ಚೀನಿಯರು ಸೃಷ್ಟಿಸಿದ ಈ ಸೂರ್ಯ, ನಿಜವಾದ ಸೂರ್ಯನಿಗಿಂತ 5 ಪಟ್ಟು ಶಕ್ತಿ ಶಾಲಿ!

ಅಸಾಧ್ಯಗಳನ್ನು ಮಾಡಿ ತೋರಿಸುವ ಚೀನಿಯರು ಈಗ ಕೃತಕ ಸೂರ್ಯನನ್ನು ಸೃಷ್ಟಿಸಿ ಯಶಸ್ವಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚೀನಾದ ಶಿನ್‌ಹು ಸುದ್ದಿ ಸಂಸ್ಥೆಯ ಸೋಮವಾರದ ವರದಿಯ ಪ್ರಕಾರ ಕೃತಕ ಸೂರ್ಯನನ್ನು ಸೃಷ್ಟಿಸುವ ಪ್ರಯೋಗದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು 17 ನಿಮಿಷಗಳ ಕಾಲ ಸತತವಾಗಿ ಸೂರ್ಯನಿಗಿಂತ 5 ಪಟ್ಟು ಹೆಚ್ಚು ತಾಪವನ್ನು ಹೊರಹಾಕಿದೆ ಎಂದು ತಿಳಿದು ಬಂದಿದೆ.

ಎಕ್ಸ್‌ಪೆರಿಮೆಂಟಲ್‌ ಅಡ್ವಾನ್ಸ್ಡ್‌ ಸೂಪರ್‌ ಕಂಡಕ್ಟಿಂಗ್‌ ಟೊಕಾಮ್ಯಾಕ್‌ ಎನ್ನಲಾದ ಈ ಪ್ರಯೋಗದಲ್ಲಿ 70 ಕೋಟಿ ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವೂ ಈ ಕೃತಕ ಸೂರ್ಯನಿಂದ ಹೊಮ್ಮಿದೆ ಎಂದು ವರದಿ ಹೇಳಿದೆ.

ಚೀನಾದ ಹೆಫೀಯಲ್ಲಿರುವ ಹೆಫೀ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕಲ್‌ ಸೈನ್ಸ್‌ನಲ್ಲಿ 2006ರಿಂದಲೂ ಈ ಪ್ರಯೋಗ ನಡೆಯುತ್ತಿದೆ. ವಿಶ್ವದಲ್ಲಿರುವ ನಕ್ಷತ್ರಗಳಿಂದ ಹೊಮ್ಮುವ ಶಕ್ತಿಯನ್ನು, ಭೂಮಿಯ ಮೇಲೆ ಕೃತಕವಾಗಿ ಸೃಷ್ಟಿಸಬೇಕು. ಮಾಲಿನ್ಯ ರಹಿತ ಶಕ್ತಿಯನ್ನು ಹೊಂದುವಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಈ ಪ್ರಯೋಗದ ಹಿಂದಿದೆ ಎಂದು ವರದಿಯಲ್ಲಿ ಹೇಳಿದೆ.

ಈ ಪ್ರಯೋಗದ ನೇತೃತ್ವ ವಹಿಸಿರುವ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಮಾ ಫಿಸಿಕ್ಸ್‌ ಆಫ್‌ ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಗಾಂಗ್‌ ಶಿಂಜು, ಈ ಯಶಸ್ವಿ ಪ್ರಯೋಗದ ಕುರಿತು,” ಪರಮಾಣು ಸಮ್ಮಿಳ ರಿಯಾಕ್ಟರ್‌ಗಳನ್ನು ನಡೆಸುವ ಕ್ರಮಕ್ಕೆ ಈಗ ಒಂದು ದೃಢವಾದ ವೈಜ್ಞಾನಿಕ ಮತ್ತು ಪ್ರಾಯೋಗಿಕ ಬುನಾದಿ ಹಾಕಿದಂತಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದುವರೆಗೂ 94 ಲಕ್ಷ ಡಾಲರ್‌ಗಳನ್ನು ಖರ್ಚು ಮಾಡಿದ್ದು ಈ ಪ್ರಯೋಗ ಇನ್ನು ಆರು ತಿಂಗಳು ನಡೆಯಲಿದೆ.

ಪರಮಾಣು ಸಮ್ಮಿಲನದ ಮೂಲಕ ಉತ್ಪತ್ತಿಯಾಗುವ ವಿದ್ಯುತ್‌ ಜಗತ್ತಿನಲ್ಲಾಗುತ್ತಿರುವ ಮಾಲಿನ್ಯಕ್ಕೆ ಮತ್ತು ನವೀಕರಿಸಲಾಗದ ಇಂಧನಗಳ ಅವಲಂಬನೆಗೆ ಪರ್ಯಾಯವಾಗಬಲ್ಲದು. ಇದನ್ನು ಅರಿತ ಚೀನಾ, ಸೂರ್ಯನಲ್ಲಿ ನಡೆಯುವ ಪರಮಾಣು ಸಮ್ಮಿಲನ ಕ್ರಿಯೆಯನ್ನು ಬೃಹತ್‌ಪ್ರಮಾಣದಲ್ಲಿ ಕೃತಕವಾಗಿ ನಡೆಸುತ್ತಿದೆ.

ಪರಮಾಣು ಸಮ್ಮಿಲನ ಕ್ರಿಯೆ ವಿದಲನ ಕ್ರಿಯೆಗಿಂತ ಸುರಕ್ಷಿತ ಮತ್ತು ಕಡಿಮೆ ವಿಕಿರಣ ತ್ಯಾಜ್ಯ ಉತ್ಪಾದಿಸುತ್ತದೆ. ಎರಡು ಹಗುರ ಪರಮಾಣುಗಳು ( ಡೀಟ್ರಿಯಂ ಮತ್ತು ಟ್ರಿಟಿಯಂ) ಕೂಡಿ ಭಾರವಾದ ಹೀಲಿಯಂ ಅನ್ನು ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಶಕ್ತಿ ಉತ್ಪಾದನೆಯಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.