ಕಳೆದ ಕೆಲವು ವರ್ಷಗಳಿಂದ ಕಪ್ಪುಕುಳಿ ಅಧ್ಯಯನದಲ್ಲಿ ವಿಶೇಷ ಬೆಳವಣಿಗಳಾಗುತ್ತಿವೆ. ಈ ಬಾರಿ ಭೌತಶಾಸ್ತ್ರದ ವಿಭಾಗದ ನೊಬೆಲ್ ಪುರಸ್ಕಾರವೂ ಕಪ್ಪುಕುಳಿಯ ಅಧ್ಯಯನಕ್ಕೆ ಸಂದಿದೆ. ವಿಶೇಷವೆಂದರೆ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡಿನ ವಿಜ್ಞಾನಿ ರೋಜರ್ ಪೆನ್‌ರೋಸ್ ಅವರಿಗೂ ಕನ್ನಡದ ವಿಜ್ಞಾನಿ ಸಿ ವಿ ವಿಶ್ವೇಶ್ವರ ಅವರಿಗೂ ಒಂದು ರೀತಿಯ ನಂಟು. ಕಪ್ಪುಕುಳಿಯ ಅಧ್ಯಯನದಲ್ಲಿ ವಿಶ್ವೇಶ್ವರ ಅವರು ಕಂಡುಕೊಂಡ ಗಣಿತಶಾಸ್ತ್ರೀಯ ವಿಧಾನಗಳೇ ರೋಜರ್ ಅವರ ಸಂಶೋಧನೆಗೆ ತಳಹದಿ! ಅಂತಹ ಮಹತ್ವದ ವಿಜ್ಞಾನಿಯ ಸಾಧನೆಗಳನ್ನು ಈ ಹೊತ್ತಲ್ಲಿ ನೆನಯಲೇಬೇಕು

ಇದನ್ನು ಎರಡು ಆಯಾಮಗಳಲ್ಲಿ ವಿವರಿಸಲು ಮೀನಿನ ಬಲೆ ಉದಾಹರಣೆಯನ್ನು ಕೊಡಬಹುದು. ಇದು ನೀರಿನ ಮೇಲೆ ಸಮತಲವಾಗಿ ಹರಡಿರುತ್ತದೆ. ಅದರೊಳಗೆ ಮೀನು ಬಿದ್ದಾಗ ಮೀನಿನ ತೂಕದ ಕಾರಣ ಸಮತಲದ ಆಕಾರ ಬದಲಾಗಿ ಬಿಡುತ್ತದೆ. ಇದರ ಮೇಲೆ ಚೆಂಡನ್ನು ಉರುಳಿಸಿದರೆ ಅದು ನೇರವಾಗಿ ಸಾಗದೇ ಮೀನಿನತ್ತ ವಕ್ರರೇಖೆಯ ಮೇಲೆ ಚಲಿಸುತ್ತದೆ. ಇಲ್ಲಿ ನ್ಯೂಟನ್‌ನ ಚಲನೆಯ ನಿಯಮಗಳ ಬದಲಾಗಿ ಐನ್‌ಸ್ಟೈನ್ ಅವರ ಕಾಲ-ಹರವುಗಳ ವಕ್ರತೆಯ ನಿಯಮಗಳು ಅನ್ವಯವಾಗುತ್ತವೆ. ಇದೇ ರೀತಿ ಬೆಳಕು ಕೂಡ ಬಾಗುವುದು ಸಾಧ್ಯ. ಇದನ್ನು ಜಾನ್ ವ್ಲೀಲರ್ ವಿವರಿಸಿದ್ದು ಹೀಗೆ: “ಕಣಗಳ ಚಲನೆಯನ್ನು ವ್ಯೋಮ ನಿರ್ದೇಶಿಸುತ್ತದೆ; ಕಣಗಳು ವ್ಯೋಮದ ವಕ್ರತೆಯನ್ನು ನಿರ್ದೇಶಿಸುತ್ತವೆ”.
ಈಗ ನಾವೊಂದು ಕಾಲ್ಪನಿಕ ಪ್ರಯೋಗ ಮಾಡೋಣ. ಬಲೆಯಲ್ಲಿ ಬಿದ್ದಿರುವ ಮೀನಿನ ಗಾತ್ರವನ್ನು ಕುಗ್ಗಿಸಿ ಅದರ ದ್ರವ್ಯರಾಶಿಯನ್ನು ಹಾಗೆಯೇ ಉಳಿಸೋಣ. ನಕ್ಷತ್ರದ ಅಂತಿಮ ಹಂತವನ್ನು ಇದಕ್ಕೆ ಹೋಲಿಸಬಹುದು. ದ್ರವ್ಯರಾಶಿಯ ಕಾರಣ (ಮೀನು ಬಹಳ ಚಿಕ್ಕ ಗಾತ್ರದ್ದೇ ಆಗಿದ್ದರೂ) ಬಲೆ ವಿಕೃತ ಆಕಾರವನ್ನು ಪಡೆಯುತ್ತದೆ. ಹಾಗೆಯೇ ನಕ್ಷತ್ರದ ಅಂತ್ಯದಲ್ಲಿ ಅದರ ಸುತ್ತಲಿನ ಕಾಲ-ಹರವು ತೀವ್ರ ವಕ್ರತೆಯನ್ನು ಪಡೆಯುತ್ತದೆ. ಅಂದರೆ ಅದರ ಕೇಂದ್ರದ ಭಾಗದಿಂದ ವಸ್ತುವಾಗಲೀ ಬೆಳಕಾಗಲೀ ಹೊರಬರುವುದು ಸಾಧ್ಯವೇ ಆಗುವುದಿಲ್ಲ. ಹೀಗೆ ಕಪ್ಪು ಕುಳಿಯ ರಚನೆಯಾಗುತ್ತದೆ.
ಇನ್ನೊಂದು ವಿಷಯ, ಬಲೆಯಲ್ಲಿ ಬಿದ್ದ ಮೀನು ಮೇಲಕ್ಕೆ ಕೆಳಕ್ಕೆ ಎಗರಾಡಿದುವೆಂದುಕೊಳ್ಳೊಣ. ಆಗ ತರಂಗಗಳು ಸೃಷ್ಟಿಯಾಗಿ ಬಲೆಯ ಮೂಲಕ ಚಲಿಸುತ್ತವೆ. ಇದೇ ರೀತಿ ಚಲಿಸುತ್ತಿರುವ ವಸ್ತುವಿನ ಸುತ್ತಲಿನ ಕ್ಷೇತ್ರದಲ್ಲಿ ತರಂಗಗಳೂ ಸೃಷ್ಟಿಯಾಗುವುವು. ಇವು ನಮಗೆ ಪರಿಚಿತವಾದ ಧ್ವನಿ ಮತ್ತು ವಿದ್ಯುತ್ ಕಾಂತೀಯ ತರಂಗಗಳಿಗಿಂತ ಭಿನ್ನವಾದವು. ಇವನ್ನು ಗುರುತ್ವ ತರಂಗಗಳು ಎಂದು ಹೆಸರಿಸಿದ್ದಾರೆ. ಸ್ವತಃ ಐನ್‌ಸ್ಟೈನ್ ಅವರೇ ಇವುಗಳ ಅಸ್ತಿತ್ವವನ್ನು ಊಹಿಸಿದ್ದರು; ಆದರೆ ಭೂಮಿಯ ಮೇಲೆ ಯಾವುದೇ ಸಂವೇದಕಗಳೂ ಇದುವರೆಗೆ ಅಂತಹ ತರಂಗಗಳನ್ನು ಗುರುತಿಸಿಲ್ಲ.
ಐನ್‌ಸ್ಟೈನ್ ಅವರ ಸಾಪೇಕ್ಷತಾವಾದ ಬಹಳ ಸುಂದರವಾದುದಾದರೂ ಅದರಲ್ಲಿಯ ಸೂತ್ರಗಳು ಬಹಳ ಕ್ಲಿಷ್ಟವಾದವು. ಇವುಗಳನ್ನು ಬಿಡಿಸುವುದು ಬಹಳ ಕಷ್ಟ. ಜರ್ಮನಿಯ ವಿಜ್ಞಾನಿ ಕಾರ್ಲ್ ಶ್ವಾರ್ಸ್‌ಶೀಲ್ಡ್, ಗೋಳಾಕಾರದ ದ್ರವ್ಯರಾಶಿಗೆ ಅನ್ವಯವಾಗುತ್ತದೆ. ಕಪ್ಪು ಕುಳಿಯ ತ್ರಿಜ್ಯವನ್ನು ಕಂಡುಹಿಡಿಯಲು ಸೂತ್ರವೊಂದಿದೆ.
ವ್ಲೀಲರ್ ಅವರ ಅನೇಕ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಚಾರ್ಲ್ಸ್ ಮಿಸ್ನರ್ ಒಬ್ಬರು. ಸಾಪೇಕ್ಷತಾ ಸಿದ್ಧಾಂತದ ವಿಶಿಷ್ಟ ಮುಖಗಳು, ವಿಶ್ವದ ಉಗಮ, ವಿಶ್ವ ವಿನ್ಯಾಸದಲ್ಲಿ ನ್ಯೂಟ್ರಿನೊಗಳ ಪಾತ್ರ- ಹೀಗೆ ಅವರು ಆರಿಸಿಕೊಂಡ ಅಧ್ಯಯನದ ವಿಷಯಗಳು ವೈವಿಧ್ಯಮಯ. ಈ ಕಾರಣದಿಂದ ವ್ಹೀಲರ್ ಅವರ ಇನ್ನೊಬ್ಬ ವಿದ್ಯಾರ್ಥಿ ರಾಬರ್ಟ್ ಫುಲ್ಲರ್ ಅವರು ವಿಶ್ವೇಶ್ವರ ಅವರಿಗೆ ಮಿಸ್ನರ್ ಗುಂಪನ್ನು ಸೇರಲು ಸಲಹೆ ನೀಡಿದರು. ಕಪ್ಪು ಕುಳಿಗಳ ಅಧ್ಯಯನ ತಂಡ ಹೀಗೆ ಬೆಳೆಯಿತು.
‘ಜಿಯೋಮಿಟ್ರೋ ಡೈನಮಿಕ್ಸ್’ ಎಂಬ ಪುಸ್ತಕದ ಕರ್ತೃ, ವ್ಹೀಲರ್, ಇದರಲ್ಲಿ ಶ್ವಾರ್ಸ್‌ಶೀಲ್ಡ್ ವ್ಯೋಮದ ಸ್ಥಿರತೆಯ ಬಗ್ಗೆ ಪ್ರಸ್ತಾಪವಿತ್ತು. ಅದರಲ್ಲಿಯ ಕೆಲವು ಅಂಸಗಳ ಬಗ್ಗೆ ವಿಶ್ವೇಶ್ವರ ಅವರಿಗೆ ಸಂದೇಹಗಳಿದ್ದವು. ಮಿಸ್ನರ್ ಅವರ ಇನ್ನೊಬ್ಬ ಶಿಷ್ಯ ಲೆಸ್ಟರ್ ಎಡಲ್‌ಸ್ಟೈನ್ ಅವರೊಡನೆ ಈ ಬಗ್ಗೆ ಚರ್ಚಿಸಿ ಆ ಅಂಶಗಳಿಗೆ ಅಡಿಪಾಯದ ಸಮೀಕರಣಗಳನ್ನು ಮತ್ತೊಮ್ಮೆ ಸಮರ್ಪಕವಾಗಿ ರಚಿಸಿದರು. ಇಂದು ಕಪ್ಪು ಕುಳಿಗಳ ಅಧ್ಯಯನದಲ್ಲಿ ಈ ಸಮೀಕರಣಗಳು ಧಾರಾಳವಾಗಿ ಬಳಕೆಯಾಗುತ್ತಿರುವುದೇ ಇದರ ಪ್ರಾಮುಖ್ಯಕ್ಕೆ ಸಾಕ್ಷಿ. ಎಡಲ್‌ಸ್ಟೈನ್ ಮತ್ತು ವಿಶ್ವೇಶ್ವರ ಅವರ ಈ ಸಂಶೋಧನಾ ಪ್ರಬಂಧ ಪ್ರಕಟವಾದ ಸ್ವಲ್ಪ ದಿನಗಳಲ್ಲೇ ಖ್ಯಾತವಿಜ್ಞಾನಿ ಎಸ್ ಚಂದ್ರಶೇಖರ್ ಮೇರಿ ಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟರು. ಅವರೊಡನೆ ಚರ್ಚಿಸಲು ಇದು ಸದವಕಾಶವಾಯಿತು.
ಕಪ್ಪು ಕುಳಿಗಳು ಚದುರಿಸುವ ಗುರುತ್ವ ತರಂಗಗಳ ಬಗ್ಗೆ ಆಳವಾದ ಅಧ್ಯಯನವನ್ನು ವಿಶ್ವೇಶ್ವರ ನಡೆಸಿದರು. ಅವರು ತೋರಿಸಿಕೊಟ್ಟ ಫಲಿತಾಂಶಗಳು ಬಹಳ ವಿಶೇಷವಾದವು ಎನ್ನಬಹುದು. ಏಕೈಕ ತರಂಗದ ಬದಲು ನಿಬಿಡವಾದ ತರಂಗಗಳ ಗುಂಪನ್ನು ಕಪ್ಪು ಕುಳಿಯೊಂದರ ಕಡೆಗೆ ಕಳುಹಿಸಿದೆವೆಂದುಕೊಳ್ಳೊಣ. ಹೊರಬರುವ ತರಂಗಗಳು ಬಹಳ ಕೌತುಕಮಯವಾಗಿರುತ್ತವೆ. ಅವುಗಳ ಕಂಪನಾಂಕವು ನಿರ್ದಿಷ್ಟವಾಗಿದ್ದರೂ ಅವುಗಳ ಪಾಠ ಕ್ರಮೇಣವಾಗಿ ಕುಗ್ಗುತ್ತಾ ಹೋಗುತ್ತದೆ. ಗಂಟೆಯಿಂದ ಹೊರಡುವ ಧ್ವನಿ ತರಂಗಗಳೂ ಹೀಗೆಯೇ ಇರುತ್ತವೆ. ಆದ್ದರಿಂದ ಕಪ್ಪುಕುಳಿಯು ಗಂಟೆಯಂತೆಯೇ ಕಂಪಿಸಿ ತರಂಗಗಳನ್ನು ಸೃಷ್ಟಿಸುತ್ತವೆ ಎನ್ನಬಹುದು. ಇವುಗಳಿಗೆ ಕ್ವಾಸಿ ನಾರ್ಮಲ್ ಮೋಡ್ಸ್ ಎಂದು ಹೆಸರಿಸಲಾಗಿದೆ. ಕಪ್ಪು ಕುಳಿ ಸೃಷ್ಟಿ ಮತ್ತು ಒಂದನ್ನೊಂದು ಸುತ್ತುತ್ತಿರುವ ಕಪ್ಪುಕುಳಿಗಳು ವಿಲೀನವಾಗುವುದು, ಈ ಎರಡೂ ಸಂದರ್ಭಗಳಲ್ಲಿ ಈ ವಿಧದ ಗುರುತ್ವ ತರಂಗಗಳನ್ನು ಕಾಣಬಹುದು. ಇವು ಕಪ್ಪು ಕುಳಿಗಳ ಅಸ್ತಿತ್ವಕ್ಕೆ ನೇರ ಪುರಾವೆಯನ್ನು ಒದಗಿಸುತ್ತವೆ. ಮುಂದೊಂದು ದಿನ ಗುರುತ್ವ ತರಂಗಗಳನ್ನು ಗುರುತಿಸುವುದು ಸಾಧ್ಯವಾದಾಗ ಕಪ್ಪು ಕುಳಿಗಳನ್ನು ಪತ್ತೆ ಮಾಡುವುದಕ್ಕಾಗಿ ಹೀಗೆ ಕ್ವಾಸಿ ನಾರ್ಮಲ್ ಕಂಪನಗಳನ್ನು ಬಳಸಿಕೊಳ್ಳಬಹುದು. ಆಗ ಸೈದ್ಧಾಂತಿಕವಾಗಿ ಈ ವಿಧಾನವನ್ನು ಪ್ರತಿಪಾದಿಸಿದ ವಿಶ್ವೇಶ್ವರ ಅವರ ಅಧ್ಯಯನಕ್ಕೆ ಪ್ರಾಯೋಜಿಕ ಬೆಂಬಲ ಸಿಗುತ್ತದೆ.
ಈ ಮೇಲೆ ಹೇಳಿದ ಮೂಲಭೂತ ಸಂಶೋಧನೆಗಳ ಕಾರಣ, ವಿಶ್ವೇಶ್ವರ ಅವರನ್ನು ಕಪ್ಪುಕುಳಿಯ ಸಂಶೋಧನೆಗಳ ಆದ್ಯ ಪ್ರವರ್ತಕರಲ್ಲೊಬ್ಬರು ಎಂದು ಪರಿಗಣಿಸಲಾಗಿದೆ.
ತಾಯ್ನಾಡಲ್ಲಿ ತಳಹದಿ
1968ರಲ್ಲಿ ಭಾರತಕ್ಕೆ ಮರಳಿದ ವಿಶ್ವೇಶ್ವರ ಅವರು ಬೆಂಗಳೂರಿನ ರಾಮನ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಸೇರಿದರು. ಸಾಪೇಕ್ಷತಾವಾದ, ಗುರುತ್ವಾಕರ್ಷಣ ಶಕ್ತಿ ಮತ್ತು ಕಪ್ಪು ಕುಳಿಗಳಿಗೆ ಸಂಬಂಧಿಸಿದಂತೆ ಯುವ ವಿಜ್ಞಾನಿಗಳ ಸಂಶೋಧನಾ ತಂಡವನ್ನೇ ನಿರ್ಮಿಸಿದರು.
ಅವರ 60ನೇ ಹುಟ್ಟುಹಬ್ಬದಂದು ಅವರ ಸಹೋದ್ಯೋಗಿಗಳೂ, ಶಿಷ್ಯವೃಂದ ಎಲ್ಲರೂ ಸೇರಿ ಒಂದು ಬೃಹತ್ ಗ್ರಂಥವನ್ನು ಕಾಣಿಕೆಯಾಗಿ ಅರ್ಪಿಸಿದರು. ಈ ಅಭಿನಂದನಾಗ್ರಂಥ ಗುರುತ್ವಾಕರ್ಷಣೆಯ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಮಾರ್ಗದರ್ಶಿಯಾಗಿದೆ. ಚಾರ್ಲ್ಸ್ ಮಿಸ್ನರ್ ಅವರ ಸಂದೇಶದಿಂದ ಹಿಡಿದು ಇಂದು ಈ ಶಾಖೆಯಲ್ಲಿ ಹೆಸರಾಂತ ವಿಜ್ಞಾನಿಗಳೆಲ್ಲರ ಲೇಖನಗಳು ಇದರಲ್ಲಿ ಅಡಕವಾಗಿವೆ. ಸಂಶೋಧನೆಯ ವಿವಿಧ ಮುಖಗಳನ್ನು ಎತ್ತಿ ಹಿಡಿಯುತ್ತವೆ. ಇತ್ತೀಚಿನ ಮುನ್ನಡೆ ಎನಿಸಿರುವ ಗುರುತ್ವ ಅಲೆಗಳ ಚರ್ಚೆಯೂ ಇದೆ. ಗುರುತ್ವ ಅಲೆಗಳನ್ನು ಗುರುತಿಸಲು ಉಪಕರಣದ ರಚನೆಯ ವಿವರವಿದೆ. ಅಮೆರಿಕದಲ್ಲಿ ಸಿದ್ಧವಾಗುತ್ತಿರುವ LIGO (Laser Interferometric Gravitational wave Observatory) ಮತ್ತು ಜಪಾನಿನಲ್ಲಿ ಸಿದ್ಧವಾಗುತ್ತಿರುವ ಇಂತಹದೇ ಉಪಕರಣಗಳ ಬಗ್ಗೆ ಪ್ರಬಂಧಗಳಿವೆ. ಇಲ್ಲಿ ಸಾಧಿಸಲು ಹೊರಟಿರುವ ನಿಖರತೆ ಬೆಳಕಿನ ತರಂಗಾಂತರದ 1014ರಲ್ಲಿ ಒಂದು ಭಾಗ. ಕಪ್ಪುಕುಳಿಗಳಿಂದ ಅಲೆಗಳನ್ನು ಗುರುತಿಸಿ ಅವನ್ನು ಪತ್ತೆ ಮಾಡಬಹುದೆಂಬ ಸುಳಿವನ್ನು ಕೊಟ್ಟಿದ್ದು ವಿಶ್ವೇಶ್ವರ ಅವರೇ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಭಾರತಕ್ಕೆ ಹಿಂದುರಿಗಿದ ಮೇಲೆ ವಿಶ್ವೇಶ್ವರ ಅವರು ಅನೇಕ ಅಂತಾರಾಷ್ಟ್ರೀಯ ಗೋಷ್ಠಿಗಳನ್ನು ಬೇಸಿಗೆ ಶಿಬಿರಗಳನ್ನು ಯೋಜಿಸಿ, ಸಮಾನ ಮನಸ್ಕ ವಿಜ್ಞಾನಿಗಳನ್ನು ಒಟ್ಟಗೂಡಿಸಿದ್ದಾರೆ. ಇವುಗಳಲ್ಲಿ ಏರ್ಪಡಿಸಿದ್ದ ಭಾಷಣಗಳು, ಕಮ್ಮಟಗಳಿಗೆ ಸಂಬಂಧಿಸಿದ ಪ್ರಬಂಧಗಳನ್ನು ಸಹೋದ್ಯೋಗಿಗಳೊಡನೆ ಹತ್ತು ಪುಸ್ತಕಗಳಾಗಿ ಸಂಪಾದಿಸಿದ್ದಾರೆ. ವಿಶ್ವೇಶ್ವರ ಅವರ ಸಂಶೋಧನಾ ಪ್ರಬಂಧಗಳ ಪಟ್ಟಿಯಂತೆ ಜನಪ್ರಿಯ ವಿಜ್ಞಾನ ಲೇಖನಗಳೂ ಹಾಗೂ ಭಾಷಣಗಳ ಪಟ್ಟಿಯೂ ಬಹಳ ಉದ್ದವಾಗಿವೆ. 2006ರಲ್ಲಿ ಅವರು ಕಪ್ಪು ಕುಳಿಗಳನ್ನು ಕುರಿತು ರಚಿಸಿದ ಜನಪ್ರಿಯ ವಿಜ್ಞಾನದ ಪುಸ್ತಕ, “Ensteins Enigma or Black Holes in My Bubble bath” ಬಹಳ ಒಳ್ಳೆಯ ವಿಮರ್ಶೆಗಳನ್ನು ಪಡೆದಿದೆ. ಇದರಲ್ಲಿ ವಿಜ್ಞಾನದ ಜೊತೆಗೆ ಇತಿಹಾಸ, ವೇದಾಂತ, ಸಾಹಿತ್ಯ ಮತ್ತು ಹಾಸ್ಯ ಮೇಳಯಿಸಿವೆ. ವಿಖ್ಯಾತ ವಿಜ್ಞಾನಿಗಳಾದ ರೋಜರ್ ಪೆನ್‌ರೋಸ್, ಚಾರ್ಲ್ಸ್ ಮಿಸ್ನೆರ್, ನೊಬೆಲ್ ಪುರಸ್ಕೃತ ಆಂಟನಿ ಲೆಗೆಟ್ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಶೋಧನೆ ಅವರ ಮುಖ್ಯ ಉದ್ದೇಶವಾಗಿದ್ದರೂ ಅದರಲ್ಲಿ ಮುಳುಗಿದಾಗ ಅವರಿಗೆ ದೊರೆತ ಅನುಭವ ಅಪಾರ. ಬೇರೆ ಬೇರೆ ದೇಶಗಳ ಪರಿಸರದಲ್ಲಿ ವಿಜ್ಞಾನದ ಬೆಳವಣಿಗೆಯನ್ನು ಗಮನಿಸುವಾಗ ಅವರನ್ನು ಆಕರ್ಷಿಸಿದ್ದು ಪ್ರಾಥಮಿಕ ಶಿಕ್ಷಣದ ಮಹತ್ವ. ಎಳೆಯ ಮನಸ್ಸಿನಲ್ಲೇ ಸಂಶೋಧನೆಯತ್ತ ಮನಸ್ಸನ್ನು ಹೊರಳಿಸುವುದು ಅಗತ್ಯ ಎಂಬುದು ಅವರ ಅಭಿಪ್ರಾಯ. ವೈಜ್ಞಾನಿಕ ಶಿಕ್ಷಣ ಕ್ರಮವನ್ನು ಬೆಂಬಲಿಸುವ ಅವರು, ಗುರುಗಳಾದ ಎಚ್ ಎನ್ ಅವರು ಬೆಂಗಳೂರು ಸೈನ್ಸ್ ಫೋರಂ ಆರಂಭಿಸಿದಾಗ ಭುಜಕ್ಕೆ ಭುಜ ಕೊಟ್ಟು ನಿಂತರು. ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಪ್ರತಿವಾರವೂ ವಿಜ್ಞಾನ ಭಾಷಣಗಳು, ವೈಜ್ಞಾನಿಕ ಚಲನಚಿತ್ರಗಳು, ಭಾಷಣ ಸ್ಪರ್ಧೆಗಳು ಮತ್ತು ಬೇಸಿಗೆ ಶಿಬಿರಗಳನ್ನು ಒಮ್ಮೆಯೂ ತಪ್ಪಿಸದೆ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿರುವ ಸಂಸ್ಥೆ ಇದು.
ಇದನ್ನೂ ಓದಿ | ನೊಬೆಲ್ ಪ್ರಶಸ್ತಿಯ ಪಡೆದ ಪೆನ್ರೋಸ್ ಸಂಶೋಧನೆಗೆ ಈ ಕನ್ನಡದ ವಿಜ್ಞಾನಿಯ ಅಧ್ಯಯನವೇ ಆಧಾರ | ಭಾಗ 1
ಸಂಶೋಧನೆ ಎಂಬ ಬೃಹತ್ ಮರದ ಬೀಜವನ್ನು ವಿಜ್ಞಾನ ಬೋಧನೆಯ ಕ್ರಮದಲ್ಲೇ ಬಿತ್ತಬೇಕು ಎಂಬುದನ್ನು ಅವರು ಮನಗಂಡರು. ವಿಜ್ಞಾನ ಬೋಧನೆಯನ್ನು ರಂಜನೀಯವನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಅದರಲ್ಲಿ ಆಸಕ್ತಿ ತಾನಾಗಿ ಮೂಡಿ ಬರುವಂತೆ ಮಾಡಬೇಕು ಎಂಬ ಆಶಯ ಅವರದು. ಇದನ್ನು ಸಾಕಾರಗೊಳಿಸುವ ಸುವರ್ಣಾವಕಾಶ ಅವರಿಗೆ ದೊರಕಿದ್ದು ಹೀಗೆ: ಬೆಂಗಳೂರು ಮಹಾನಗರ ಪಾಲಿಕೆ ತಾರಾಲಯವೊಂದನ್ನು ನಿರ್ಮಿಸಲು ಉದ್ದೇಶಿಸಿ ಜರ್ಮನಿಯಿಂದ ಉಪಕರಣಗಳನ್ನು ತರಿಸಿಕೊಂಡಿತು. ರಾಜಭವನದ ಪಕ್ಕದ ತ್ರಿಕೋಣಾಕಾರದ ಭೂಮಿಯಲ್ಲಿ ಕಟ್ಟಡವನ್ನು ಕಟ್ಟಿಸಿತು. ಇದನ್ನು ತಾರಾಲಯವನ್ನಾಗಿ ಪರಿವರ್ತಿಸಲು ವಿಶ್ವೇಶ್ವರ ಅವರನ್ನು ನಿರ್ದೇಶಕರನ್ನಾಗಿ ಆಯ್ದುಕೊಂಡಿತು. ಈ ಜವಾಬ್ದಾರಿ ಹಗುರವಾದುದ್ದೇನಾಗಿರಲಿಲ್ಲ. ತಾರಾಲಯದ ಕಾರ್ಯಕ್ಷಮತೆ ಮತ್ತು ಉದ್ದೇಶ ಇವುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಅದರ ಅಸ್ತಿತ್ವವನ್ನು ಸಾರ್ಥಕಗೊಳಿಸುವ ಮಹತ್ಕಾರ್ಯ ಆಗಬೇಕಾಗಿತ್ತು. 1989ರಲ್ಲಿ ತಾರಾಲಯ ಕಾರ್ಯಾರಂಭ ಮಾಡಿತು.

(ಇದು ಟಿ ಆರ್ ಅನಂತರಾಮು ಅವರು ಸಂಪಾದಿಸಿರುವ ‘ತ್ರಿವಿಕ್ರಮ ಹೆಜ್ಜೆಗಳು’ ಕೃತಿಯಲ್ಲಿ ಪ್ರಕಟವಾದ ಲೇಖನದ ಆಯ್ದ ಭಾಗ)