂತನೆಯನ್ನು ಮುಂದುವರೆಸಿದವರಲ್ಲಿ ಮುಖ್ಯರಾದವರಿಬ್ಬರು; 1784ರಲ್ಲಿ ಸ್ಕಾಟ್‌ಲೆಂಡನ ಜಾನ್‌ ಮಿಚೆಲ್‌ ಮತ್ತು ಹತ್ತು ವರ್ಷಗಳ ನಂತರ ಫ್ರಾನ್ಸಿನ ವಿಜ್ಞಾನಿ ಪಿಯೆರ್‌ ಲಪ್ಲಾಸ್‌. ಇವರೀರ್ವರ ಪರಿಕಲ್ಪನೆಯ ಪ್ರಕಾರ ಯಾವುದೇ ನಕ್ಷತ್ರದ ಗಾತ್ರ ಸಾಕಷ್ಟು ಕಡಿಮೆಯಾಗಿದ್ದಲ್ಲಿ. ಅದಕ್ಕೆ ಸಂಬಂಧಿಸಿದ ವಿಮೋಚನಾ ವೇಗ ಬೆಳಕಿನ ವೇಗಕ್ಕಿಂತ ಹೆಚ್ಚಾಗಲು ಸಾಧ್ಯ. ಆಗ ಬೆಳಕು ಅಂತಹ ನಕ್ಷತ್ರದ ಹಿಡಿತದಿಂದ ಮುಕ್ತವಾಗಲು ಸಾಧ್ಯವಿಲ್ಲ. ಹಾಗಾಗಿ ಆ ನಕ್ಷತ್ರ ವೀಕ್ಷಕರಿಗೆ ಗೋಚರವಾಗುವುದೇ ಇಲ್ಲ. ಇವರಿಬ್ಬರು ಊಹಿಸಿದ ಆಕಾಶಕಾಯದ ನಜ ಸ್ವರೂಪ ಮೂಡಿದ್ದು ಸುಮಾರು ನೂರಿಪ್ಪತ್ತು ವರ್ಷಗಳ ನಂತರ. ಈ ಲೆಕ್ಕಗಳಿಗೆ ಗಣಿತದ ಸುಭದ್ರ ಅಡಿಪಾಯ ಒದಗಿಸಿದ್ದು. ಐನ್‌ಸ್ಟೈನ್‌ರ ಸಾಮಾನ್ಯ ಸಾಪೇಕ್ಷತಾವಾದ.

ಇದನ್ನೂ ಓದಿ | ನೊಬೆಲ್‌ 2020 | ಗೆಲಾಕ್ಸಿ ಮತ್ತು ಕಪ್ಪು ಕುಳಿ ಅಧ್ಯಯನ ಮಾಡಿದ ಮೂವರಿಗೆ ಈ ಬಾರಿಯ ಭೌತಶಾಸ್ತ್ರದ ನೊಬೆಲ್‌

ಕಪ್ಪು ಕುಳಿಗಳ ಆಂತರ್ಯವನ್ನು ತಿಳಿಯಲು ನಕ್ಷತ್ರಗಳ ಹುಟ್ಟುಸಾವಿನ ಪರಿಯನ್ನೂ ತಿಳಿಯಬೇಕು. ಅತಿ ಹೆಚ್ಚು ದ್ರವ್ಯರಾಶಿಯ (ಅಂದರೆ ಸೂರ್ಯನ ದ್ರವ್ಯರಾಶಿ ಇಪ್ಪತ್ತು-ಮೂವತ್ತು ಪಟ್ಟು ಹೆಚ್ಚು) ನಕ್ಷತ್ರದ ವಿಕಾಸದ ಹಂತಗಳು ಬೇರೆ ರೀತಿಯಲ್ಲಿ ಮುಂದುವರೆಯುತ್ತವೆ. ಚೈತನ್ಯದ ಮೂಲವಾದ ಬೈಜಿಕ ಕ್ರಿಯೆಗಳೂ (ನ್ಯೂಕ್ಲಿಯರ್ ರಿಯಾಕ್ಷನ್‌) ಬೇರೆ ರೀತಿಯವು. ಕೇಂದ್ರ ಭಾಗದಲ್ಲಿ ಅತಿ ಹೆಚ್ಚಿನ ಉಷ್ಣತೆ ಇರುವ ಕಾರಣ ಬೈಜಿಕ ಕ್ರಿಯೆಗಳು ಉಂಟಾಗುವುದೇ ನಕ್ಷತ್ರದ ಚೈತನ್ಯಕ್ಕೆ ಕಾರಣ. ಗುರುತ್ವದ ಕಾರಣ ವಸ್ತುವು ಕೇಂದ್ರದತ್ತ ಕುಸಿಯುವುದು ಸಾಧ್ಯ. ಆದರೆ ಹೊರ ಮುಖ ಒತ್ತಡವು ವಸ್ತು ಕುಸಿಯದಂತೆ ತಡೆಯುತ್ತದೆ. ಈ ಎರಡೂ ಬಲಗಳ ಸಮತೋಲನವೇ ನಕ್ಷತ್ರದ ಆಕಾರ ಹಾಗೂ ಗಾತ್ರವನ್ನು ನಿರ್ಧರಿಸುತ್ತದೆ. ನಕ್ಷತ್ರದ ಕೇಂದ್ರ ಭಾಗದಲ್ಲಿ ಈ ಬೈಜಿಕ ಕ್ರಿಯೆಗೆ ಅವಶ್ಯಕವಾದ ಮೂಲ ವಸ್ತು ಕಡಿಮೆಯಾಗುತ್ತಾ ಬರುವುದು ಸಹಜ. ಆಗ ಅಲ್ಲಿ ಚೈತನ್ಯದ ಉತ್ಪಾದನೆ ನಿಂತೇ ಹೋಗಬಹುದು. ಈ ಸಂದರ್ಭದಲ್ಲಿ ನಕ್ಷತ್ರದ ಕೇಂದ್ರ ಭಾಗದಲ್ಲಿ ಗುರುತ್ವ ಕುಸಿತ ಉಂಟಾಗುತ್ತದೆ. ಹೊರ ಪದರಗಳು ಹೊರಕ್ಕೆ ಚಿಮ್ಮುತ್ತವೆ. ಸೌರರಾಶಿಯ ಸುಮಾರು ಒಂದೂವರೆಯಷ್ಟು ದ್ರವ್ಯರಾಶಿಗಿಂತ ಕಡಿಮೆ ವಸ್ತು ಕೇಂದ್ರದಲ್ಲಿ ಉಳಿದರೆ ಅದು ಶ್ವೇತ ಕುಬ್ಜವಾಗುತ್ತದೆ. ಖ್ಯಾತ ಖಗೋಳ ವಿಜ್ಞಾನಿ ಎಸ್ ಚಂದ್ರಶೇಖರ್‌ ಅವರ ಹೆಸರನ್ನೇ ಈ ಸಂಖ್ಯೆಗೆ ಕೊಟ್ಟು ಚಂದ್ರಶೇಖರ್‌ ಮಿತಿ ಎಂದು ಹೆಸರಿಸಲಾಗಿದೆ. ಕೇಂದ್ರ ಭಾಗದಲ್ಲಿ ಈ ಮಿತಿಗಿಂತ ಹೆಚ್ಚು ದ್ರವ್ಯರಾಶಿ ಇದ್ದರೆ ಅದು ನ್ಯೂಟ್ರಾನ್‌ ನಕ್ಷತ್ರವಾಗುತ್ತದೆ. ಸೌರರಾಶಿಯ 3-4ರಷ್ಟು ಇದ್ದರೆ ಮಾತ್ರ ಈ ಸಾಧ್ಯತೆ ಉಂಟು. ಇದಕ್ಕೂ ಹೆಚ್ಚಿನ ದ್ರವ್ಯರಾಶಿ ಕೇಂದ್ರದಲ್ಲಿದ್ದರೆ ಗುರುತ್ವ ಕುಸಿದ ಪರಿಣಾಮ ವಿನಾಶಕಾರಿಯಾಗುವುದು. ನಮಗೆ ತಿಳಿದಿರುವ ಯಾವುದೇ ಭೌತಿಕ ಬಲಗಳು ಇದನ್ನು ತಡೆಯಲಾರವು. ಇದರ ಪರಿಣಾಮವೇ ಕಪ್ಪು ಕುಳಿ. ಹೀಗೆ ಕಪ್ಪು ಕುಳಿ ರಚನೆಯಾಗುವುದ ಸಾಧ್ಯತೆಯ ಬಗ್ಗೆ ಖ್ಯಾತ ವಿಜ್ಞಾನಿ ರಾಬರ್ಟ್‌ ಒಪನ್‌ ಹೈಮರ್‌ ಮತ್ತು ಅವರ ಶಿಷ್ಯ ವರ್ಗ ಸೈದ್ಧಾಂತಿಕ ಅಧ್ಯಯನ ಮಾಡಿದರು. ನ್ಯೂಟ್ರಾನ್‌ ನಕ್ಷತ್ರದ ಮಿತಿ ಮತ್ತು ಕಪ್ಪುಕುಳಿಗಳ ಬಗ್ಗೆ ಮೊದಲ ಬಾರಿಗೆ ಲೆಕ್ಕ ನಡೆಸಿದ್ದು ಹೀಗೆ. (ಈಗ ಓಪನ್‌ ಹೈಮರ್‌ ಅವರನ್ನು ಪರಿಮಾಣು ಬಾಂಬ್‌ನ ಜನಕ ಎಂದು ಮಾತ್ರ ಗುರುತಿಸುತ್ತಾರೆ). ಈ ವಿಚಿತ್ರ ಕಪ್ಪು ಕುಳಿಗಳನ್ನು ವಿವರಿಸಲು ನ್ಯೂಟನ್‌ನ ಚಲನೆಯ ನಿಯಮಗಳು ಅಸಮರ್ಥವಾಗುತ್ತವೆ. ಈ ಕೊರತೆಯನ್ನು ನೀಗಿಸಲು ಐನ್‌ಸ್ಟೈನ್‌ರಂತಹ ಮಹಾಮೇಧಾವಿಗೆ ಮಾತ್ರ ಸಾಧ್ಯ. ಅವರ ಸಾಪೇಕ್ಷತಾವಾದ ಅತ್ಯಂತ ಗಹನ ಮತ್ತು ಸುಂದರವಾದ ಸಿದ್ಧಾಂತ. ಈ ಸಿದ್ಧಾಂತದ ಪ್ರಕಾರ ಗುರುತ್ವದ ಕಾರಣ ಯಾವುದೇ ವಸ್ತುವಿನ ಸುತ್ತಲಿನ ಕ್ಷೇತ್ರವು ಬಾಗಿರುತ್ತದೆ; ಸಮತಲವಾಗಿರುವುದಿಲ್ಲ.

ನಾಳೆ | ಕಪ್ಪು ಕುಳಿಗಳಿಗೊಂದು ಕವಣೆ ಎಸೆದ ಸಿ ವಿ ವಿಶ್ವೇಶ್ವರ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: