ಕೇವಲ 25,000 ರೂ.ಗಳಿಗೆ ಫೋಲ್ಡಬಲ್‌ ಫೋನ್‌, ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಫೋಲ್ಡ್‌ 1!

ಸ್ಯಾಮ್‌ಸಂಗ್‌, ಮೋಟೊರೊಲಾ, ಆಪಲ್‌ ಎಲ್ಲರೂ ಫೋಲ್ಡಬಲ್‌ ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಭರದಲ್ಲಿ ಸಿದ್ಧತೆ ನಡೆಸುತ್ತಿದ್ದರೆ, ಇಂಗ್ಲೆಂಡ್‌ ಮೂಲದ ಫೋಲ್ಡ್‌ 1 ಸ್ಮಾರ್ಟ್‌ ಫೋನ್‌ ಅಗ್ಗದ ದರ, ಅದ್ಭುತ ಫೀಚರ್‌ಗಳಿಂದಾಗಿ ದೊಡ್ಡ ಸದ್ದು ಮಾಡುತ್ತಿದೆ. ಈ ಫೋನ್ ಹೇಗಿದೆ? ಇದರಲ್ಲಿ ಏನಿದೆ? ಮುಂದೆ ಓದಿ

”ಒಮ್ಮೆ ಸ್ಟೀವ್‌ ಜಾಬ್ಸ್‌ ಆಕಾಶವನ್ನು ನೋಡಿದ. ಅಲ್ಲಿ ಪಾಬ್ಲೋ ಎಸ್ಕೋಬಾರ್‌ ಯಾರ ಕಲ್ಪನೆಗೂ ಸಿಗದಂತಹ ಒಂದು ಫೋನ್‌ ಹಿಡಿದು ನಿಂತಿರುವುದು ಕಾಣಿಸಿತು..”

ಇದು ವಿಶ್ವದ ಅಗ್ಗದ ಫೋಲ್ಡಬಲ್‌ ಫೋನ್‌ ಎಂದು ಸುದ್ದಿ ಮಾಡುತ್ತಿರುವ ಎಸ್ಕೋಬಾರ್‌ ಕಂಪನಿಯ ‘ಫೋಲ್ಡ್‌1’ ಫೋನಿನ ಜಾಹೀರಾತು!

ಮಾದಕ ಪದಾರ್ಥಗಳ ದಂಧೆಯಲ್ಲಿ ಕುಖ್ಯಾತನಾಗಿರುವ ಪಾಬ್ಲೊ ಎಸ್ಕೊಬಾರ್‌ ಸೋದರ ರಾಬರ್ಟೊ ಡಿ ಜೀಸಸ್‌, ಎಸ್ಕೋಬಾರ್‌, ತನ್ನ ಕಂಪನಿಯಾದ ಎಸ್ಕೋಬಾರ್‌ ಇಂಕ್‌ ಮೂಲಕ ಈ ಹೊಸ ಸ್ಮಾರ್ಟ್‌ ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

ಕೇವಲ 349 ಡಾಲರ್‌ ಅಂದರೆ ಸುಮಾರು 25,000 ರೂ.ಗಳಿಗೆ ಲಭ್ಯವಾಗಲಿರುವ ಈ ಸ್ಮಾರ್ಟ್‌ಫೋನ್‌ 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಸ್ಟೋರೇಜ್‌ನೊಂದಿಗೆ ಲಭ್ಯವಿದೆ. 8 ಜಿಬಿ ಮತ್ತು 512ಸ್ಟೋರೇಜ್‌ನ ಫೋಲ್ಡ್‌ 1 ಫೋನು 35,000 ರೂ.ಗಳಿಗೆ ಲಭ್ಯವಿದೆ.

ಇದು ಆಂಡ್ರಾಯ್ಡ್‌ ಫೋನ್‌ ಆಗಿದ್ದು 2.8 ಗಿಗಾ ಹರ್ಟ್ಸ್, ಆಕ್ಟಾ ಕೋರ್‌ ಪ್ರೊಸೆಸರ್ ಹೊಂದಿದೆ. ಅಮೋಲ್ಡ್‌ ಸ್ಕ್ರೀನ್‌ ಇರುವ ಈ ಫೋನ್‌ ಗಾತ್ರ 7.8 ಇಂಚುಗಳು. 4000ಎಂಎಎಚ್‌ ಸಾಮರ್ಥ್ಯವಿರುವ ಬ್ಯಾಟರಿ, 16 ಮೆಗಾ ಪಿಕ್ಸೆಲ್ಸ್‌ ಮತ್ತು 20 ಮೆಗಾ ಪಿಕ್ಸೆಲ್‌ಗಳ ಎರಡು ಕ್ಯಾಮೆರಗಾಗಳು. ಎರಡು ಸಿಮ್‌ ಸ್ಲಾಟ್‌ಗಳನ್ನು ಒಳಗೊಂಡಿದೆ.

ಈ ಫೋನಿನ ಸ್ಕ್ರೀನ್‌ ಅನ್ನು ವಿಶೇಷವಾದ ಪ್ಲಾಸ್ಟಿಕ್‌ನಿಂದ ಮಾಡಿದ್ದಾಗಿದ್ದು, ಒಡೆಯುವ ಸಾಧ್ಯತೆಗಳು ಅತ್ಯಂತ ಕಡಿಮೆ ಎಂದು ಕಂಪನಿ ಹೇಳಿದೆ. ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ ಫೋಲ್ಡ್‌ ಸ್ಕ್ರೀನ್‌ನ ಸಮಸ್ಯೆ ಎದುರಿಸುತ್ತಿರುವುದು ಇತ್ತೀಚೆಗೆ ಸುದ್ದಿಯಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ, ಮಾರುಕಟ್ಟೆ ಬರುತ್ತಿರುವ ಫೋಲ್ಡಬಲ್‌ ಫೋನ್‌ಗಳು ಅತ್ಯಂತ ದುಬಾರಿ. ಲಕ್ಷದ ಆಸುಪಾಸಿನಲ್ಲಿರುವ ಈ ಫೋನ್‌ಗಳನ್ನು ಮಧ್ಯವರ್ತಿಗಳ ಹೋಗುವ ಹಣವನ್ನು ತಪ್ಪಿಸಿ, ಗ್ರಾಹಕರಿಗೆ ಅಗ್ಗದ ದರದಲ್ಲಿ ಫೋನ್‌ ಲಭ್ಯವಾಗುವಂತೆ ಮಾಡಬೇಕೆಂದು ಎಸ್ಕೋಬಾರ್‌ನ ಉದ್ದೇಶ.

ಉಚಿತ ಶಿಪ್ಪಿಂಗ್‌ ವ್ಯವಸ್ಥೆ ಇದ್ದು, ಅಮೆರಿಕದ ಸೇರಿದಂತೆ ಜಗತ್ತಿನ ಯಾವುದೇ ನೆಟ್‌ವರ್ಕ್‌ನೊಂದಿಗೆ ಬಳಸುವುದಕ್ಕೆ ತೊಂದರೆಇಲ್ಲ.

ಎಸ್ಕೋಬಾರ್‌ ತನ್ನ ಅಂಗ ಸಂಸ್ಥೆಯಾದ ಪಾಬ್ಲೊ ಫೋನ್‌ ಲಿಮಿಟೆಡ್‌ ಮೂಲಕ ಹಾಂಕಾಂಗ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಉತ್ಪಾದಿಸುತ್ತಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಆಪಲ್‌, ಸ್ಯಾಮ್‌ಸಂಗ್‌ ಸಂಸ್ಥೆಗಳು ಹಳೆಯ ತಂತ್ರಜ್ಞಾನವನ್ನು ಬಳಸಿಕೊಂಡು, ಹೊಸದೆಂಬಂತೆ ಮಾರುಕಟ್ಟೆಗೆ ತರುತ್ತವೆ ಎಂದಿದೆ.

ದರ ಹಾಗೂ ಹೊಸ ತಂತ್ರಜ್ಞಾನದ ಮೂಲಕ ಆಪಲ್‌ ಸೇರಿದಂತೆ ಎಲ್ಲ ಪ್ರಮುಖ ಸ್ಮಾರ್ಟ್‌ ಫೋನ್‌ ಕಂಪನಿಗಳಿಗೆ ಸಡ್ಡು ಹೊಡೆಯುವ ವಿಶ್ವಾಸದಲ್ಲಿರುವ ಎಸ್ಕೊಬಾರ್‌ ಸಂಸ್ಥೆ, ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ.

ಆಪಲ್‌ ನೊಂದಿಗೆ ಇವರ ಸ್ಪರ್ಧೆ!!

ಇಡೀ ಟೆಕ್‌ ಉದ್ಯಮ ಆಪಲ್‌ ಸಂಸ್ಥೆಯ ಬಗ್ಗೆ ಅಸೂಯೆಯನ್ನು ಹೊಂದಿರುವುದು ಜಗ್ಗಜಾಹೀರು. ಈಗ ಈ ಪಟ್ಟಿಗೆ ಎಸ್ಕೋಬಾರ್‌ ಕೂಡ ಸೇರಿಕೊಂಡಿದೆ. ಇದು ಬರೀ ಅಸೂಯೆ ಪಟ್ಟುವುದಕ್ಕಷ್ಟೇ ಸೀಮಿತವಾಗದೆ, ಪಾಬ್ಲೊ ಎಸ್ಕೊಬಾರ್‌ ಹಿರಿಮೆಯನ್ನು ಎತ್ತಿಹಿಡಿಯುವ ವಿಶೇಷ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಆಪಲ್‌ ಹಿಂದಿಕ್ಕುತ್ತೇವೆ ಎಂದು ಹೇಳಿಕೊಂಡಿದೆ.

ಇದೇ ಕಾರಣಕ್ಕೆ ಫೋಲ್ಡ್‌ 1 ಜಾಹೀರಾತಿನಲ್ಲಿ ಸ್ಟೀವ್‌ ಜಾಬ್ಸ್‌ ಹೆಸರನ್ನು ಬಳಸಿ ಕಾಲೆಳೆದಿದೆ. ಅಷ್ಟೇ ಅಲ್ಲ, ಸುಮಾರು 50 ಬಿಲಿಯನ್‌ ಡಾಲರ್‌ಗಳನ್ನು ನವೀನ ಉತ್ಪನ್ನಗಳ ಅಭಿವೃದ್ಧಿಗಾಗಿ ಹೂಡಿಕೆ ಮಾಡುತ್ತಿದ್ದು, ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಹೊಸತನ, ಗ್ರಾಹಕರಿಗೆ ಹೊಸ ಅನುಭವ ನೀಡುವ ಉತ್ಪನ್ನಗಳನ್ನು ನೀಡುವ ಉತ್ಸಾಹದಲ್ಲಿದೆ.

ಮಾರುಕಟ್ಟೆಗೆ ಶಿಯೋಮಿ ಅವರ ಡ್ಯುಯಲ್ ಫ್ಲೆಕ್ಸ್‌, ಮೈಕ್ರೋಸಾಫ್ಟ್‌ ಸರ್ಫೇಸ್‌ ಡ್ಯುಯೊ, ಒಪ್ಪೊ ಮತ್ತು ಬ್ಲಾಕ್‌ಬೆರ್ರಿ ಅವರ ಫೋಲ್ಡಬಲ್‌ ಫೋನ್‌ಗಳು ಬರಲು ಸಿದ್ಧವಾಗುತ್ತಿವೆ. ಎಸ್ಕೋಬಾರ್‌ನ ಆಗಮನ ಈ ಎಲ್ಲ ಫೋನ್‌ಗಳಿಗೆ ಹಿನ್ನಡೆ ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ. ಸ್ಯಾಮ್‌ಸಂಗ್‌ 70,000ಕ್ಕಿಂತ ಕಡಿಮೆ ಮೌಲ್ಯದ ಫೋಲ್ಡಬಲ್‌ ಫೋನ್‌ ಹೊರತರಲು ಚಿಂತನೆ ನಡೆಸಿದೆ ಎಂಬ ಸುದ್ದಿ ಕೇಳಿ ಬಂದಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳ ಬೆಲೆ

ಮೊಟೊ ರೇಜರ್‌ | ಬೆಲೆ- 1.07 ಲಕ್ಷ ರೂ.ಗಳು

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ ಫೋಲ್ಡ್‌ | ಬೆಲೆ – 1.65 ಲಕ್ಷ ರೂ.ಗಳು

ಹುವಾಯ್‌ ಮೇಟ್‌ ಎಕ್ಸ್‌ | ಬೆಲೆ – 1.85 ಲಕ್ಷ ರೂ. (ಚೀನಾದಲ್ಲಿ ಮಾತ್ರ)

ರಾಯೊಲ್‌ ಫ್ಲೆಕ್ಸ್‌ ಪೈ | ಬೆಲೆ- 94,000 ರೂ.ಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.