ಕೇಂದ್ರದ ಹೊಸ ಖಾಸಗಿ ನಿಯಮ ; ಹೈಕೋರ್ಟ್‌ ಮೆಟ್ಟಿಲೇರಿದ ವಾಟ್ಸ್‌ಆಪ್‌

ಕಳೆದ ಕೆಲವು ದಿನಗಳಿಂದ ವಾಟ್ಸ್‌ಆಪ್‌ ಹಾಗೂ ಟ್ವಿಟರ್‌ಗಳ ನಿಯಮಗಳ ಕಾರಣದಿಂದಾಗಿ ಮುಜುಗರ ಅನುಭವಿಸುತ್ತಿದ್ದ ಕೇಂದ್ರ ಸರ್ಕಾರ ಹೊಸ ಖಾಸಗಿನೀತಿಯನ್ನು ಜಾರಿಗೆ ತಂದಿದೆ. ವಾಟ್ಸ್‌ ಆಪ್‌ ಈಗ ಕೇಂದ್ರದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದೆ

ಇಂದಿನಿಂದ ಜಾರಿಗೆ ಬರಬೇಕಿರುವ ಕೇಂದ್ರ ಸರಕಾರದ ಹೊಸ ಖಾಸಗಿತನ ನೀತಿ ವಿರುದ್ಧ ಫೇಸ್ಬುಕ್ ಒಡೆತನದ ವಾಟ್ಸಾಪ್ ಮಂಗಳವಾರ ಸಂಜೆ ದೆಹಲಿ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದೆ. ಈ ನೀತಿ ಸಾರ್ವಜನಿಕರ ಖಾಸಗಿತನ ಮತ್ತು ಗೋಪ್ಯತೆಗೆ ಧಕ್ಕೆ ತರುವ ಮೂಲಕ ಪ್ರಜೆಗಳ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಕಂಪನಿ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾನೂನು ಪ್ರಕಾರ ಅಪರಾಧಿ‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಖಾತರಿಯಾದವರು ಕಳುಹಿಸಿದ ಸಂದೇಶಗಳನ್ನು ಸರಕಾರಕ್ಕೆ ಒಪ್ಪಿಸಬೇಕು. ವಾಟ್ಸಾಪ್ ಹೇಳುವ ಪ್ರಕಾರ ಈ ನಿಯಮ ಅಸಾಂವಿಧಾನಿಕ. ಏಕೆಂದರೆ ಪ್ರಸ್ತುತ ಯಾರೇ ಕಳುಹಿಸುವ ಸಂದೇಶಗಳು ವಾಟ್ಸಾಪ್‌‌ನ ಸರ್ವರ್‌ಗಳಲ್ಲಿ ಗೋಪ್ಯವಾಗಿ ಮಾತ್ರವೇ ದಾಖಲಾಗುತ್ತದೆ, ಎಂಡ್ ಟು ಎಂಡ್ ಎನ್ಕ್ರಿಪ್ಷನ್ (ತುದಿಯಿಂದ ಕಡೆಯವರೆಗೆ ಗೋಪ್ಯತೆ) ಮಾದರಿಯಲ್ಲಿ ಸಂದೇಶಗಳು ರವಾನೆಯಾಗುವ ಕಾರಣ ಅವುಗಳನ್ನು ಸ್ವತಃ ವಾಟ್ಸಾಪ್ ಕೂಡ ಓದಲು ಸಾಧ್ಯವಾಗುವುದಿಲ್ಲ.

ಆದರೆ ಅಗತ್ಯವಾದಲ್ಲಿ ಯಾವುದೇ ಒಂದು ಸಂದೇಶದ ಮೂಲ ಹುಡುಕಬೇಕು ಎಂದರೆ, ಸರಳವಾಗಿ ಹೇಳುವುದಾದರೆ ಫಾರ್ವರ್ಡ್ ಮೆಸೇಜುಗಳನ್ನು ಮೊದಲು ಕಳುಹಿಸಿದವರು ಯಾರು ಎಂದು ಪತ್ತೆಹಚ್ಚಬೇಕು ಎಂದಿದ್ದರೆ ವಾಟ್ಸಾಪ್ ತನ್ನ ತಂತ್ರಜ್ಞಾನ ಮಾದರಿಯ ಮೂಲದಲ್ಲೇ ಬದಲಾವಣೆ‌ಮಾಡಿಕೊಳ್ಳಬೇಕು. ರವಾನೆಯಾಗುವ ಅಷ್ಟೂ ಮೆಸೇಜುಗಳನ್ನು ಅಗತ್ಯವಿದ್ದಾಗ ಆಂತರಿಕವಾಗಿ ನೋಡಿವ ವ್ಯವಸ್ಥೆ ಮಾಡಿಕೊಳ್ಳಬೇಕು‌. ಇದು ಅಷ್ಟೂ ಮೆಸೇಜುಗಳಿಗೂ ಇರುವ ಗೋಪ್ಯತೆಯ ರಕ್ಷಾ ಕವಚವನ್ನು ತೆಗೆದುಹಾಕುತ್ತದೆ. ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸುಮಾರು 40 ಕೋಟಿ ಬಳಕೆದಾರರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಾಟ್ಸಾಪ್ ತಿಳಿಸಿದೆ.

ಬಳಕೆದಾರರ ಮಾಹಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಒದಗಿಸಬೇಕು ಎಂಬ ವಿಚಾರದ ಬಗ್ಗೆ ಮೋದಿ ಸರಕಾರ ಮತ್ತು ಫೇಸ್‌ಬುಕ್, ಗೂಗಲ್ ಹಾಗೂ ಟ್ವಿಟ್ಟರ್ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಕಾಂಗ್ರೆಸ್‌ನ ಟೂಲ್‌ ಕಿಟ್ ಎಂಬ ವಿಚಾರವಾಗಿ ಕಾಂಗ್ರೆಸ್‌ ಪಕ್ಷದ ಲೆಟರ್‌ಹೆಡ್ ಹೊಂದಿರುವ ಪೋಟೋಗಳನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದರು. ಅವರು ಮಾಡಿದ ಈ ಟ್ವೀಟ್ ಹಾಗೂ ಇದೇ ವಿಚಾರವಾಗಿ ಬಿಜೆಪಿಯ ಇನ್ನೂ ಕೆಲವು ಸಂಸದರು ಮಾಡಿದ ಟ್ವೀಟ್‌ಗಳನ್ನು “ಮ್ಯಾನಿಪುಲೇಟೆಡ್ ಮೀಡಿಯಾ” ಅರ್ಥಾತ್ ತಿರುಚಲ್ಪಟ್ಟ ಫೋಟೋಗಳು ಎಂದು ಟ್ವಿಟ್ಟರ್ ನಮೂದಿಸಿತ್ತು. ಈ ಬಗ್ಗೆ ಬಿಜೆಪಿ ತಕರಾರು ತೆಗೆದರೂ ಟ್ವಿಟ್ಟರ್ ಜಗ್ಗಲಿಲ್ಲ‌.

ಇದೇವೇಳೆ ಕೋವಿಡ್ ಬಗೆಗೆ ದಾಖಲಾದ ತಪ್ಪು ಮಾಹಿತಿಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಕೇಂದ್ರ ಸರಕಾರದ ವಿರುದ್ಧ ಟೀಕಿಸಿದ ಕೆಲವು ಬರಹಗಳನ್ನೂ ತೆಗೆದುಹಾಕಬೇಕು ಎಂದು ಕೇಂದ್ರ ಸರಕಾರ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗೆ ಒತ್ತಡ ಹೇರಿತ್ತು.

ಇಂದಿನಿಂದ ಜಾರಿಗೆ ತರಲು ಉದ್ದೇಶಿರುವ ಹೊಸ ಕಾನೂನು ಪ್ರಕಾರ ಯಾವುದೇ ಕಂಟೆಂಟ್ ಬಗೆಗೆ ಸರಕಾರ ನೋಟಿಸ್ ನೀಡಿದ 36 ಗಂಟೆಗಳ ಒಳಗೆ ಅದನ್ನು ಜಾಲತಾಣದಿಂದ ತೆಗೆದುಹಾಕಬೇಕು. ಅಂತೆಯೇ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳನ್ನು ವಾಟ್ಸಾಪ್ ಹಾಗೂ ಇತರೆ ಮಾಧ್ಯಮದ ಮೂಲಕ ಹಂಚಿಕೊಳ್ಳುವುದನ್ನು ತಡೆಯಲು ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಬೇಕು ಎಂದೂ ಹೊಸ ನೀತಿಯಲ್ಲಿದೆ.

ಸರಕಾರ ನಮೂದಿಸಿರುವ ಹಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಫೇಸ್ಬುಕ್ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದರೂ ಎಲ್ಲಾ ವಿಚಾರಗಳನ್ನೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.

ಒಂದೆಡೆ ಈ ಬಗ್ಗೆ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವ ವರೆಗೆ ಹೊಸ ಕಾನೂನು ಜಾರಿಗೆ ಬರಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರೆ ಮತ್ತೊಂದೆಡೆ ದೆಹಲಿ ಹೈಕೋರ್ಟಿನಲ್ಲಿ ಹೂಡಲಾದ ದಾವೆ ವಿಚಾರಣೆಗೆ ರಿಜಿಸ್ಟ್ರಾರ್‌ರಿಂದ ಇನ್ನೂ ಅನುಮತಿ ದೊರೆತಿಲ್ಲ. ಕೇರಳ ಹೈಕೋರ್ಟಿನಲ್ಲೂ ಖಾಸಗೀತನ ಕುರಿತಾಗಿ ಏಪ್ರಿಲ್‌ನಲ್ಲಿ ಹೂಡಲಾದ ದಾವೆ ವಿಚಾರಣೆಗೆ ಬರಲು ದಿನಕಾಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.