ಆಡಾಡ್ತಾ ಕಲಿತು, ಕಂಪ್ಯೂಟರ್ ಕ್ಲಾಸಿನವರ ಹೊಟ್ಟೆಗೆ ಹೊಡೆದದ್ದು!

ಪ್ರತೀ ಊರಿನಲ್ಲೂ ಒಂದು ಟೈಪಿಂಗ್ “ಇನ್ಸ್ಟಿಟ್ಯೂಟ್” ಇರುವುದು ಆಗೆಲ್ಲ ಅನಿವಾರ್ಯ. ನಿಧಾನಕ್ಕೆ ಈ ಟೈಪಿಂಗ್ ಇನ್ಸ್ಟಿಟ್ಯೂಟ್ ಗಳು ಕಂಪ್ಯೂಟರ್ ತರಬೇತಿ  “ಸೆಂಟರ್” ಗಳಾಗಿ, ಇಲ್ಲವೇ ಕೋಚಿಂಗ್ “ಸೆಂಟರ್” ಗಳಾಗುವ ಮೂಲಕ ಬದಲಾದ ಸನ್ನಿವೇಶಕ್ಕೆ ಅಡಾಪ್ಟ್ ಮಾಡಿಕೊಂಡದ್ದು ಅಧ್ಯಯನಾರ್ಹ ಸಂಗತಿ

ಕರಾವಳಿ ಎಂದರೆ ಬ್ಯಾಂಕಿಂಗ್ ನ ತೊಟ್ಟಿಲು. 80ರ ದಶಕದ ಅಂತ್ಯದ ತನಕವೂ ಕರಾವಳಿಯ ಯುವಕ ಯುವತಿಯರಿಗೆ ಶಿಕ್ಷಣ ಮುಗಿಸಿದ ಕೂಡಲೇ ಅಥವಾ ಅವಕಾಶವಿದ್ದರೆ  ಶಿಕ್ಷಣದ ಜೊತೆ ಜೊತೆಗೇ ಅಗತ್ಯವಿದ್ದ/ಎಲ್ಲರೂ ಅನಿವಾರ್ಯ ಎಂದು ನಂಬಿದ್ದ ಏಕೈಕ ಸ್ಕಿಲ್ ಸೆಟ್ ಎಂದರೆ ಟೈಪ್ ರೈಟರ್ ನಲ್ಲಿ ಟೈಪಿಂಗ್; ಅದರಲ್ಲೂ ಸ್ವಲ್ಪ ಊಂಚಿ ಎಂದರೆ ಶಾರ್ಟ್ ಹ್ಯಾಂಡ್ ಸಹಿತ ಟೈಪಿಂಗ್ ಸರ್ಟಿಫಿಕೇಟು. ಇವೆರಡರ ಜೊತೆಗೆ ಒಂದು ಡಿಗ್ರಿ ಇದೆಯೆಂದರೆ ಗಲ್ಫ್‌, ಮುಂಬಯಿ ಅಥವಾ ಯಾವುದಾದರೂ ಬ್ಯಾಂಕಿನಲ್ಲಿ ಕೆಲಸ ಗ್ಯಾರಂಟಿ. ಅವರು ಲೈಫಲ್ಲಿ ಸೆಟಲ್ ಆದರೆಂದೇ ಲೆಕ್ಕ. ಅದಾಗಲಿಲ್ಲ ಎಂದಾದರೆ ಊರಲ್ಲೇ ಕೋಆಪರೇಟಿವ್‌ ಸೊಸೈಟಿಯೋ ಅಥವಾ ಬೀದಿಗೆ ಮೂರರಷ್ಟಿದ್ದ ಖಾಸಗಿ ಫೈನಾನ್ಸ್ ಗಳೋ ಖಂಡಿತಾ ಕೆಲಸ ಕೊಡುತ್ತಿದ್ದವು. ಬದುಕು ಆಗ ಅಷ್ಟು ಸರಳವಾಗಿತ್ತು.

 ಪ್ರತೀ ಊರಿನಲ್ಲೂ ಒಂದು ಟೈಪಿಂಗ್ “ಇನ್ಸ್ಟಿಟ್ಯೂಟ್” ಇರುವುದು ಆಗೆಲ್ಲ ಅನಿವಾರ್ಯ. ನಿಧಾನಕ್ಕೆ ಈ ಟೈಪಿಂಗ್ ಇನ್ಸ್ಟಿಟ್ಯೂಟ್ ಗಳು ಕಂಪ್ಯೂಟರ್ ತರಬೇತಿ  “ಸೆಂಟರ್” ಗಳಾಗಿ, ಇಲ್ಲವೇ ಕೋಚಿಂಗ್ “ಸೆಂಟರ್” ಗಳಾಗುವ ಮೂಲಕ ಬದಲಾದ ಸನ್ನಿವೇಶಕ್ಕೆ ಅಡಾಪ್ಟ್ ಮಾಡಿಕೊಂಡದ್ದು ಅಧ್ಯಯನಾರ್ಹ ಸಂಗತಿ.

***

ಕಂಪ್ಯೂಟರ್ ಖರೀದಿಸಬೇಕೆಂದು 89-90ರ ಹೊತ್ತಿಗೆ ಮೂಡಿದ್ದ ನನ್ನ ಆಸೆ ಪೂರೈಸಿದ್ದು 95ರಲ್ಲಿ. ಆಗಷ್ಟೇ ಬಂದಿದ್ದ ಪೆಂಟಿಯಂ ಸೀರೀಸ್ ನ ಕಂಪ್ಯೂಟರ್ ಅದು. ಫ್ಲಾಪಿ ಡಿಸ್ಕ್ ಡ್ರೈವ್, ಸಿಡಿ ಡ್ರೈವ್, ಸ್ಪೀಕರ್ ಇತ್ಯಾದಿಗಳಿದ್ದ ಆ ಕಂಪ್ಯೂಟರ್ ಗೆ ಆಗ ನಾನು 95,000ರೂ ತೆತ್ತಿದ್ದೆ.

ಮಂಗಳೂರಿನಿಂದ ಕುಂದಾಪುರಕ್ಕೆ ವಾಸ ಬದಲಾಯಿಸಿಕೊಳ್ಳುವಾಗ ಆಫ್ ಸೆಟ್ ಮುದ್ರಣಾಲಯ ತೆರೆಯಬೇಕೆಂಬ ಆಸೆಯ ಕಾರಣದಿಂದಾಗಿ ಕೋಟೇಶ್ವರದಲ್ಲಿ KAIDB ಕೈಗಾರಿಕಾ ವಲಯದಲ್ಲಿ ಸಾಂಕ್ಷನ್ ಮಾಡಿಸಿಕೊಂಡಿದ್ದ ಜಾಗ (ಅವರಿಗೆ ನಡೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ಸಂಕೀರ್ಣದ ಅಂಚಿನ, ಖಾಸಗಿಯವರ ಜೊತೆ  ಗಡಿವಿವಾದದಲ್ಲಿದ್ದ ಜಾಗವನ್ನು ನನಗೆ ಕೊಟ್ಟಿದ್ದರು. )  ಸರ್ಕಾರಿ ಕೆಂಪುಪಟ್ಟಿಯಲ್ಲಿ ಹುದುಗಿ ರಗಳೆ ಮಾಡತೊಡಗಿದಾಗ ಅದನ್ನು ಹಿಂದಿರುಗಿಸಿ, ಭಾರೀ ಹೋರಾಟದ ಬಳಿಕ KAIDBಯಿಂದ ಹಠಮಾಡಿ ವಾಪಸ್ ಪಡೆದ ಹಣವನ್ನು ಈ ಕಂಪ್ಯೂಟರಿಗೆ ತೊಡಗಿಸಿದ್ದೆ.

ಮನೆಗೆ ಬಂದು ಕುಳಿತ ಕಂಪ್ಯೂಟರಿನ ಸ್ವಿಚ್ ಆನ್ ಮಾಡುವುದು ಹೇಗೆ ಎಂಬಲ್ಲಿಂದ ತಿಳಿವಳಿಕೆ ಬೇಕಾಗಿತ್ತು. ಆಗ ನನ್ನ ಕಂಪ್ಯೂಟರ್ ನ ಡೀಲರ್ ಆಗಿದ್ದ ಮತ್ತು ಈಗಲೂ ನಾನು ನಡೆಸುತ್ತಿರುವ ಸಂಸ್ಥೆಗೆ ಕಂಪ್ಯೂಟರ್ ಆವಶ್ಯಕತೆಗಳನ್ನು ಪೂರೈಸುತ್ತಿರುವ ಇಲೆಕ್ಟ್ರಿಕಲ್ ಇಂಜಿನಿಯರ್ ಗೆಳೆಯರೊಬ್ಬರು ಇನ್ಸ್ಟಾಲ್ ಮಾಡಿದ ಕಂಪ್ಯೂಟರ್ ಅನ್ನು ಸ್ವಿಚ್ ಆನ್ ಮಾಡುವುದು ಹೇಗೆಂದು ತೋರಿಸಿಕೊಟ್ಟು, “ಏನು ಬೇಕಿದ್ರೂ ಮಾಡಿ, ಎಲ್ಲಿ ಬೇಕಿದ್ರೂ ಹೋಗಿ ಎಕ್ಸ್ ಪ್ಲೋರ್ ಮಾಡಿ, ಏನೂ ಆಗೋದಿಲ್ಲ. ಹಾಳಾದ್ರೆ ನಾನಿದ್ದೇನೆ” ಎಂದು ಅಭಯ ನೀಡಿ ಹೋಗಿದ್ದರು.

ಕೊನೆಗೂ ಈ “ಡೀಲರ್ ವಾಕ್ಕೇ” ನನ್ನ ಮತ್ತು ಕಂಪ್ಯೂಟರ್ ನ ನಡುವೆ ಸಂಬಂಧ ಬೆಸೆದದ್ದು. ಆಗ ಜಿಲ್ಲಾ ಮಟ್ಟದ ಪತ್ರಿಕೆಯೊಂದಕ್ಕೆ ಕುಂದಾಪುರ ತಾಲೂಕು ವರದಿಗಾರನಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ನನ್ನ ಅಜ್ಞಾತವಾಸಕ್ಕೆ ಭರಪೂರ ಸಮಯಾವಕಾಶ ಇತ್ತು.

ಕಂಪ್ಯೂಟರ್ ಆನ್ ಮಾಡಿ ಕುಳಿತು ಮೌಸ್ ಹಿಡಿದರೆ ಅದು ನಾನೇ ಬೆಕ್ಕೆಂದು ಬೆದರಿ ಓಡುತ್ತಿತ್ತು!  ನಿಯಂತ್ರಣಕ್ಕೇ ಸಿಗುತ್ತಿರಲಿಲ್ಲ. ಮೌಸ್ ಮೇಲೆ ನಿಯಂತ್ರಣ ಕಲಿಯಲು ಒಂದು ವಾರ ಬ್ರಿಕ್ಸ್ ಗೇಂ, ಪೇಂಟ್ ಬ್ರಷ್! ಆಮೇಲೆ ನಿಧಾನಕ್ಕೆ ಕಂಪ್ಯೂಟರಿನ ಮೂಲೆ ಮೂಲೆಗಳನ್ನೆಲ್ಲ ಕುತೂಹಲದಿಂದ ನೊಡುತ್ತಾ, ಟ್ರಯಲ್-ಎರರ್ ವಿಧಾನದಲ್ಲೇ ಮೈಕ್ರೋಸಾಫ್ಟ್ ಆಫೀಸ್ ವಿವರವಾಗಿ ಕಲಿಯತೊಡಗಿದೆ. ಆಗಷ್ಟೇ DoS ಆಪರೇಟಿಂಗ್ ಸಿಸ್ಟಮ್ ನಿಂದ ವಿಂಡೋಸ್ ಗೆ ಕಂಪ್ಯೂಟರ್ ಬದಲಾಗಿ ಮೈಕ್ರೋಸಾಫ್ಟ್ ಯುಗ ಆರಂಭ ಆಗಿತ್ತು. ಹಾಗಾಗಿ  ಆ ಮೊದಲೇ ಕಂಪ್ಯೂಟರಿನಲ್ಲಿ ನುರಿತವರೆಲ್ಲ DoS ಕಮಾಂಡ್ ಗಳಲ್ಲೇ ಕಂಪ್ಯೂಟರನ್ನು ನಿಯಂತ್ರಿಸುವುದನ್ನು ಕಂಡಾಗ ನನ್ನಂತಹ “ಬಳಕೆದಾರ” ಕಂಪ್ಯೂಟರ್ ಧಾರರಿಗೆ ಇದೇನಪ್ಪಾ ಮ್ಯಾಜಿಕ್ ಅನ್ನಿಸುತ್ತಿತ್ತು.  ನನ್ನ OS ವಿಂಡೋಸ್ 95 ಏನಾದರೂ ಗೊತ್ತಾಗದಿದ್ದಾಗ, ಕಂಪ್ಯೂಟರ್ ಜೊತೆ ಬಂದಿದ್ದ 100ಪುಟಗಳ ಆಪರೇಟಿಂಗ್ ಮ್ಯಾನುವಲ್ ಅಥವಾ ಡೀಲರ್ ಸಾಹೇಬರ ಫೋನ್ ಲೈನ್ ಅಡ್ವೈಸರಿ. (ಅಂದಹಾಗೆ, ನನ್ನಡೀಲರ್ ಬಹಳ ಎಥಿಕಲ್. ಹಾಗಾಗಿ, ಆಗಲೇ ನನ್ನ ಮೊದಲ ಆಪರೇಟಿಂಗ್ ಸಿಸ್ಟಮ್ (ಒ ಎಸ್) ಕೂಡ ಅಧಿಕೃತ. ಅದರ ವಿಂಡೋಸ್ ಸರ್ಟಿಫಿಕೇಟು ಕೂಡ ನನ್ನ ಬಳಿ ಇದೆ.)

ಇದನ್ನೂ ಓದು | ಡಿಟಿಪಿಗೇನು ಗೊತ್ತು ಮೊಳೆ ಜೋಡಿಸುವ ಸಂಭ್ರಮ?!

ಆಗೆಲ್ಲ ಈಗಿನಂತೆ ಸಾಫ್ಟ್ ವೇರ್ ಪೈರಸಿ ದೊಡ್ಡ ಸಂಗತಿ ಆಗಿರಲಿಲ್ಲ. ಯಾರ್ಯಾರೋ ಗೆಳೆಯರು ಫ್ಲಾಪಿ ಡಿಸ್ಕ್ ಗಳಲ್ಲಿ, ಸಿಡಿ ಯಲ್ಲಿ ಹಾಕಿಕೊಟ್ಟ ಒಂದಿಷ್ಟು ಸಾಫ್ಟ್ ವೇರ್ ಗಳು, ಅವುಗಳ ಹೆಲ್ಪ್ ಕಂಟೆಂಟ್ ಬಳಸಿಕೊಂಡು (ಇಂಟರ್ನೆಟ್ ಇರಲಿಲ್ಲ) ಕಲಿಯಲು ಪ್ರಯತ್ನಿಸಿದೆ. ಹೀಗೆ ಕಲಿತ ಸಂಭ್ರಮದಲ್ಲಿ, ನಾನಾಗ ಕಾಲಂ ಬರೆಯುತ್ತಿದ್ದ ಲೋಕಲ್ ಪತ್ರಿಕೆಯೊಂದರಲ್ಲಿ, “ ವಿಂಡೋಸ್ ಕಲಿಯುವುದಕ್ಕೂ ಕಂಪ್ಯೂಟರ್ ಕ್ಲಾಸುಗಳ ಅಗತ್ಯವಿದೆಯೇ?”  “ಹೆಲ್ಪ್ ಕಂಟೆಂಟ್” ನೋಡಿಕೊಂಡು ನಾವೇ ಕಲಿತರೆ ಸಾಲುವುದಿಲ್ಲವೇ? ಅದನ್ನು ಕ್ಲಾಸಿಗೆ ಹೋಗಿ ಕಲಿಯುವುದು ಸಮಯ-ಹಣ ಎರಡೂ ವ್ಯರ್ಥ ಎಂದು ಅರ್ಥ ಬರುವಂತೆ ಬರೆದಿದ್ದೆ.

ತಕ್ಕೊಳ್ಳಿ – ಲೋಕಲ್ ಕಂಪ್ಯೂಟರ್ ಸೆಂಟರ್ ಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು – ನಮ್ಮ ಹೊಟ್ಟೆಗೆ ಯಾಕೆ ಹೊಡೀತೀರಿ? ಅಂತ.

( ಮುಂದಿನ ಸಂಚಿಕೆಯಲ್ಲಿ: ಕಂಪ್ಯೂಟರ್ ಸೆಂಟರ್ ಗಳ ಹೊಸಹೊಸ ವೇಷಗಳು)