ಮಾಲಿನ್ಯ ನಿಯಂತ್ರಣ ಬಹಳ ಮುಖ್ಯ ಆದ್ಯತೆಯಾಗಿರುವ ಹೊತ್ತಲ್ಲಿ, ಹೊಸ ವಾಹನದ ನಿಯಮಗಳು ಜಾರಿ ತಯಾರಿ ನಡೆಯುತ್ತಿದೆ. ವಾಹನಗಳಿಂದ ಆಗುವ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಬರುತ್ತಿರುವ ಈ ನಿಯಮಗಳೇನು?

ಹೊಸ ವಾಹನಗಳು ಭಾರತ್ ಸ್ಟೇಜ್ 6 ಅಧಿನಿಯಮಗಳಿಗೆ ಬದ್ಧವಾಗಿರಬೇಕು ಎಂಬ ನಿಯಮ ಏಪ್ರಿಲ್ 2020ರಿಂದ ಜಾರಿಯಾಗಲಿದೆ. ಬಿಎಸ್6 ಎಂದರೇನು ಎಂಬುದಕ್ಕೆ ಸರಳ ಉತ್ತರ ಮಾಲಿನ್ಯ ನಿಯಂತ್ರಣ, ವಾಹನಗಳ ಎಂಜಿನ್ ಉಗುಳುವ ಹೊಗೆಯಲ್ಲಿ ಪರಸರಕ್ಕೆ ಹಾನಿಕಾರಕ ಅಂಶಗಳನ್ನು ಕಡಿಮೆಗೊಳಿಸುವುದು, ಅಷ್ಟೇ.
ಕಾರ್ಖಾನೆಗಳು ಹೊರಬಿಡುವ ಕಲುಷಿತ ನೀರು ಹಾಗೂ ಇತರೆ ರಾಸಾಯನಿಕಗಳನ್ನು ಮೊದಲು ಶುದ್ಧೀಕರಿಸಿ ನಂತರ ಹೊರಬಿಡಬೇಕು ಎಂಬ ನಿಯಮಗಳಿವೆ. ವಾಹನಗಳಿಂದಾಗುವ ವಾಯುಮಾಲಿನ್ಯವನ್ನೂ ಅದೇ ಪರಿಣಾಮದಲ್ಲಿ ತಡೆಗಟ್ಟಲು ಭಾರತ್ ಸ್ಟೇಜ್ ನಿಯಮಗಳು ದೇಶದಲ್ಲಿ 2000ನೇ ಇಸವಿಯಿಂದ ಜಾರಿಗೆ ಬಂತು. 2005ರಲ್ಲಿ ಬಿಎಸ್2, 2010ರಲ್ಲಿ ಬಿಎಸ್3 ಹಾಗೂ 2017ರಲ್ಲಿ ಬಿಎಸ್4 ನಿಯಮಗಳು ಜಾರಿಗೆ ಬಂದವು.
ಮಾಲಿನ್ಯ ನಿಯಂತ್ರಣಕ್ಕೆ ಏಕಾಏಕಿ ನಿಯಮಗಳನ್ನು ಜಾರಿಗೆ ತಂದರೆ ಅದು ಅಭಿವೃದ್ಧಿ ಹಾಗೂ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಬಿಎಸ್ ನಿಯಮಗಳನ್ನು ವಿವಿಧ ಹಂತದಲ್ಲಿ ಜಾರಿಗೆ ತರಲು ಆರಂಭದಲ್ಲೇ ತಿರ್ಮಾನಿಸಲಾಗಿತ್ತು.
ಇತಿಹಾಸ
ಸೈಲೆನ್ಸರ್ ಮೂಲಕ ಶಬ್ದ ಮಾಲಿನ್ಯ ಕಡಿಮೆ ಮಾಡುವಂತೆ ವಾಹನಗಳಿಂದಾಗುವ ವಾಯು ಮಾಲಿನ್ಯ ಕಡಿಮೆ ಮಾಡಲು ಹಲವು ದಾರಿಗಳಿವೆ. ಮೊದಲನೆಯದಾಗಿ ಇಂಜಿನ್‌ನ ಕ್ಷಮತೆ ಹೆಚ್ಚುಮಾಡುವುದು. ಹಾಗಾಗಿ ಕಡಿಮೆ ಇಂಧನ ಕ್ಷಮತೆಯಿರುವ 2 ಸ್ಟ್ರೋಕ್ ಎಂಜಿನ್ ಬಳಸುವ ಯಮಾಹಾ ಆರ್‌ಎಕ್ಸ್ 100, ಯೆಝಿ಼ಡಿ ರೋಡ್‌ಕಿಂಗ್ ಬೈಕ್‌ಗಳು 2000 ಇಸವಿಯ ತರುವಾಯ ಹೊಸ ವಾಹನ ಮಾರಾಟವನ್ನು ಸ್ಥಗಿತಗೊಳಿಸಬೇಕಾಯಿತು.
ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ಕ್ಯಾಟಲಿಟಿಕ್ ಕನ್ವರ್ಟರ್ ಅವಳಡಿಕೆಗೆ ವಾಹನ ತಯಾರಿಕಾ ಕಂಪನಿಗಳು ಮುಂದಾದವು. ಎಂಜಿನ್ನಿನ ಹೊಗೆ ಮೊದಲು ಕ್ಯಾಟಲಿಟಿಕ್ ಕನ್ವರ್ಟರ್‌ಗೆ ಹೋದಾಗ ಕೆಲವು ಹಾನಿಕಾರಕ ಅಂಶಗಳು ಶುಧ್ಧೀಕರಣಕ್ಕೆ ಒಳಗಾಗುತ್ತವೆ. ಪರಿಣಾಮವಾಗಿ ಯಮಾಹಾ ಕಂಪನಿ ಶಬ್ದ ಹಾಗೂ ಹೊಗೆಯನ್ನು ಕಡಿಮೆ ಪ್ರಮಾಣದಲ್ಲಿ ಸೂಸುವ ಆರ್‌ಎಕ್ಸ್ 135 ಮಾರುಕಟ್ಟೆಗಿಳಿಸಿತು.
ಇದೇ ಅವಧಿಯಲ್ಲಿ ಮೈಸೂರು ಮೂಲದ ಐಡಿಯಲ್ ಜಾವಾ ತನ್ನ ಯೆಝಿಡಿ ಬ್ರ್ಯಾಂಡನ ಬೈಕ್‌ಗಳಿಗೆ ಬದಲಾವಣೆ ತರಲು ಪ್ರಯತ್ನಿಸಿತು. ಆದರೆ ಅಷ್ಟರಲ್ಲಿ ರಸ್ತೆಗಿಳಿದ ಸುಝುಕಿ ಸಮುರಾಯ್, ಶೋಗನ್ ಹಾಗೂ ಶೌಲಿನ್ ಎದುರು ಎರಡನೇ ಮಾಹಾಯುದ್ಧ ಕಾಲದ ಮೂಲ ವಿನ್ಯಾಸವನ್ನೇ ಇಟ್ಟುಕೊಂಡು ಹೊಸ ಹೊರಮೈಯೊಂದಿಗೆ ಬಂದ ಐಡಿಯಲ್ ಜಾವಾದ ಇತರ ಬೈಕುಗಳು ಮಾರುಕಟ್ಟೆ ಹಿಡಿತ ಸಾಧಿಸಲಾಗದೆ ಕಂಪನಿ ಬಾಗಿಲು ಜಡಿಯಿತು.
ಬಿಎಸ್2 ನಿಯಮಗಳು ಜಾರಿಗೆ ಬಂದಾಗ ಅಷ್ಟೂ 2 ಸ್ಟ್ರೋಕ್ ಎಂಜಿನ್‌ಗಳು ನೇಪಥ್ಯಕ್ಕೆ ಸರಿಯಬೇಕಾಯಿತು. ಹಾಗಾಗಿ 80ರ ದಶಕದ ಉತ್ತರಾರ್ಧದಲ್ಲಿ ಬಂದ ಹೀರೋ ಹೋಂಡಾ 90ರ ದಶಕದ ಹೀರೋ ಆಗಿ ಉದಯಿಸಿತು. ಇತ್ತ ಬಜಾಜ್ ಕೂಡ 4 ಸ್ಟ್ರೋಕ್ ಎಂಜಿನ್ ಕಡೆಗೆ ತನ್ನೆಲ್ಲಾ ಗಮನ ಮುಡಿಪಾಗಿಟ್ಟಿತು. ಬಜಾಜ್ 4 ಸ್ಟ್ರೋಕ್ ಸ್ಕೂಟರ್ ಮಾರುಕಟ್ಟೆಗೆ ತರುವಾಗ ಅದಾಗಲೇ ಬಂದ ಹೋಂಡಾ ಆ್ಯಕ್ಟಿವಾದ ಎದುರು ಸ್ಪರ್ಧಿಸಲಾಗದೆ ಸೋತಿತು. ಅಷ್ಟರಲ್ಲಿ ಕ್ಯಾಲಿಬರ್, ಪಲ್ಸರ್‌ಗಳ ಯಶಸ್ಸು ಕಂಡ ಬಜಾಜ್ ತನ್ನ ಅಷ್ಟೂ ಸ್ಕೂಟರ್ ಶ್ರೇಣಿಗೆ ಇತಿಶ್ರೀ ಹಾಕಿತು.
ವರ್ತಮಾನ:
ಬಿಎಸ್4 ನಿಮಯಗಳು 2018 ರಿಂದ ದ್ವಿಚಕ್ರ ವಾಹನಗಳಿಗೆ ಜಾರಿಗೆ ಬಂದಾಗ ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಹೊಗೆಯನ್ನು ಮತ್ತಷ್ಟು ಶುದ್ಧೀಕರಿಸಿ ಹೊರಬಿಡುವ ತಂತ್ರಜ್ಞಾನವನ್ನು ವಾಹನ ಕಂಪನಿಗಳು ಅಳವಡಿಸಿಕೊಂಡವು.
ಕಾರುಗಳ ಪಾಲಿಗೆ ಕಾರ್ಬರೇಟರ್ ಉಳ್ಳ ಸರಳ ಎಂಜಿನ್ ಸಂಪೂರ್ಣ ನೇಪಥ್ಯಕ್ಕೆ ಸರಿದು ಹೆಚ್ಚು ಕ್ಷಮತೆಯ ಎಂಪಿಎಫ್ಐ (ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್) ತುಸು ಮೊದಲೇ ಮುನ್ನೆಲೆಗೆ ಬಂದಿದ್ದವು. ಹೆಚ್ಚು ಪಿಕಪ್ ಹಾಗೂ ಮೈಲೇಜ್ ನೀಡುವ ಇವುಗಳನ್ನು ಗ್ರಾಹಕರು ಸಹಜವಾಗಿಯೇ ಇಷ್ಟಪಟ್ಟರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್ ಸೆನ್ಸಾರ್ ಬಳಕೆಯಿದ್ದ ಕಾರಣ ಅಸಂಘಟಿತ ಮೆಕ್ಯಾನಿಕ್‌ಗಳ ಪಾಲಿಗೆ ರಿಪೇರಿ ಮೊದಮೊದಲು ಕ್ಲಿಷ್ಟವಾಯಿತು. ಕ್ರಮೇಣ ಅವರೂ ಕಾಲಕ್ಕೆ ತಕ್ಕಂತೆ ಮೇಲ್ದರ್ಜೆಗೇರಿದರು.
ಭವಿಷ್ಯದಲ್ಲಿ?
ಬಿಎಸ್ 4 ನಂತರ ನೇರವಾಗಿ ಬಿಎಸ್ 6 ನಿಯಮಗಳನ್ನು ಜಾರಿಗೆ ತರಲು ಸರಕಾರ ಮೂರು ವರ್ಷಗಳ ಹಿಂದೆಯೇ ತೀರ್ಮಾನಿಸಿತ್ತು. ಇದುವರೆಗಿನ ಬಿಎಸ್ ನಿಯಮಗಳಿಗಿಂತ ಈಗಿನ ಬಿಎಸ್6 ಹೆಚ್ಚು ಸೂಕ್ಷ್ಮ. ಡೀಸಿಲ್ ವಾಹನಗಳು ಸೂಸುವ ಹೊಗೆಯಲ್ಲಿ ಮಾಲಿನ್ಯ ಪ್ರಮಾಣ ಹಿಂದೆ ಇದ್ದುದಕ್ಕಿಂತ 20 ಪಟ್ಟು ಕಡಿಮೆ ಮಾಡಬೇಕಾದ ಅನಿವಾರ್ಯ ವಾಹನ ತಯಾರಿಕಾ ಕಂಪನಿಗಳಿಗೆ.
ಪೆಟ್ರೋಲ್ ಎಂಜಿನ್‌ನಲ್ಲಿ ಇದು ಅಷ್ಟೇನೂ ಕ್ಲಿಷ್ಟವಲ್ಲ. ಆದರೆ ಡೀಸಿಲ್ ಎಂಜಿನ್‌ಗಳು ಬಿಎಸ್6ಗೆ ಅನುಗುಣ ಇರಬೇಕಿದ್ದರೆ ಆಮೂಲಾಗ್ರ ಬದಲಾವಣೆ ಕಾಣಬೇಕು. ಏಕೆಂದರೆ ಬಿಎಸ್6 ಡೀಸಿಲ್‌ನಲ್ಲಿ ಗಂಧಕ (ಸಲ್ಫರ್) ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತದೆ. (ಅಂದಹಾಗೆ ಬಿಎಸ್6 ಎಂಜಿನ್ನೆಗೆ ಬಳಸುವ ಇಂಧನದಲ್ಲೂ ವ್ಯತ್ಯಾಸವಿದೆ. ಇದು ಈಗಾಗಲೇ ಹಂತ ಹಂತವಾಗಿ ಮಾರುಕಟ್ಟೆ ಪ್ರವೇಶಿಸಿದೆ) ಗಂಧಕ ಡೀಸಿಲ್‌ಗೆ ಕೊಂಚ ಪ್ರಮಾಣದಲ್ಲಿ ಜಿಡ್ಡಿನ ಅಂಶ ನೀಡುವ ಕಾರಣ ಇಂಜೆಕ್ಟರ್‌ನಂಥ ಭಾಗಗಳು ಹೆಚ್ಚಿನ ಘರ್ಷಣೆಗೆ ಒಳಗಾಗುತ್ತವೆ. ಹಾಗಾಗಿ ದೀರ್ಘಬಾಳಿಕೆಗೆ ಅವುಗಳನ್ನು ಮತ್ತಷ್ಟು ಸದೃಢ ಮಾಡಬೇಕಾದ ಕಾರಣ ವಿನ್ಯಾಸವನ್ನೇ ಬದಲಿಸಬೇಕಾದ ಅನಿವಾರ್ಯ ಎಂಜಿನ್ ತಯಾರಕರಿಗೆ.
ಜತೆಗೆ ಹೊಗೆಯಲ್ಲಿನ ಹಾರುಬೂದಿ ಅಂಶ ತಡೆಗಟ್ಟಲು ಫಿಲ್ಟರ್ ಅಳವಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಎರಡು ಟ್ಯಾಂಕ್ ಅಳವಡಿಸಬೇಕು. ಒಂದು ಡೀಸಿಲ್ಲಿಗಾದರೆ ಮತ್ತೊಂದು ಆ್ಯಡ್ ಬ್ಲೂ.
ಆ್ಯಡ್ ಬ್ಲೂ ಅಂದರೆ?
ಡೀಸಿಲ್ ಎಂಜಿನ್‌ನ ಹೊರಸೂಸುವ ನೈಟ್ರೋಜನ್ ಆಕ್ಸೈಡ್ ಕಡಿಮೆ ಮಾಡುವ ಕೆಲಸ ಆ್ಯಡ್ ಬ್ಲೂ ಮಾಡುತ್ತದೆ. ಆ್ಯಡ್ ಬ್ಲೂನಲ್ಲಿ ಪ್ರಮುಖವಾಗಿ ಇರುವುದು ಯೂರಿಯ. ಹೊರಸೂಸುವ ನೈಟ್ರೋಜನ್ ಆಕ್ಸೈಡ್‌ಯುಕ್ತ ಹೊಗೆ ಯೂರಿಯ ಸಂಪರ್ಕಕ್ಕೆ ಬಂದಾಗ ಸಾರಜನಕ-ಆಮ್ಲಜನಕ ಮತ್ತು ನೀರು ಪ್ರತ್ಯೇಕಗೊಂಡು ಹೊಗೆನಳಿಕೆಯ ಮೂಲಕ ಹೊರಬರುತ್ತವೆ. ಹಾಗಾಗಿ ಸೈಲೆನ್ಸರಿನಲ್ಲಿ ಬರುವ ಹೊಗೆ ಕಡಿಮೆ ಮಾಲಿನ್ಯಕಾರಕ ಅಂಶಗಳನ್ನು ಒಳಗೊಂಡಿರುತ್ತದೆ.
ಈ ವ್ಯವಸ್ಥೆಗಳ ಅಳವಡಿಕೆಗೆ ವಾಹನ ತಯಾರಿಕಾ ಕಂಪನಿಗಳಿಗೆ ಹೆಚ್ಚು ವೆಚ್ಚವಾಗುವ ಕಾರಣ ಹೊಸ ಕಾರುಗಳ ಬೆಲೆಯಲ್ಲಿ ಏರಿಕೆ ಸಹಜ. ಅಲ್ಲದೆ ಭಾರತದಲ್ಲಿ ಅತಿಹೆಚ್ಚಿನ ಕಾರು ಮಾಡೆಲ್‌ಗಳಲ್ಲಿ ಬಳಕೆಯಾಗುತ್ತಿದ್ದ ಫಿಯೆಟ್ ನಿರ್ಮಿತ 1.3 ಲೀಟರ್ (1300ಸಿಸಿ) ಡೀಸಿಲ್ ಎಂಜಿನ್‌ನಂಥ ಸಣ್ಣ ಎಂಜಿನ್‌ಗಳು ಹೆಚ್ಚಾಗಿ ಸಣ್ಣ ಕಾರಿಗೆ ಬಳಕೆಯಾಗುವ ಕಾರಣ ಹೊಸ ಬದಲಾವಣೆ ಜತೆಗೆ ಏರಿಕೆಯಾಗುವ ಬೆಲೆ ಸಣ್ಣ ಕಾರಿನ ಖರೀದಿದಾರರ ನಿಲುಕಿಗೆ ಮೀರಿದ್ದಾಗುವುದರಿಂದ ಸಣ್ಣ ಡೀಸಿಲ್ ಎಂಜಿನ್ನುಗಳ ತಯಾರಿಯನ್ನೇ ನಿಲ್ಲಿಸುವುದು ಬುದ್ಧಿವಂತಿಕೆಯ ನಿರ್ಧಾರ ಎಂದು ತಯಾರಕರು ತೀರ್ಮಾನಿಸಿದರು. ಮಾರುತಿ ಸುಝುಕಿಯ ಹಲವು ಕಾರುಗಳಲ್ಲೂ ಬಳಕೆಯಾಗುತ್ತಿದ್ದ 1.3 ಎಂಜಿನ್ನೆಗೆ ಬದಲು ಕಂಪನಿ ತನ್ನದೇ ವಿನ್ಯಾಸದ 1.5ಲೀ ಎಂಜಿನ್ ಮಾತ್ರವನ್ನೇ ಬಿಎಸ್6 ಅಧಿನಿಯಮಗಳಿಗೆ ಹೊಂದುವಂತೆ ಮರುವಿನ್ಯಾಸಗೊಳಿಸಿದೆ.
ಹೀಗೆ ಈ ನಿಯಮಗಳು ಕಂಪನಿಗಳ ಪಾಲಿನ ಚಿಂತೆಯೇ ಹೊರತು ಗ್ರಾಹಕನ ಪಾಲಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ಬೆಲೆ ಹೆಚ್ಚಾಗುತ್ತದೆ, ಎಂಜಿನ್ ಕ್ಲಿಷ್ಟವಾಗುತ್ತದೆ, ಮುಂದೆ ಹಾಳಾದಾಗ ಬದಲಾಯಿಸಲು ಬಿಡಿಭಾಗಗಳು ಹೆಚ್ಚುತ್ತವೆ ಎಂಬುದೇ ಗ್ರಾಹನ ಮೇಲಿನ ಪರಿಣಾಮ. ಪರಿಸರದ ಹಿತದೃಷ್ಟಿಯಿಂದ ನೋಡುವವರು ಇವುಗಳಿಗೆ ಹೆಚ್ಚು ತಲೆಕೊಡದೆ ಸಾಧ್ಯವಾದಷ್ಟೂ ನಡೆದೇ ಸಾಗಿ. ಸೈಕಲ್ ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚೆಚ್ಚು ಬಳಸಿ.