ಅಮೆರಿಕದ ಅಂತರಿಕ್ಷ ಯಾತ್ರಿ ಕ್ರಿಸ್ಟಿನಾ ಕೋಚ್ ಬಾಹ್ಯಾಕಾಶದಲ್ಲಿ ಅತಿ ದೀರ್ಘಕಾಲ ವಾಸ ಮಾಡಿದ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾರು ಈ ಕೋಚ್? ಯಾಕೆ ಬಾಹ್ಯಾಕಾಶದಲ್ಲಿ ಇಷ್ಟು ಕಾಲ ಇದ್ದರು?
ಬಾಹ್ಯಾಕಾಶದ ಅಧ್ಯಯನಕ್ಕೆ ಮಿತಿಯಿಲ್ಲ, ಕೊನೆಯಿಲ್ಲ. ಅಗಾಧವೂ, ವಿಸ್ಮವೂ ಹಾಗೆಯೇ ನಿಗೂಢವೂ ಆಗಿರುವ ಈ ಅಂತರಿಕ್ಷವನ್ನು ಅಧ್ಯಯನ ಮಾಡುವುದು ಸವಾಲಿನ ಕೆಲಸ. ನೂರಾರು ಗಗನಯಾನಿಗಳು ಭೂಮಿಯಿಂದ ಆಕಾಶಕ್ಕೆ ಜಿಗಿದಿದ್ದಾರೆ. ಅಲ್ಲಿ ಕಾಲಕಳೆದು ಹೊಸ ಹೊಸ ವಿಸ್ಮಯಕಾರಿ ವಿಷಯಗಳನ್ನು ಹೊತ್ತು ತಂದಿದ್ದಾರೆ.
ಆದರೆ ಬಾಹ್ಯಾಕಾಶದಲ್ಲೇ ಅತಿ ದೀರ್ಘ ಕಾಲ ಇದ್ದಿದ್ದು ಅಪರೂಪ. ಅಂತಹ ಅಪರೂಪವೆನಿಸುವ ಸಾಧನೆಯನ್ನು ನಾಸಾದ ಗಗನಯಾನಿ ಕ್ರಿಸ್ಟಿನಾ ಕೋಚ್ ಮಾಡಿದ್ದಾರೆ. ಅತಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಇದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಹಿಂದೆ 2016-17ರ ಅವಧಿಯಲ್ಲಿ 288 ದಿನಗಳ ಬಾಹ್ಯಾಕಾಶದಲ್ಲಿದ್ದ ಪೆಗ್ಗಿ ವಿಟ್ಸನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೊರಗೆ ಜೆಸ್ಸಿಕಾ ಮೀರ್ ಅವರೊಂದಿಗೆ ಯಶಸ್ವಿಯಾಗಿ ಗಗನನಡಿಗೆ ಮಾಡಿದ ಹಿರಿಮೆಗೂ ಪಾತ್ರರಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಾಹ್ಯಾಕಾಶ ಕೇಂದ್ರದ ವಿದ್ಯುತ್ ಜಾಲದಲ್ಲಿ ಲೋಪವಾಗಿತ್ತು. ಅದನ್ನು ಸರಿಪಡಿಸಲೆಂದು ಕೇಂದ್ರದಿಂದ ಹೊರಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮನುಷ್ಯನ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಹೆಜ್ಜೆ ಹಾಕಿದ ಐವತ್ತನೆಯ ವರ್ಷವನ್ನು ಆಚರಿಸಲಾಗುತ್ತಿತ್ತು.
ದೀರ್ಘ ಅವಧಿಯ ಗಗನಯಾನದ ಅಧ್ಯಯನಕ್ಕೆಂದು ಕಳೆದ ಮಾರ್ಚ್‌ನಲ್ಲಿ ಆಕಾಶಕ್ಕೆ ಜಿಗಿದ ಕ್ರಿಸ್ಟಿನಾ ಬರುವ ಫೆಬ್ರವರಿಯಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ ಹೇಳಿದೆ. ಏಕ ವ್ಯಕ್ತಿ ಗಗನನೌಕೆ ಇದಾಗಿದ್ದು, ಅತಿ ದೀರ್ಘ ಕಾಲ ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಎಂತಬ ಪರಿಣಾಮಗಳು ಉಂಟಾಗುತ್ತವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.
ಯಾರು ಈ ಕ್ರಿಸ್ಟೀನಾ ಕೋಚ್
ನಲವತ್ತು ವರ್ಷದ ಕ್ರಿಸ್ಟೀನಾ ಕೋಚ್, ನ್ಯಾರ್ಥ್ ಕ್ಯಾರೋಲಿನಾ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಭೌತಶಾಸ್ತ್ರದಲ್ಲಿ ಪದವಿ ಪಡೆದವರು. ಗೊಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಬಾಹ್ಯಾಕಾಶ ಅಧ್ಯಯನ ಮಾಡಿದ ಕೋಚ್, ನ್ಯಾಷನಲ್ ಓಸಿಯನಿಕ್ ಅಂಡ್ ಅಟ್‌ಮಾಸ್ಫಾರಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ವಲ್ಪ ಕಾರಲ ಕಾರ್ಯನಿರ್ವಹಿಸಿದರು. 2013ರಲ್ಲಿ ನಾಸಾ ಸೇರಿದ ಕೋಚ್ ಮಾರ್ಚ್ 2019ರಲ್ಲಿ ಸೋಯುಜ್ ಎಂಎಸ್12 ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದರು.