ಬರಲಿದೆ ಹೊಸ ಕಾರು ಕಂಪನಿ ಹವಲ್

ಚೀನಿ ಒಡೆತನದ ಬ್ರಿಟಿಷ್ ಬ್ರ್ಯಾಂಡ್ ಎಂಜಿ ಹೆಕ್ಟರ್‌ನೊಂದಿಗೆ ಭಾರತಕ್ಕೆ ಬಂದಿದೆ. ಇದೀಗ ಜಿಎಂಡಬ್ಲ್ಯೂ (ಗ್ರೇಟ್ ವಾಲ್‌ ಮೋಟಾರ್ಸ್) ಹೆಸರಿನ ಮತ್ತೊಂದು ಚೀನಿ ಕಂಪನಿ ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ.

ಗುಜರಾತ್‌ನ ಸನಂದ್‌ನಲ್ಲಿ ಹೊಸ ನಿರ್ಮಾಣ ಘಟಕಕ್ಕೆ‌ ಕಂಪನಿ ಜಾಗ ಪಡೆದಿದ್ದು ₹7000 ಕೋಟಿ ಹೂಡಿಕೆ ಮಾಡಲಿದೆ ಎನ್ನಲಾಗಿದೆ. ಪೆಟ್ರೋಲ್/ಡೀಸಿಲ್ ಚಾಲಿತ ವಾಹನಗಳಲ್ಲದೆ ಎಲೆಕ್ಟ್ರಿಕ್ ವಾಹನಗಳಿಗೂ ಕಂಪನಿ ಒತ್ತು ಕೊಡಲಿದೆ.

ಎಸ್‌ಯುವಿ‌ಗಳಿಗೆ ಹೆಸರಾದ ಹವಲ್ ಬ್ರ್ಯಾಂಡ್ ಅಡಿಯಲ್ಲಿ ಹಲವು ಮಾರುಕಟ್ಟೆಗಳಲ್ಲಿ ವ್ಯವಹರಿಸುತ್ತಿರುವ ಕಂಪನಿ ಇತ್ತಿಚೆಗಷ್ಟೇ ಒಟ್ಟು 50 ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಮೈಲುಗಲ್ಕು ತಲುಪಿತ್ತು. 2022ರ ವೇಳೆಗೆ ಕಂಪನಿಯ ಶೇ.60ಕ್ಕೂ ಹೆಚ್ಚು ಮಾಡೆಲ್‌ಗಳು ವಿದ್ಯುತ್ ಚಾಲಿತ ಮಾಡುವ ಗುರಿಯನ್ನು ಈ ಚೀನಿ ಕಂಪನಿ ಈಗಾಗಲೇ ಹಾಕಿಕೊಂಡಿದೆ.

ಕ್ರೆಟಾ, ಸೆಲ್ಟೋಸ್, ಡಸ್ಟರ್ ಪ್ರತಿಸ್ಪರ್ಧಿ ಹವಲ್ ಎಚ್‌2

ಕ್ರೆಟಾ, ಸೆಲ್ಟೋಸ್, ಡಸ್ಟರ್ ಪ್ರತಿಸ್ಫರ್ಧಿಯಾದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಹವಲ್ ಎಚ್ 2 ಮೂಲಕ ಜಿಡಬ್ಲ್ಯುಎಂ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ‌.

ನಂತರದ ಹಂತದಲ್ಲಿ ಹೆಕ್ಟರ್‌ಗೆ ಪ್ರತಿಸ್ಪರ್ಧಿಯಾದ ಹವಲ್ ಎಚ್6 ಅನ್ನು ಮಾರುಕಟ್ಟೆಗೆ ತರಲಿದೆ‌.

ಹವಲ್ ಎಚ್ 6

ಚೀನಿ ಕಾರುಗಳು ದಶಕದ ಹಿಂದೆ ಕಳಪೆ ಗುಣಮಟ್ಟ ಹಾಗೂ ವಿನ್ಯಾಸದ ನಕಲಿಯ ಅಪಖ್ಯಾತಿಗೆ ಒಳಗಾಗಿದ್ದವು. ಆದರೆ ಕ್ರಮೇಣ ಗುಣಮಟ್ಟ ಹೆಚ್ಚಿಸಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲೆಕ್ಟ್ರಿಕ್ ಕಾರುಗಳ ಕ್ಷೇತ್ರದಲ್ಲಿ ದಾಪುಗಾಲಿಟ್ಟು ಸಾಗುತ್ತಿದೆ.

ಚೈನಾದಲ್ಲಿ ಈಗಾಗಲೇ ಒಂದು ಚಾರ್ಜ್‌ನಲ್ಲಿ 450 ಕಿಮೀ.ಗೂ ಅಧಿಕ ಕ್ರಮಿಸಬಲ್ಲ ಹೈಬ್ರಿಡ್ ಕಾರುಗಳಿವೆ. ಬೀಜಿಂಗ್‌ನ ಅಷ್ಟೂ ಬಸ್ ಹಾಗೂ ಟ್ಯಾಕ್ಸಿಗಳು ಬ್ಯಾಟರಿ ಚಾಲಿತ. ಅಲ್ಲದೆ ಬೀಜಿಂಗ್‌ನಂಥ ಮಹಾನಗರಗಳಲ್ಲಿ ಸಾಂಪ್ರದಾಯಿಕ ಇಂಧನದ ಕಾರುಗಳ ನೋಂದಣಿಯನ್ನು ಲಾಟರಿ ಹಾಗೂ ಹರಾಜಿನ ಮೂಲಕ ಮಾತ್ರ ಕೊಡಲಾಗುತ್ತದೆ. ಹರಾಜು ಕೂಗಿದರೆ ಕಾರಿನ ಮೊತ್ತಕ್ಕಿಂತ ಹೆಚ್ಚು ನೋಂದಣಿಗೆ ವ್ಯಯಿಸಬೇಕು.

ಹಾಗಾಗಿ ಭಾರತಕ್ಕೆ ಬರುತ್ತಿರುವ ಚೀನಿ ಕಂಪಗಳು ಇಲ್ಲಿನ ವಾಹೋದ್ಯಮದ ಚಿತ್ರಣವನ್ನು ಹೇಗೆ ಬದಲಿಸಲಿದೆ ಎಂಬುದು ಕಾದು ನೋಡಬೇಕಾದ ಕೌತುಕ.