ಕಳೆದ ಎರಡು ತಿಂಗಳಲ್ಲಿ ರಾಜ್ಯ ಭೀಕರವಾದ ಪ್ರವಾಹ ಕಂಡು ಸಾವಿರಾರು ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ರಾಜ್ಯ ಸರ್ಕಾರ ನೆರವಿಗೆ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಲಿಲ್ಲ. ಆದರೆ ದೇಶದ ಜನ ಏನು ಮಾಡುತ್ತಿದ್ದಾರೆ, ಏನು ಮಾತಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಯಲು ದೊಡ್ಡ ಮೊತ್ತವನ್ನೇ ವೆಚ್ಚ ಮಾಡುತ್ತಿದೆ!

ಇತ್ತೀಚೆಗೆ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪನವರು ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು. ಇದು ಹಲವು ಟೀಕೆ, ವ್ಯಂಗ್ಯಗಳಿಗೆ ಆಹಾರವಾಯಿತು. ಕೇಂದ್ರದಲ್ಲಿ ತಮ್ಮದೇ ಪಕ್ಷದ ಅಧಿಕಾರದಲ್ಲಿದ್ದರೂ ಯಡಿಯೂರಪ್ಪನವರು ನೆರವು ತರಲಾಗದ ಅಸಹಾಯಕ ಸ್ಥಿತಿ ತಲುಪಿದ್ದು ಆಕ್ರೋಶಕ್ಕೂ ಅನುಕಂಪಕ್ಕೂ ಕಾರಣವಾಗಿದೆ.
ಮುಖ್ಯಮಂತ್ರಿಗಳ ಯಾವ ಮನವಿಗೂ ಸ್ಪಂದಿಸದ ಕೇಂದ್ರ ಸರ್ಕಾರ ಈಗ ದೇಶದ ನಾಗರಿಕರ ಮೇಲೆ ಕಣ್ಣಿಡಲು ಸುಮಾರು 3400 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿರುವ ಸುದ್ದಿ ಹೊರಬಂದಿದೆ. ಸ್ವತಃ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಈ ಯೋಜನೆಯ ಹೆಸರು ನ್ಯಾಷನಲ್ ಇಂಟೆಲಿಜನ್ಸ್ ಗ್ರಿಡ್!
ಮುಂಬೈನಲ್ಲಿ 2008ರಲ್ಲಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ತನಿಖಾ ದಳಗಳ ಜಾಲವನ್ನು ರೂಪಿಸಿತು. ಆಗಿನ ಗೃಹ ಮಂತ್ರಿ ಪಿ ಚಿದಂಬರಂ ಈ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಬಹಳ ಪ್ರಯತ್ನಸಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ವಲಸೆ, ಬ್ಯಾಂಕಿಂಗ್, ವ್ಯಕ್ತಿಗತ ತೆರಿಗೆದಾರರು, ವಾಯು ಮತ್ತು ರೈಲು ಪ್ರವಾಸ, ಅಪರಾಧಿಗಳ ಮಾಹಿತಿಗಳನ್ನು ಒಟ್ಟು ಮಾಡುವುದು ಯೋಜನೆಯ ಉದ್ದೇಶ.
ಮೊದಲ ಹಂತದಲ್ಲಿ ಸರ್ಕಾರಿ ಸಂಸ್ಥೆಗಳಾದ ಇಂಟೆಲಿಜೆನ್ಸ್ ಬ್ಯೂರೊ, ರಾ, ಸಿಬಿಐ, ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೋಟ್, ರೆವೆನ್ಯೂ ಇಂಟೆಲಿಜೆನ್ಸ್, ಸಿಬಿಡಿಟಿ, ಸಿಬಿಇಸಿ, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್, ಡೈರೆಕ್ಟರ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಸ್ ಅಂಡ್ ಇಂಟೆಲಿಜೆನ್ಸ್ ಹಾಗೂ ಎನ್‌ಸಿಬಿಗಳು ಮತ್ತು 21 ಸೇವಾದಾರರು ಈ ನ್ಯಾಟ್‌ಗ್ರಿಡ್ ಸಂಪರ್ಕ ಜಾಲದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ರೂಪಿಸಿತ್ತಾದರೂ, ಅಂದುಕೊಂಡ ವೇಗದಲ್ಲಿ ಜಾರಿಗೊಳಿಸಲಿಲ್ಲ. ಈಗ ಅಮಿತ್ ಶಾ ಹಲವು ಬದಲಾವಣೆಗಳೊಂದಿಗೆ 2020ರ ಜನವರಿಯ ಹೊತ್ತಿಗೆ ಜಾರಿ ಮಾಡುವ ಅವಸರದಲ್ಲಿದ್ದಾರೆ. ಆರಂಭದಲ್ಲಿ ಯೋಜನೆಯಲ್ಲಿ ಉಲ್ಲೇಖಿಸಿದ ಅಂಶಗಳ ಜತೆಗೆ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು, ಟೆಲಿಫೋನ್ ಸಂಭಾಷಣೆಯನ್ನು ಇದರ ವ್ಯಾಪ್ತಿಗೆ ತರಲಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲೇ ಇದರ ಡಾಟಾ ರಿಕವರಿ ಸೆಂಟರ್ ಅಸ್ತಿತ್ವಕ್ಕೆ ಬರಲಿದ್ದು, ದಕ್ಷಿಣ ದೆಹಲಿಯಲ್ಲಿ ಕಚೇರಿ ಸಂಕೀರ್ಣ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಖಾಸಗಿತನದ್ದೇ ಪ್ರಶ್ನೆ!
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಡಿಜಿಟಲ್ ವ್ಯವಸ್ಥೆಯ ಬಗ್ಗೆ ತೋರುತ್ತಿರುವ ಆಸ್ಥೆ, ಆಸಕ್ತಿಯೇ ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಭಾರತ ಇಂಟರ್ನೆಟ್‌ಅನ್ನು ವ್ಯಾಪಕವಾಗಿ ಬಳಸುತ್ತಿದೆ. ಆದರೆ ನಮ್ಮಲ್ಲಿ ಮಾಹಿತಿ ಸುರಕ್ಷತೆ, ಖಾಸಗಿತನ ಇತ್ಯಾದಿಗಳ ವಿಷಯದಲ್ಲಿ ಸ್ಪಷ್ಟ ಕಾನೂನು ರೂಪುಗೊಂಡಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಚೌಕಟ್ಟನ್ನು ರೂಪಿಸದೇ ಸರ್ಕಾರ ತಂತ್ರಜ್ಞಾನವನ್ನು ಜಾರಿಗೊಳಿಸುತ್ತಿದೆ ಎಂಬ ಟೀಕೆಗೆ ಗುರಿಯಾಗಿದೆ.
ಈಗ ನ್ಯಾಟ್‌ಗ್ರಿಡ್ ವಿಷಯದಲ್ಲೂ ಈ ಟೀಕೆ ತೀವ್ರವಾಗಿ ವ್ಯಕ್ತವಾಗುತ್ತಿದೆ. ಉಗ್ರ ನಿಗ್ರಹಕ್ಕಾಗಿ ರೂಪುಗೊಂಡ ಈ ಯೋಜನೆ ಈಗ ಇಡೀ ದೇಶದ ಪ್ರಜೆಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ಸ್ವರೂಪವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲೇ ಖಾಸಗಿತನದ ಚರ್ಚೆಯೂ ಆರಂಭವಾಗಿದೆ.
ಆಧಾರ್ ಅನ್ನು ತಿರಸ್ಕರಿಸುತ್ತಲೇ ಬಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಸೇವೆಗಳಿಗೂ ಕಡ್ಡಾಯಗೊಳಿಸುವ ಮೂಲಕ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಿತು ಎಂಬ ಆರೋಪ ಆಡಳಿತರೂಢ ಪಕ್ಷದ ಮೇಲಿತ್ತು. ಈಗ ನ್ಯಾಟ್‌ಗ್ರಿಡ್ ಮೂಲಕವೂ ದೇಶದ ನಾಗರಿಕರ ಮಾಹಿತಿಗಷ್ಟೇ ಅಲ್ಲದ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೆ, ಸಂಭಾಷಣೆಗಳ ಮೇಲೆ ಕಣ್ಣಿಡುವುಕ್ಕೆ ಮುಂದಾಗಿದೆ ಎಂಬ ಟೀಕೆ ಕೇಳಿಬರಲಾರಂಭಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನ್ಯಾಟ್‌ಗ್ರಿಡ್ ಕುರಿತು ‘ಟೆಕ್‌ಕನ್ನಡ’ದೊಂದಿಗೆ ಮಾತನಾಡಿದ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ ಸಂಸ್ಥೆಯ ಎಲೊನ್ನೆ ಹಿಕ್‌ಹಾಕ್ ಅವರೊಂದಿಗೆ ಟೆಕ್ ಕನ್ನಡ ಮಾತನಾಡಿದ ಹಲವು ಮಹತ್ವದ ಅಂಶಗಳತ್ತ ಗಮನಸೆಳೆದರು.

“ರಾಷ್ಟ್ರೀಯ ಸುರಕ್ಷತೆಯ ಉದ್ದೇಶಗಳಿಗಾಗಿ ಹಲವು ಮೂಲಗಳ ಡಾಟಾ ಮತ್ತು ವಿಶ್ಲೇಷಣೆಯನ್ನು ವಿವಿಧ ಮಾಹಿತಿ ಸಂಗ್ರಹ ಘಟಕಗಳನ್ನು ಒಂದೆಡೆ ತರುತ್ತಿರುವುದು ಈ ನ್ಯಾಟ್‌ಗ್ರಿಡ್ ಯೋಜನೆ. ಹಾಗಾಗಿ ಯಾವುದೇ ವ್ಯವಸ್ಥೆ ಮಾಹಿತಿ ಸಂಗ್ರಹ, ಲಭ್ಯತೆ, ವಿಶ್ಲೇಷಣೆ ಮತ್ತು ಮಾಹಿತಿಯ ಬಳಕೆಯ ಹಿನ್ನೆಲೆಯಲ್ಲಿ ನ್ಯಾಟ್‌ಗ್ರಿಡ್ ಯಾವುದೇ ವ್ಯಕ್ತಿ ಖಾಸಗಿತನವನ್ನು ಉಲ್ಲಂಘಿಸುವ ಮತ್ತು ಅಕ್ರಮವನ್ನು ಮಾಹಿತಿಯನ್ನು ಬಳಸಿಕೊಳ್ಳುವುದಕ್ಕೂ ಅವಕಾಶವಿದೆ. ಇಂಥ ವ್ಯವಸ್ಥೆಗೆ ಸೂಕ್ತ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಮಾನದಂಡಗಳಡಿ ಒಂದು ಚೌಕಟ್ಟನ್ನು ರೂಪಿಸುವುದು ಅತ್ಯಗತ್ಯ”
“ಪ್ರಸ್ತುತ ಭಾರತದ ಕಾನೂನು ಚೌಕಟ್ಟು- ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ಟೆಲಿಗ್ರಾಫ್ ಮತ್ತು ಅಪರಾಧ ಸಂಹಿತೆಯಡಿ ರೂಪಿಸಲಾಗಿದ್ದು, ಸಂವಹನಕ್ಕೆ ಅಡ್ಡಿ ಮಾಡುವ, ಮೇಲುಸ್ತುವಾರಿ ನಡೆಸುವ, ಮಾಹಿತಿ ಸಂಗ್ರಹಿಸುವ ಮತ್ತು ಸಂಗ್ರಹಿಸಿಟ್ಟ ಮಾಹಿತಿಗೆ ಪ್ರವೇಶಾವಕಾಶವನ್ನು ಕಲ್ಪಿಸುತ್ತದೆ”
ಎಲ್ಲೋನೆ ಹಿಕ್‌ಹಾಕ್, ಸಿಐಎಸ್-ಇಂಡಿಯಾ
ಭಾರತೀಯ ಸಂವಿಧಾನ 21ನೇ ಅನುಚ್ಛೇದವು ಪ್ರತಿಯೊಬ್ಬ ನಾಗರಿಕನಿಗೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡುತ್ತದೆ. ಸುಪ್ರೀಂ ಕೋರ್ಟ್, 2017ರಲ್ಲಿ ನಡೆದ ನ್ಯಾಯಮೂರ್ತಿ ಕೆ ಎಸ್ ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಖಾಸಗಿತನ ಮೂಲಭೂತ ಹಕ್ಕು ಎಂದು ವ್ಯಾಖ್ಯಾನಿಸಿತು. ಆದರೆ ಈ ಹಕ್ಕು ಪರಿಪೂರ್ಣವೇನಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ, ಸೆಕ್ಷನ್ 69ರಡಿ ಕೇಂದ್ರ ಸರ್ಕಾರ ಈ ಹಕ್ಕಿನ ಮೇಲೆ ದೇಶದ ಭದ್ರತೆಯ ಹೆಸರಿನಲ್ಲಿ ಯಾವುದೇ ರೀತಿಯ ಹೇರಿಕೆಯನ್ನು ಅನ್ವಯಿಸುವ ಶಕ್ತಿಯನ್ನು ಹೊಂದಿದೆ.
ಹಿಕ್‌ಹಾಕ್ ಈ ಕಾರಣಕ್ಕಾಗಿಯೇ ನ್ಯಾಟ್‌ಗ್ರಿಡ್ ಸ್ವರೂಪ ಮತ್ತು ಉದ್ದೇಶಗಳು ಸರಣಿ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎನ್ನುತ್ತಾರೆ.
- ನ್ಯಾಟ್‌ಗ್ರಿಡ್ ಮೂಲಕ ಸಂಗ್ರಹಿಸಲಾದ ಮಾಹಿತಿ ಲಭ್ಯತೆಗೆ ಅವಕಾಶ ಮಾಡಿಕೊಂಡುವ ನೆಲೆ ಮತ್ತು ಮಾನದಂಡಗಳು ಕಡ್ಢಾಯವೇ? ಅಂದರೆ ಅಧಿಕಾರ ನಿಡುವ ಪ್ರಕ್ರಿಯೆ, ಪ್ರಭುತ್ವದ ರಕ್ಷಣೆಯ ಉದ್ದೇಶ ಇತ್ಯಾದಿ..ಸರ್ಕಾರಿ ಸಂಸ್ಥೆಗಳನ್ನು ಇದರ ಅಗತ್ಯವನ್ನು ಪ್ರದರ್ಶಿಬೇಕೆ?
- ಎಷ್ಟು ಪ್ರಮಾಣದ ಮಾಹಿತಿಯನ್ನು ಪಡೆಯಬಹುದು ಎಂಬ ಮಿತಿಯೇನಾದರೂ ಇದೆಯೇ? ಅಂದರೆ ಇಷ್ಟು ಪ್ರಮಾಣದ ಮಾಹಿತಿ ಎಂದು ಮೊದಲೇ ನಿರ್ಧರಿಸಲಾಗುತ್ತದೆಯೇ ಅಥವಾ ಡಾಟಾಬೇಸ್‌ನಲ್ಲಿರುವ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದೆ?
- ಹೇಗೆ ಮಾಹಿತಿಯನ್ನು ಬಳಸಿಕೊಳ್ಳಬೇಕು ಎಂಬುದಕ್ಕೆ ಮಿತಿಯಿದೆಯೇ? ನಿರ್ದಿಷ್ಟ ಕಾರಣಗಳಿಗೆ ಸೀಮಿತಗೊಳಿಸಲಾಗಿದೆಯೇ? ಸಂಗ್ರಹಿಸಲಾದ ಮಾಹಿತಿಯ ಉದ್ದೇಶವನ್ನು ಪುನಃ ಬದಲಿಸಬಹುದೆ? ನ್ಯಾಟ್‌ಗ್ರಿಡ್‌ನಲ್ಲಿರುವ ಮಾಹಿತಿ ವಿಶ್ಲೇಷಣೆಗೆ ಆಲ್ಗರಿದಂ ಬಳಸಬಹುದೆ?
- ಸಂಗ್ರಹಿಸಲಾದ ಮಾಹಿತಿಯನ್ನು ಎಷ್ಟು ಕಾಲ ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದಕ್ಕೆ ಮಿತಿಯಿದೆಯೇ? ಒಮ್ಮೆ ಬಳಸಿದ ನಂತರ ಸರ್ಕಾರಿ ಸಂಸ್ಥೆಗಳ ಬಳಿ ಮಾಹಿತಿ ಎಷ್ಟು ಅವಧಿಯವರೆಗೆ ಇಟ್ಟುಕೊಳ್ಳಬಹುದು ಎಂಬ ಸೂಚನೆ ಇದೆಯೆ?
- ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಗೆ ನಿರ್ದಿಷ್ಟ ಕ್ರಮವಿದೆಯೇ? ಮಾಹಿತಿಯ ದುರ್ಬಳಕೆಗೆ ಶಿಕ್ಷೆ ಅಥವಾ ಬಳಸುವ ಹಕ್ಕುಗಳಿಗೆ ಮಾರ್ಗಸೂಚಿಯೇನಾದರೂ ಇದೆಯೆ?
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳ ಪ್ರಕಾರ ಯಾವುದೇ ಆಡಳಿತ ವ್ಯವಸ್ಥೆ ಮಾನವ ಹಕ್ಕುಗಳಲ್ಲಿ ಮಧ್ಯೆಪ್ರವೇಶಿಸುವುದು, ಕಾನೂನು, ನೈತಿಕ ಉದ್ದೇಶ, ಅಗತ್ಯ, ಪ್ರಮಾಣ ಮತ್ತು ಸೂಕ್ತ ಪ್ರಕ್ರಿಯೆಯ ನಿಯಮಗಳಿಗೆ ಒಳಪಡುತ್ತದೆ. ಇಂತಹ ಕ್ರಮಗಳು ಕಾನೂನು ಪರಿಧಿಯಲ್ಲಿ ಮತ್ತು ಸಾರ್ವಜನಿಕ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎನ್ನುವುದು ಹಿಕ್‌ಹಾಕ್ ಅಭಿಮತ.
ರಾಷ್ಟ್ರೀಯ ಸುರಕ್ಷತೆಯ ಹೆಸರಿನಲ್ಲಿ ದೇಶದ ನಾಗರಿಕರ ಮೂಲಭೂತ ಹಕ್ಕನ್ನು ಕಸಿಯಬಹುದೆ? ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಆಡಳಿತಾರೂಢ ಸರ್ಕಾರದ ಆದ್ಯತೆಗಳು ಜೀವ ವಿರೋಧಿ ಕಾಣುತ್ತಿವೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.