ಸೆಪ್ಟೆಂಬರ್‌ 7ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಚಂದ್ರಯಾನ -2

ಕಡೆಯ ಕ್ಷಣದ ಸವಾಲುಗಳನ್ನು ಎದುರಿಸಿ ನಭಕ್ಕೆ ಜಿಗಿದಿದ್ದ ಚಂದ್ರಯಾನ -2ರ ನೌಕೆ ಚಂದ್ರ ಮೇಲ್ಮೈ ಸ್ಪರ್ಶಿಸುವುದಕ್ಕೆ ಸಿದ್ಧವಾಗಿದೆ. ಕಕ್ಷೆಯಲ್ಲಿ ಸುತ್ತುತ್ತಿರುವ ನೌಕೆಯ ಉಡ್ಡಯನಗೊಂಡ 48ನೇ ದಿನ ಚಂದ್ರನ ಮೇಲೆ ಇಳಿಯಲಿದೆ

ಜುಲೈ 22ರಂದು ಉಡಾವಣೆಗೊಂಡ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯಾತ್ರೆಯ ಅಂತಿಮ ಘಟ್ಟದಲ್ಲಿದ್ದು  ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಭಾಗದಲ್ಲಿ ಇಳಿಯಲಿದೆ.

ಡಾ. ವಿಕ್ರಂ ಸಾರಾಭಾಯ್ ಗೌರವಾರ್ಥ ಹೆಸರಿಸಲಾದ ಲ್ಯಾಂಡಿಂಗ್ ವಾಹನ ‘ವಿಕ್ರಂ’ ಆಗಸ್ಟ್ 14ರಂದು ಚಂದ್ರನ ಕಕ್ಷೆ ಪ್ರವೇಶ ಮಾಡಿದೆ. ದಕ್ಷಿಣ ಧ್ರುವದ ಭಾಗದಲ್ಲಿ ಚಂದ್ರನ ಮೇಲೆ ಇಳಿಯಲು ವೇಗ ಇಳಿಸುವಿಕೆ ಮತ್ತು ಸೂಕ್ತ ಹಾದಿ ಹಿಡಿಯುವಿಕೆಗಾಗಿ ವಿವಿಧ ಹಂತಗಳಲ್ಲಿ ವಿಕ್ರಂ ಅನ್ನು ನಿಯಂತ್ರಿಸಲಾಗುತ್ತಿದ್ದು ಸೆ. 7ರಂದು ನಸುಕಿನ ವೇಳೆ 1.40ಕ್ಕೆ ಚಂದ್ರನ ಮೇಲೆ ಇಳಿದು 1.55ಕ್ಕೆ ಪೂರ್ಣಗೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-2 ನೌಕೆಯಿಂದ ಸೆರೆಹಿಡಿಯಲಾದ ಚಂದ್ರನ ಮೊದಲ ಚಿತ್ರ

“ಇದೊಂದು ಜಾಗತಿಕ ಮಟ್ಟದ ಬಹುಮುಖ್ಯ ಘಟನೆ. ಎಲ್ಲರೂ ಇದನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ” ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಚೆನ್ನೈ‌ನಲ್ಲಿ ಮಾಧ್ಯಮ ಸಂವಹನ ವೇಳೆ ಹೇಳಿದರು. ಇನ್ನೂ ಮೂರು ಹಂತಗಳ ನಿಯಂತ್ರಿಸುವಿಕೆ ಬಾಕಿಯಿದ್ದು ಸೆ.2ರಂದು ಆರ್ಬಿಟರ್ ಲ್ಯಾಂಡರ್‌ನಿಂದ ಪ್ರತ್ಯೇಕವಾಗಲಿದ್ದು ಚಂದ್ರನ ಮೇಲೆ 100 x 30ರ ಕಕ್ಷೆ ಪ್ರವೇಶಿಸುತ್ತದೆ ಎಂದ ಅವರು ನಂತರ ಹಲವು ಸರಣಿಗಳ ಕ್ಷಿಷ್ಟ ಬ್ರೇಕಿಂಗ್ ಮೂಲಕ ಲ್ಯಾಂಡರನ್ನು ನಿಯಂತ್ರಿಸಿ ಚಂದ್ರನ ದಕ್ಷಿಣ ಧ್ರುವದ ಭಾಗಕ್ಕೆ ಇಳಿಸಲಾಗುವುದು ಎಂದರು.

ಕ್ವಿಝ್‌ನಲ್ಲಿ ಗೆದ್ದ ಶಾಲಾ ವಿದ್ಯಾರ್ಥಿಗೆ ಚಂದ್ರಯಾನ 2 ಲ್ಯಾಂಡಿಂಗ್ ವೀಕ್ಷಣೆ:
ಎಂಟರಿಂದ ಹತ್ತನೇ ತರಗತಿ ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಇಸ್ರೋ ಆನ್‌ಲೈನ್ ಮೂಲಕ ನಡೆಸಲಾರ ರಸಪ್ರಶ್ನೆಯಲ್ಲಿ ಪ್ರತಿ ರಾಜ್ಯದಿಂದ ಗೆದ್ದ ಇಬ್ಬರು ವಿದ್ಯಾರ್ಥಿಗಳನ್ನು ಸೆ.7ರಂದು ಚಂದ್ರಯಾನ 2ರ ಲ್ಯಾಂಡಿಂಗ್ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಆಗಸ್ಟ್ 25ಕ್ಕೆ ಕೊನೆಗೊಂಡ ರಸಪ್ರಶ್ನೆ ಕಾರ್ಯಕ್ರಮವನ್ನು mygov.in ಮೂಲಕ ನಡೆಸಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು 10 ನಿಮಿಷಗಳಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು.