ಕರೋನಾ ವೈರಸ್ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯುವುದಕ್ಕೆ ಸಾಮಾಜಿಕ ಅಂತರ ಒಂದು ಮಾರ್ಗವೆನಿಸಿದರೂ, ನಾಗರಿಕರು ಶಿಸ್ತಿನಿಂದ ಪಾಲಿಸುವ ಸಾಧ್ಯತೆ ಕಡಿಮೆ ಎಂದು ಮನಗಂಡಿರುವ ಪ್ರಧಾನಿ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಜಗತ್ತಿನಲ್ಲಿ ಇನ್ನೆಲ್ಲಿ ಲಾಕ್‌ಡೌನ್ ಆಗಿದೆ? ಪಟ್ಟಿ ಇಲ್ಲಿದೆ

ಕರೋನ್ ವೈರಸ್ ಸೋಂಕಿನ ಭೀತಿಯಲ್ಲಿ ಲಾಕ್‌ಡೌನ್ ಮಾಡಿದ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಇಂದು (ಮಾರ್ಚ್ 24ರ ಮಧ್ಯ) ರಾತ್ರಿಯಿಂದ 21 ದಿನ ಕಾಲ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ ಎಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ 22ರಂದು ದೇಶದಾದ್ಯಂತ ಜನತಾ ಕರ್ಪ್ಯೂಗೆ ಬಂದ ಮಿಶ್ರ ಪ್ರತಿಕ್ರಿಯೆಯನ್ನು ಗಮನಿಸಿ, ಲಾಕ್‌ಡೌನ್ ಅನಿವಾರ್ಯವೆಂದು ಭಾವಿಸಿದಂತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ನಾಗರಿಕರು ತೋರಿದ ಹೊಣೆಗೇಡಿತನ ಮತ್ತು ಇನ್ನೊಂದೆಡೆ ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅನಿವಾರ್ಯ ನಿರ್ಧಾರ ಎಂಬುದು ಅನಿವಾರ್ಯವಾಗಿತ್ತು.
ಭಾರತದಲ್ಲಿ ಇದುವರೆಗೂ 519 ಪ್ರಕರಣಗಳು ಪತ್ತೆಯಾಗಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. 40 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಆದರೆ ಸೋಂಕು ಹರಡುವ ಪ್ರಮಾಣ ಮತ್ತು ವೇಗ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಪ್ರಸ್ತುತ ಜಗತ್ತಿನ ಶೇ. 20%ರಷ್ಟು ಜನರು ಲಾಕ್‌ಡೌನ್ ಆಗಿದ್ದು, ಹಲವು ದೇಶಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅಂತಹ ದೇಶಗಳ ಪಟ್ಟಿ ಇಲ್ಲಿದೆ
ಚೀನಾ
ವಿಶ್ವದಲ್ಲೇ ಅತಿ ಹೆಚ್ಚು 81171 ಸೋಂಕು ಪ್ರಕರಣಗಳಿರುವ, ಈಗಾಗಲೇ 3277 ಜನರ ಸಾವನ್ನು ಕಂಡಿರುವ ಈ ದೇಶದಲ್ಲಿ ಮೊದಲು ಲಾಕ್‌ಡೌನ್ ಜಾರಿಗೆ ಬಂದಿದೆ. ಅತ್ಯಂತ ಕಟ್ಟು ನಿಟ್ಟಿನ ರೀತಿಯಲ್ಲಿ ಲಾಕ್‌ಡೌನ್ ಪಾಲಿಸಲಾಗುತ್ತಿದೆ.
ಬೆಲ್ಜಿಯಂ
ಏಪ್ರಿಲ್ 5ರವರೆಗೆ ಹದಿನೈದು ದಿನಗಳ ಲಾಕ್‌ಡೌನ್ ಘೋಷಣೆಯಾಗಿದೆ. ಕೆಲಸ, ಸೂಪರ್‌ಮಾರ್ಕೆಟ್, ಆರೋಗ್ಯ ಸೇವೆಯ ಹೊರತಾಗಿ ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ. ಇಲ್ಲಿ ಇದುವರೆಗೆ ಪತ್ತೆಯಾದ ಸೋಂಕು ಪ್ರಕರಣಗಳ ಸಂಖ್ಯೆ 4269. ಸಾವಿನ ಸಂಖ್ಯೆ 122.
ಫ್ರಾನ್ಸ್
ಲಾಕ್‌ಡೌನ್‌ನ ಜಾರಿಯಾದ ಮೇಲೆ, ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆಯಾದರೂ ಇನ್ನು ಜಾರಿಯಲ್ಲಿದೆ. ಪೊಲೀಸರು ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಮತ್ತು ದಂಡವನ್ನು ತೆರುವಂತಾಗಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ ಇನ್ನು 15 ದಿನ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪತ್ತೆಯಾದ ಸೋಂಕು ಪ್ರಕರಣಗಳ ಸಂಖ್ಯೆ 19856, ಸಾವಿನ ಸಂಖ್ಯೆ 860. ಜೊತೆಗೆ 2200 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇಟಲಿ
ಅತಿ ಹೆಚ್ಚು ಸಾವು ಸಂಭವಿಸಿರುವ ದೇಶವಿದು. ಚೀನಾದ ನಂತರ ಇಡೀ ಜಗತ್ತು ಬೆಚ್ಚಿ ಬೀಳಿಸುವಂತೆ ಸೋಂಕು ಇಲ್ಲಿ ಹರಡಿದೆ. ದೇಶದಲ್ಲಿ ನಿರ್ಮಾಣವಾಗಿರುವ ಸ್ಥಿತಿಗೆ ಪ್ರಧಾನಿಯೇ ಕಣ್ಣೀರಿಟ್ಟಿದ್ದಾರೆ. ಅನಿರ್ದಿಷ್ಟವಾಧಿಗೆ ಲಾಕ್‌ಡೌನ್ ಘೋಷಿಸಲಾಗಿದೆ. ಇಲ್ಲಿ ಪತ್ತೆಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 63927. 6077 ಮಂದಿ ಸಾವನ್ನಪ್ಪಿದ್ದು, 7432 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.
ಐರ್‌ಲ್ಯಾಂಡ್
ಕಳೆದ ಗುರುವಾರ ಇಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ ಐರ್‌ಲ್ಯಾಡ್ ಈಗ ಲಾಕ್‌ಡೌನ್ ಆಗಿದೆ. ಇಲ್ಲಿ ಪತ್ತೆಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 1125. ಸಾವಿನ ಸಂಖ್ಯೆ 5.
ಇಂಗ್ಲೆಂಡ್
ಭಾನುವಾರ ಲಾಕ್‌ಡೌನ್ ಘೋಷಣೆ ಮಾಡಿದ ಪ್ರಧಾನಿ 12 ವಾರಗಳ ಕಾಲ ಲಾಕ್‌ಡೌನ್ ಪಾಲಿಸಬೇಕೆಂದು ಆದೇಶಿಸಿದ್ದಾರೆ. ಸಾರ್ವಜನಿಕ ಸಾರಿಗೆ ಸೇರಿದಂತೆ ಎಲ್ಲವೂ ಬಂದ್ ಆಗಿದ್ದು, ವ್ಯಕ್ತಿ -ವ್ಯಕ್ತಿಗಳ ನಡುವೆ 2 ಮೀಟರ್ ಅಂತರ ಕಾಪಾಡಿಕೊಳ್ಳುವ ಸೂಚನೆಯನ್ನು ನೀಡಲಾಗಿದೆ. ಇಲ್ಲಿ ಪತ್ತೆಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 6661. ಇದುವರೆಗೂ 335 ಮಂದಿ ಸಾವನ್ನಪ್ಪಿದ್ದು, 140 ಮಂದಿ ಗುಣಮುಖರಾಗಿದ್ದಾರೆ.