ಟೆಕ್‌ಲೋಕದ ಆರೋಗ್ಯವನ್ನೂ ಕೆಡಿಸಿದ ಕರೋನಾ ವೈರಸ್‌ ಸೋಂಕು

ಚೀನಾದಿಂದ ಹರಡಲಾರಂಭಿಸಿದ ಕರೊನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಮಾರಣಾಂತಿಕವಾದ ಈ ಸೋಂಕು ಟೆಕ್‌ಲೋಕವನ್ನೂ ಬಿಟ್ಟಿಲ್ಲ. ಚೀನಾ ಮತ್ತು ಜಗತ್ತಿನ ಎಲ್ಲೆಡೆ ಬಿಕ್ಕಟ್ಟು ಎದುರಿಸುವಂತಾಗಿದೆ

ಕರೋನಾ ವೈರಸ್‌ನಿಂದ 700ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಜಗತ್ತಿನ ಎಲ್ಲೆಡೆಯೂ ಚೀನಾದಿಂದ ಬರುವ ಪ್ರಯಾಣಿಕರ ಬಗ್ಗೆ ಎಚ್ಚರವಹಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಸೋಂಕು ಹರಡದೇ ಇರದಂತೆ ಎಚ್ಚರವಹಿಸಲಾಗುತ್ತಿದೆ.

ಸ್ವಾಸ್ಥ್ಯದ ವಿಷಯದಲ್ಲಿ ಈ ರೀತಿಯ ಅನಿರೀಕ್ಷಿತದ ಆತಂಕ ಸೃಷ್ಟಿಯಾಗಿರುವಾಗಲೇ ಮತ್ತೊಂದು ಆತಂಕದ ಸಂಗತಿ ಹೊರಬಿದ್ದಿದೆ. ಸ್ಮಾರ್ಟ್‌ಫೋನ್‌ ಮತ್ತು ಇತರೆ ಟೆಕ್‌ ಆವಿಷ್ಕಾರಗಳಿಗೆ ನೆಲೆಯಾಗಿರುವ ಚೀನಾದ ಉದ್ಯಮ ಹಿನ್ನೆಡೆ ಅನುಭವಿಸುತ್ತಿದ್ದು, ಇದರ ಪರಿಣಾಮಗಳು ಜಗತ್ತಿನ ಎಲ್ಲೆಡೆ ಕಾಣಲಾರಂಭಿಸಿವೆ.

ಹೊಸ ವರ್ಷದ ಸಂದರ್ಭದಲ್ಲಿ ಘೋಷಣೆಯಾದ ರಜೆ, ಕರೋನಾ ವೈರಸ್‌ ಕಾರಣಕ್ಕೆ ವಿಸ್ತರಣೆಯಾಗಿದ್ದು, ಈಗ ಫೆಬ್ರವರಿ 10ರವರೆಗೆ ಮುಂದುವರೆಯುತ್ತಿದೆ. ಹಾಗಾಗಿ ಕಚೇರಿಗಳು, ಸ್ಟೋರ್‌ಗಳು, ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಹಲವು ಟೆಕ್‌ ಸಮಾವೇಶಗಳು ಮುಂದೂಡವಂತಾಗಿದೆ.

ಆಪಲ್‌, ಸ್ಯಾಮ್‌ಸಂಗ್‌, ಮೈಕ್ರೋಸಾಫ್ಟ್‌, ಟೆಸ್ಲಾ ಮತ್ತು ಗೂಗಲ್‌ ಕಂಪನಿಗಳು ಚೀನಾದ ತಮ್ಮ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿವೆ. ಗೂಗಲ್‌ ಹಾಂಕಾಂಗ್‌, ತೈವಾನ್‌ ಕಚೇರಿಗಳನ್ನು ಬಂದ್‌ ಮಾಡಿರುವುದಾಗಿ ತಿಳಿದು ಬಂದಿದೆ. ದೊಡ್ಡ ಕಂಪನಿಗಳ ಸ್ಟೋರ್‌ಗಳು ಫೆಬ್ರವರಿ 15ರಿಂದ ಆರಂಭವಾಗುವ ನಿರೀಕ್ಷೆ ಎಂದು ಬ್ಲೂಮ್‌ಬರ್ಗ್‌ ವರದಿ ಉಲ್ಲೇಖಿಸಿದೆ. ಈ ಎಲ್ಲ ಕಂಪನಿಗಳು ಅನಗತ್ಯವಾಗಿ ಚೀನಾ ಪ್ರವಾಸ ಕೈಗೊಳ್ಳದಂತೆ ಸೂಚನೆಯನ್ನೂ ನೀಡಿವೆ.

ಇನ್ನೊಂದೆಡೆ, ಕಾರ್ಖಾನೆಗಳು ಮುಚ್ಚಿರುವುದರಿಂದ ಉತ್ಪಾದನೆ ಕಡಿಮೆಯಾಗಿದ್ದು, ಸ್ಮಾರ್ಟ್‌ಫೋನ್‌, ವಿ ಆರ್‌ ಹೆಡ್‌ಸೆಟ್‌ಗಳು, ಕಾರ್‌ ಮತ್ತು ಇತರೆ ಟೆಕ್‌ ಬಿಡಿಭಾಗಗಳ ಕೊರತೆ ಉಂಟಾಗಲಿದೆ ಎನ್ನಲಾಗುತ್ತಿದೆ. ಚೀನಾದಲ್ಲಿರುವ ಫಾಕ್ಸ್‌ಕಾನ್‌ ಮತ್ತು ಪೆಗಾಟ್ರಾನ್‌ ಮುಚ್ಚಿರುವುದರಿಂದ ಐಫೋನ್‌ ಮತ್ತು ಏರ್‌ಪೋಡ್‌ಗಳ ಉತ್ಪನಾದಲ್ಲಿ ವ್ಯತ್ಯಯವಾಗಲಿದೆ. ಈ ಎರಡೂ ಕಂಪನಿಗಳ ಜಗತ್ತಿನಾದ್ಯಂತ ಪೂರೈಕೆಯಾಗುವ ಐಫೋನ್‌ಗಳನ್ನು ಉತ್ಪಾದಿಸುವ ಕೇಂದ್ರಗಳು.

ಆಸೂಸ್‌ ಗೇಮರ್‌ಗಳಾಗಿ ರೋಗ್‌ಫೋನ್‌ಅನ್ನು ತರುತ್ತಿರುವುದಾಗಿ ಪ್ರಕಟಿಸಿತ್ತು. ಆದರೆ ಚೀನಾದ ಪರಿಸ್ಥಿತಿಯಿಂದಾಗಿ ಉತ್ಪಾದನೆಯಲ್ಲಿ ತಡವಾಗಲಿದ್ದು, ಮಾರುಕಟ್ಟೆಗೆ ತರುವುದು ತಡವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.

ಟೆಸ್ಲಾ ಕೂಡ ಮೂರು ಕಾರುಗಳನ್ನು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಆದರೆ ಉತ್ಪಾದನೆಯಲ್ಲಿ ಆಗಿರುವ ವ್ಯತ್ಯಾಸದಿಂದಾಗಿ ಒಂದು ವಾರ ತಡವಾಗಿ ಬಿಡುಗಡೆ ಮಾಡುವುದಾಗಿ ಹೇಳಿದೆ.
ಒಪ್ಪೊ, ಶಿಯೋಮಿ, ಲೆನೊವೊ, ಹುವಾಯಿ ಫೋನ್‌ಗಳ ಉತ್ಪಾದನೆಗೂ ಕರೋನಾ ವೈರಸ್‌ ಬಿಸಿ ತಟ್ಟಲಿದೆ.

ಉತ್ಪಾದನೆಯಲ್ಲಿ ಆಗಿರುವ ಈ ವ್ಯತ್ಯಾಸದಿಂದಾಗಿ ಹಲವು ಕಾರ್ಯಕ್ರಮಗಳನ್ನು ಮುಂದೂಡಲಾಗುತ್ತಿದೆ. ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಎಲ್‌ಜಿ ಎಲೆಕ್ಟ್ರಾನಿಕ್ಸ್‌, ಎರಿಕ್‌ಸನ್‌ ಸೇರಿದಂತೆ ಹಲವು ಕಂಪನಿಗಳು ಭಾಗವಹಿಸದಿರಲು ನಿರ್ಧರಿಸಿವೆ. ಹುವಾಯಿ ಡೆವೆಲೆಪರ್‌ಗಳ ಸಮಾವೇಶವನ್ನು ಮಾರ್ಚ್‌ ಅಂತ್ಯಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.