ಕರೊನಾ ಕಳಕಳಿ |ನೈಜ ಚಿತ್ರಣಕ್ಕೆ ಸಾಮುದಾಯಿಕ ವೈದ್ಯಕೀಯ ತಪಾಸಣೆಯೊಂದೇ ದಾರಿ

ಭಾರತದಲ್ಲಿ ಈಗಲೂ ಸಹ ಕೋವಿಡ್‌ ಸಮುದಾಯಕ್ಕೆ ಹಬ್ಬಿದೆಯೋ, ಇಲ್ಲವೋ ಎನ್ನುವ ಬಗ್ಗೆ ಸಾಮುದಾಯಿಕ ವೈದ್ಯಕೀಯ ತಪಾಸಣಾ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಕರೋನಾ ವಿರುದ್ಧ ಹೋರಾಡಬೇಕೆಂದರೆ ಮೊದಲು ಸಮುದಾಯದಲ್ಲಿ ಅದು ಹಬ್ಬಿರಬಹುದಾದ ಸಾಧ್ಯತೆಗಳನ್ನು ಕ್ಷಿಪ್ರವಾಗಿ ಗುರುತಿಸಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದೆ

ಸುಮಾರು ಮೂರು ವಾರಗಳ ಹಿಂದಿನ ಮಾತು, ಸಿಎನ್‌ಎನ್‌ ಸುದ್ದಿ ವಾಹಿನಿಯಲ್ಲಿ ಅಮೆರಿಕದಲ್ಲಿ ಕರೋನಾ ವೈರಸ್‌ ಕುರಿತಾಗಿ ಕಂಡುಬರುತ್ತಿರುವ ಭೀತಿಯ ಬಗ್ಗೆ ಅಲ್ಲಿನ ವೈದ್ಯಕೀಯ ತಜ್ಞರೊಬ್ಬರು ಮಾತನಾಡುತ್ತಿದ್ದರು. ಹೆಸರು ಮರೆತಿದ್ದೇನೆ. ಕರೋನಾ ವೈರಸ್‌ ತಡೆಗೆ ಅಮೆರಿಕ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವ ಬಗ್ಗೆ ಅಮೆರಿಕದ ತಜ್ಞರಲ್ಲಿ ಮಿಶ್ರ ಅಭಿಪ್ರಾಯವಿತ್ತು. ನಾನು ಮೇಲೆ ಹೇಳಿದ ತಜ್ಞ, ಜನರಲ್ಲಿ ಭೀತಿಯನ್ನು ಉಂಟು ಮಾಡುವುದು ಅನಗತ್ಯ. ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ ಫ್ಲೂನಿಂದಾಗಿ ಸತ್ತಿರುವವರ ಲೆಕ್ಕವನ್ನೇ ನೋಡಿದರೂ ಅದು ದೊಡ್ಡ ಸಂಖ್ಯೆಯಲ್ಲಿಯೇ ಇದೆ ಎಂದಿದ್ದರು. ಹಾಗಾಗಿ, ಮಾಧ್ಯಮಗಳು ಕರೋನಾ ಸಂಬಂಧಿತ ವರದಿ ಮಾಡುವಾಗ ಭೀತಿಯನ್ನು ಹಬ್ಬಿಸುವ ಕೆಲಸಕ್ಕೆ ಮುಂದಾಗಬಾರದು ಎಂದಿದ್ದರು. ಮಾಧ್ಯಮಗಳ ಬಗ್ಗೆ ಅವರು ಹೇಳಿದ ಮಾತು ತಕ್ಕ ಮಟ್ಟಿಗೆ ಸತ್ಯವಾಗಿತ್ತಾದರೂ, ಕರೋನಾ ಬಗ್ಗೆ ಅಮೆರಿಕದ ಪ್ರತಿಕ್ರಿಯೆ ಹೇಗಿರಬೇಕು ಎನ್ನುವ ಬಗ್ಗೆ ಅವರಲ್ಲಿ ನಿರ್ದಿಷ್ಟ ಉತ್ತರ ಇದ್ದಂತಿರಲಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಆರಂಭದಲ್ಲಿ ಕರೋನಾ ತಡೆಗೆ ತೋರಿದ ಪ್ರತಿಕ್ರಿಯೆಗಳು ಹೆಚ್ಚೇನೂ ಉತ್ತೇಜಕವಾಗಿರಲಿಲ್ಲ. 

ಕೋವಿಡ್-19 ವ್ಯಾಪಕವಾಗಿ ವಿಶ್ವದೆಲ್ಲೆಡೆ, ವಿಶೇಷವಾಗಿ ಯೂರೋಪ್‌ನಲ್ಲಿ ಹಬ್ಬಲು ತೊಡಗಿದಾಗ ಸಾಕಷ್ಟು ಸಂಖ್ಯೆಯಲ್ಲಿ ಸುಮಾರು ಎರಡು ವಾರಗಳ ಹಿಂದೆ ವಿದೇಶಗಳಿಗೆ, ವಿಶೇಷವಾಗಿ ಐರೋಪ್ಯ ರಾಷ್ಟ್ರಗಳಿಗೆ ತೆರಳಿದ್ದ ಅಮೆರಿಕದ ನಾಗರಿಕರು ಮರಳತೊಡಗಿದರು. ಈ ವೇಳೆ ಅಲ್ಲಿನ ಏರ್‌ಪೋರ್ಟ್‌ ಗಳಲ್ಲಿ ಉಂಟಾದ ವಿಪರೀತ ಜನದಟ್ಟಣೆಯನ್ನು ನಿರ್ವಹಿಸುವಲ್ಲಿ ಹಾಗೂ ಆ ಜನಜಂಗುಳಿಯನ್ನು, ಅದರಲ್ಲಿಯೂ ಸಾಕಷ್ಟು ಸೋಂಕಿತರು ಇರಬಹುದಾದ ಆ ಗುಂಪನ್ನು ನಿರ್ವಹಿಸುವಲ್ಲಿ  ತೆಗೆದುಕೊಳ್ಳಬೇಕಾಗಿದ್ದ ಕ್ರಮಗಳು ಕಾಣೆಯಾಗಿದ್ದವು! ಈ ಬಗ್ಗೆ ಸಾಕಷ್ಟು ಸುದ್ದಿಯಾಯಿತು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಜಂಗುಳಿಯ ಫೋಟೋಗಳು ಓಡಾಡಿದವು. ಅಮೆರಿಕ ಕೋವಿಡ್‌-19ರ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಅಭಿಪ್ರಾಯ ಜಗತ್ತಿಗೆ ಅಂದೇ ಬಂದಿತ್ತು. ಮುಂದೆ ಸೋಂಕು ಕೆಲವೇ ದಿನಗಳಲ್ಲಿ ಅಮೆರಿಕದ ಜನಸಮುದಾಯಕ್ಕೆ ವರ್ಗಾವಣೆಯಾಗಿತ್ತು, ಸರ್ಕಾರ ಈಗ ಎಚ್ಚೆತ್ತು ಏನೆಲ್ಲಾ ಕ್ರಮಗಳನ್ನು ಕೈಗೊಂಡು, ತುರ್ತಾಗಿ ಪ್ರತಿಕ್ರಿಯಿಸುತ್ತಿದ್ದರೂ ವೈರಸ್‌ ಸಮುದಾಯದಲ್ಲಿ ತೀವ್ರವಾಗಿ ಹಬ್ಬುತ್ತಿರುವುದನ್ನು ತಡೆಯುವುದು ಕಷ್ಟವಾಗುತ್ತಿದೆ. 85 ಸಾವಿರ ದಾಟಿರುವ ಸೋಂಕಿತರ ಸಂಖ್ಯೆಯು ಚೀನಾವನ್ನೂ ಹಿಂದಿಕ್ಕಿದೆ. ಏಪ್ರಿಲ್‌ ಅಂತ್ಯದಲ್ಲಿ ಸೋಂಕಿನ ಪ್ರಸರಣ ಸಂಖ್ಯೆ ಉಚ್ಛ್ರಾಯ ತಲುಪಲಿದೆ. ಸೊಂಕಿನಿಂದಾಗಿ ಮರಣದ ಪ್ರಮಾಣ  ಶೇ.1-1.5ರೊಳಗೆ ಇದೆ ಎನ್ನುವುದು ಸದ್ಯ ಸಮಾಧಾನದ ಸಂಗತಿ. ಇಟೆಲಿಯಲ್ಲಿ ಕೋವಿಡ್‌-19ರಿಂದಾಗಿ ಉಂಟಾಗುವ ಮರಣ ಪ್ರಮಾಣ ಶೇ.10ರ ಆಸುಪಾಸಿದೆ ಎನ್ನುವುದನ್ನು ಇದಕ್ಕೆ ಹೋಲಿಕೆಯಾಗಿ ಗಮನಿಸಬಹುದು. 

ಇಂದು, ಅದೇ ಸಿಎನ್‌ಎನ್‌ ವಾಹಿನಿಯಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್ ಕರೋನಾ ಸೇರಿದಂತೆ ಯಾವುದೇ ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೋವಿಡ್‌-19ರ ವಿರುದ್ಧದ ಸಮರದಲ್ಲಿ ಅಮೆರಿಕ ಕ್ಷಿಪ್ರವಾಗಿ ಪ್ರತಿಕ್ರಿಯಿಸದೆ ಎಡವಿದ ಬಗ್ಗೆ ಗೇಟ್ಸ್ ಕಳೆದ ಕೆಲ ದಿನಗಳಿಂದ‌ ಗಟ್ಟಿಯಾಗಿ ಮಾತನಾಡಿದ್ದಾರೆ. ಕೋವಿಡ್‌ ಸಂಬಂಧಿತ ಸಾಮುದಾಯಿಕ ತಪಾಸಣಾ ಪರೀಕ್ಷೆಗಳನ್ನು (ಕಮ್ಯುನಿಟಿ ಟೆಸ್ಟಿಂಗ್) ಕ್ಷಿಪ್ರವಾಗಿ ಮಾಡುವ ಮೂಲಕ ಸೋಂಕು ಹಬ್ಬುತ್ತಿರುವ ವೇಗವನ್ನು ಪತ್ತೆ ಹಚ್ಚಿ ಕ್ಷಿಪ್ರವಾಗಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅಮೆರಿಕ ಸರ್ಕಾರ ವಿಫಲವಾಗಿರುವುದನ್ನು ಬೆರಳು ಮಾಡಿ ತೋರಿಸಿದ್ದಾರೆ. ಗೇಟ್ಸ್ ದಂಪತಿ ನಡೆಸುವ ಸಾಮಾಜಿಕ ಸಂಸ್ಥೆ, ಬಿಲ್‌ ಅಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ ಕರೋನಾ ವಿರುದ್ಧದ ಲಸಿಕೆಯ ಸಂಶೋಧನೆ ಮತ್ತು ಶುಶ್ರೂಷೆಗಾಗಿ 100 ಮಿಲಿಯನ್‌ ಡಾಲರ್ ಹಣವನ್ನು ಘೋಷಿಸಿದೆ ಕೂಡ. ಕೋವಿಡ್‌ ಸೋಂಕು ತಡೆಗೆ ಅಮೆರಿಕದ ಒಂದೊಂದೇ ರಾಜ್ಯಗಳು ಲಾಕ್‌ ಡೌನ್ ಗೆ ಒಳಗಾಗುತ್ತಿವೆ. ಹೀಗೆ ಮಾಡುವ ಬದಲಿಗೆ ತಕ್ಷಣದಿಂದಲೇ ಸಂಪೂರ್ಣ ಯುಎಸ್‌ಎ ಅನ್ನು ಮುಂದಿನ 6-10 ವಾರಗಳ ಕಾಲ ಲಾಕ್‌ ಡೌನ್‌ ಮಾಡಬೇಕೆಂದು ಗೇಟ್ಸ್‌ ಒತ್ತಾಯಿಸಿದ್ದಾರೆ. ಇದೇ ವೇಳೆ, 33 ಲಕ್ಷ ಮಂದಿ ಅಮೆರಿಕನ್ನರು ತಾವುಗಳು ನಿರುದ್ಯೋಗಿಗಳು ಎಂದು ಹೊಸದಾಗಿ ಉದ್ಯೋಗ ಕೇಂದ್ರಗಳಲ್ಲಿ ಅರ್ಜಿ ತುಂಬಿದ್ದಾರೆ. ಇದಕ್ಕೆ ಕಾರಣ, ಮುಂದಿನ ದಿನಗಳಲ್ಲಿ ಲಾಕ್‌ ಡೌನ್‌ ಉಂಟಾದರೆ ಇವರು ಸರ್ಕಾರ ನೀಡುವ ಸವಲತ್ತಿನ ಮೇಲೆಯೇ ಬದುಕಬೇಕಾಗುತ್ತದೆ ಎನ್ನುವ ಗಂಭೀರ ಸ್ಥಿತಿ. ಅಮೆರಿಕದಲ್ಲಿ ಇದಾಗಲೇ ಹಿಂದೆಂದೂ ಕಂಡುಬರದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗ ಕಂಡು ಬಂದಿದೆ. ಕರೋನಾ ಇದನ್ನು ಗಂಭೀರ ಪ್ರಮಾಣದಲ್ಲಿ ಹೆಚ್ಚಿಸಿದೆ. ಅಮೆರಿದಂತಹ ಜಾಗತಿಕ ಆರ್ಥಿಕ ದೈತ್ಯನ ಸ್ಥಿತಿ ಇದು. ಹೀಗಿರುವಾಗ  ಮುಂದಿನ ದಿನಗಳಲ್ಲಿ ನಮ್ಮ ಸ್ಥಿತಿ ಹೇಗಿರಬಹುದು!

 ವಿಪರ್ಯಾಸವೆಂದರೆ, ಭಾರತದಲ್ಲಿ ಈಗಲೂ ಸಹ ಕೋವಿಡ್‌ ಸಮುದಾಯಕ್ಕೆ ಹಬ್ಬಿದೆಯೋ, ಇಲ್ಲವೋ ಎನ್ನುವ ಬಗ್ಗೆ ಸಾಮುದಾಯಿಕ ವೈದ್ಯಕೀಯ ತಪಾಸಣಾ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಕರೋನಾ ವಿರುದ್ಧ ಹೋರಾಡಬೇಕೆಂದರೆ ಮೊದಲು ಸಮುದಾಯದಲ್ಲಿ ಅದು ಹಬ್ಬಿರಬಹುದಾದ ಸಾಧ್ಯತೆಗಳನ್ನು ಕ್ಷಿಪ್ರವಾಗಿ ಗುರುತಿಸಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದೆ. ಇದು ಸಾಧ್ಯವಾಗುವುದು ಕೇವಲ ತಪಾಸಣೆಯಿಂದ ಮಾತ್ರ. ಹಾಗಾಗಿ, “ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್” ಇದೊಂದೇ ಸದ್ಯ ನಮ್ಮ ಮುಂದಿರುವ ಹಾದಿ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ. ನಮ್ಮ ಸರ್ಕಾರಗಳು ಈಗಲೂ ವಿದೇಶದಿಂದ ಬಂದವರು, ಅವರ ಸಾಮೀಪ್ಯದ ಮಂದಿಯಲ್ಲಿ (ಪ್ರೈಮರಿ ಕಾಂಟ್ಯಾಕ್ಟ್ಸ್‌) ಮಾತ್ರವೇ ಕೋವಿಡ್‌ ಪ್ರಕರಣಗಳನ್ನು ಹುಡುಕುತ್ತಿದ್ದಾರೆ. ನಮ್ಮ ಈ ನಡೆಯ ಬಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಜೈವಿಕ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಕರೋನಾ ಪೀಡಿತರ ಸಂಖ್ಯೆ ಕಡಿಮೆ ಎಂದು ಕಂಡುಬರಲು ಕಾರಣ ನಾವು ಸಾಮುದಾಯಿಕ ಪರೀಕ್ಷೆಗೆ ಮುಂದಾಗದೆ ಇರುವುದು ಎಂದು ಅವರು ಎಚ್ಚರಿಸುತ್ತಿದ್ದಾರೆ. ಹಾಗಾಗಿ ಸಿಂಗಪೂರ್, ದಕ್ಷಿಣ ಕೊರಿಯಾಗಳು ಮಾಡಿದ ರೀತಿಯಲ್ಲಿ ಕ್ಷಿಪ್ರ ಸಾಮುದಾಯಿಕ ಕರೋನಾ ತಪಾಸಣಾ ಪ್ರಕ್ರಿಯೆಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಹಾಗೆ ಮಾಡುವುದು, ವೈರಸ್ ಸಮುದಾಯದಲ್ಲಿ ವ್ಯಾಪಿಸಿದೆಯೋ ಇಲ್ಲವೋ, ಒಂದು ವೇಳೆ ವ್ಯಾಪಿಸಿದ್ದರೆ‌ ಯಾವ ಪರಿ ವ್ಯಾಪಿಸಿದೆ ಎನ್ನುವ ಬಗ್ಗೆ ತಕ್ಕಮಟ್ಟಿಗಿನ ಅಂದಾಜು ನೀಡಲು ಕಾರಣವಾಗುತ್ತದೆ. ಇದು ಕ್ಷಿಪ್ರವಾಗಿ ವೈದ್ಯಕೀಯ ಶುಶ್ರೂಷೆಗಳನ್ನು ಕೈಗೊಳ್ಳಲು, ಮುಂದಿನ ಹಂತದ ಸಾಮುದಾಯಿಕ ವೈದ್ಯಕೀಯೋಪಚಾರಗಳಿಗೆ ಸರ್ಕಾರ ಸಿದ್ಧವಾಗಲು ಸಹಕಾರಿಯಾಗುತ್ತದೆ. 

ಇಟಲಿ, ಸ್ಪೇನ್, ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಸಾಮುದಾಯಿಕ ತಪಾಸಣೆಯನ್ನು ಶೀಘ್ರವಾಗಿ ಕೈಗೊಳ್ಳದೆ ಇಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿವೆ. “ಮುಂಬರುವ ದಿನಗಳಲ್ಲಿ ನೂರಾರು ಲಕ್ಷ ಜನಸಂಖ್ಯೆಯನ್ನು ಒಂದು-ಒಂದೂವರೆ ತಿಂಗಳ ಅವಧಿಯಲ್ಲಿ ಪರೀಕ್ಷೆಗೊಳಪಡಿಸುವಂತಹ ವೈದ್ಯಕೀಯ ವ್ಯವಸ್ಥೆ, ಕ್ರಮಗಳನ್ನು ನಾವು ಅನ್ವೇಷಿಸದೆ ಹೋದಲ್ಲಿ ಇಂತಹ ಜಾಗತಿಕ ಸಾಂಕ್ರಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿಲ್ಲ,” ಎನ್ನುವ ಬಿಲ್‌ಗೇಟ್ಸ್‌ ಮಾತು ಇಲ್ಲಿ ಗಮನಾರ್ಹ. ಬಹುಶಃ ಈ ತಲೆಮಾರು ಜಾಗತಿಕ ಸಾಂಕ್ರಮಿಕ ರೋಗಗಳನ್ನು ಆಗಾಗ್ಗೆ ಕಾಣುತ್ತಲೇ ಇರಬೇಕಾದ ಅನಿವಾರ್ಯತೆ ಭವಿಷ್ಯದಲ್ಲಿ ಮೂಡಬಹುದು. ಅಂತಹ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಸ್ತಬ್ಧಗೊಳಿಸುವ ಕ್ರಮಗಳಿಗಿಂತ ಮುಖ್ಯವಾಗಿ ವ್ಯಾಪಕ ಸಂಖ್ಯೆಯಲ್ಲಿ, ಅತಿ ಕಡಿಮೆ ಅವಧಿಯಲ್ಲಿ ಕ್ಷಿಪ್ರವಾಗಿ ಸೋಂಕು ಪತ್ತೆ ಹಚ್ಚುವ ನವೀನ ತಪಾಸಣಾ ಪ್ರಕ್ರಿಯೆಗಳು, ಸಾಮೂಹಿಕ ಶುಶ್ರೂಷಾ ವಿಧಾನಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಇಡೀ ಜಗತ್ತೇ ಈ ದಿಕ್ಕಿನಲ್ಲಿ ಮುಂದಿನ ದಿನಗಳಲ್ಲಿ ಒಗ್ಗೂಡಿ ಜಾಗತಿಕ ಆರೋಗ್ಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಬಹುದು. ಜಗತ್ತಿನ ಎಲ್ಲ ದೇಶಗಳೂ ತಮ್ಮ ಶಕ್ತಿ, ಸಾಮರ್ಥ್ಯವನ್ನು ಮಿಲಿಟರಿ ಬಲದಿಂದಲ್ಲದೆ, ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ತಾವು ಎಷ್ಟರಮಟ್ಟಿಗೆ ಸಮರ್ಥವಾಗಿದ್ದೇವೆ ಎನ್ನುವುದನ್ನು ನಿರೂಪಿಸುವ ಮೂಲಕ ಸಿದ್ಧಪಡಿಸಬೇಕಾಗಬಹುದು. ಕೇವಲ ಕೊಳ್ಳುಬಾಕ ಸಂಸ್ಕೃತಿ ಹಾಗೂ ಉತ್ಪಾದನೆಯ ಮೂಲಕವೇ ದೇಶದ ಪ್ರಗತಿಯನ್ನು ಜಿಡಿಪಿ ಮೂಲಕ ವಿವರಿಸಿ ಬಡಾಯಿ ಕೊಚ್ಚುಕೊಳ್ಳುತ್ತಿದ್ದ ದೇಶಗಳೆಲ್ಲವೂ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗಳು, ಪ್ರಾಕೃತಿಕ ವಿಕೋಪಗಳನ್ನು ಎಷ್ಟು ಪರಿಣಾಮಕಾರಿಯಾಗಿ ತಾವು ಎದುರಿಸುತ್ತೇವೆ, ತಮ್ಮ ಜನತೆಯನ್ನು ಹೇಗೆ ಹಸಿವು, ರೋಗರುಜಿನಗಳಿಂದ ಕಾಪಾಡಿಕೊಳ್ಳುತ್ತೇವೆ ಎನ್ನುವುದನ್ನು ಅಂಕಿಅಂಶಗಳ ಮೂಲಕ ವಿವರಿಸುವ ಮೂಲಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸಬೇಕಾಗಬಹುದು.ಹಾಗಾದಲ್ಲಿ, ಅದು ಉತ್ತಮ ಬೆಳವಣಿಗೆಯೇ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.